
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ಮತ್ತೆ ದರ್ಶನ್ ಜೈಲು ಸೇರಿದ್ದಾರೆ. ಈ ಬಗ್ಗೆ ಫಿಲ್ಮ್ ಚೇಬರ್ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದ್ದಾರೆ.
“ದರ್ಶನ್ ಜೈಲಿನಿಂದ ಹೊರಗೆ ಬಂದ್ರು ಅಂತ ಖುಷಿಯಾಗಿದ್ದೆವು. ಡೆವಿಲ್ ಸಿನಿಮಾ ಕೆಲಸ ಮುಗಿದಿದೆ. ಇನ್ನೇನು ಹೊಸ ಸಿನಿಮಾ ಮಾಡುತ್ತಾರೆ ಅಂತ ಅಂದುಕೊಂಡಿದ್ದೆವು. ನ್ಯಾಯಾಲಯ ಆದೇಶ ಮಾಡಿದಾಗ ಯಾರೇ ಆದರೂ ಕೂಡ ತಲೆ ಬಾಗಲೇಬೇಕು. ಇಂತಹ ಘಟನೆಗಳು ನಮ್ಮ ಚಿತ್ರರಂಗಕ್ಕೆ ಮಾರಕ. ನನಗೆ ಇರೋ ಮಾಹಿತಿ ಪ್ರಕಾರ ಡೆವಿಲ್ ಸಿನಿಮಾ ಬಿಡುಗಡೆ ಆಗುತ್ತದೆ” ಎಂದಿದ್ದಾರೆ ನರಸಿಂಹಲು.
“ದರ್ಶನ್ ಜೈಲ್‌ಗೆ ಹೋದಾಗೆಲ್ಲ ಹೆಚ್ಚಿನ ಫಾನ್ಸ್ ಹುಟ್ಟಿಕೊಳ್ಳುತ್ತಿದ್ದಾರೆ. ಕೊಲೆ ಘಟನೆಗಳಲ್ಲಿ ಯಾರು ಭಾಗಿ ಆಗಬಾರದು. ಅಪರಾಧಿ ಅಂತ ಸಾಬೀತಾದರೆ ದರ್ಶನ್ ಅವರನ್ನು ಚಿತ್ರ ರಂಗದಿಂದ ದೂರ ಇಡುವ ಕ್ರಮ ತೆಗೆದುಕೊಳುತ್ತೇವೆ. ಅಪರಾಧ ಮಾಡಿದ್ರೆ ಯಾರು ಎಲ್ಲೂ ತಪ್ಪಿಸಿಕೊಳ್ಳೋಕೆ ಆಗಲ್ಲ. ವ್ಯಕ್ತಿ ಯಾರೇ ಇದ್ದರೂ, ಕಾನೂನು ಯಾರನ್ನು ಬಿಡೋದಿಲ್ಲ” ಎಂದಿದ್ದಾರೆ ನರಸಿಂಹಲು
ಪೊಲೀಸ್ ಮಾಹಿತಿಯ ಪ್ರಕಾರ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರು ಫೇಕ್ ಅಕೌಂಟ್ ಸೃಷ್ಟಿ ಮಾಡಿ ಅಶ್ಲೀಲ ಕಾಮೆಂಟ್ ಮಾಡಿದ್ದರು. ಇದು ದರ್ಶನ್ ಕಿವಿಗೆ ಬಿದ್ದಿತ್ತು. ಜೂನ್ 2024ರಲ್ಲಿ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ, ಬೆಂಗಳೂರಿನಲ್ಲಿರೋ ಪಟ್ಟಣಗೆರೆ ಶೆಡ್‌ಗೆ ಕರೆಸಿಕೊಂಡಿತ್ತು. ಅಲ್ಲಿ ಮೂರು ದಿನಗಳ ಕಾಲ ರೇಣುಕಾಸ್ವಾಮಿಗೆ ದೌರ್ಜನ್ಯ ನೀಡಲಾಗಿತ್ತು. ಆ ದೌರ್ಜನ್ಯದಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದರು. ಆಮೇಲೆ ಅವರ ಬಾಡಿಯನ್ನು ರಾಜಕಾಲುವೆಗೆ ಎಸೆಯಲಾಗಿತ್ತು. ಆ ಬಳಿಕ ಇಬ್ಬರು ಪೊಲೀಸ್ ಠಾಣೆಗೆ ಬಂದು ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದರು. ಈ ತನಿಖೆಯನ್ನು ಮಾಡಿದಾಗ ಇದರ ಹಿಂದೆ ದರ್ಶನ್ ಇರೋದು ಬಯಲಾಗಿತ್ತು. ಆಮೇಲೆ ಪೊಲೀಸರು ಈ ಕೇಸ್‌ಗೆ ಸಂಬಂಧಪಟ್ಟ 11 ಜನರನ್ನು ವಶಕ್ಕೆ ಪಡೆದಿದ್ದರು.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇದ್ದರು. ಅಲ್ಲಿ ಅವರಿಗೆ ಲಕ್ಷುರಿ ಜೀವನದ ಸೌಲಭ್ಯ ಸಿಗ್ತಿದೆ ಎಂದು ಬಳ್ಳಾರಿ ಜೈಲಿಗೆ ಕಳಿಸಲಾಗಿತ್ತು. ಒಟ್ಟೂ 70 ದಿನಗಳ ಕಾಲ ಜೈಲಿನಲ್ಲಿ ಕಳೆದ ಬಳಿಕ ದರ್ಶನ್ ಗ್ಯಾಂಗ್‌ಗೆ ಜಾಮೀನು ಸಿಕ್ಕಿತ್ತು. ಆರೋಗ್ಯ ಚೆನ್ನಾಗಿಲ್ಲ, ಆಪರೇಶನ್ ಆಗಬೇಕು ಎಂದು ಜಾಮೀನು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ದರ್ಶನ್ ಆಪರೇಶನ್ ಮಾಡಿಸಿಕೊಂಡಿರಲಿಲ್ಲ. ಇದನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಈಗ ಜಾಮೀನು ಅರ್ಜಿ ರದ್ದಾಗಿದ್ದು ಮತ್ತೆ ಡಿ ಗ್ಯಾಂಗ್ ಜೈಲು ಸೇರಿದೆ. ಆಗಸ್ಟ್ 23ರ ತನಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಂದಹಾಗೆ ಮಿಲನ ಪ್ರಕಾಶ್ ನಿರ್ದೇಶನ, ನಿರ್ಮಾಣದ ʼಡೆವಿಲ್ʼ ಸಿನಿಮಾ ಶೂಟಿಂಗ್ ಕೆಲಸ ಮುಗಿದಿದೆ. ಜಾಮೀನಿನ ಹೊರಗಡೆ ಬಂದಿದ್ದ ದರ್ಶನ್ ಅವರು ರಾಜಸ್ಥಾನದಲ್ಲಿ 24 ಗಂಟೆ ಶೂಟಿಂಗ್‌ನಲ್ಲಿ ಭಾಗಿಯಾಗಿ ಸಿನಿಮಾ ಕೆಲಸ ಮುಗಿಸಿದ್ದಾರೆ, ತಮ್ಮ ಪಾತ್ರದ ಡಬ್ಬಿಂಗ್ ಕೂಡ ಮಾಡಿದ್ದಾರೆ. 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರೋ ಈ ಸಿನಿಮಾದ ಹಾಡು ಇಂದು ರಿಲೀಸ್ ಆಗಬೇಕಿತ್ತು. ಆದರೆ ದರ್ಶನ್ ಜೈಲು ಪಾಲಾಗಿರೋದರಿಂದ ಹಾಡು ರಿಲೀಸ್ ಮುಂದಕ್ಕೆ ಹೋಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ ʼಡೆವಿಲ್ʼ ಸಿನಿಮಾ ರಿಲೀಸ್ ಆಗಲಿದೆಯಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.