Shiva Rajkumar Birthday: 'ಕರುನಾಡ ಚಕ್ರವರ್ತಿ' ಬರ್ತ್‌ಡೇ.. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಉಡುಗೊರೆ!

Published : Jul 12, 2026, 11:06 AM IST
Shivarajkumar Birthday

ಸಾರಾಂಶ

ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್ ಅವರ ಈ ಬಾರಿಯ ಹುಟ್ಟುಹಬ್ಬ ಕೇವಲ ಸಿನಿಮೀಯ ಮೆರುಗಿನಿಂದಷ್ಟೇ ಅಲ್ಲದೆ, ಮಾನವೀಯತೆಯ ಮಹೋತ್ಸವವಾಗಿಯೂ ಚಿರಕಾಲ ಉಳಿಯಲಿದೆ. ಹ್ಯಾಪಿ ಬರ್ತ್‌ಡೇ ಶಿವಣ್ಣ! ನೀವು ಹೀಗೆ ನಗುನಗುತ ನೂರ ಕಾಲ ಬಾಳಲಿ ಎಂಬುದು ಸಮಸ್ತ ಕನ್ನಡಿಗರ ಹಾರೈಕೆ.

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮ!

ಇಂದು, 12 ಜುಲೈ 2026 ರಂದು, ಸ್ಯಾಂಡಲ್‌ವುಡ್‌ನ 'ಸೆಂಚುರಿ ಸ್ಟಾರ್', ಅಭಿಮಾನಿಗಳ ಪಾಲಿನ ಮೆಚ್ಚಿನ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಡಾ. ಶಿವರಾಜ್‌ಕುಮಾರ್ (Shivarajkumar) ಅವರ 64ನೇ ಹುಟ್ಟುಹಬ್ಬ. ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಸಂಭ್ರಮಾಚರಣೆಯನ್ನು ಆಚರಿಸುತ್ತಿದ್ದಾರೆ. ಸ್ವತಃ ಶಿವಣ್ಣ ಅವರೂ ನಿನ್ನೆ ಮಧ್ಯರಾತ್ರಿ ಅಭಿಮಾನಿಗಳಿಗೋಸ್ಕರ ಸ್ಪೆಷಲ್ ಕೇಕ್ ಕಟ್ ಮಾಡಿದ್ದಾರೆ. ತಮ್ಮ ಮೆಚ್ಚಿನ ಫ್ಯಾನ್ಸ್‌ಗೋಸ್ಕರ ಸ್ವ-ನಿವಾಸ 'ಶ್ರೀಮುತ್ತು'ವಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಅಭಿಮಾನಿಗಳ ಆಚರಣೆ:

ಶಿವರಾಜ್‌ಕುಮಾರ್ ಅಭಿಮಾನಿಗಳ ಪಾಲಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಶಿವಣ್ಣನ ಬರ್ತ್‌ಡೇ ಅಂದ್ರೆ ಅದು ಕೇವಲ ಒಂದು ಸಂಭ್ರಮವಲ್ಲ, ಅದೊಂದು ಭಾವನಾತ್ಮಕ ಹಬ್ಬ. ಜುಲೈ 12ರಂದು ಶಿವಣ್ಣನ ಜನ್ಮದಿನವಿದ್ದರೂ, ಅಭಿಮಾನಿಗಳ ಪಾಲಿಗೆ ಹಬ್ಬದ ಅಬ್ಬರ ಜುಲೈ 11ರ ರಾತ್ರಿಯಿಂದಲೇ ಶುರುವಾಗುತ್ತದೆ. ಈ ಬಾರಿ ಇದು ಇನ್ನೂ ಸ್ವಲ್ಪ ಜಾಸ್ತಿಯೇ ಇತ್ತು. ಕಾರಣ ಕಳೆದ 3 ವರ್ಷಗಳು ಅನಾರೋಗ್ಯದ ಕಾರಣಕ್ಕೆ ಶಿವರಾಜ್‌ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಲಭ್ಯವಿರಲಿಲ್ಲ. ಆದರೆ ಈ ಬಾರಿ ಸ್ವತಃ ಶಿವಣ್ಣ ಅವರೇ ಅಭಿಮಾನಿಗಳ ಜೊತೆ ತಮ್ಮ 64ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಕರುನಾಡ ದೊರೆಯ ಅಭಿಮಾನಿಗಳು ಹೆಚ್ಚು ಖುಷಿಯಾಗಿದ್ದಾರೆ, 'ಶಿವೋತ್ಸವ'ದಲ್ಲಿ ನೂರುಪಟ್ಟು ಸಂತಸದಿಂದ ಭಾಗಿಯಾಗಿದ್ದಾರೆ.

ಶಿವಣ್ಣ ಎಂಬ ‘ಸರ್ವೈವರ್’: ಬರ್ತ್‌ಡೇ ಸಂಭ್ರಮದ ನಡುವೆ ಹರಿದುಬಂದ ‘ಆರೋಗ್ಯ ಭಾಗ್ಯ’ದ ಗಿಫ್ಟ್!

ಬೆಳ್ಳಿ ಪರದೆಯ ಮೇಲೆ ಸೆಂಚುರಿ ಸ್ಟಾರ್, ಅಭಿಮಾನಿಗಳ ಪಾಲಿನ ಅಣ್ಣಾವ್ರ ಮಗ, ಕರುನಾಡಿನ ಮನೆಮಗ ಡಾ. ಶಿವರಾಜ್‌ ಕುಮಾರ್ ಈ ಬಾರಿ ಎಂದಿಗಿಂದ ಸ್ವಲ್ಪ ವಿಭಿನ್ನ ಹಾಗೂ ವಿಶೇ‍ಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ಸಡಗರದ ಜೊತೆ ಈ ಬಾರಿಯ ಬರ್ತ್‌ಡೇ ಕೇವಲ ಕೇಕ್ ಕತ್ತರಿಸುವ ಸಂಭ್ರಮಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಇದು ಒಬ್ಬ 'ರಿಯಲ್ ಲೈಫ್ ಹೀರೋ' ತಮ್ಮ ಜನರಿಗಾಗಿ ವಿಶೇಷ ಕೊಡುಗೆಯೊಂದನ್ನು ಹಮ್ಮಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹಾಗೂ ಬಡವರಿಗೆ ಆಸ್ಪತ್ರೆಯಲ್ಲಿ ಸಿಗಲಿದೆ ವಿಶೇಷ ಚಿಕಿತ್ಸೆ ಕಾರ್ಡ್.. ಅದು 'ಶಿವಣ್ಣ ಹೆಲ್ತ್ ಕಾರ್ಡ್'.

ಫೀನಿಕ್ಸ್‌ನಂತೆ ಎದ್ದು ಬಂದಿರುವ ಶಿವಣ್ಣ:

ಕಳೆದ ವರ್ಷ ನಟ ಶಿವರಾಜ್‌ಕುಮಾರ್ ಅವರ ಪಾಲಿಗೆ ಅಗ್ನಿಪರೀಕ್ಷೆಯಂತಿತ್ತು. ಕ್ಯಾನ್ಸರ್ ಎಂಬ ಮಹಾಮಾರಿಯ ವಿರುದ್ಧ ಹೋರಾಡಿ, ಅದನ್ನು ಸದೆಬಡಿದು ಗೆದ್ದು ಬಂದ ಶಿವಣ್ಣ, ಇಂದು ಲಕ್ಷಾಂತರ ಮಂದಿಗೆ ಸ್ಫೂರ್ತಿಯ ಸೆಲೆ. ಇದೇ ಕಾರಣಕ್ಕೆ ಅವರ ಜರ್ನಿಯನ್ನು ವಿವರಿಸಲು ‘ಸರ್ವೈವರ್’ (Survivor) ಎಂಬ ವಿಶೇಷ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಕುಟುಂಬಸ್ಥರು ಮತ್ತು ಚಿತ್ರರಂಗದ ಗಣ್ಯರು ಶಿವಣ್ಣನ ಇಚ್ಛಾಶಕ್ತಿಯ ಬಗ್ಗೆ ಮಾತನಾಡಿದ್ದು, ನೋಡುಗರ ಕಣ್ಣಾಲಿಗಳು ಒದ್ದೆಯಾಗುವುದು ಗ್ಯಾರಂಟಿ. ಈ ವಿಡಿಯೋ ಇದೀಗ ಕನ್ನಡನಾಡನ್ನೂ ಮೀರಿ ವೈರಲ್ ಆಗುತ್ತಿದೆ.

ಅಭಿಮಾನಿಗಳಿಗೆ ‘ಆರೋಗ್ಯದ ಕವಚ’:

ಹುಟ್ಟುಹಬ್ಬದ ಗಿಫ್ಟ್ ಅಂದರೆ ಸಾಮಾನ್ಯವಾಗಿ ಫ್ಯಾನ್ಸ್ ತಮ್ಮ ನೆಚ್ಚಿನ ನಟನಿಗೆ ನೀಡುತ್ತಾರೆ. ಆದರೆ ಈ ವರ್ಷ ಶಿವಣ್ಣ ಅವರೇ ತಮ್ಮ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಶಿವಣ್ಣನೇ ತಮ್ಮ ಅಭಿಮಾನಿಗಳಿಗೆ ಮತ್ತು ರಾಜ್ಯದ ಬಡ ಜನತೆಗೆ ಒಂದು ಅಭೂತಪೂರ್ವ ಉಡುಗೊರೆ ನೀಡಿದ್ದಾರೆ. ಅದೇ 'ಶಿವಣ್ಣ ಹೆಲ್ತ್ ಕಾರ್ಡ್'. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಷ್ಟಪಡುವವರಿಗಾಗಿ ಈ ವಿಶೇಷ ಕಾರ್ಡ್ ವಿತರಿಸಲಾಗುತ್ತಿದೆ. "ಇದು ಕೇವಲ ನನ್ನ ಅಭಿಮಾನಿಗಳಿಗೆ ಮಾತ್ರವಲ್ಲ, ಕಷ್ಟದಲ್ಲಿರುವ ಪ್ರತಿಯೊಬ್ಬ ಬಡವನಿಗೂ ಈ ಕಾರ್ಡ್ ತಲುಪಬೇಕು" ಎನ್ನುವ ಶಿವಣ್ಣನ ಮಾತು ಅವರ ವಿಶಾಲ ಮನೋಭಾವಕ್ಕೆ ಹಿಡಿದ ಕನ್ನಡಿ. ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಲು ಈ ಕಾರ್ಡ್ ಸಂಜೀವಿನಿಯಾಗಲಿದೆ.

ರಾಜಕೀಯದ ಗಂಧ ಬೇಡ, ಜನಸೇವೆಯ ಹಾದಿ ಸಾಕು!

ಇತ್ತೀಚೆಗೆ ದಳಪತಿ ವಿಜಯ್ ಅವರಂತಹ ಸ್ಟಾರ್ ನಟರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಾದರೆ ನಮ್ಮ ಶಿವಣ್ಣ ಕೂಡ ಪೊಲಿಟಿಕ್ಸ್ ಗೆ ಬರ್ತಾರಾ? ಎಂಬ ಪ್ರಶ್ನೆಗೆ ಶಿವಣ್ಣ ಸ್ಟ್ರೈಟ್ ಆಗಿ ಉತ್ತರ ಕೊಟ್ಟಿದ್ದಾರೆ. "ನನಗೆ ರಾಜಕೀಯಕ್ಕೆ ಬರುವ ಆಸೆ ಇಲ್ಲ. ಅಧಿಕಾರವಿಲ್ಲದೆಯೂ ಜನಸೇವೆ ಮಾಡಬಹುದು ಎಂದು ಅಪ್ಪಾಜಿ ತೋರಿಸಿಕೊಟ್ಟಿದ್ದಾರೆ. ನಾನು ಅದೇ ಹಾದಿಯಲ್ಲಿ ನಡೆಯುತ್ತೇನೆ" ಎನ್ನುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸಂಭ್ರಮದ ನಡುವೆ ಕಾಡಿದ ಜಾನಕಮ್ಮನ ನೆನಪು:

ಹಬ್ಬದ ವಾತಾವರಣದ ನಡುವೆಯೂ ಶಿವಣ್ಣನ ಕಣ್ಣಲ್ಲಿ ಇಂದು ವಿಷಾದದ ಛಾಯೆ ಇತ್ತು. ಅದಕ್ಕೆ ಕಾರಣ ಗಾನ ಕೋಗಿಲೆ ಎಸ್. ಜಾನಕಿ (ಜಾನಕಮ್ಮ) ಅವರ ನಿಧನದ ವಾರ್ತೆ. "ಅಪ್ಪಾಜಿ ಜೊತೆ ನೂರಾರು ಅದ್ಭುತ ಹಾಡುಗಳನ್ನು ಹಾಡಿದ್ದ ಜಾನಕಮ್ಮ ನಮ್ಮ ಕುಟುಂಬದ ಸದಸ್ಯರಂತಿದ್ದರು. ಒಂದು ಕಡೆ ಹುಟ್ಟುಹಬ್ಬದ ಖುಷಿ ಇದ್ದರೆ, ಮತ್ತೊಂದು ಕಡೆ ಅವರನ್ನು ಕಳೆದುಕೊಂಡ ನೋವು ನನ್ನನ್ನು ಕಾಡುತ್ತಿದೆ" ಎಂದು ಭಾವುಕರಾಗಿ ನುಡಿದರು.

ಒಟ್ಟಿನಲ್ಲಿ, ಶಿವಣ್ಣನ ಈ ಬಾರಿಯ ಹುಟ್ಟುಹಬ್ಬ ಕೇವಲ ಸಿನಿಮೀಯ ಮೆರುಗಿನಿಂದಷ್ಟೇ ಅಲ್ಲದೆ, ಮಾನವೀಯತೆಯ ಮಹೋತ್ಸವವಾಗಿಯೂ ಚಿರಕಾಲ ಉಳಿಯಲಿದೆ. ಹ್ಯಾಪಿ ಬರ್ತ್‌ಡೇ ಶಿವಣ್ಣ! ನೀವು ಹೀಗೆ ನಗುನಗುತ ನೂರ ಕಾಲ ಬಾಳಲಿ ಎಂಬುದು ಸಮಸ್ತ ಕನ್ನಡಿಗರ ಹಾರೈಕೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಸ್. ಜಾನಕಿ ಕೊನೆಯಾಸೆ & ಕೊನೆ ಕ್ಷಣ ಹೇಗಿತ್ತು? ಕೇರ್‌ಟೇಕರ್ ನವೀನ್ ಬಿಚ್ಚಿಟ್ಟ ರಹಸ್ಯ
S janaki: ಎಸ್ ಜಾನಕಿ ಜೀವನ ಚರಿತ್ರೆ-1957ರಲ್ಲಿ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ; 2017ರಲ್ಲಿ ಅಧಿಕೃತ ವಿದಾಯ!