'ನನ್ನ ಗ್ರಹಚಾರ. ಟೈಮ್ ಸರಿಯಿಲ್ಲ ಸರ್ ಅಷ್ಟೇ...!' ಹೀಗೆ ಬಳ್ಳಾರಿ ಜೈಲಿಗೆ ಪಯಣಿಸುವ ವೇಳೆ ಪೊಲೀಸರ ಮುಂದೆ ದರ್ಶನ್ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ.
ಬೆಂಗಳೂರು (ಆ.30): 'ನನ್ನ ಗ್ರಹಚಾರ. ಟೈಮ್ ಸರಿಯಿಲ್ಲ ಸರ್ ಅಷ್ಟೇ...!' ಹೀಗೆ ಬಳ್ಳಾರಿ ಜೈಲಿಗೆ ಪಯಣಿಸುವ ವೇಳೆ ಪೊಲೀಸರ ಮುಂದೆ ದರ್ಶನ್ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಪರಪ್ಪನ ಅಗ್ರಹಾರ ಟು ಬಳ್ಳಾರಿವರೆಗೆ ಐದು ತಾಸು ಪ್ರಯಾಣದ ಅವಧಿಯಲ್ಲಿ ದರ್ಶನ್ ಮೌನವಾಗಿದ್ದರು. ವ್ಯಾನಿನಲ್ಲಿದ್ದ ಪೊಲೀಸರ ಜತೆ ಔಪಚಾರಿಕವಾಗಿ ಮಾತನಾಡಿದ್ದಾರೆ. ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡುತ್ತ ದರ್ಶನ್ ಭಾವುಕರಾದರು. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದರು. ಈಗ ಏನೇ ಹೇಳಿದರೂ ತಪ್ಪಾಗುತ್ತದೆ. ಕಾನೂನು ಮೂಲಕ ಎದುರಿಸುತ್ತೇನೆ ಎಂದು ದರ್ಶನ್ ಮೌನವಾದರು ಎಂದು ಮೂಲಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ.
ದರ್ಶನ್ ಬ್ಯಾಗಿನಲ್ಲಿ 20 ಪುಸ್ತಕಗಳು: ಜೈಲಿನಲ್ಲಿ ಸಮಯ ಕಳೆಯಲು ಕನ್ನಡ ಹಾಗೂ ಇಂಗ್ಲೀಷ್ ಪುಸ್ತಕಗಳನ್ನುದರ್ಶನ್‌ಓದುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರದ ವೇಳೆ ದರ್ಶನ್ ಅವರಿಗೆ ಸೇರಿದ ವಸ್ತುಗಳನ್ನು ಬ್ಯಾಗ್‌ನಲ್ಲಿ ತುಂಬಿ ಪರಪ್ಪನ ಅಗ್ರಹಾರ ಕಾರಾಗೃಹದ ಸಿಬ್ಬಂದಿ ಆ ನೀಡಿದ್ದರು. ಆ ವೇಳೆ ಬ್ಯಾಗ್‌ನಲ್ಲಿ 20ಕ್ಕೂ ಹೆಚ್ಚಿನ ಪುಸ್ತಕಗಳಿದ್ದವು. ಜೈಲಿನಲ್ಲಿ ಭೇಟಿಗೆ ಬಂದಾಗ ದರ್ಶನ್ಗೆ ಕೆಲ ಪುಸ್ತಕಗಳನ್ನು ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ನೀಡಿದ್ದಾರೆ. ತಾನು ಪುಸ್ತಕಗಳನ್ನು ಓದುತ್ತಿರುವ ಸಂಗತಿಯನ್ನು ಬಳ್ಳಾರಿಗೆ ತೆರಳುವಾಗ ಪೊಲೀಸರ ಜತೆ ಲೋಕಭೀರಾಮ ಮಾತುಕತೆ ವೇಳೆ ದರ್ಶನ್ ಹೇಳಿಕೊಂಡಿರುವುದಾಗಿ ಮೂಲಗಳು ಹೇಳಿವೆ.
ಜೈಲಲ್ಲಿ ರಾಜಾಥಿತ್ಯ: ನಟ ದರ್ಶನ್ ಸೇರಿ ಐವರನ್ನು ಪ್ರಶ್ನಿಸಿದ ಪೊಲೀಸರು
ದರ್ಶನ್ ಕೂಲಿಂಗ್ ಗ್ಲಾಸ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಿತ್ರನಟ ದರ್ಶನನನ್ನು ಬಳ್ಳಾರಿ ಕಾರಾಗೃಹಕ್ಕೆ ದಾಖಲಿಸುವ ವೇಳೆ ಕೂಲಿಂಗ್ ಗ್ಲಾಸ್ ಧರಿಸಿರುವ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕಾರಾಗೃಹ ಮತ್ತು ಸುಧಾರಣೆ ಸೇವೆ ಉತ್ತರ ವಲಯದ ಡಿಐಜಿ ಟಿ.ಪಿ.ಶೇಷ ಅವರು ಗುರುವಾರ ಇಲಾಖೆಗೆ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಕೊಲೆ ಪ್ರಕರಣದ ವಿಚಾರಣಾಧೀನ ಕೈದಿ ದರ್ಶನ ಬಳ್ಳಾರಿ ಜೈಲಿಗೆ ದಾಖಲಾಗುವ ವೇಳೆ ಕೂಲಿಂಗ್ ಗ್ಲಾಸ್ ಧರಿಸಿದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದೆ. ಬೆಂಗಾವಲಿಗಾಗಿ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಾರಣಾಧೀನ ಕೈದಿ ದರ್ಶನ್‌ಗೆ ಕೂಲಿಂಗ್ ಗ್ಲಾಸ್ ಧರಿಸಲು ಹಾಗೂ ಬಳಕೆ ಮಾಡಲು ಅನುಮತಿ ನೀಡಿರುವುದು ರಾಜ್ಯದ ಜನತೆಯಲ್ಲಿ ತಪ್ಪು ಸಂದೇಶ ಹೋಗುತ್ತದೆ. ಇದರಿಂದಾಗಿ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿದೆ.
ಬಂಧಿಯ ಸ್ವಂತ ವಸ್ತುಗಳನ್ನು ನಿಯಮಾನುಸಾರ ಕಾರಾಗೃಹದ ಮುಖ್ಯದ್ವಾರದಲ್ಲಿ ಒಪ್ಪಿಸಬೇಕಾಗುತ್ತದೆ. ರಾಜ್ಯವ್ಯಾಪಿಯಾಗಿ ದರ್ಶನ್ ಗೆ ರಾಜಾತಿಥ್ಯ ನೀಡಿರುವ ವರದಿಗಳು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿವೆ. ಬಂಧಿಯ ಪ್ರತಿಯೊಂದು ಚಿಕ್ಕ ಚಟುವಟಿಕೆಗಳ ಮೇಲೆ ಸುದ್ದಿ ವಾಹನಿಗಳು ನಿಗಾ ಇಟ್ಟಿರುತ್ತವೆ ಎಂಬುದು ಗೊತ್ತಿದ್ದರೂ ಬೆಂಗಾವಲು ಸಿಬ್ಬಂದಿ ಕೂಲಿಂಗ್ ಗ್ಲಾಸ್ ಧರಿಸಲು ಅನುಮತಿ ನೀಡಿ, ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಪತ್ರದಲ್ಲಿ ಕೋರಿದ್ದಾರೆ.