ಕನ್ನಡದ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟು ಗೆಲುವಿನ ಮಾಲೆಯನ್ನು ಧರಿಸಿ ಕರ್ನಾಟಕದ ಮನೆಮಾತಾದ ಶೈನ್ ಶೆಟ್ಟಿ ಇಂದು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶೈನ್ ಶೆಟ್ಟಿ ಅಭಿನಯದ 'ಥ್ಯಾಂಕ್ಯೂ' ಎಂಬ ಕಿರುಚಿತ್ರ ರಿಲೀಸ್ ಆಗಿದೆ.
ಕನ್ನಡದ ಬಿಗ್ ಬಾಸ್‌ಗೆ (Bigg Boss) ಎಂಟ್ರಿ ಕೊಟ್ಟು ಗೆಲುವಿನ ಮಾಲೆಯನ್ನು ಧರಿಸಿ ಕರ್ನಾಟಕದ ಮನೆ ಮಾತಾದ ಶೈನ್ ಶೆಟ್ಟಿ (Shine Shetty) ಇಂದು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು, ಖಾಸಗಿ ಚಾನೆಲ್ನಲ್ಲಿ ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸದ್ಯ ಶೈನ್ ಶೆಟ್ಟಿ ಅಭಿನಯದ 'ಥ್ಯಾಂಕ್ಯೂ' (Thank You) ಎಂಬ ಕಿರುಚಿತ್ರ ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಒಡೆತನದ ಪಿಆರ್ಕೆ ಬ್ಯಾನರ್ (PRK Banner) ಅಡಿಯಲ್ಲಿ ರಿಲೀಸ್ ಆಗಿದೆ. ಯುವ ಪ್ರತಿಭೆಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ಬ್ಯಾನರ್‌ನಲ್ಲಿ, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಶೈನ್ ಶೆಟ್ಟಿ ಅಭಿನಯದ 'ಥ್ಯಾಂಕ್ಯೂ' ಶಾರ್ಟ್ ಮೂವಿಯನ್ನು ಬಿಡುಗಡೆ ಮಾಡಿದ್ದಾರೆ.
'ಥ್ಯಾಂಕ್ಯೂ' ಕಿರುಚಿತ್ರವು 'ಜವಾಬ್ದಾರಿ ಇಲ್ಲದೇ ಇರುವ ಯುವಕನೊಬ್ಬ ತಂದೆ ತಾಯಿಯನ್ನು ಬಿಟ್ಟು ವ್ಯಸನಗಳಿಗೆ ಬಲಿಯಾಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿರುತ್ತಾನೆ. ಮದ್ಯ ತೆಗೆದುಕೊಂಡು ರೂಮ್ಗೆ ಹೋಗುವಾಗ ಆಕಸ್ಮಿಕವಾಗಿ ಲಿಫ್ಟ್ ಕೆಟ್ಟು ಹೋಗುತ್ತದೆ. ಲಿಫ್ಟ್ ಇಂದ ಹೊರಗೆ ಬರಲು ನಾಯಕ ಶೈನ್ ಶೆಟ್ಟಿ ಅಲಿಯಾಸ್ ಪ್ರಸಾದ್ ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಎನ್ನುವುದೇ ಈ ಕಿರುಚಿತ್ರದ ಸ್ಟೋರಿ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಪ್ಪು ಅವರೇ ಇದನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಪುನೀತ್ ಅಗಲಿಕೆಯಿಂದ ಅಶ್ವಿನಿ ಅವರು ಅಪ್ಪು ಅವರ ಕನಸನ್ನು ನನಸು ಮಾಡಿದ್ದಾರೆ. ವಿಶೇಷವಾಗಿ ಪಿಆರ್ಕೆ ಸ್ಟುಡಿಯೋದಿಂದ ಮತ್ತಷ್ಟು ಯುವ ಪ್ರತಿಭೆಗಳು ಬರಲಿ ಎಂಬುದು ಅಪ್ಪು ಅಭಿಮಾನಿಗಳ ಆಶಯವಾಗಿದೆ.
ಮಿಸ್ ಆಗಿ ಕರೆ ಮಾಡಿದ್ದಕ್ಕೆ ಅಪ್ಪು ಸರ್ sorry ಎಂದು ಕಳುಹಿಸಿದ್ದರು: ಶೈನ್ ಶೆಟ್ಟಿ
'ಥ್ಯಾಂಕ್ಯೂ' ಕಿರುಚಿತ್ರಕ್ಕೆ ಪ್ರಸಾದ್ ಕಂಠೀರವ (Prasad kanteerava) ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ರಕ್ಷಿತ್ ಪ್ರಕಾಶ್ ಗೌಡ, ನವೀನ್.ಎನ್.ಕೆ ಈ ಕಿರುಚಿತ್ರಕ್ಕೆ ಬಂಡವಾಳ ಹೂಡಿದ್ದು, ಉದಿತ್ ಹರಿತಾಸ್ ಸಂಗೀತ ಸಂಯೋಜಿಸಿದ್ದಾರೆ. ವಿಶ್ವಾಸ್ ಕೌಂಡಿನ್ಯ ಕ್ಯಾಮೆರಾ ಕೈಚಳಕ, ಅನಿರುದ್ಧ ಮಹೇಶ್-ಪ್ರಸಾದ್ ಕಂಠೀರವ ಸಂಭಾಷಣೆ ಹಾಗೂ ರಾಜೇಶ್ ಬಿಸನಳ್ಳಿ, ಗಿರೀಶ್ ಚಂದ್ರ ಸಂಕಲನ ಈ ಕಿರುಚಿತ್ರಕ್ಕಿದೆ. ಇನ್ನು ಪುನೀತ್ ಕೊನೆಯದಾಗಿ ಭಾಗಿಯಾಗಿದ್ದ ಕಾರ್ಯಕ್ರಮಗಳಲ್ಲಿ ಶೈನ್ ಶೆಟ್ಟಿ ಹೋಟೆಲ್ ಉದ್ಘಾಟನೆಯೂ ಒಂದು. ಬನಶಂಕರಿಯಲ್ಲಿ ಹೋಟೆಲ್ ತೆರೆದು, ಪುನೀತ್ ಅವರನ್ನು ಸ್ಪೆಷಲ್ ಗೆಸ್ಟ್ ಆಗಿ ಆಹ್ವಾನಿಸಿದ್ದರು ಶೈನ್. ಇದರ ಜೊತೆಗೆ ಶೈನ್ ಮತ್ತು ಅಪ್ಪು ಒಟ್ಟಿಗೇ 'ಜೇಮ್ಸ್' (James) ಚಿತ್ರದಲ್ಲಿಯೂ ನಟಿಸಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನರಾದಾಗ ಶೈನ್ ಶೆಟ್ಟಿ ತನ್ನ ಜೀವನದಲ್ಲಿ ಅಪ್ಪು ಪ್ರಮುಖ ಪಾತ್ರ ವಹಿಸಿರುವುದನ್ನು ನೆನೆಯುತ್ತಾ ಭಾವುಕರಾಗಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. 'ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ! ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗ, ಹಾಗೆಯೆ ಪುನೀತ್ ರಾಜಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ! ಮೊದ ಮೊದಲು ನನ್ನ ಈ ಕಲಾ ಪ್ರವಾಸ ಶುರುವಾದಾಗ, ಪುನೀತ್ ಸರ್‌ರವರನ್ನು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿ ಎದುರು ನೋಡುತಿದ್ದೆ, ಬೆಳ್ಳಿ ಪರದೆಯ ಮೇಲೆ ಅವರು ಮೂಡಿಸಿದ ಜಾದೂಗೆ ಬೆರಗಾಗಿದ್ದೆ. ಅವರ ಜೊತೆ ನಟಿಸಲು ಹಾಗೂ ಹಲವಾರು ಬಾರಿ ರಂಗಮಂಚಿಕೆ ಹಂಚಿಕೊಳ್ಳಲು ಅವಕಾಶ ದೊರೆತಾಗ ಒಂದು ಪುಟ್ಟ ಗೆಳೆತನ ಚಿಗುರೊಡೆಯಿತು. ನನ್ನ ಆಸೆ , ಪ್ರತಿಭೆಗಳನ್ನು ಹೊಗಳಿದಲ್ಲದ್ದೆ, ಅವರ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡಿ ನನ್ನ ಗುರಿಯನ್ನು ತಲುಪಲು ಪ್ರೇರಿಸಿದರು.
ಅಪ್ಪು ಸರ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ: ಭಾವುಕರಾದ ಶೈನ್ ಶೆಟ್ಟಿ
ಈ ಸಿನಿಮಾ ರಂಗದಲ್ಲಿ ಉಳಿಯೋದಕ್ಕೆ/ಬೆಳೆಯೋದಕ್ಕೆ ಅಪ್ಪು ಸರ್‌ರವರ ಪ್ರೋತ್ಸಾಹ ಒಂದು ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಆ ಸ್ನೇಹ ಭ್ರಾತೃತ್ವದ ರೂಪ ಪಡೆಯಲು ಬಹಳ ಸಮಯ ಬೇಕಾಗಿರಲಿಲ್ಲ . ಪುನೀತ್ ಸರ್‌ರವರನ್ನು ಅಷ್ಟು ಕೊಂಡಾಡಲು ಅವರ ಸುತ್ತ ಮುತ್ತ ಇದ್ದ ಜನರನ್ನು ವೃತ್ತಿಯಲ್ಲಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ! ಗಲ್ಲಿ ಕಿಚನ್ ಶುರುವಾದಾಗ , ತಮ್ಮ ಬೆಂಬಲದ ಜೊತೆಗೆ ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನೂ ವ್ಯಕ್ತಪಡಿಸಿದರು. ಬೆಳಿತಾ ಬೆಳಿತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ ! ನೀವು ಕಲಿಸಿದ ಪಾಠ, ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳುತ್ತಾ, ಹೋಗ್ಬನ್ನಿ ಪುನೀತ್ ಸರ್'. ಎಂದು ಶೈನ್ ಶೆಟ್ಟಿ ಭಾವುಕರಾಗಿ ಬರೆದುಕೊಂಡಿದ್ದರು.