Kantara ಸಿಂಗಾರ ಸಿರಿಯೇ ಹಾಡಿನಲ್ಲಿರುವ 'ಕೊಂಗಾಟ' ಪದಕ್ಕೇನರ್ಥ? ಪ್ರಮೋದ್ ಹೇಳ್ತಾರೆ ಕೇಳಿ..

By Suvarna News  |  First Published Feb 27, 2023, 2:44 PM IST

ಸ್ಯಾಂಡಲ್​ವುಡ್​ನ ಬ್ಲಾಕ್​ಬಸ್ಟರ್​ ಚಿತ್ರ ಕಾಂತಾರದ ಸುಮಧುರ ಹಾಡುಗಳಲ್ಲಿ ಒಂದು ಸಿಂಗಾರ ಸಿರಿಯೆ... ಇದರ ಅರ್ಥವೇನು ಎಂಬ ಕುತೂಹಲದ ಮಾಹಿತಿ ಹಂಚಿಕೊಂಡಿದ್ದಾರೆ ಗೀತ ರಚನೆಕಾರ ಪ್ರಮೋದ್​ ಮರವಂತೆ
 


ಕಾಂತಾರ... (Kantara) ಈ ಹೆಸರು ಕೇಳಿದರೇನೇ ಎಷ್ಟೋ ಮಂದಿಗೆ ಒಂದು ರೀತಿಯ ರೋಮಾಂಚನವಾಗುತ್ತದೆ. ಕಾಂತಾರ ಇದರ ಅರ್ಥ ಕಾಡು ಎಂದು. ಸಂಪೂರ್ಣ ಚಿತ್ರವು ಕಾಡಿನ ಕಥೆಯನ್ನು ಆಧರಿಸಿರುವ ಕಾಂತಾರ ಕರ್ನಾಟಕದ ಗಡಿಯನ್ನಷ್ಟೇ ಅಲ್ಲದೇ ಭಾರತದ ಎಲ್ಲೆಯನ್ನೂ ಮೀರಿ ಕರುನಾಡಿನ ಜನಪದ (Folk) ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಚಿತ್ರ. ಅದ್ಧೂರಿ ಬಜೆಟ್​ ಹಾಕಿ ವಾಸ್ತವ ಬದುಕಿಗೆ ತಾಳಮೇಳವೇ ಇಲ್ಲದೇ ಏನೇನೋ ಕಾಲ್ಪನಿಕ ಕಥೆಗಳನ್ನು ಇಟ್ಟುಕೊಂಡು ಮಾಡುವ  ಚಿತ್ರಗಳು ಇಂದು ಭಾರಿ ಸದ್ದು ಮಾಡುತ್ತಿರುವ ನಡುವೆಯೇ, ಒಂದು ಪ್ರಾಂತ್ಯದ ಸೊಗಡನ್ನು ವಿವರಿಸುವ ಕಡಿಮೆ ಬಜೆಟ್​ನ ಪ್ರಾದೇಶಿಕ ಚಿತ್ರವೊಂದು ವಿದೇಶಗಳಲ್ಲಿಯೂ  ಮಿಂಚಬಹುದು ಎನ್ನುವುದಕ್ಕೆ  ಉದಾಹರಣೆಯಾಗಿದೆ ಕಾಂತಾರ. ಇದರ ತಾಕತ್ತು ಎಷ್ಟಿದೆ ಎಂದರೆ ಈ ಚಿತ್ರರಂಗದ ಯಶಸ್ಸನ್ನು ಸಹಿಸದೇ ಹಲವಾರು ರೀತಿಯಲ್ಲಿ 'ಆಕ್ರಮಣಗಳೂ' ನಡೆದವು. ಆದರೆ ಎಲ್ಲವನ್ನೂ ಮೀರಿ ಎದ್ದುನಿಂತ ಕಾಂತಾರದ ಹೈಲೈಟ್​ ಅದರ ಹಾಡು ಸಿಂಗಾರ ಸಿರಿಯೇ.... (Singara Siriye) ಹೌದು. ಇಂದು ಈ ಹಾಡನ್ನು ಹಾಡದ ಕಲಾವಿದರೇ ಇಲ್ಲವೆನ್ನಬಹುದೇನೋ. ಕರ್ಕಶ, ಆರ್ಭಟ, ಅರ್ಥಗಳೇ ಇಲ್ಲದ ಅಸಭ್ಯ ಹಾಡುಗಳೇ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ಹೊತ್ತಿನಲ್ಲಿ ಸುಮಧುರ ಸಂಗೀತವೊಂದು (melodius music) ಎಷ್ಟು ಸದ್ದು ಮಾಡಬಲ್ಲುದು, ಎಷ್ಟು ಜನಪ್ರಿಯವಾಗಬಲ್ಲುದು, ಎಲ್ಲರ ಮನದಲ್ಲಿಯೂ ಹೇಗೆ ಸದಾ ರಿಂಗಣಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಕಾಂತಾರದ ಸಿಂಗಾರ ಸಿರಿಯೇ...  ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ... ಹಾಡು. ವರಾಹ ರೂಪಂ (Varaha Rupam) ಹಾಡಿನಂತೆಯೇ ಸಿಂಗಾರ ಸಿರಿಯೇ ಹಾಡು ಕೂಡ ಜನಮನ ಗೆದ್ದಿದೆ. 

ಸಿಂಗಾರ ಸಿರಿಯೇ ಮೇಕಿಂಗ್ ವಿಡಿಯೋವನ್ನು ಈ ಹಾಡಿನ ಗೀತ ರಚನೆಕಾರ (Lyric Writer) ಪ್ರಮೋದ್ ಮರವಂತೆ (Pramod Maravante) ಇತ್ತೀಚೆಗೆ ಹಂಚಿಕೊಂಡಿದ್ದರು. ಅದರಲ್ಲಿ ಅವರು ತಾವು ಹಾಡನ್ನು ಬರೆದ ಕುರಿತು ಹೇಳಿಕೊಂಡಿದ್ದರು.  'ಒಂದು ಹಾಡಿನ ಭಾವವನ್ನ ತಿಳಿಯಲು ಕಥೆ ಕೇಳಬೇಕು. ಇಲ್ಲವೇ ದೃಶ್ಯಗಳನ್ನು ನೋಡಬೇಕು. ಇದಕ್ಕಾಗಿ ನಾನು ಸಿಂಗಾರ ಸಿರಿಯೇ   ಹಾಡನ್ನು ಬರೆಯುವಾಗ  ಶೂಟಿಂಗ್ ಸ್ಪಾಟ್​ಗೂ ಹೋಗಿ ಬರುತ್ತಿದೆ' ಎಂದಿದ್ದರು. ಇಂತಹ ಈ ಹಾಡು ಹೀಗೆಯೇ ಇರಬೇಕು ಎಂದು ಕಾಂತಾರ ನಟ- ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಅದು ನನಗೆ ತುಂಬಾ ಸರಿ ಎನಿಸಿತು.  ರಿಷಬ್ ಶೆಟ್ಟಿ (Rishabh Shetty) ಅವರು ಕೊಟ್ಟ ಒಂದಷ್ಟು ಐಡಿಯಾಗಳೂ ಇಲ್ಲಿ ವರ್ಕ್​ ಆದವು.   ಚಿತ್ರೀಕರಣ ಮಾಡುವ ದೃಶ್ಯಗಳನ್ನು  ಕಣ್ತುಂಬಿಕೊಂಡು ಬರುತ್ತಿದ್ದೆ. ಇಲ್ಲದಿದ್ದರೆ ಈ ಹಾಡನ್ನು ಬರೆಯಲು ಸ್ಫೂರ್ತಿ ಬರುತ್ತಿರಲಿಲ್ಲ. ಆ ಚಿತ್ರೀಕರಣದ ಗುಂಗಿನಲ್ಲಿಯೇ ಹಾಡನ್ನು ಬರೆದಾಗ ಹೊಮ್ಮಿದ್ದೇ ಸಿಂಗಾರ ಸಿರಿಯೇ ಹಾಡು. ಇದಕ್ಕಾಗಿಯೇ ಈ ಹಾಡು ಎಲ್ಲರಿಗೂ ಅಷ್ಟು ಅಚ್ಚುಮೆಚ್ಚಾಗಿ ಮನದಾಳದಲ್ಲಿ ಬೇರೂರಿದೆ ಎಂದು ಹೇಳಿಕೊಂಡಿದ್ದರು. 

Tap to resize

Latest Videos

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ; ಪುನೀತ್‌ ರಾಜ್‌ಕುಮಾರ್‌ಗೆ ಅರ್ಪಿಸಿದ 'ಕಾಂತಾರ' ರಿಷಬ್ ಶೆಟ್ಟಿ

ಸಿಂಗಾರ ಸಿರಿಯೇ  ಹಾಡಿನ ಇನ್ನೂ ಕೆಲವು ಕುತೂಹಲದ ಮಾಹಿತಿಗಳನ್ನು ಪ್ರಮೋದ್ ಮರವಂತೆ ಹಂಚಿಕೊಂಡಿದ್ದಾರೆ. ಅವರು ಸಿಂಗಾರ ಸಿರಿಯೇ ಹಾಡಿನ ಅರ್ಥವನ್ನೂ ಹೇಳಿದ್ದಾರೆ. ಜೊತೆಗೆ ಈ ಹಾಡನ್ನು ಈ ಚಿತ್ರಕ್ಕೆ ಏಕೆ ಅಳವಡಿಸಲಾಗಿದೆ ಎಂಬ ಬಗ್ಗೆ ಕುತೂಹಲದ ಮಾಹಿತಿ ಹಂಚಿಕೊಂಡಿದ್ದಾರೆ.  ಸಿಂಗಾರ ಎಂದರೆ ಡೆಕೋರೇಷನ್​ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಸಿಂಗಾರದ ನಿಜವಾದ ಅರ್ಥ ಅಡಕೆಯ ಹೂವು. ಈ ಹೂವಿಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲಿಯೂ ದೇವರ ಪೂಜೆಗಳಿಗೆ ಇದು ಬೇಕೇ ಬೇಕು. ಮಲೆನಾಡು, ಕರಾವಳಿಗಳಲ್ಲಿ ಅಡಕೆ ಮರದ ಸಿಂಗಾರ ಇಲ್ಲದೆಯೇ ಬಹುಶಃ ಯಾವ ಶುಭ ಕಾರ್ಯಗಳೂ ನಡೆಯುವುದಿಲ್ಲ. ಅದೇ ರೀತಿ ಇಲ್ಲಿ ನಾಯಕಿ ನಾಯಕನಿಗೆ ದೇವತೆಯ ರೂಪದಲ್ಲಿ ಕಾಣಿಸುತ್ತಾಳೆ. ಇದೇ ಕಾರಣಕ್ಕೆ ಈ ಹೋಲಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.  

ಈ ಹಾಡಿನಲ್ಲಿ ಮನದ ಮಗು ಹಠ ಮಾಡಿದೆ ಮಾಡು ಬಾ ಕೊಂಗಾಟವಾ... ಎಂಬ ಸಾಲು ಬರುತ್ತದೆ. ಈ ಸಾಲಿನಲ್ಲಿ ಬರುವ ಕೊಂಗಾಟ ಎಂದರೇನು ಎಂಬ ಬಗ್ಗೆಯೂ ಅವರು ವಿವರಣೆ ನೀಡಿದ್ದಾರೆ. ತುಳು ಭಾಷೆಯಲ್ಲಿ ಕೊಂಗಾಟ ಎಂದರೆ ಮಕ್ಕಳನ್ನು ಮುದ್ದು ಮಾಡುವುದು ಇಲ್ಲವೇ ರಮಿಸುವುದು. ಹೆಚ್ಚಾಗಿ ಮಕ್ಕಳು ಹಠ ಮಾಡಿದಾಗ ಅವರನ್ನು ಮುದ್ದುಮಾಡುವುದಕ್ಕೆ ಕೊಂಗಾಟ ಎನ್ನುತ್ತಾರೆ. ಇಲ್ಲಿ ನಾಯಕಿಯನ್ನು ನೋಡಿದ ನಾಯಕನ ಮನಸ್ಸು ಮಗುವಿನಂತಾಗಿದೆ, ಬಂದು ನನ್ನನ್ನು ರಮಿಸು, ಮುದ್ದು ಮಾಡು ಎನ್ನುವ ಅರ್ಥದಿಂದ ಈ ಶಬ್ದ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದಹಾಗೆ ಈ ಹಾಡನ್ನು  ಗಾಯಕ ವಿಜಯ್ ಪ್ರಕಾಶ್ (Vijay Prakash) ಮತ್ತು ಅನನ್ಯ ಭಟ್ (Ananya Bhat)ಹಾಡಿದ್ದಾರೆ. 

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ; ಪುನೀತ್‌ ರಾಜ್‌ಕುಮಾರ್‌ಗೆ ಅರ್ಪಿಸಿದ 'ಕಾಂತಾರ' ರಿಷಬ್ ಶೆಟ್ಟಿ

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!