ಲಾಕ್‌ಡೌನ್‌ನಲ್ಲಿ ಅಡುಗೆ ಕಲಿತಿದ್ದಾರೆ ಪುನೀತ್.!

By Kannadaprabha News  |  First Published Mar 12, 2021, 9:17 AM IST

ಏಪ್ರಿಲ್‌ 1ರಂದು ಪುನೀತ್‌ ರಾಜ್‌ಕುಮಾರ್‌ ನಟನೆಯ ಸಿನಿಮಾ ಯುವರತ್ನ ತೆರೆಗೆ ಬರುತ್ತಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ಹಾಗೂ ಲಾಕ್‌ಡೌನ್‌ ಲೈಫು, ಮುಂದಿನ ಚಿತ್ರಗಳು, ಪೈರಸಿ ಸುತ್ತ ಪವರ್‌ಸ್ಟಾರ್‌ ಆಡಿರುವ ಮಾತುಗಳು ಇಲ್ಲಿವೆ.


- ಆರ್‌. ಕೇಶವಮೂರ್ತಿ

  • ಸಂತೋಷ್‌ ಆನಂದ್‌ರಾಮ್‌ ಹಾಗೂ ನೀವು ಎರಡನೇ ಬಾರಿಗೆ ಜತೆಯಾಗಿದ್ದೀರಿ. ಹೇಗನಿಸುತ್ತಿದೆ?

ನಾವಿಬ್ಬರು ಸೋದರರಂತೆ. ಒಂದೇ ಕುಟುಂಬದ ಸದಸ್ಯರಂತೆ. ಹೊಂಬಾಳೆ ಪ್ರೊಡಕ್ಷನ್‌ ನಮ್ಮ ಸಂಸ್ಥೆ ಆಗಿದೆ. ಯಾಕೆಂದರೆ ಹೊಂಬಾಳೆ ಜತೆ ಇದು ಮೂರನೇ ಸಿನಿಮಾ. ಸಂತೋಷ್‌ ಜತೆಗೆ ಎರಡನೇ ಸಿನಿಮಾ. ಖುಷಿ ಆಗುತ್ತಿದೆ.

  • ರಾಜಕುಮಾರ ಚಿತ್ರದ ಯಶಸ್ಸು ನಿಮ್ಮಿಬ್ಬರನ್ನ ಮತ್ತೆ ಸೇರಿಸಿದ್ದಾ?

Tap to resize

Latest Videos

undefined

ನಿಜ ಒಂದು ಗೆಲುವು ಮತ್ತೊಂದು ಸಿನಿಮಾಗೆ ದಾರಿ ಮಾಡಿಕೊಡುತ್ತದೆ. ಹಾಗಂತ ಯಶಸ್ಸು ನೋಡಿ ಒಪ್ಪಿರುವ ಸಿನಿಮಾ ಅಲ್ಲ. ‘ಯುವರತ್ನ’ ಚಿತ್ರದ ಕತೆ ಚೆನ್ನಾಗಿತ್ತು. ಅದರ ಜತೆಗೆ ಸಂತೋಷ್‌ ಆನಂದ್‌ರಾಮ್‌, ನಿರ್ಮಾಣ ಸಂಸ್ಥೆ ಇದೆಲ್ಲವೂ ಮತ್ತೆ ಜತೆಯಾಗಿಸಿತು. ಜತೆಗೆ ‘ರಾಜಕುಮಾರ’ ಸಿನಿಮಾಗಳ ಬಗ್ಗೆ ನನಗಿದ್ದ ಅಭಿಪ್ರಾಯ ಬದಲಾಯಿಸಿದ ಸಿನಿಮಾ.

  • ಮೊದಲು ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನಿತ್ತು?

ಸಿನಿಮಾ ಒಂದು ಮನರಂಜನೆ ಅಷ್ಟೆ. ಇದನ್ನು ಯಾರೂ ಅಷ್ಟೂಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಅಂದುಕೊಂಡಿದ್ದೆ. ಆದರೆ, ರಾಜಕುಮಾರ ಸಿನಿಮಾ ನೋಡಿ ಜನ ಬಂದ ನನ್ನ ಮಾತನಾಡಿಸಿದ ರೀತಿ, ದೊಡ್ಡವರಿಗೆ ಗೌರವ ಕೊಡಬೇಕು ಎನ್ನುವ ವಿಚಾರವನ್ನು ಅವರು ಈ ಸಿನಿಮಾದಿಂದ ಒಪ್ಪಿದ್ದ ರೀತಿಗೆ ನಾನೇ ಫಿದಾ ಆಗಿಬಿಟ್ಟಿದೆ. ಸಿನಿಮಾ ಮನರಂಜನೆ ಮಾತ್ರವಲ್ಲ, ಬದುಕನ್ನು ಬದಲಾಯಿಸುತ್ತದೆ. ಅರಿವು ಮೂಡಿಸುತ್ತದೆ. ಸಿನಿಮಾ ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅನಿಸಿತು.

125ನೇ ಸಿನಿಮಾ ವೇದದಲ್ಲಿ ಶಿವರಾಜ್‌ಕುಮಾರ್‌ ಡಿಫರೆಂಟ್ ಗೆಟಪ್

  • ಬದಲಾದ ನಿಮ್ಮ ಈ ನಿಲುವಿಗೆ ತಕ್ಕಂತೆ ಯುವರತ್ನ ಇದಿಯೇ?

ರಾಜಕುಮಾರ ಸಿನಿಮಾ ನನ್ನ ನಿಲುವು ಬದಲಾಯಿಸಿದ್ದರಿಂದಲೇ ಯುವರತ್ನ ಚಿತ್ರದಲ್ಲಿ ಸಾಮಾಜಿಕ ಜವಾಬ್ದಾರಿ ತೋರುವ ಕತೆಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಯಿತು. ಕಮರ್ಷಿಯಲ್‌ ಸಿನಿಮಾಗಳಲ್ಲೂ ಒಳ್ಳೆಯ ವಿಷಯ ಹೇಳಬಹುದು ಎಂಬುದು ‘ಯುವರತ್ನ’ ಚಿತ್ರ ಮತ್ತೊಮ್ಮೆ ಸಾಬೀತು ಮಾಡಿದೆ.

  • ಯುವರತ್ನ ಚಿತ್ರದ ಕತೆ ಏನು?

ಈಗಿನ ಜನರೇಷನ್‌ ನೋಡಲೇಬೇಕಾದ ಕತೆ. ವಿದ್ಯಾರ್ಥಿಗಳು ಮತ್ತು ಯುವಕರ ವಿಷಯ ಇಲ್ಲಿದೆ. ತುಂಬಾ ಅಗತ್ಯವಾಗಿ ತಿಳಬೇಕಿರುವ ಕತೆ. ನನ್ನ ಪಾತ್ರದಲ್ಲಿ ತುಂಬಾ ಅರ್ಥ ಇರುವ ಕತೆ. ಬದಕನ್ನು ಬದಲಾಯಿಸುತ್ತದೆ. ಅರಿವು ಮೂಡಿಸುತ್ತದೆ ಎನ್ನುವ ಮಾತನ್ನು ನೀವೂ ಕೂಡ ಒಪ್ಪುವ ವಿಷಯ ಹೇಳಿದ್ದಾರೆ ನಿರ್ದೇಶಕರು.

  • ಬೇರೆ ಭಾಷೆಗೂ ಹೋಗುವ ಪ್ಲಾನ್‌ ಮಾಡಿಕೊಂಡೇ ಯುವರತ್ನ ಮಾಡಿದ್ದಾ?

ಇಲ್ಲ. ಎಡಿಟಿಂಗ್‌ ಟೇಬಲ್‌ನಲ್ಲಿ ಸಿನಿಮಾ ನೋಡುವಾಗ ನಿರ್ಮಾಪಕ ವಿಜಯ್‌ ಕಿರಗಂದೂರು ಅವರಿಗೆ ಬಂದ ಐಡಿಯಾ. ಯಾಕೆಂದರೆ ಕತೆ ಮತ್ತು ಅದರ ವ್ಯಾಪ್ತಿ ನೋಡಿದ ಮೇಲೆ ಬೇರೆ ಭಾಷೆಗೂ ಕನೆಕ್ಟ್ ಆಗುತ್ತದೆ ಅಂತ ನಿರ್ಧರಿಸಿದ್ದು. ಗುರು, ಶಿಷ್ಯರು, ವಿದ್ಯೆ... ಇವು ಎಲ್ಲೇ ಹೋದರೂ ಒಂದೇ. ಹೀಗಾಗಿ ತೆಲುಗಿಗೂ ಕನೆಕ್ಟ್ ಆಗುವ ಕತೆ. ಹಾಡುಗಳಲ್ಲಿ ಸಾಕಷ್ಟುವಿಶೇಷತೆಗಳಿವೆ.

  • ಅಪ್ಪು ಸಿನಿಮಾ ನಂತರ ಮತ್ತೆ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದೀರಿ?

ಹೌದು. ಅಪ್ಪು ಸಿನಿಮಾ ಶೇಡ್‌ ಒಂಚೂರು ಯುವರತ್ನದಲ್ಲೂ ಇರುತ್ತದೆ. ಯಾರಿಗೂ ಕೇರ್‌ ಮಾಡದ ವಿದ್ಯಾರ್ಥಿ. ಪವರ್‌ಫುಲ್‌ ಕ್ಯಾರೆಕ್ಟರ್‌ ಇಲ್ಲಿದೆ.

  • ಮೈಸೂರಿನಲ್ಲೇ ಯುವ ಸಂಭ್ರಮ ಮಾಡುವುದಕ್ಕೆ ಕಾರಣ ಏನು?

ಮಾ.20ರಂದು ಯುವ ಸಂಭ್ರಮ ನಡೆಯುತ್ತಿದೆ. ಇದು ಯುವರತ್ನ ಚಿತ್ರದ ಈವೆಂಟ್‌ ಜತೆಗೆ ಅಭಿಮಾನಿಗಳನ್ನು ನೋಡುವ ಕಾರ್ಯಕ್ರಮ. ಮೈಸೂರಿನ ಮೊದಲಿನಿಂದಲೂ ನಮಗೆ ಹತ್ತಿರ. ರಾಜಕುಮಾರ ಅಲ್ಲಿ ನಾಲ್ಕು ಚಿತ್ರಮಂದಿರಗಳಲ್ಲಿ 100 ದಿನ ಓಡಿತ್ತು.

  • ಜೇಮ್ಸ್‌ ಸಿನಿಮಾ ಎಲ್ಲಿವರೆಗೂ ಬಂದಿದೆ?

ಬಹುತೇಕ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ಈ ವರ್ಷವೇ ತೆರೆಗೆ ಬರಬಹುದು. ಆ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅಂದುಕೊಂಡಂತೆ ಶೂಟಿಂಗ್‌, ಪ್ರೊಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆಗಬೇಕಿದೆ. ಈ ವರ್ಷ ಪೂರ್ತಿ ದೊಡ್ಡ ದೊಡ್ಡ ಸಿನಿಮಾಗಳು ಇವೆ. ಕೋಟಿಗೊಬ್ಬ 3, ಸಲಗ, ಭಜರಂಗಿ 2, ಮದಗಜ, ಕೆಜಿಎಫ್‌ 2 ತುಂಬಾ ಸಿನಿಮಾಗಳು ಇವೆ. ಹೀಗಾಗಿ ಚಿತ್ರಮಂದಿರಗಳಿಗೆ ಸಿನಿಮಾಗಳ ಕೊರತೆಯಂತೂ ಆಗಲ್ಲ.

  • ಜೇಮ್ಸ್‌ ಸಿನಿಮಾ ನಂತರ ಮತ್ತೆ ಯಾರ ಜತೆ ಸಿನಿಮಾ?

ಮತ್ತೆ ಸಂತೋಷ್‌ ಆನಂದ್‌ರಾಮ್‌ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಇದಾದ ಮೇಲೆ ದಿನಕರ್‌ ತೂಗದೀಪ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಈ ವರ್ಷ ಪೂರ್ತಿ ಹೆಚ್ಚು ಕಮ್ಮಿ ಫುಲ್‌ ಬ್ಯುಸಿ. ಲಾಕ್‌ಡೌನ್‌ನಿಂದ ಆಚೆ ಬಂದು ಬಿಡುವಿಲ್ಲದೆ ಶೆಡ್ಯೂಲ್‌ ರೂಪಿಸಿಕೊಂಡಿದ್ದೇವೆ.

  • ಈ ಲಾಕ್‌ಡೌನ್‌ ಸಮಯವನ್ನು ಹೇಗೆ ಕಳೆದ್ರಿ?

ಲಾಕ್‌ಡೌನ್‌ನಲ್ಲಿ ನಾನು ಹೆಚ್ಚು ಸಮಯ ಕಳೆದಿದ್ದು ಫುಡ್‌ ಬ್ಲಾಗ್‌ಗಳನ್ನು ನೋಡುವ ಮೂಲಕ. ಫುಡ್‌ ಶೋಗಳನ್ನು ನೋಡುತ್ತಾ ನಾನು ಕೂಡ ಅಡುಗೆ ಮನೆಗೆ ಹೋಗಿ ಅಡುಗೆ ಮಾಡುತ್ತಿದ್ದೆ. ನಾನ್‌ವೆಜ್‌ ರೆಸಿಪಿಗಳನ್ನೇ ಹೆಚ್ಚು ಮಾಡಿದ್ದೇನೆ. ನಾನು ಯೂಟ್ಯೂಬ್‌ ನೋಡಿ ಅಡುಗೆ ಕಲಿತವನು. ಟೀವಿ, ಇಂಟರ್‌ನೆಟ್‌ಗೆ ಅರ್ಧ ಟೈಮು, ಉಳಿದಿದ್ದು ಅಡುಗೆ ವಿಚಾರಕ್ಕೆ

  • ಪುನೀತ್‌ ಹೇಳಿದ ಆರು ಸಂಗತಿಗಳು

1. ಯುವರತ್ನ ಚಿತ್ರವನ್ನು ನಾವು ಓಟಿಟಿಯಲ್ಲಿ ಬಿಡುಗಡೆ ಮಾಡುವ ಯಾವ ಪ್ಲಾನು ಇರಲಿಲ್ಲ. ಹಾಗೇನಾದರೂ ಸುದ್ದಿ ಬಂದಿದ್ದರೆ ಅದು ಸುಳ್ಳು.

2. ಪಿಆರ್‌ಕೆ ನಿರ್ಮಾಣದ ಚಿತ್ರಗಳು ಓಟಿಟಿಗಾ, ಥಿಯೇಟರ್‌ಗಾ ಎಂಬುದು ಸಂದರ್ಭ, ಸನ್ನಿವೇಶಗಳ ಮೇಲೆ ನಿಂತಿರುತ್ತದೆ. ಲಾಕ್‌ಡೌನ್‌ ಸಮಯದಲ್ಲಿ ಎಲ್ಲರು ಮನೆಯಲ್ಲಿದ್ವಿ. ಸಿನಿಮಾ ಬೇಕಿತ್ತು. ಹೀಗಾಗಿ ನೇರವಾಗಿ ಫ್ರೆಂಚ್‌ ಬಿರಿಯಾನಿ ಹಾಗೂ ಲಾ ಚಿತ್ರಗಳು ಬಿಡುಗಡೆ ಮಾಡಿದ್ವಿ.

3. ನಾನು ಇನ್ನೂ ಟೋರೆಂಟೋ ಟೈಮ್‌ನಲ್ಲಿದ್ದೇನೆ. ನನಗೆ ಈ ಟೆಲಿಗ್ರಾಮ್‌, ಪೈರೆಸಿ ಮಾಡುವ ಬಗ್ಗೆ ಗೊತ್ತಿಲ್ಲ. ನಾನು ನೋಡೇ ಇಲ್ಲ.

4. ನನ್ನ ಬ್ಯಾನರ್‌ನಲ್ಲೇ ಸಿನಿಮಾ ಮಾಡಕ್ಕೆ ಸಮಯ ಸಿಗುತ್ತಿಲ್ಲ. ಬೇರೆಯವರಿಗೆ ಕಾಲ್‌ಶೀಟ್‌ ಕೊಟ್ಟಿದ್ದೇನೆ. ಯಾವಾಗ ಆಗುತ್ತದೆ ಅಂತ ಹೇಳಕ್ಕೆ ಆಗಲ್ಲ.

5. ನಾನು ಚಿತ್ರರಂಗಕ್ಕೆ ಬಂದು 45 ವರ್ಷಗಳು ಕಳೆದು 46ಕ್ಕೆ ಕಾಲಿಟ್ಟಾಗ ಎಲ್ಲರು ವಿಶ್‌ ಮಾಡಿದ್ದು ನೋಡಿ ನನಗೂ ಖುಷಿ ಆಯಿತು. ಅದಕ್ಕೇ ಅಂತ ಸಂಭ್ರಮ ಮಾಡುವ ಯೋಚನೆ ಇರಲಿಲ್ಲ.

6. ಎಲ್ಲರಿಗೂ ಫಿಟ್‌ನೆಸ್‌ ಮುಖ್ಯ. ಈಗಲೂ ಡ್ಯಾನ್ಸ್‌ ಮಾಡುತ್ತಿದ್ದೇನೆ, ಫೈಟ್‌ ಮಾಡುತ್ತಿದ್ದೇನೆ ಎಂದರೆ ನಾನು ಫಿಟ್‌ ಆಗಿದ್ದೇನೆ ಎಂದರ್ಥ. ಥಿಯೇಟರ್‌ನಲ್ಲಿ ನಿಂತು ಕ್ಲಾಪ್‌ ಮಾಡುತ್ತಾರಲ್ಲ ಅದರ ಮುಂದೆ ನಾವು ಏನೂ ಇಲ್ಲ.

ರಾಬರ್ಟ್ ಚಿತ್ರ ವಿಮರ್ಶೆ: ಹೀರೋಗಿಲ್ಲ ಶಾದಿಭಾಗ್ಯ, ರೊಮ್ಯಾನ್ಸ್‌ಗೆ ಅಡ್ಡಿ ಇಲ್ಲ

ಪೈರೆಸಿಯನ್ನು ಕಾಯ್ದೆ, ಕಾನೂನುಗಳಿಂದ ತಡಯಲು ಸಾಧ್ಯವಿಲ್ಲ. ಯಾಕೆಂದರೆ ಒಂದು ಕಡೆ ಲಿಂಕ್‌ ಡಿಲಿಟ್‌ ಮಾಡಿದರೆ ಮತ್ತೊಂದು ಲಿಂಕ್‌ನಲ್ಲಿ ಸಿನಿಮಾ ಇರುತ್ತದೆ. ಹೀಗಾಗಿ ಪೈರೆಸಿ ಸಿನಿಮಾಗಳನ್ನು ನಾವು ನೋಡಲ್ಲ ಎಂದು ಜನರೇ ತೀರ್ಮಾನಿಸಬೇಕು. ಇದೇ ಪೈರೆಸಿ ವಿರುದ್ಧ ನಿಜವಾದ ಪ್ರತಿರೋಧ. ನಾವು ಬದಲಾಗಬೇಕು ಎಂದಿದ್ದಾರೆ ಪುನೀತ್.

click me!