Latest Videos

ಜು.15ಕ್ಕೆ ವರ್ಮಾ ಹುಡುಗಿ ಚಿತ್ರ ಬಿಡುಗಡೆ!

By Suvarna NewsFirst Published Jul 11, 2022, 9:58 AM IST
Highlights
  • ಜು.15ಕ್ಕೆ ವರ್ಮಾ ಹುಡುಗಿ ಚಿತ್ರ ಬಿಡುಗಡೆ
  • ನೆಚ್ಚಿನ ನಟ ಸುದೀಪ್‌, ನೆಚ್ಚಿನ ಸಿನಿಮಾ ಕೆಜಿಎಫ್‌ 2: ರಾಮ್‌ಗೋಪಾಲ್‌ ವರ್ಮಾ

ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ಹುಡುಗಿ’ ಸಿನಿಮಾ ಇದೇ ಜು.15ರಂದು ಬಿಡುಗಡೆ ಆಗುತ್ತಿದೆ. ಈ ಕುರಿತು ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಜತೆಗೆ ಚೀನಾ ಭಾಷೆಯಲ್ಲೂ ಈ ಚಿತ್ರ ತೆರೆಗೆ ಬರುತ್ತಿದೆ. ಭಾರತದ ಮೊದಲ ಮಾರ್ಷಲ್‌ ಆರ್ಚ್‌ ಹಾಗೂ ಭಾರತದ ಮೊದಲ ಇಂಡೋ ಚೀನಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಇಂಡಿಯನ್‌ ಸಿನಿಮಾ ಇದು ಎಂಬುದು ಚಿತ್ರತಂಡ ಹೇಳಿಕೊಳ್ಳುತ್ತಿರುವ ಮಾಹಿತಿ. ಪೂಜಾ ಭಾಲೇಕರ್‌ ಚಿತ್ರದ ನಾಯಕ ಕಂ ನಾಯಕಿ. ಬ್ರೂಸ್ಲಿ ಜೀವನದಿಂದ ಪ್ರೇರಣೆಯಾಗಿ ರೂಪಗೊಂಡಿರುವ ಈ ಚಿತ್ರದಲ್ಲಿ ಹುಡುಗಿಯೊಬ್ಬಳು ಬ್ರೂಸ್ಲಿ ಅಭಿಮಾನಿಯಾಗುವ ಕತೆ ಈ ಚಿತ್ರದ್ದು.

‘ನಾನು ಚಿಕ್ಕವನಿದ್ದಾಗ ಎಂಟರ್‌ ದಿ ಡ್ರ್ಯಾಗನ್‌ ಸಿನಿಮಾ ನೋಡಿದ್ದೆ. ಈ ಚಿತ್ರದ ನಾಯಕ ಬ್ರೂಸ್ಲಿ ಅವರಿಂದ ಸ್ಫೂರ್ತಿಗೊಂಡು ಈ ಸಿನಿಮಾ ಮಾಡಿದ್ದೇನೆ. ಮಾರ್ಷಲ್‌ ಆರ್ಚ್‌ಗೆ ಸಂಬಂಧಪಟ್ಟಚಿತ್ರವಾಗಿದ್ದು, ಈ ಕಲೆ ಮಾಡುವವರ ಸಂಖ್ಯೆ ತೀರಾ ವಿರಳ. ಅದರಲ್ಲೂ ಹೆಣ್ಣು ಮಕ್ಕಳು ಮಾಡೋದು ಕಡಿಮೆ. ಈ ಚಿತ್ರದ ನಾಯಕಿ ಪೂಜಾ ಅವರು ಕಳೆದ 12 ವರ್ಷಗಳಿಂದ ಈ ಸಮರಕಲೆ ಅಭ್ಯಾಸ ಮಾಡ್ತಿದ್ದು, ಹೀಗಾಗಿ ಆಕೆಯನ್ನು ನಾಯಕಿಯನ್ನಾಗಿ ಆಕೆ ಮಾಡಲಾಗಿದೆ. ಬರೀ ಆ್ಯಕ್ಷನ್‌ ಸಿನಿಮಾ ಮಾತ್ರವಲ್ಲ. ತ್ರಿಕೋನ ಪ್ರೇಮ ಕತೆಯೂ ಇಲ್ಲಿದೆ. ಈಗ ಚಿತ್ರರಂಗಕ್ಕೆ ಉತ್ತರ, ದಕ್ಷಿಣ ಎನ್ನುವ ಗಡಿ ಇಲ್ಲ. ಸಿನಿಮಾ ಅಷ್ಟೆಈಗ ಇರೋದು. ಇಷ್ಟವಾದರೆ ಎಲ್ಲ ಭಾಷೆಯ ಪ್ರೇಕ್ಷಕರು ನೋಡುತ್ತಾರೆ ಎಂಬುದಕ್ಕೆ ‘ಕೆಜಿಎಫ್‌ 2’ ಸಿನಿಮಾ ಸಾಕ್ಷಿ. ನಮ್ಮ ಚಿತ್ರವನ್ನು ಕನ್ನಡದಲ್ಲೂ ಬಿಡುಗಡೆ ಮಾಡುವುದಕ್ಕೆ ಖುಷಿ ಇದೆ. ಕನ್ನಡದಲ್ಲಿ ನನ್ನ ನೆಚ್ಚಿನ ನಟ ಸುದೀಪ್‌, ಇಷ್ಟದ ಸಿನಿಮಾ ಕೆಜಿಎಫ್‌ 2’ ಎಂದು ರಾಮ್‌ಗೋಪಾಲ್‌ ವರ್ಮಾ ಹೇಳಿದರು.

ಹೆಣ್ಣು ಮಗಳಾಗಿ ಇಂಥ ಚಿತ್ರದಲ್ಲಿ ನಟಿಸುವುದಕ್ಕೆ ನನಗೆ ಖುಷಿ. ಸ್ವಯಂ ರಕ್ಷಣೆಗೆ ಮಾರ್ಷಲ್‌ ಆರ್ಚ್‌ ತುಂಬಾ ಸಹಕಾರಿ. ಕನ್ನಡದಲ್ಲೇ ಈ ಸಿನಿಮಾ ತೆರೆ ಕಾಣುತ್ತಿದೆ. ಹೆಣ್ಣು ಮಕ್ಕಳು ಇಂಥ ಚಿತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುವಂತೆ ನಾಯಕಿ ಪೂಜಾ ಭಾಲೇಕರ್‌ ಮನವಿ ಮಾಡಿಕೊಂಡರು. ಇಬ್ಬರ ಮಾತಿನ ನಡುವೆ ಚಿತ್ರದ ಟ್ರೇಲರ್‌ ಹಾಗೂ ಎರಡು ಹಾಡುಗಳನ್ನು ಪ್ರದರ್ಶನ ಮಾಡಲಾಯಿತು.

ವರ್ಮಾ Dangerous cinema ಪೋಸ್ಟ್‌ಪೋನ್‌

ದಶಕದ ಹಿಂದೆ ರಾಮ್ ಗೋಪಾಲ್ ವರ್ಮಾ (Ramgopal Varma) ಸಿನಿಮಾ ಅಂದರೆ ಜನರ ಕುತೂಹಲ ಹೆಚ್ಚಿರುತ್ತಿತ್ತು. ರಾಜಕೀಯದ ಕತೆಯುಳ್ಳ ಚಿತ್ರಗಳು, ಇಂಡಿಯನ್‌ ಗ್ಯಾಂಗ್‌ಸ್ಟರ್‌ (Gangster) ಟ್ರಯಾಲಜಿಗಳ ಮೂಲಕ ಸಿನಿಮಾ ಪ್ರಿಯರು ಮಾತ್ರ ಅಲ್ಲ, ಸಿನಿಮಾ ಕ್ರಿಟಿಕ್‌ಗಳ ಮೆಚ್ಚುಗೆಗೂ ವರ್ಮಾ ಪಾತ್ರರಾದವರು. ಇವರ ಸತ್ಯ (Satya), ರಕ್ತ ಚರಿತ್ರ, ದಿ ಅಟ್ಯಾಕ್ 26/11, ಆಪರೇಶನ್‌ ಕೊಕೂನ್ ಸೇರಿದಂತೆ ಹಲವು ಒಳ್ಳೊಳ್ಳೆ ಸಿನಿಮಾಗಳನ್ನು ಆರ್‌ಜಿವಿ ಕೊಟ್ಟಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಕೆಲಸಕ್ಕಿಂತ ಮಾತುಗಳೇ ಹೆಚ್ಚಾಗ್ತಿವೆ ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ (Social media) ನಡೀತಿದೆ. ಅಸಹಜ, ವಿಚಿತ್ರ ಹೇಳಿಕೆಗಳ ಮೂಲಕ ಇವರು ಸುದ್ದಿಯಲ್ಲಿದ್ದದ್ದೇ ಹೆಚ್ಚು. ಇನ್ನೊಂದು ಕಡೆ ಸೆಕ್ಸ್ (Sex) ವೈಭವೀಕರಣದ ಥರ್ಡ್ ಗ್ರೇಡ್ ಸಿನಿಮಾ ಮಾಡಿ ಹೆಸರು ಕೆಡಿಸಿಕೊಂಡಿದ್ದೂ ಇದೆ. ನೀಲಿಚಿತ್ರಗಳ ನಟಿರೊಟ್ಟಿಗೆ ಸಿನಿಮಾ ಮಾಡಿ ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿ ಹಣ ಗಳಿಸುತ್ತಿದ್ದಾರೆ. ಕೆಲವು ವರ್ಷದ ಹಿಂದೆ ಚಿತ್ರೀಕರಣದಲ್ಲಿ ನಗ್ನವಾಗಿ ಹುಡುಗಿಯನ್ನು ಶೂಟಿಂಗ್ ಮಾಡಿದ್ದು ಸುದ್ದಿಯಾಗಿತ್ತು. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಅವರ ಹೊಸ ಸಿನಿಮಾ ಡೇಂಜರಸ್ (Dangerous).

ರವಿಯಣ್ಣ ಅಂದ್ರೆ ಭಯ; ರಮೇಶ್ ಅರವಿಂದ್ ಸಲ್ಮಾನ್ ಆರ್‌ಜಿವಿ ಮಾತ್ರ ಸಿನಿಮಾ ನೋಡಿದ್ದಾರೆ ಎಂದ ಸುದೀಪ್

ಸಿನಿಮಾದಲ್ಲಿ ಇಬ್ಬರು ಯುವತಿಯರು ಪರಸ್ಪರ ಪ್ರೇಮಿಸುವ ಸನ್ನಿವೇಶಗಳು ಪೋಸ್ಟರ್, ಟ್ರೇಲರ್ ಗಳಲ್ಲಿ ರಿವೀಲ್ ಆಗಿದೆ. ಇವು ಬಹಳ ಪ್ರಚೋದಕ ಭಂಗಿಯಲ್ಲಿವೆ. ಈ ಹುಡುಗಿಯರ ಪ್ರೀತಿಗೆ ವಿಲನ್‌ಗಳಿಂದ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಧೀರೆಯರು ವಿಲನ್‌ಗಳನ್ನು ಎದುರಿಸಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ. ಇದು ಸಿನಿಮಾದ ಕತೆ. ಚಿತ್ರದಲ್ಲಿ ಇಬ್ಬರು ನಾಯಕಿಯರ ನಡುವೆ ಹಸಿಬಿಸಿ ಪ್ರೇಮ, ಕಾಮದ ದೃಶ್ಯಗಳಿವೆ. ಇದು ಪ್ರದರ್ಶಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಕಾರಣಕ್ಕೇ ಸಿನಿಮಾ ಪ್ರದರ್ಶಕರು ಈ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ. 

click me!