'ಆಯುಷ್ಮಾನ್‌ಭವ' ರಿಲೀಸ್‌ ಡೇಟ್‌ ಬದಲಾಗಿದಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗೊಂದಲ!

By Kannadaprabha NewsFirst Published Nov 4, 2019, 10:22 AM IST
Highlights

ಸ್ಟಾರ್ ಸಿನಿಮಾಗಳು ಬರುತ್ತವೆ ಎಂದಾಗ ಬೇರೆ ಸಿನಿಮಾ ತಂಡಗಳು ತಮ್ಮ ಚಿತ್ರ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತವೆ. ಅಂಥದ್ದರಲ್ಲಿ ಒಮ್ಮೆ ರಿಲೀಸ್ ಡೇಟ್ ಘೋಷಣೆ ಯಾದ ಸಿನಿಮಾ ರಿಲೀಸ್ ಆಗದಿದ್ದರೆ ಅನೇಕ ಸಿನಿಮಾಗಳಿಗೆ ಒಂಚೂರು ತೊಂದರೆ ಆಗುತ್ತವೆ. ಸದ್ಯ ಅಂಥದ್ದೊಂದು ಬೆಳವಣಿಗೆಗೆ ಕಾರಣವಾಗಿದ್ದು ‘ಆಯುಷ್ಮಾನ್‌ಭವ’ ಚಿತ್ರ.

‘ಅಂದುಕೊಂಡಂತೆ ಆ ಚಿತ್ರ ನವೆಂಬರ್ 1ಕ್ಕೆ ಬಿಡುಗಡೆ ಆಗಬೇಕಿತ್ತು. ಆಗಿದ್ದರೆ ನಮಗೆ ಚಿಂತೆ ಇರುತ್ತಿರಲಿಲ್ಲ. ಮೊದಲೇ ನಾವು ಪ್ಲಾನ್ ಮಾಡಿಕೊಂಡಂತೆ ಆ ನಂತರ ದಿನಗಳಲ್ಲಿ ಚಿತ್ರವನ್ನು ಸುಲಭವಾಗಿ ತೆರೆಗೆ ತರುತ್ತಿದ್ದೆವು. ಆದರೆ ಈಗ ಆ ಚಿತ್ರದ ದಿನಾಂಕ ಮುಂದಕ್ಕೆ ಹೋಗಿದ್ದರಿಂದ ಒಂದಷ್ಟು ಗೊಂದಲಕ್ಕೆ ಸಿಲುಕಿದ್ದೇವೆ. ಬರಬೇಕೋ, ಬೇಡವೋ ಎನ್ನುವುದೇ ತೋಚುತ್ತಿಲ್ಲ’ ಎನ್ನುವ ಮಾತುಗಳು ಕೆಲವು ನಿರ್ಮಾಪಕರಿಂದ ಕೇಳಿ ಬಂದಿವೆ.

ನಾವು ಯಾರಿಗೋ ಪೈಪೋಟಿ ಅಂತಲ್ಲ. ನಮ್ಮದು ಸಣ್ಣ ಬಜೆಟ್ ಸಿನಿಮಾ. ಕಷ್ಟ ಪಟ್ಟು ಇಷ್ಟ ಪಟ್ಟು ನಿರ್ಮಾಣ ಮಾಡಿದ್ದೇವೆ. ಸರಿಯಾದ ಸಮಯಕ್ಕೆ ಬಂದರೆ ಒಂದಷ್ಟು ಜನರನ್ನು ತಲುಪಬಹುದು ಎನ್ನುವುದು ನಮ್ಮ ಲೆಕ್ಕಾಚಾರ. ಈ ನಡುವೆಯೇ ಸ್ಟಾರ್ ಸಿನಿಮಾಗಳು ಬಂದರೆ ಗತಿಯೇನು ಎನ್ನುವುದು ನಮ್ಮ ಆತಂಕ.-  ನಾಗೇಶ್ ಕುಮಾರ್ ‘ನಮ್ ಗಣಿ ಬಿ ಕಾಂ ಪಾಸ್’ ಚಿತ್ರದ ನಿರ್ಮಾಪ

ಶಿವರಾಜ್ ಕುಮಾರ್ಹಾಗೂ ರಚಿತಾ ರಾಮ್ ಅಭಿನಯದ ‘ಆಯುಷ್ಮಾನ್ ಭವ’ ಸಿನಿಮಾ ಬಿಡುಗಡೆ ನಿರೀಕ್ಷೆಯಲ್ಲೇ ಬೇರೆ ತಂಡಗಳು ತಮ್ಮ ಚಿತ್ರಗಳ ರಿಲೀಸ್‌ಗೆ ದಿನ ನಿಗದಿ ಮಾಡಿಕೊಂಡು ತಯಾರಿ ನಡೆಸಿದ್ದರು. ‘ರಣಭೂಮಿ’, ‘ಕನ್ನಡ್ ಗೊತ್ತಿಲ್ಲ’, ‘ಕಾಳಿದಾಸ ಕನ್ನಡ ಮೇಷ್ಟ್ರು’, ‘ನಮ್ ಗಣಿ ಬಿಕಾಂ ಪಾಸ್’, ‘ಆ.. ದೃಶ್ಯ’, ‘ಕಪಟ ನಾಟಕ ಪಾತ್ರಧಾರಿ ’ ಸೇರಿದಂತೆ ಹಲವು ಸಿನಿಮಾಗಳು  ಆ ಸಾಲಿನಲ್ಲಿದ್ದವು. ಆದರೆ ‘ಆಯುಷ್ಮಾನ್‌ಭವ’ ಬಿಡುಗಡೆಯಾಗದೆ ಆ ಸಿನಿಮಾ ತಂಡಗಳು ಮುಂದೇನು ಎಂದು ಆತಂಕದಲ್ಲಿವೆ.

ರಿಲೀಸ್ ಆಯ್ತು ಆಯುಷ್ಮಾನ್ ಭವ ಟೀಸರ್; ಶಿವಣ್ಣ ಅಬ್ಬರ ಹೀಗಿದೆ ನೋಡಿ

ಇಷ್ಟಾಗಿಯೂ ನವೆಂಬರ್ 8ಕ್ಕೆ ದೀಪಕ್ ನಿರ್ಮಾಣದ ‘ರಣಭೂಮಿ’, ರವಿ ಬಸ್ರೂರು  ನಿರ್ದೇಶನದ ‘ಗಿರ್ಮಿಟ್’, ಕೌಶಿಕ್ ನಿರ್ದೇಶನದ ‘ಈಶ ಮಹೇಶ’, ಕೆ. ಮಂಜು ನಿರ್ಮಾಣದ
‘ಆ..ದೃಶ್ಯ.. ’ ಚಿತ್ರಗಳ ಜತೆಗೆ ‘ಪಾಪಿ ಚಿರಾಯು’ ಹೆಸರಿನ ಹೊಸಬರ ಚಿತ್ರವೂ ತೆರೆಗೆ ಬರುವುದು ಗ್ಯಾರಂಟಿ ಆಗಿದೆ.

ತಾಂತ್ರಿಕ ಕಾರಣದಿಂದ ಸಿನಿಮಾ ಮುಂದಕ್ಕೆ ಹೋಗಿದೆ. ಸಿಜಿಯಲ್ಲಿ ಹುಲಿಯ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಅದಕ್ಕೂ ಅನಿಮಲ್ ಬೋರ್ಡ್ ಸರ್ಟಿಫಿಕೇಟ್ ಸಿಗಬೇಕಿತ್ತು. ಅದು
ಸಿಗದೆ ಸೆನ್ಸಾರ್ ಆಗುವ ಹಾಗಿರಲಿಲ್ಲ. ಈಗಾಗಲೇ ಅದು ಸಿಕ್ಕಿದೆ, ಸೆನ್ಸಾರ್‌ಗೆ ತಲುಪಿಸಲಾಗಿದೆ. ಇಂದು(ನ.4) ಸೆನ್ಸಾರ್ ಕೂಡ ಆಗುತ್ತೆ. ಆಗಲೇ ಚಿತ್ರದ ರಿಲೀಸ್ ದಿನಾಂಕವೂ ಪಕ್ಕಾ ಆಗಲಿದೆ.-
 ಯೋಗೀಶ್ ದ್ವಾರಕೀಶ್ ‘ಆಯುಷ್ಮಾನ್ ಭವ’ ಚಿತ್ರದ ನಿರ್ಮಾಪ

ನವೆಂಬರ್ 15ಕ್ಕೆ ಹರಿಪ್ರಿಯಾ ಅಭಿನಯದ ‘ಕನ್ನಡ್ ಗೊತ್ತಿಲ್ಲ..’, ಮಂಜು ಸ್ವರಾಜ್ ನಿರ್ದೇಶನದ ‘ಮನೆ ಮಾರಾಟಕ್ಕಿದೆ’, ಮಾನ್ವಿತಾ ಹರೀಶ್ ಅಭಿನಯದ ‘ರಿಲ್ಯಾಕ್ಸ್ ಸತ್ಯ’ ಮತ್ತು ಐಶಾನಿ ಶೆಟ್ಟಿ ಹಾಗೂ ಅಭಿಷೇಕ್ ಶೆಟ್ಟಿ ಅಭಿನಯದ ‘ನಮ್ ಗಣಿ ಬಿ ಕಾಂ ಪಾಸ್’ ಚಿತ್ರಗಳು ತೆರೆಗೆ ಬರುತ್ತಿವೆ. ಈ ನಡುವೆ ‘ಆಯುಷ್ಮಾನ್ ಭವ’ ತೆರೆಗೆ ಬಂದರೆ ಗತಿಯೇನು ಎನ್ನುವುದು ಇವಿಷ್ಟು ಸಿನಿಮಾಗಳ ನಿರ್ಮಾಪಕರ ಆತಂಕ.

click me!