
ಬೆಂಗಳೂರು (ಜು.11): ನಟಿ ರಶ್ಮಿಕಾ ಮಂದಣ್ಣ ನೀಡಿದ 'ನಾನು ಕೂರ್ಗ್ ನಿಂದ ಬಂದ ಏಕೈಕ ನಟಿ' ಎಂಬ ಹೇಳಿಕೆ ಸ್ಯಾಂಡಲ್‌ವುಡ್‌ನ ಹಲವು ತಾರೆಯರ ಕಣ್ಣು ಕೆಂಪುಮಾಡಿತ್ತು. ಇದೀಗ ಈ ಹೇಳಿಕೆಗೆ ಬಾಲಿವುಡ್‌ನಲ್ಲಿಯೇ ರೈಸಿಂಗ್ ಸ್ಟಾರ್ ನಟಿ ರೀಷ್ಮಾ ನಾಣಯ್ಯ ಗಟ್ಟಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಕನ್ನಡದ ಬಹು ನಿರೀಕ್ಷಿತ ಚಿತ್ರ 'ಕೆ.ಡಿ.'ಯ ಪ್ರಚಾರಕ್ಕಾಗಿ ಮುಂಬೈಗೆ ತೆರಳಿದ್ದ ರೀಷ್ಮಾ, 'ನಾನೂ ಕೂಡ ಕೂರ್ಗ್ ನಿಂದ ಬಂದಿದ್ದೇನೆ' ಎಂದು ಎರಡು ಬಾರಿ ಪುನರುಚ್ಚರಿಸಿದ ಹೇಳಿಕೆಯಿಂದ ಸಿಕ್ಕಾಪಟ್ಟೆ ಗಮನಸೆಳೆದಿದ್ದಾರೆ. ಈ ಮೂಲಕ, ರಶ್ಮಿಕಾ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿವೆ.
ರಶ್ಮಿಕಾ ಮಂದಣ್ಣ ಮಾತು ಏನು?
ಇತ್ತೀಚೆಗೆ ಒಂದು ಸಂದರ್ಶನದಲ್ಲಿ, 'ನಾನು ಕೂರ್ಗ್‌ನಿಂದ ಬಂದಿರುವ ಏಕೈಕ ನಟಿ' ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು. ಈ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲೂ ವಿರೋಧ ವ್ಯಕ್ತವಾಗಿತ್ತು. ಅವರ ಈ ಮಾತಿಗೆ ಸ್ಯಾಂಡಲ್‌ವುಡ್‌ನ ಬೇರೆ ನಟಿಯರ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದಂತಾಗಿತ್ತು. ಕೆಲವು ನಟ-ನಟಿಯರು ಈ ಬಗ್ಗೆ ಮೃದು ಧೋರಣೆ ತೋರಿದ್ದರೆ, ಇನ್ನು ಕೆಲವರು ತಮಗೋ ಒಂದು ಸಮಯ ಅಥವಾ ವೇದಿಕೆ ಸಿಗುತ್ತದೆ ಎಂದು ಕಾಯುತ್ತಿದ್ದರು. ಇದೀಗ ಅವಕಾಶ ಸಿಗುತ್ತಿದ್ದಂತೆ ನಟಿ ರೀಷ್ಮಾ ನಾಣಯ್ಯ ಅವರು ರಶ್ಮಿಕಾ ಮಂದಣ್ಣಗೆ ತಿರುಗೇಟು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಡಿ ಚಿತ್ರದ ಪ್ರಚಾರಕ್ಕಾಗಿ ತೆರಳಿದ್ದ ವೇಳೆ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ ಹಾಗೂ ನಿರ್ದೇಶನ ಪ್ರೇಮ್ ಅವರಿದ್ದ ವೇದಿಕೆ ಮೇಲೆಯೇ ತಮ್ಮನ್ನು ಪರಿಚಯ ಮಾಡಿಕೊಂಡ ನಟಿ ರೀಷ್ಮಾ ನಾಣಯ್ಯ ಅವರು, 'ನಾನು ಕೂಡ ಕೂರ್ಗ್ ಹುಡುಗಿಯೇ, ನಾನು ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಹೀಗಾಗಿ, ಪಕ್ಕಾ ಬೆಂಗಳೂರು ಹುಡುಗಿ' ಎಂಬ ಮಾತನ್ನು ಸಮಾರಂಭದಲ್ಲಿ ಹೇಳಿದ ದೃಶ್ಯ ವೈರಲ್ ಆಗುತ್ತಿದೆ. ಈ ಮೂಲಕ ರಶ್ಮಿಕಾ ಮಂದಣ್ಣ ನೇರವಾಗಿ ನಾನೊಬ್ಬಳೇ ಕೂರ್ಗ್ ಸಮುದಾಯದ ನಟಿ ಎಂದು ಹೇಳಿದ ಮಾತಿಗೆ ತಿರುಗೇಟು ನೀಡಿದಂತಾಗಿದೆ. 'ಕೆ.ಡಿ.' ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರೀಷ್ಮಾ ನಾಣಯ್ಯ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಾನು ಕೂರ್ಗ್ ನಿಂದ ಬಂದಿರುವುದನ್ನು ಹೇಳಿದ್ದಾರೆ. ಈ ಮೂಲಕ, ಕನ್ನಡದ ನಟಿಯರಿಗೂ ಹಲವಾರು ಅವಕಾಶಗಳಿವೆ ಎಂಬ ಸಂದೇಶವನ್ನೂ ನೀಡಿದ್ದಾರೆ.
ರಶ್ಮಿಕಾ ಹೇಳಿಕೆಯಿಂದ ಆರಂಭವಾದ ಈ ಚರ್ಚೆಗೆ ಇದೀಗ ಹೊಸ ತಿರುವು ಸಿಕ್ಕಿದ್ದು, ಕೂರ್ಗ್ ಮತ್ತೊಬ್ಬ ಸುಂದರಿ ರೀಷ್ಮಾ ನಾಣಯ್ಯ ಅವರು ನಾನೂ ಕೂರ್ಗ್ ಹುಡುಗಿ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ಆದರೆ, ಅಭಿಮಾನಿಗಳು ಇಬ್ಬರು ನಟಿಯರ ನಡುವೆ ಪರೋಕ್ಷ ಪೈಪೋಟಿ ಬೆಳೆದಿದೆ. ಇನ್ನು ಮುಂದೆ ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತೆ ಎಂಬ ಕುತೂಹಲವನ್ನು ವೈರಲ್ ವಿಡಿಯೋಗೆ ಕಾಮೆಂಟ್ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಹೇಳಿಕೆಗೆ ತಿರುಗೇಟು ನೀಡಿದ್ದ ಹಿರಿಯ ನಟಿ ಪ್ರೇಮಾ, ಖಾಸಗಿ ಟಿವಿಗೆ ನೀಡಿದ ಹೇಳಿಕೆಯಲ್ಲಿ 'ಈ ಬಗ್ಗೆ ನಾವೇನು ಮಾತನಾಡೋದು, ಜನಕ್ಕೆ ಇದರ ಬಗ್ಗೆ ಗೊತ್ತಿದೆ. ಅವರ ಹೇಳಿಕೆಯ ಬಗ್ಗೆ ಜನರೇ ಕಾಮೆಂಟ್ ಮಾಡಿದ್ದಾರೆ. ಕೊಡವ ಸಮಾಜದಿಂದ ಯಾರೆಲ್ಲಾ ಹೀರೋಯಿನ್ಸ್ ಆಗಿದ್ದಾರೆ ಎಂದು ಅವರೇ ತಿಳಿಸಿದ್ದಾರೆ. ಅವರಂತೆ ನಾವು ಮಾತನಾಡೋದಕ್ಕೆ ಆಗೋದಿಲ್ಲ. ಯಾವ ಜನ ಹೇಗೆ ಮಾತಾಡ್ತಾರೆ ಅಂತಾ ಕೂರ್ಗ್ ಜನಕ್ಕೆ ಗೊತ್ತಿದೆ. ನಾನು ಇಂಡಸ್ಟ್ರಿಯಲ್ಲಿ ಮಾತನಾಡೋದಕ್ಕಿಂತ ಕೆಲಸ ಮಾಡಿಕೊಂಡು ಹೋಗಿದ್ದೀನಿ. ನಾನು ಒಬ್ಬಳು ಕೆಲಸಗಾರರು. ಅವರ ಮಾತಿಗೆಲ್ಲಾ ಕಾಮೆಂಟ್ ಮಾಡೋವಷ್ಟು ದೊಡ್ಡ ವ್ಯಕ್ತಿಯೇನಲ್ಲ. ಜನರೇ ನನಗೆ ಪ್ರಶಸ್ತಿ ಕೊಟ್ಟಿದ್ದಾರೆ ಎಂದು ರಶ್ಮಿಕಾಗೆ ತಿರುಗೇಟು ನೀಡಿದ್ದರು.
ಕೂರ್ಗ್‌ನಿಂದ ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಬರುವ ಹಲವು ವರ್ಷಗಳ ಮುಂಚೆಯೇ ಹಲವು ಪ್ರಸಿದ್ಧ ನಟಿಯರು ಸಿನಿಮಾಗೆ ಬಂದಿದ್ದಾರೆ. ನಟಿಯರಾದ ಶಶಿಕಲಾ, ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಶುಭ್ರ ಅಯ್ಯಪ್ಪ, ರೀಶ್ಮಾ ನಾಣಯ್ಯ ಸೇರಿದಂತೆ ಅನೇಕ ಕೊಡವ ವ್ಯಕ್ತಿಗಳು ಕನ್ನಡ, ತಮಿಳು, ತೆಲುಗು ಮತ್ತು ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.