ರವಿ ಬೆಳಗೆರೆ ಮಾಡಿದ್ದೆಲ್ಲವೂ ಏಕವ್ಯಕ್ತಿ ಸಾಹಸ: ನಾಗತಿಹಳ್ಳಿ ಚಂದ್ರಶೇಖರ್

By Kannadaprabha NewsFirst Published Nov 15, 2020, 9:11 AM IST
Highlights

ಸುಮಾರು 35, 40 ವರ್ಷಗಳಿಂದ ರವಿ ಸ್ನೇಹ ಇದೆ. ನಾನು ಸಿನಿಮಾ ಕಡೆ ಹೋದೆ ಆತ ಪತ್ರಿಕೋದ್ಯಮದ ಕಡೆ ಹೋದ. ನಾವಿಬ್ಬರೂ ಇಲ್ಲಿ ಜೊತೆಗೆ ಬದುಕು ಕಟ್ಟಿಕೊಂಡವರು- ನಾಗತಿಹಳ್ಳಿ ಚಂದ್ರಶೇಖರ್‌

 ಒಂದು ವಾರದ ಹಿಂದೆ ಅವನೂ ನಾನು ಮಾತನಾಡಿದ್ದೆವು. ನಿನ್ನ ದಾಂಡೇಲಿಯ ಮನೆಗೆ ಕರೆದುಕೊಂಡು ಹೋಗುವುದಿಲ್ಲವೇ ಎಂದು ಕೇಳಿದ್ದೆ. ಅವನು ಕರೆದುಕೊಂಡು ಹೋಗುತ್ತೇನೆ ಎಂದಿದ್ದ. ಹತ್ತು ವರ್ಷ ಅವನ ಪತ್ರಿಕೆಗೆ ಅಂಕಣ ಬರೆದಿದ್ದೇನೆ. ನನ್ನ ಪ್ರೀತಿಯ ಹುಡುಗಿ ಅಂಕಣ ಸತತ ಆರು ವರ್ಷ ಪ್ರಕಟವಾಗಿತ್ತು. ತುಂಬಾ ಸ್ವಾತಂತ್ರ್ಯ ಕೊಟ್ಟಿದ್ದ ನನಗೆ. ಅಂಕಣಕಾರನಾಗಿ ನನಗೆ ದೊಡ್ಡ ವೇದಿಕೆ ಕೊಟ್ಟಿದ್ದು ಹಾಯ್‌ ಬೆಂಗಳೂರು. ಅದನ್ನೂ ಮೀರಿದ ಸ್ನೇಹ ನಮ್ಮದಾಗಿತ್ತು. ಅವರ ಇಡೀ ಕುಟುಂಬ ನನ್ನ ಜೊತೆಗೆ ಆತ್ಮೀಯವಾಗಿ ಇದೆ. ನಾನು ಬೆಂಗಳೂರಿನಲ್ಲಿ ಇರದೇ ಇರುವ ಸಂದರ್ಭದಲ್ಲಿ ಆತ ಕಾರಣ ಹೇಳದೇ ಹೋಗಿದ್ದಾನೆ. ಇದು ನನಗೆ ಅತ್ಯಂತ ನೋವಿನ ಸಂಗತಿ.

ವಿವಾದಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ರವಿಬೆಳಗೆರೆಯವರದ್ದು : ಟಿಎನ್‌ಎಸ್ 

ಬೆಂಗಳೂರು ಬಸ್‌ ನಿಲ್ದಾಣದಲ್ಲಿ ಇಬ್ಬರೂ ವಸತಿಹೀನರಾಗಿ ಬಸ್‌ ನಿಲ್ದಾಣದಲ್ಲಿಯೇ ಒಬ್ಬರ ಭುಜಕ್ಕೆ ಒಬ್ಬರು ಒರಗಿ ಮಲಗಿದ್ದು, ಪೊಲೀಸರು ಬಂದು ಎಬ್ಬಿಸಿ ಕಳಿಸಿದ್ದು, ಬೆಳಿಗ್ಗೆ ಇದ್ದ ಹಣವನ್ನು ಒದಗಿಸಿ ಸಂದರ್ಶನಗಳಿಗೆ ಹೋಗುತ್ತಿದ್ದೆವು. ಅವನು ಪತ್ರಿಕೆ ಆರಂಭ ಮಾಡಿದಾಗ ನಾನು ಇದಕ್ಕೆ ಏನಾದರೂ ಬರೆದೇ ಬರೆಯುತ್ತೇನೆ ಎಂದು ಹೇಳಿದ್ದೆ. ಹಾಗೆಯೇ ಬರೆದೆ.

ನನ್ನನ್ನು ಯಾವಾಗಲೂ ಏನೋ ದುಷ್ಟಹೇಗಿದ್ದೆಯೋ ಎಂದು ಕೇಳುತ್ತಿದ್ದ. ನಾನು ಈಗ ಅವನ ಮೆಚ್ಚಿನ ತಾಣ ಭೀಮ ತೀರದಲ್ಲಿ ಇದ್ದೇನೆ. ಅವನು ಅಲ್ಲಿ ಇಲ್ಲವಾಗಿದ್ದಾನೆ. ಎಷ್ಟೊಂದು ಬರೆಯಬೇಕಾಗಿದೆ ಎಂದೆಲ್ಲಾ ನನಗೆ ತೋರಿಸುತ್ತಿದ್ದ. ಎಲ್ಲಾ ವಿವಾದಗಳ ಆಚೆಗೂ ಅವನನ್ನು ಶತ್ರುಗಳೂ ಪ್ರೀತಿಸುತ್ತಿದ್ದರು. ಅತ್ಯಂತ ಕಡು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾನೆ. ತುಂಬಾ ಬಡವರಿಗೆ ಅಧ್ಯಾಪಕ ವೃತ್ತಿ ನೀಡಿ ಅವರಿಗೆ ಬದುಕು ಕೊಟ್ಟಿದ್ದಾನೆ. ಪ್ರತಿ ವರ್ಷ ನಾನು ಪ್ರಾರ್ಥನಾ ಶಾಲೆಗೆ ಹೋಗುತ್ತಿದ್ದೆ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಬೇಕು.

ಅಪ್ಪನ ಬಗ್ಗೆ ಚೇತನಾ ಬೆಳಗೆರೆ ಮಾತು 

ಎಲ್ಲರಿಗೂ 24 ಗಂಟೆ ಸಮಯ ಇರುವುದು. ನಾನು ಅವನೂ ಒಂದೇ ರೀತಿ ಯೋಚನೆ ಮಾಡುತ್ತಿದ್ದೇವು. ಇಡೀ ರಾತ್ರಿ ಕೂತು ಬರೆಯುತ್ತಿದ್ದ, ಬೆಳಿಗ್ಗೆ ಯಾವುದೋ ಸಮಯದಲ್ಲಿ ನಿದ್ದೆ ಮಾಡುತ್ತಿದ್ದ. ತುಂಬಾ ಓದುತ್ತಿದ್ದ. ಓದಬೇಕಾದ ತುಂಬಾ ಪುಸ್ತಕಗಳು ಅವನ ಬಳಿ ಇದ್ದವು. ಅವನ ಪುಸ್ತಕಗಳು ಅಹೋರಾತ್ರಿ ಮರುಮುದ್ರಣವಾಗುತ್ತಿದ್ದವು. ಏಕ ವ್ಯಕ್ತಿ ಪತ್ರಿಕೆ ಮಾಡಿದ. ಅವನು ಮಾಡಿದ್ದೆಲ್ಲವೂ ಏಕವ್ಯಕ್ತಿ ಸಾಹಸ.

ಅಕಾಡೆಮಿಕ್‌ ಸಾಹಿತ್ಯ ವಲಯ ಅವನನ್ನು ಸರಿಯಾಗಿ ಪರಿಗಣನೆ ಮಾಡಲೇ ಇಲ್ಲ. ಆದರೂ ಆತ ತಲೆ ಕೆಡಿಸಿಕೊಳ್ಳಲೇ ಇಲ್ಲ. ನಾನುಂಟು ನನ್ನ ಓದುಗರು ಉಂಟು ಎಂದು ಹೇಳಿ ಮುಂದೆ ಹೋಗುತ್ತಿದ್ದ. ಹಾಗೆ ನೋಡಿದರೆ ಕನ್ನಡದ ಕ್ರೈಂ ಬರಹಕ್ಕೆ, ಕ್ರೈಂ ಲೋಕಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದ್ದು ರವಿ. ಇದೆಲ್ಲವನ್ನೂ ಖಂಡಿತ ಇಡೀ ನಾಡು ಸ್ಮರಿಸಿಕೊಳ್ಳುತ್ತದೆ.

click me!