ಕಂಗೆಟ್ಟು ದೂರವಾಗುವ ಜಾಯಮಾನ ನಮ್ಮದಲ್ಲ ಎಂದು ನಿಖಿಲ್ ಕುಮಾರ ಸ್ವಾಮಿ ಸೋಲಿನ ಬಳಿಕ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ಗೆದ್ದು ಬೀಗಿದ್ದಾರೆ. ಈ ಮೂಲಕ ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ, ಜೆಡಿಎಸ್‌ನ ಭದ್ರಕೋಟೆಯಲ್ಲೇ ನಿಖಿಲ್ ಸೋಲು ಕಂಡಿದ್ದಾರೆ. ನಿಖಿಲ್ ವಿರುದ್ಧ ಕಾಂಗ್ರೆಸ್‌ನ ಎಚ್‌ಎ ಇಕ್ಬಾಲ್ ಹುಸೇನ್ 10,715 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ನಿಖಿಲ್‌ಗೆ ಇದು 2ನೇ ಸೋಲು. ಮಂಡ್ಯ ಲೋಕಸಭಾ ಚುನಾವಣೆಗೆ ನಿಂತಿದ್ದ ನಿಖಿಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋಲು ಅನುಭವಿಸಿದ್ದರು. ಇದೀಗ ವಿಧಾನಸಭೆ ಪ್ರವೇಶಿಸಲು ಯತ್ನಿಸಿ ಇಲ್ಲೂ ಸೋತಿದ್ದಾರೆ. ಈ ಮೂಲಕ ಸತತ ಎರಡನೇ ಸೋಲಿಗೆ ಗುರಿಯಾಗಿದ್ದಾರೆ.
ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಬೆಂಬಲಿಸಿ ಆಶೀರ್ವದಿಸಿದ ರಾಮನಗರ ಮಹಾಜನತೆಗೆ ಶಿರಸಾಷ್ಟಾಂಗ ನಮನಗಳು ಎಂದು ಹೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ನಿಖಿಲ್ ದೀರ್ಘ ಪೋಸ್ಟ್ ಶೇರ್ ಮಾಡಿದ್ದಾರೆ.
'ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು. ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜತೆಯಲ್ಲೇ ಇರುತ್ತೇನೆ, ನಿಮಗಾಗಿ ಜೀವಿಸುತ್ತೇನೆ. ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ' ಎಂದಿದ್ದಾರೆ.
ದೇವೇಗೌಡರ 3ನೇ ತಲೆಮಾರಿನ ಎಂಟ್ರಿಗೆ ‘ಕೈ’ ಬ್ರೇಕ್: ನಿಖಿಲ್ ಸೋಲಿಗೆ ಕಾರಣಗಳೇನು?
'ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳವನ್ನು ಹರಸಿದ ಸಾರ್ವಜನಿಕ ಬಂಧುಗಳನ್ನು ಇಲ್ಲಿ ಸ್ಮರಿಸುತ್ತೇನೆ. ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ, ಪುನಾ ಪುಟಿದೆದ್ದು ಬರುತ್ತೇವೆ. ಪ್ರತಿಯೊಬ್ಬರಿಗೂ ಪ್ರಣಾಮಗಳು' ಎಂದು ಹೇಳಿದ್ದಾರೆ. ನಿಖಿಲ್ ಪೋಸ್ಟ್ಗೆ ಅವರ ಬೆಂಬಲಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಅನೇಕರು ಸಾಂತ್ವನ ಹೇಳುತ್ತಿದ್ದಾರೆ.
Karnataka election results 2023: ರಾಮನಗರದಲ್ಲಿಯೂ ರಾಜಕೀಯ ನೆಲೆ ಕಾಣದ ನಿಖಿಲ್ ಕುಮಾರಸ್ವಾಮಿ
ಸಿನಿಮಾಗಳಲ್ಲಿ ಬ್ಯುಸಿ ಸಾಧ್ಯತೆ
ಚುನಾವಣೆ ಮುಗಿಸಿದ ನಿಖಿಲ್ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗುವ ಸಾಧ್ಯತೆ ಇದೆ. ರೈಡರ್ ಸಿನಿಮಾ ಮೂಲಕ ನಿಖಿಲ್ ಕೊನೆಯದಾಗಿ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ನಿಖಿಲ್ ಕೈಯಲ್ಲಿ ಒಂದು ಸಿನಿಮಾವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗುವ ಸಾಧ್ಯತೆ ಇದೆ.