ಪಿ.ಕೆ.ಎಸ್‌. ದಾಸ್‌ ನಿರ್ದೇಶನದ ಭೂಮಿಕ ಡಿ. 25ಕ್ಕೆ ಬಿಡುಗಡೆ

By Kannadaprabha NewsFirst Published Dec 22, 2020, 9:03 AM IST
Highlights

ಛಾಯಾಗ್ರಹಣದಿಂದಲೇ ಹೆಸರು ಮಾಡಿರುವ ಪಿ.ಕೆ.ಎಸ್‌. ದಾಸ್‌ ‘ಭೂಮಿಕ’ ಎಂಬ ತುಳು ಮತ್ತು ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಡಿ. 25ಕ್ಕೆ ಬಿಡುಗಡೆ ಸನ್ನದ್ಧವಾಗಿದೆ.

ನಮ್ಮ ಫ್ಲಿಕ್ಸ್‌ ಒಟಟಿಯಲ್ಲಿ ತೆರೆಗೆ ಬರುತ್ತಿರುವ ‘ಭೂಮಿಕ’ ಕಮರ್ಷಿಯಲ್‌ ಚಿತ್ರಗಳ ಸಾಲಿಗೆ ಸೇರದೇ ಇದ್ದರೂ ಕರಾವಳಿ ಭಾಗದಲ್ಲಿ ನಡೆದ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ತಯಾರಾದದ್ದು. ‘ನನ್ನೊಳಗೆ ತುಂಬಾ ಸಮಯದಿಂದ ಕಾಡುತ್ತಿದ್ದ ಕತೆಯನ್ನು ಸಿನಿಮಾ ಮಾಡಿದ್ದೇನೆ. ಮಹಿಳಾ ಪ್ರಧಾನ ಚಿತ್ರ. ಬೆಸ್ತರ ಹೆಣ್ಣು ಮಗಳೊಬ್ಬಳ ನೋವಿನ ಕಥಾನಕ ಇದು. ನನ್ನ ಹೃದಯಕ್ಕೆ ಮುಟ್ಟಿದ ಕತೆ. ನಿಜವಾಗಿ ನಡೆದ ಘಟನೆಯನ್ನು ಆಧರಿಸಿ ಸಿನಿಮಾ ನಿರ್ದೇಶನ ಮಾಡಿದ್ದೇನೆ’ ಎಂದು ದಾಸ್‌ ಚಿತ್ರದ ಬಗ್ಗೆ ಹೇಳಿಕೊಂಡರು.

ಈ ಚಿತ್ರದಲ್ಲಿ ಅಲಿಶಾ ಕದ್ರಿ, ನವೀನ್‌ ಡಿ ಪಡೀಲ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಜ್ವಲ್‌ ಪ್ರಕಾಶ್‌, ರವಿ, ಶೋಭಾ ರೈ, ಕವಿತಾ, ನಂದಿನಿ, ಭೂಮಿಕಾ ನಟಿಸಲಿದ್ದಾರೆ. ಸಾಗರ ಮೂಲದ ವೈದ್ಯ ದಂಪತಿಗಳಾದ ಡಾ. ನರೇಂದ್ರ ಪಿ. ನಾಯಕ್‌ ಮತ್ತು ಗಾಯತ್ರಿ ಚಿತ್ರದ ನಿರ್ಮಾಪಕರು.

‘ಚಿತ್ರ ದಾಸ್‌ ಅವರ ಕನಸಿನ ಕೂಸು. ಬೆಸ್ತರ ಹುಡುಗಿ ಲೈಫ್‌ನಲ್ಲಿ ಏನೇನು ಆಗುತ್ತದೆ ಎನ್ನುವ ಕತೆಯನ್ನು ಮನ ಮುಟ್ಟುವಂತೆ ಹೇಳಿದ್ದಾರೆ. ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ’ ಎನ್ನುವ ಭರವಸೆಯನ್ನು ನರೇಂದ್ರ ನಾಯಕ್‌ ಅವರು ವ್ಯಕ್ತಪಡಿಸಿದರು. ಈಗಾಗಲೇ ನಮ್ಮ ಫ್ಲಿಕ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಮೆಚ್ಚುಗೆ ಗಳಿಸಿಕೊಂಡಿದೆ.

ನಮ್ಮ ಫ್ಲಿಕ್ಸ್‌ನ ವಿಜಯ ಪ್ರಕಾಶ್‌ ಮಾತನಾಡಿ ‘ಸಿನಿಮಾ ಕಂಟೆಂಟ್‌ ಚೆನ್ನಾಗಿದೆ. ವಿಭಿನ್ನವಾಗಿ ಕತೆ ಹೇಳಿದ್ದಾರೆ. ಇದು ಕಮರ್ಷಿಯಲ್‌ ಸಿನಿಮಾ ಅಲ್ಲ. ಕತೆಯೇ ಇಲ್ಲಿ ಪ್ರಧಾನ. ಈ ಸಿನಿಮಾಗಾಗಿಯೇ 90 ರುಪಾಯಿಯ ಹೊಸ ಸ್ಲಾಟ್‌ ಮಾಡಿದ್ದೇವೆ. ಇದು ನಮ್ಮ ಫ್ಲಿಕ್ಸ್‌ನಲ್ಲಿ ಬರುತ್ತಿರುವ ಮೊದಲ ತುಳು ಚಿತ್ರ’ ಎಂದು ಹೇಳಿಕೊಂಡರು.

click me!