
ಕೊರೋನಾ ಎರಡನೇ ಅಲೆಯಿಂದ ಮುಕ್ತಿ ಪಡೆಯುತ್ತಿರುವ ಜನರು ಹಂತ ಹಂತವಾಗಿ ಆಗುತ್ತಿರುವ ಅನ್‌ಲಾಕ್ ಬಗ್ಗೆ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಅದರಲ್ಲೂ 50% ಸೀಟಿಂಗ್ ನೀಡಿ, ಚಿತ್ರಮಂದಿರ ತೆರೆಯುವುದಕ್ಕೆ ಅನುಮತಿ ನೀಡಿರುವುದು ಕನ್ನಡ ಸಿನಿ ಪ್ರೇಮಿಗಳಿಗೆ ಮಾತ್ರವಲ್ಲ ನಿರ್ದೇಶಕರು, ನಿರ್ಮಾಪಕರು ಹಾಗೂ ಚಿತ್ರಮಂದಿರದ ಮಾಲೀಕರಿಗೆ ಸಂತೋಷ ತಂದಿದೆ. ಈ ಬೆನ್ನಲ್ಲೇ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗುತ್ತಿದೆ.
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ 2' ಬಿಡುಗಡೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಈ ವರ್ಷ ಗೌರಿ-ಗಣೇಶ್ ಹಬ್ಬದ ದಿನ ಅಂದ್ರೆ ಸೆಪ್ಟೆಂಬರ್ 10ರಂದು 'ಭಜರಂಗಿ 2' ರಿಲೀಸ್ ಮಾಡಲಾಗುತ್ತಿದೆ. ಎ ಹರ್ಷ ಆ್ಯಕ್ಷನ್ ಕಟ್, ಜಯಣ್ಣ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಭಾವನಾ ಅಭಿನಯಿಸುತ್ತಿದ್ದಾರೆ. ಚಿತ್ರದ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಸದ್ಯ ಚಿತ್ರರಂಗದ ಆಧಾರ ಸ್ತಂಭವಾಗಿರುವ ಶಿವಣ್ಣ ಸಿನಿಮಾ ಡೇಟ್‌ಗಳು ಫಿಕ್ಸ್ ಆಗುತ್ತಿರುವ ಧೈರ್ಯದ ಮೇಲೆ ಅನೇಕರು ತಮ್ಮ ಸಿನಿಮಾ ರಿಲೀಸ್‌ಗೆ ಡೇಟ್ ಹುಡುಕಾಟ ಶುರು ಮಾಡಿದ್ದಾರೆ. ಗೌರಿ-ಗಣೇಶ ಹಬ್ಬದ ದಿನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಕೂಡ ಹೆಚ್ಚಿದೆ.
ಪೊಗರು, ರಾಬರ್ಟ್ ಹಾಗೂ ಯುವರತ್ನ ನಂತರ ಬಿಗ್ ಬಜೆಟ್ ಸಿನಿಮಾಗಳು ತೆರೆ ಕಾಣಲು ಚಿಂತಿಸುತ್ತಿದ್ದವು. ರಿಲೀಸ್ ಆದರೆ ಮತ್ತೆ ಲಾಕ್‌ಡೌನ್ ಆಗುವ ಭಯದಲ್ಲಿದ್ದರೂ, ಭಜರಂಗಿ 2 ಡೇಟ್ ಫಿಕ್ಸ್ ಆದ ಮೇಲೆ ಕೊಂಚ ನೆಮ್ಮದಿ ವಾತಾವರಣ ಸೃಷ್ಟಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.