ಪುನೀತ್‌, ದೈವ ನರ್ತಕರಿಗೆ ‘ಕಾಂತಾರ’ ಅರ್ಪಣೆ: ರಿಷಬ್‌ ಶೆಟ್ಟಿ

By Govindaraj SFirst Published Oct 2, 2022, 5:57 AM IST
Highlights

ನಟ ಪುನೀತ್‌ ರಾಜಕುಮಾರ್‌, ದೈವ ನರ್ತಕರು ಮತ್ತು ಅವರ ಕುಟುಂಬಗಳಿಗೆ ನಮ್ಮ ‘ಕಾಂತಾರ’ ಚಿತ್ರವನ್ನು ಅರ್ಪಿಸುತ್ತೇನೆ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದ್ದಾರೆ. ಒಂದೂವರೆ ವರ್ಷದ ಶ್ರಮದ ಪ್ರತಿಫಲ ಈ ‘ಕಾಂತಾರ’ ಸಿನಿಮಾ. ಪ್ರೇಕ್ಷಕರ ಮೆಚ್ಚುಗೆಯಿಂದ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು (ಅ.02): ನಟ ಪುನೀತ್‌ ರಾಜ್‌ಕುಮಾರ್‌, ದೈವ ನರ್ತಕರು ಮತ್ತು ಅವರ ಕುಟುಂಬಗಳಿಗೆ ನಮ್ಮ ‘ಕಾಂತಾರ’ ಚಿತ್ರವನ್ನು ಅರ್ಪಿಸುತ್ತೇನೆ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದ್ದಾರೆ. ಒಂದೂವರೆ ವರ್ಷದ ಶ್ರಮದ ಪ್ರತಿಫಲ ಈ ‘ಕಾಂತಾರ’ ಸಿನಿಮಾ. ಪ್ರೇಕ್ಷಕರ ಮೆಚ್ಚುಗೆಯಿಂದ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅದ್ಭುತವಾದ ಪಯಣ. ಈ ಕತೆ ಹುಟ್ಟಿದಾಗ ನನ್ನ ಪತ್ನಿ ಪ್ರಗತಿ ಶೆಟ್ಟಿ ಗರ್ಭಿಣಿ ಆಗಿದ್ದರು. ಪ್ರಗತಿಗೆ ಹೆರಿಗೆ ಆಗಿ ಆರು ತಿಂಗಳು ಆಗಿದೆ. ಆ ಮಗು ಚೆನ್ನಾಗಿದೆ. ನನ್ನ ಸಿನಿಮಾ ಮಗು ಶುಕ್ರವಾರ ಚಿತ್ರಮಂದಿರಕ್ಕೆ ಬಂದಿದೆ. ಈ ಮಗು ಕೂಡ ಆರೋಗ್ಯವಾಗಿದೆ. ಜನ ಪ್ರೀತಿಸುತಿದ್ದಾರೆ. ಸ್ಥಳೀಯ ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಹೇಳುವ ಪ್ರಯತ್ನ ಇದು ಎಂದರು.

Kantara ಕೆರಾಡಿಯಲ್ಲಿ ಕಾಂತಾರ, ಕತೆ ಕೇಳ್ತಾ ಕೇಳ್ತಾ ದಂತಕತೆಯಾಗುತ್ತೆ: ರಿಷಬ್ ಶೆಟ್ಟಿ

ಸಿನಿಮಾ ನೋಡಿದವರು ಇದು ಮಂಗಳೂರು ಅಥವಾ ಕರಾವಳಿಗೆ ಸೀಮಿತವಾದ ಕತೆ ಅಂತ ಯಾರೂ ಹೇಳುತ್ತಿಲ್ಲ. ದೇವರು, ದೈವ, ಪ್ರಕೃತಿ ಮತ್ತು ಮನುಷ್ಯನ ಸಂಘರ್ಷ ಎಲ್ಲ ಕಡೆ ಇದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮದೇ ಕತೆ ಎನ್ನುವಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಮಂಗಳೂರಿನ ಕೆರಾಡಿ ಊರಿನ ಕತೆ ಎಲ್ಲ ಊರುಗಳ ಕತೆ ಆಗಿದೆ ಎಂದು ರಿಷಬ್‌ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಹೊಂಬಾಳೆ ಫಿಲಮ್ಸ್‌ ಪರವಾಗಿ ಮಾತನಾಡಿದ ಕಾರ್ತಿಕ್‌ ಗೌಡ, ನಮ್ಮ ಸಂಸ್ಥೆ ನಿರ್ಮಾಣದ ಕಾಂತಾರ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಬುಕ್‌ ಮೈ ಶೋನಲ್ಲೂ ವೇಗವಾಗಿ ಸೀಟು ಭರ್ತಿ ಆಗುತ್ತಿವೆ. ಸಿನಿಮಾ ಪ್ರದರ್ಶನ ಆಗುತ್ತಿರುವ ಚಿತ್ರಮಂದಿರಗಳ ಮುಂದೆ ಹೌಸ್‌ಫುಲ್ ಬೋರ್ಡ್‌ ಹಾಕಲಾಗಿದೆ ಎಂದರು.

ಸಿನಿಮಾ ಬಿಡುಗಡೆ ಆದ ಎರಡನೇ ದಿನಕ್ಕೆ 100 ಶೋಗಳು ಹೆಚ್ಚಾಗಿವೆ. ಇನ್ನೂ 25 ಶೋ ಹೆಚ್ಚಾಗಲಿವೆ. ಕ್ಯಾಲಿಫೋರ್ನಿಯಾದ ಚಿತ್ರಮಂದಿರವೊಂದರಲ್ಲಿ ಒಂದೇ ದಿನ 8 ಶೋ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಸಿನಿಮಾದ ದಾಖಲೆ. ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಅವರ ಕೆಲಸಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಳ್ಳೆಯ ಚಿತ್ರವನ್ನು ಜನ ಗೆಲ್ಲಿಸುತ್ತಾರೆಂಬುದಕ್ಕೆ ಕಾಂತಾರ ಚಿತ್ರವೇ ಸಾಕ್ಷಿ ಎಂದು ಹೇಳಿದರು.

ಸಿನಿಮಾ ಉದ್ದಕ್ಕೂ ನಾನು ಬೀಡ ಹಾಕೊಂಡೆ ಇದ್ದೆ; ರಿಷಬ್ ಶೆಟ್ಟಿ

ಚಿತ್ರದಲ್ಲಿ ನಟಿಸಿರುವ ನಾಯಕಿ ಸಪ್ತಮಿ ಗೌಡ, ಅಚ್ಯುತ್‌ಕುಮಾರ್‌, ಪ್ರಮೋದ್‌ ಶೆಟ್ಟಿ. ಶೈನ್‌ ಶೆಟ್ಟಿ, ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ, ಛಾಯಾಗ್ರಹಕ ಅರವಿಂದ್‌ ಕಶ್ಯಪ್‌ ಅವರು ಹಾಜರಿದ್ದು ಚಿತ್ರದ ಬಗ್ಗೆ ಮಾತನಾಡಿದರು.

click me!