ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಅವರು ಮದುವೆಯಾಗಿದ್ದು, ಮದುವೆಯ ದಿನವೇ ರಿಯಲ್ ಪತ್ನಿ ಬದಲು ರೀಲ್ ಪತ್ನಿ ಫೋಟೋ ಹಾಕಿ ಎಲ್ಲರನ್ನೂ ಕನ್ಫ್ಯೂಸ್ ಮಾಡಿದ್ದಾರೆ!
ಬಿಗ್ ಬಾಸ್ ಹಲವಾರು ಪ್ರತಿಭೆಗಳಿಗೆ ವೇದಿಕೆಯಾಗಿದ್ದು ನಿಜ. ಇದರಲ್ಲಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದರೂ ಸಹ ಬಿಗ್ ಬಾಸ್ ಬಂದ ಮೇಲೆ ಕನ್ನಡ ಮನರಂಜನಾ ಜಗತ್ತಿನಲ್ಲಿ ದೊಡ್ಡ ಸ್ಥಾನವನ್ನೇ ಪಡೆದರು. ಅಂಥವರಲ್ಲಿ ಒಬ್ಬರು ಪ್ರಥಮ್. ಒಳ್ಳೆ ಹುಡುಗ ಪ್ರಥಮ್ ಎಂದೇ ಖ್ಯಾತಿ ಪಡೆದಿದ್ದಾರೆ ಇವರು. ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಹೀಗೆಯೇ ಬರೆದುಕೊಳ್ಳುತ್ತಾರೆ. ಮೈಸೂರು ಸಮೀಪದ ಸಣ್ಣ ಹಳ್ಳಿಯಿಂದ ಬಂದ ಪ್ರಥಮ್ 'ಬಿಗ್ ಬಾಸ್ ಕನ್ನಡ ಸೀಸನ್ 4' ಗೆಲ್ಲುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದರು. ಅವರ ಸ್ಪರ್ಧಾತ್ಮಕ ಮನೋಭಾವ ಮತ್ತು ಮಾತು, ಟಾಸ್ಕ್ ಎಲ್ಲವೂ ಜನರಿಗೆ ಅಪಾರ ಮೆಚ್ಚುಗೆಯನ್ನು ಗಳಿಸಿತು. ಇತ್ತೀಚೆಗೆ, ಅವರು ಬಿಗ್ ಬಾಸ್ ಶೋನ ಪ್ರಸ್ತುತ ಸೀಸನ್ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಬಿಗ್ ಬಾಸ್ ಬಳಿಕ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಇವರು ನಿನ್ನೆ ಅಂದ್ರೆ ನವೆಂಬರ್ 24ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮಂಡ್ಯದ ಭಾನುಶ್ರೀ ಎನ್ನುವವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಗುರುವಾರ ಆರತಕ್ಷತೆ ನಡೆದಿದ್ದು, ಶುಕ್ರವಾರ ಮದುವೆ ನಡೆದಿದೆ.
ಈ ಹಿಂದೆ ಹಲವು ಸಂದರ್ಶನಗಳಲ್ಲಿ ಪ್ರಥಮ್ ನಾನು ಸರಳವಾಗಿ ಹಳ್ಳಿಯ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಅದರಂತೆ ಸರಳವಾಗಿ ಮದುವೆಯಾಗಿದ್ದು, ಮದುವೆಗೂ ಮುನ್ನ ನಡೆದ ಆರತಕ್ಷತೆಯಲ್ಲಿ ಕುಟುಂಬಸ್ಥರು, ಆಪ್ತರು ಮತ್ತು ಚಿತ್ರರಂಗದ ಹಲವು ಮಂದಿ ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು. ನಟರಾದ ಶಶಿಕುಮಾರ್, ಪ್ರೇಮ್ ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಗಳಾಗಿದ್ದ ಇಶಾನಿ, ಸ್ನೇಕ್ ಶ್ಯಾಮ್ ಅರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಜೋಡಿಗೆ ಹಾರೈಸಿದ್ದಾರೆ. ಮದುವೆಗೆ ಹೋಗದವರು ಪ್ರಥಮ್ ಅವರ ಮದುವೆಯ ಫೋಟೋ ಶೇರ್ ಮಾಡಿಕೊಂಡು ಶುಭ ಹಾರೈಸುತ್ತಿದ್ದಾರೆ. ಆದರೆ ಹೀಗೆ ಶುಭ ಹಾರೈಸುತ್ತಿರುವವರಲ್ಲಿ ಹೆಚ್ಚಿನವರು ಪ್ರಥಮ್ ಅವರ ರಿಯಲ್ ಲೈಫ್ ಪತ್ನಿ ಜೊತೆಗಿನ ಫೋಟೋ ಶೇರ್ ಮಾಡುತ್ತಿಲ್ಲ, ಬದಲಿಗೆ ನಕಲಿ ಪತ್ನಿಯ ಜೊತೆಗಿನ ಫೋಟೋ ಶೇರ್ ಆಗ್ತಿದೆ!
ಮುಂದಿನ ವಾರ ಮದುವೆ, ಕಾಟಾಚಾರಕ್ಕೆ ಕರಿಯಲ್ಲ... ಬಿಗ್‌ಬಾಸ್ ಪ್ರಥಮ್ ಇನ್ವಿಟೇಷನ್ ವೈರಲ್
ಹೌದು. ಪ್ರಥಮ್ ಅವರು ಅತ್ತ ನಿಜ ಜೀವನದಲ್ಲಿ ಮದ್ವೆಯಾಗಿದ್ದರೆ, ಇತ್ತ ಅವರ ಫಸ್ಟ್ ನೈಟ್ ವಿತ್ ದೆವ್ವ ಅನ್ನೋ ಸಿನಿಮಾ ಶುರುವಾಗಿದೆ. ಈ ಸಿನಿಮಾದ ಮಹೂರ್ತ ಬೆಂಗಳೂರಿನ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ನಡೆದಿದೆ. ಫಸ್ಟ್ ನೈಟ್ ವಿತ್ ದೆವ್ವ ಹಾರರ್ ವಿತ್ ಕಾಮಿಡಿ ಸಿನಿಮಾ. ನಿಖಿತಾ, ಮಾನ್ಯ ಸಿಂಗ್ ನಾಯಕಿಯರು. ಹಿರಿಯ ನಟ ಶ್ರೀನಿವಾಸ ಮೂರ್ತಿ, ಸಂಗೀತಾ, ಹರೀಶ್ ರಾಜ್, ತನುಜಾ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಥಮ್ ಬರೆದ ಕತೆಗೆ ನಿರ್ದೇಶಕ ಪಿ.ವಿ.ಆರ್ ಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮ್ಮ ಮದುವೆಯ ದಿನವೂ ಅಸಲಿ ಪತ್ನಿಯ ಜೊತೆಗಿನ ಫೋಟೋ ಹಾಕಿಕೊಳ್ಳುವ ಬದಲು ಪ್ರಥಮ್ ಅವರು ಸಿನಿಮಾ ಪ್ರಮೋಷನ್ ಮಾಡಿಕೊಳ್ಳಲು ಸಿನಿಮಾದ ಹೀರೊಯಿನ್ ನಿಖಿತಾ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆದ್ದರಿಂದ ಇವರ ರಿಯಲ್ ಪತ್ನಿ ಹಾಗೂ ರೀಲ್ ಪತ್ನಿಯ ನಡುವೆ ಕನ್ಫ್ಯೂಸ್ ಆಗಿರುವ ಫ್ಯಾನ್ಸ್, ಮದುವೆಯ ದಿನವೇ ಈ ಫೋಟೋ ನೋಡಿ ನಾಯಕಿಯನ್ನೇ ಮದುಮಗಳು ಎಂದು ತಿಳಿದು ಮದುವೆಯ ಶುಭ ಹಾರೈಸುತ್ತಿದ್ದಾರೆ.
ಇದೇ ವೇಳೆ, ಮದುವೆಯ ದಿನ ಪ್ರಥಮ್ ಅವರು ಉಂಗುರ ಹುಡುಕುವ ಫನ್ನಿ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಮದುವೆಯ ದಿನ ಮದುಮಗಳಿಗೆ ಹಾಕುವ ಉಂಗುರವನ್ನು ಹುಡುಕಲಾಗುತ್ತಿದೆ. ಬಟ್ಟೆಯೊಂದರಲ್ಲಿ ಅಡಗಿಸಿಟ್ಟ ಉಂಗುರವನ್ನು ಈ ಜೋಡಿ ಹುಡುಕಿದ್ದು, ನಂತರ ಉಂಗುರ ಪ್ರಥಮ್ಗೆ ಸಿಕ್ಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಫಸ್ಟ್ ನೈಟ್ ವಿತ್ ದೆವ್ವದ ಕುರಿತು ಹೇಳುವುದಾದರೆ, ಈ ಸಿನಿಮಾಗೆ ಪ್ರಥಮ್ ಅವರೇ ಕಥೆ ಬರೆದಿದ್ದಾರೆ. ‘ವಿಕ್ರಮ ಮತ್ತು ಬೇತಾಳ’ ಕಥೆಯೇ ತಮಗೆ ಸ್ಫೂರ್ತಿ್ ಎಂದಿದ್ದಾರೆ. ಈಗಾಗಲೇ ಅನೇಕ ಹಾರರ್ ಸಿನಿಮಾಗಳು ಬಂದಿವೆ. ಆದರೆ ನಾವು ಸ್ವಲ್ಪ ಡಿಫರೆಂಟ್ ಆಗಿ ತೋರಿಸುತ್ತೇವೆ. ನನ್ನ ಪತ್ನಿಯ ಪಾತ್ರದಲ್ಲಿ ನಿಖಿತಾ ಅವರು ನಟಿಸುತ್ತಿದ್ದಾರೆ. ನನ್ನ ಫ್ರೆಂಡ್ ನವೀನ್ ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ ಎಂದು ಪ್ರಥಮ್ ಹೇಳಿದ್ದಾರೆ.
ಭಾನುಶ್ರೀ ಕೈಹಿಡಿದ ಒಳ್ಳೆ ಹುಡುಗ ಪ್ರಥಮ್, ಸರಳ ಮದುವೆಯಲ್ಲಿ ಚಿತ್ರರಂಗದ ಅನೇಕರು ಭಾಗಿ