ಕಾಂತಾರ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ರಿಷಬ್ ಶೆಟ್ಟಿ ಪಾರ್ಟ್ 2 ಹೊರ ತರುವ ಸಿದ್ದತೆಯಲ್ಲಿದ್ದಾರೆ. ಎರಡನೇ ಭಾಗದ ಚಿತ್ರೀಕರಣ ಶುರು ಮಾಡಲು ಮೊದಲು ರಿಷಬ್ ಮತ್ತು ತಂಡ ಪಂಜುರ್ಲಿ ದೈವದ ಅಪ್ಪಣೆ ಕೇಳಿದ್ದಾರೆ.
ಕಾಂತಾರ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ರಿಷಬ್ ಶೆಟ್ಟಿ ಪಾರ್ಟ್ 2 ಹೊರ ತರುವ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಕಾಂತಾರದ ಮುಂದುವರೆದ ಕಥೆ ಕೂಡ ಬಹುತೇಕ ಸಿದ್ದಪಡಿಸಿ ಚಿತ್ರೀಕರಣ ಪ್ರಾರಂಭಿಸಲು ತಯಾರಿ ನಡೆಸಿದ್ದಾರೆ. ಈ ನಡುವೆ ಎರಡನೇ ಭಾಗದ ಚಿತ್ರೀಕರಣ ಶುರು ಮಾಡಲು ಮೊದಲು ರಿಷಬ್ ಮತ್ತು ತಂಡ ಪಂಜುರ್ಲಿ ದೈವದ ಅಪ್ಪಣೆ ಕೇಳಿದ್ದಾರೆ. ದೈವ ಹಲವು ಷರತ್ತುಗಳ ಮೂಲಕ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
'ಕಾಂತಾರ' ಭಾಗ 2 ಸಿನಿಮಾ ಮಾಡಲು ದೈವ ಅನುಮತಿಯನ್ನು ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. 'ಕಾಂತಾರ' ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ 'ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ' ಎಂದು ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ ಎನ್ನಲಾಗಿದೆ.
ಕಾಂತಾರ ಮೋಡಿ; ಪರೀಕ್ಷೆಯಲ್ಲಿ 3ನೇ ತರಗತಿ ವಿದ್ಯಾರ್ಥಿ ಉತ್ತರಕ್ಕೆ ಶಿಕ್ಷಕರು ಶಾಕ್
ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರ ಚಿತ್ರತಂಡ ಭಾಗವಹಿಸಿತ್ತು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ಕಾಂತಾರಾ ಭಾಗ-2 ನಿರ್ಮಾಣಕ್ಕೆ ಅನುಮತಿ ಕೇಳಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕ, ನಟ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇನ್ನು ಕೆಲವರು ಹಾಜರಿದ್ದರು. ಇದೀಗ 'ಕಾಂತಾರ 2' ಸಿನಿಮಾದ ಮಾತುಕತೆ ಶುರುವಾಗಿದ್ದು, 'ಕಾಂತಾರ 2' ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡದವರು ದೈವದ ಅನುಮತಿಯನ್ನು ಕೇಳಿದ್ದಾರೆ.
ದೈವದಿಂದ ಅನುಮತಿ ದೊರೆತ ಬೆನ್ನಲ್ಲೇ ರಿಷಬ್ ಶೆಟ್ಟಿ ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಮಾಡಿಕೊಂಡಿದ್ದ ಯೋಜನೆಯನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದಾರೆ. ಚಿತ್ರದಲ್ಲಿ ನಟಿಸುವ ಕೆಲವರಿಗೆ ಉದ್ದ ಕೂದಲು ಬಿಡಲು ಸೂಚಿಸಿದ್ದಾರೆ. ಮುಂದಿನ ಮಳೆಗಾಲದ ಅವಧಿಯಲ್ಲಿ ಕಾಂತಾರ ಭಾಗ 2 ಚಿತ್ರದ ಚಿತ್ರೀಕರಣವಾಗುವ ಸಾಧ್ಯತೆಗಳಿವೆ. 'ಕಾಂತಾರ' ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು 'ಕಾಂತಾರ 2' ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ದಟ್ಟವಾಗಿದೆ.
ಆನೆಗುಡ್ಡೆ ದೇವಸ್ಥಾನದಲ್ಲಿ 'ಕಾಂತಾರ' ಶಿವ; ಕುಟುಂಬ ಸಮೇತ ಭೇಟಿ ನೀಡಿದ ರಿಷಬ್ ಶೆಟ್ಟಿ
ಕಾಂತಾರ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಕರ್ನಾಟಕ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಿದೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾ ಗಣ್ಯರು ಸಿನಿಮಾವನ್ನು ನೋಡಿ ಹಾಡಿಹೊಗಳಿದ್ದರು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಮೊದಲ ಭಾಗದ ಸಕ್ಸಸ್ ಬೆನ್ನಲ್ಲೇ ಎರಡನೇ ಭಾಗದ ಬಗ್ಗೆ ಅನೇಕ ಕಡೆ ಪ್ರಶ್ನೆ ಎದುರಾಗಿತ್ತು. ಎಲ್ಲಿಯೂ ರಿಷಬ್ ಮತ್ತು ತಂಡ ಈ ಬಗ್ಗೆ ನೋ ಎಂದಿರಲಿಲ್ಲ. ಇದೀಗ ದೈವದ ಅನುಮತಿ ಪಡೆದು ಸಿನಿಮಾತಂಡ ಪಾರ್ಟ್-2ಗೆ ಸಜ್ಜಾಗುತ್ತಿದೆ.