
ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಜೈಪುರದ ಐತಿಹಾಸಿಕ ಸಮೋದ್ ಅರಮನೆಯಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ ಶರ್ಮಿಳಾ, ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಚಾಲನೆ ನೀಡಿದ್ದಾರೆ. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದ ನಟಿ ರಮ್ಯಾ, ತಮ್ಮ ಆತ್ಮೀಯ ಗೆಳತಿ ಶರ್ಮಿಳಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದು, ಅಭಿಮಾನಿಗಳ ಮನ ಗೆದ್ದಿದೆ.
ನಂಬಲು ಆಗುತ್ತಿಲ್ಲ
"ನನ್ನ ಮುದ್ದಿನ ಚಂಪಿ ಕೊನೆಗೂ ಮದುವೆಯಾದಳು. ಈ ಮಾತನ್ನು ನನ್ನಿಂದಲೇ ನಂಬಲು ಆಗುತ್ತಿಲ್ಲ. ಕಾಲ ಎಷ್ಟು ವೇಗವಾಗಿ ಸಾಗುತ್ತದೆ ಅಲ್ವಾ!" ಎಂದು ಆರಂಭಿಸಿರುವ ರಮ್ಯಾ, ವೈವಾಹಿಕ ಜೀವನದ ಬಗ್ಗೆ ತಮಗೆ ಹೆಚ್ಚಿನ ಅನುಭವ ಇಲ್ಲದಿದ್ದರೂ, ಆದರ್ಶ ದಾಂಪತ್ಯದ ಕುರಿತು ಕವಿ ಖಲೀಲ್ ಗಿಬ್ರಾನ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ್ದಾರೆ. ಮುಂದುವರಿದು, "ನನ್ನ ಪ್ರೀತಿಯ ಚಂಪಿ... ನಿಮ್ಮ ದಾಂಪತ್ಯ ಜೀವನ ಸದಾ ಸುರಕ್ಷತೆ, ಪ್ರೀತಿ ಮತ್ತು ನಂಬಿಕೆಯಿಂದ ತುಂಬಿರಲಿ. ನಿಮ್ಮಿಬ್ಬರಿಗಷ್ಟೇ ಸೇರಿದ ಸುಂದರ ಜಗತ್ತನ್ನು ನೀವು ನಿರ್ಮಿಸಿಕೊಳ್ಳಿ. ಆ ಜಗತ್ತಿನಲ್ಲಿ ನೀನು ನಿನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಸಂತೋಷದಿಂದ ಬದುಕು. ನಾನು ಎಂದೆಂದಿಗೂ ನಿನ್ನ ಪ್ರೀತಿಯ 'ಸಖಿ'ಯಾಗಿಯೇ ಇರುತ್ತೇನೆ" ಎಂದು ರಮ್ಯಾ ಶುಭ ಹಾರೈಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಜುಲೈ 12ರಂದು ನಡೆದ ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ಆತ್ಮೀಯರು ಹಾಗೂ ಚಿತ್ರರಂಗದ ಕೆಲವೇ ಗಣ್ಯರು ಭಾಗವಹಿಸಿದ್ದರು. ರಾಜಸ್ಥಾನದ ಸುಂದರ ಸಮೋದ್ ಪ್ಯಾಲೇಸ್‌ನಲ್ಲಿ ನಡೆದ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದಕ್ಕೂ ಮುನ್ನ ಜೂನ್ 25ರಂದು ಶರ್ಮಿಳಾ ಮತ್ತು ಸುಧನ್ ಸುಂದರಂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ವೇಳೆ ನಿಶ್ಚಿತಾರ್ಥದ ಚಿತ್ರಗಳನ್ನು ಹಂಚಿಕೊಂಡಿದ್ದ ಶರ್ಮಿಳಾ, "ನಮ್ಮ ಜೀವನದಲ್ಲಿ ಎಂದೆಂದಿಗೂ ನೆನಪಾಗುವ ದಿನ ಇದು. ನಮ್ಮ ಕನಸಿನ ನಿಶ್ಚಿತಾರ್ಥವನ್ನು ನಮ್ಮ ಆತ್ಮೀಯರ ಜೊತೆ ಆಚರಿಸಲು ಸಾಧ್ಯವಾದದ್ದು ನಮ್ಮ ಅದೃಷ್ಟ" ಎಂದು ಸಂತಸ ಹಂಚಿಕೊಂಡಿದ್ದರು.
ಇನ್ನು ಸುಧನ್ ಸುಂದರಂ ಅವರು ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಪಕರಾಗಿದ್ದು, 'ಮಹಾರಾಜ' ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇನ್ನೊಂದೆಡೆ, ಶರ್ಮಿಳಾ ಮಾಂಡ್ರೆ ಕನ್ನಡದ 'ಸಜನಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, 'ಕೃಷ್ಣ' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಇದೀಗ ಹೊಸ ಬದುಕಿನತ್ತ ಹೆಜ್ಜೆ ಇಟ್ಟಿರುವ ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ದಂಪತಿಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.