
ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ಸದ್ಯ ಸಾಕಷ್ಟು ಸದ್ದು ಮಾಡುತ್ತಿರುವ ಧರ್ಮಸ್ಥಳ ಪ್ರಕರಣದ ತನಿಖೆಗೆ SIT ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಸ್ವಾಗತಿಸಿ ಕನ್ನಡದ ನಟಿ ರಮ್ಯಾ (Ramya) ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಖುಷಿಯಾಗಿರುವ ನಟಿ ರಮ್ಯಾ ಅವರು ಪೋಸ್ಟ್ ಹಂಚಿಕೊಂಡಿದ್ದು ಅದಕ್ಕೆ ಸಾಕಷ್ಟು ಕಾಮೆಂಟ್‌ಗಳು ಹರಿದು ಬರುತ್ತಿವೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ನಟಿ ರಮ್ಯಾ ಅವರು 'ರಾಜ್ಯದ ಸಿಎಂ ಧರ್ಮಸ್ಥಳ ಕುರಿತ ಆರೋಪಗಳ ತನಿಖೆಗೆ SIT ರಚನೆ ಮಾಡಿದ್ದಾರೆ. ಈ ತಂಡದಲ್ಲಿರುವ ಎಲ್ಲರೂ ದಕ್ಷ ಅಧಿಕಾರಿಗಳಾಗಿದ್ದಾರೆ. ಅವರೆಲ್ಲರಿಗೂ ತನಿಖೆ ಮಾಡಲು ಫ್ರೀಹ್ಯಾಂಡ್ ನೀಡಲಾಗುತ್ತೆ ಎಂಬ ನಂಬಿಕೆ ನನಗಿದೆ.' ಎಂದು ರಮ್ಯಾ ಅವರು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಇದೀಗ ಈ ಸುದ್ದಿ ಸಾಕಷ್ಟು ವೈರಲ್ ಆಗತೊಡಗಿದೆ.
‘ಧರ್ಮಸ್ಥಳದಲ್ಲಿ ಶವಗಳನ್ನು ಸಾಮೂಹಿಕವಾಗಿ ಹೂತು ಹಾಕಿದ್ದೇನೆ. ಅಪರಾಧಿ ಮನಸ್ಥಿತಿ ತನ್ನನ್ನು ಕಾಡುತ್ತಿದೆ. ನೂರಾರು ಬಾಲಕಿಯರು ಹಾಗೂ ಮಹಿಳೆಯರ ಅತ್ಯಾಚಾ*ರ ಮತ್ತು ಕೊ*ಲೆ ಮಾಡಲಾಗಿದ್ದು, ಅಂತಹ ಶವಗಳನ್ನು ಧರ್ಮಸ್ಥಳದ ವಿವಿಧೆಡೆ ಹೂತು ಹಾಕಿದ್ದೇನೆ. ಎಲ್ಲ ಶವಗಳನ್ನು ನಾನು ತೋರಿಸುತ್ತೇನೆ’ ಎಂದು ಧರ್ಮಸ್ಥಳ ಸಂಸ್ಥೆಯ ಮಾಜಿ ಕಾರ್ಮಿಕನೊಬ್ಬ ಪೊಲೀಸ್ ಇಲಾಖೆ ಮುಂದೆ ಶರಣಾಗಿದ್ದನು. ಇದೀಗ ಈ ಪ್ರಕರಣವನ್ನು ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಿದೆ. ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಐಜಿ ಎಂ.ಎನ್. ಅನುಚೇತ್, ಡಿಸಿಪಿ ಸೌಮ್ಯಲತಾ ಮತ್ತು ಎಸ್ಪಿ ಜಿತೇಂದ್ರಕುಮಾರ್ ದಯಾಮ್ ತಂಡವನ್ನು ರಚಿಸಲಾಗಿದೆ.
ಸದ್ಯ ಎಲ್ಲಾ ಕಡೆ ಧರ್ಮಸ್ಥಳ ಕೇಸ್ ಬಗ್ಗೆಯೇ ಸುದ್ದಿ ಹಾಗೂ ಚರ್ಚೆಗಳು ನಡೆಯತೊಡಗಿವೆ. ಕಾರಣ, ಕೋಟ್ಯಂತರ ಭಕ್ತರ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದ ಬಗ್ಗೆ ಕೇಸ್ ದಾಖಲಾಗಿರುವುದು ಸಹಜವಾಗಿಯೇ ಭಕ್ತವೃಂದದಲ್ಲಿ ಅಚ್ಚರಿ ಹಾಗೂ ಶಾಖ್ ಮೂಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅ*ತ್ಯಾಚಾರ, ಕೊ*ಲೆಗಳು ಸಾಕಷ್ಟು ಸದ್ದು-ಸುದ್ದಿ ಮಾಡಿದ್ದವು. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ದೂರು ದಾಖಲಿಸಿದ ಬಳಿಕ ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸ್‌ಐಟಿ (SIT) ತನಿಖೆಗೆ ಆದೇಶ ಹೊರಡಿಸಿದೆ.
ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಡಿರುವ ಪೋಸ್ಟ್ ಹೀಗಿದೆ:
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ, ಸ್ಥಳೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಮನುಷ್ಯನ ತಲೆಬರುಡೆ ದೊರಕಿದ ಸ್ಥಳ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬದವರ ಹೇಳಿಕೆಯನ್ನು ಪ್ರಸಾರ ಮಾಡಿವೆ. ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊ*ಲೆ, ಅ*ತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದ್ದು, ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ.
ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ, ವರದಿ ನೀಡಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.