ನಿರ್ದೇಶಕ, ಗೀತ ರಚನೆಕಾರ ಯೋಗರಾಜ ಭಟ್ಟರ ಕುರಿತು ಪತ್ನಿ ರೇಣುಕಾ ಅವರು ಹಲವಾರು ವಿಷಯಗಳನ್ನು ಹೇಳಿದ್ದಾರೆ. ಅವರು ಹೇಳಿದ್ದೇನು?
ಕನ್ನಡ ಚಿತ್ರರಂಗ ನಿರ್ದೇಶಕ ಹಾಗೂ ಗೀತ ರಚನೆಕಾರ ಯೋಗರಾಜ್ ಭಟ್ ಅವರ ಹಾಡುಗಳೆಂದರೆ ಅದಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ರಂಗ SSLC, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ದನ ಕಾಯೋನು, ವಾಸ್ತು ಪ್ರಕಾರ, ಡ್ರಾಮಾ, ಮುಗುಳುನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ. ಇದೀಗ ಯೋಗರಾಜ್ ಭಟ್ ಅವರು ಉತ್ತರಾಕಾಂಡ ಚಿತ್ರದಲ್ಲಿ ನಟಿಸಲಿದ್ದಾರೆ. 'ಪಾಟೀಲ' ಎಂಬ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು, ಇದೀಗ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಳ್ಳಲಿದ್ದಾರೆ. 'ಉತ್ತರಕಾಂಡ (Uttarakaanda)' ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ರೋಹಿತ್ ಪದಕಿ ನಿರ್ದೇಶಕರು. ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಯುಟ್ಯೂಬ್ ಸಂದರ್ಶನವೊಂದರಲ್ಲಿ ಯೋಗರಾಜ್ ಭಟ್ ಮತ್ತು ಪತ್ನಿ ರೇಣುಕಾ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ. ರೇಣುಕಾ ಮತ್ತು ಯೋಗರಾಜ್ ಭಟ್ ಅವರ ದಾಂಪತ್ಯ ಜೀವನದಲ್ಲಿ 23 ವರ್ಷಗಳಾಗಿದ್ದು, ಈವರೆಗಿನ ಪಯಣವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಭಟ್ಟರ ಹಲವಾರು ಸೀಕ್ರೇಟ್ಗಳನ್ನು ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ರೇಣುಕಾ ಅವರು ಶೇರ್ ಮಾಡಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರ ಪ್ಲಸ್, ಮೈನಸ್ ಪಾಯಿಂಟ್ಸ್ಗಳನ್ನು ರೇಣುಕಾ ಅವರು ಹೇಳಿದರೆ, ಪತ್ನಿಯ ಬಗ್ಗೆ ಎಲ್ಲಾ ವಿಷಯಗಳನ್ನು ಭಟ್ಟರು ಹೇಳಿದ್ದಾರೆ.
'ಉತ್ತರಕಾಂಡ' ಸೇರಿಕೊಂಡ ಚೈತ್ರ ಆಚಾರ್, ದಿಗಂತ್ & ಯೋಗರಾಜ್ ಭಟ್; ರಮ್ಯಾ ಜಾಗಕ್ಕೆ ಈ ಲಚ್ಚಿ?
ಅಂದಹಾಗೆ ಯೋಗರಾಜ್ ಭಟ್ ಅವರಿಗೆ ತಾವು ಮಾಡುವ ಸಿನಿಮಾ, ಹಾಡುಗಳ ಸಂಪೂರ್ಣ ಡಿಟೇಲ್ಸ್ ನೆನಪಿದ್ದರೂ, ಕನಸಿನಲ್ಲಿ ಕೂಡ ಪರ್ಫೆಕ್ಟ್ ಆಗಿ ಹೇಳಿದರೂ ತಮ್ಮ ಮದುವೆಯ ದಿನಾಂಕ ಮಾತ್ರ ನೆನಪು ಇರುವುದಿಲ್ಲವಂತೆ. ಇವರನ್ನು ಮದ್ವೆಯಾದದ್ದು ನನ್ನ ತಂದೆಯ ಒತ್ತಾಯಕ್ಕೆ ಎಂದು ರೇಣುಕಾ ಅವರು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದ ನನಗೆ ಕೆಲಸ ಬಿಡಿಸಿದ್ರು, ಎಲ್ಲರಿಗೂ ಕೆಲಸ ಬಿಡಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಎಂದರೆ ಇವರಿಗೆ ತುಂಬಾ ಖುಷಿ ಎನ್ನುತ್ತಲೇ ಭಟ್ಟರಂಥ ಪತಿಯನ್ನು ಪಡೆದಿರುವುದು ತಮ್ಮ ಪುಣ್ಯ ಎಂದೂ ಹೇಳಿದರು. ಶಿವರಾಜ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಭಟ್ಟರು ನಮ್ಮ ಹೆಂಡ್ತಿಯನ್ನು ನಾವು ಪ್ರೀತಿಸ್ತೇವೆ ಎಂದ ಮಾತ್ರಕ್ಕೆ, ಬೇರೆಯವರ ಪತ್ನಿಯರನ್ನು ಕಡೆಗಣಿಸ್ತೇವೆ ಎನ್ನೋದು ಅರ್ಥವಲ್ಲ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ದೊಡ್ಡದಾಗಿ ನಗುತ್ತ, ರೇಣುಕಾ ಅವರು ನಾನು ಏನೂ ಹೇಳಲ್ಲಪ್ಪ ಎನ್ನುತ್ತ ಬಾಯಿಗೆ ಬೀಗ ಹಾಕಿಕೊಂಡರು.
ಇದೇ ವೇಳೆ ಮನೆ ಕೆಲಸ ಒಂದೂ ಮಾಡಲ್ಲ ಎಂದು ನೆನಪಿಸಿದರು. ಜೀವನದಲ್ಲಿ ನಾನು ಮಾಡಿದ ಒಂದೇ ಒಂದು ತಪ್ಪು ಎಂದರೆ ಅದು ಮೊಸರು ತೆಗೆದುಕೊಂಡು ಬರಲು ಹೇಳಿದ್ದು. ನಾನು ಹೇಳಿದ್ದು ಯಾವಾಗ್ಲೋ ಅವರು ತಂದಿದ್ದು ಇನ್ನಾವಾಗ್ಲೋ... ಅದಕ್ಕೆ ಒಂದೇ ಒಂದು ಕೆಲಸವನ್ನೂ ಅವರಿಗೆ ಹೇಳಲ್ಲ ಎಂದು ರೇಣುಕಾ ಹೇಳಿದರು. ಇದೇ ವೇಳೆ ಯೋಗರಾಜ ಭಟ್ಟರು ಬರೆದಿರುವ ಹಲವಾರು ಕವಿತೆಗಳಿಗೆ ಪತ್ನಿಯೇ ಸ್ಫೂರ್ತಿ ಎನ್ನುವುದೂ ಈ ಸಂದರ್ಶನದಲ್ಲಿ ತಿಳಿದು ಬಂತು. ಯೋಗರಾಜ ಭಟ್ಟರು ಲೇಟಾಗಿ ಬಂದಾಗ ಬಾಗಿಲು ತೆರೆಯದಿದ್ದಾಗ ಒಂದು ಹಾಡು, ಪತ್ನಿ ಸಿಟ್ಟಾದಾಗ ಇನ್ನೊಂದು ಹಾಡು, ಮನೆ ಕೆಲಸ ಮಾಡಲು ಹೇಳಿ ಅದನ್ನು ಮಾಡದೇ ಹೋದಾಗ ಪತ್ನಿ ಮುನಿಸಿಕೊಂಡಾಗ ಮತ್ತೊಂದು ಹಾಡು, ಅಂಗಡಿಯಿಂದ ಏನಾದರೂ ತರಲು ಹೇಳಿದಾಗ ಮರೆತ ಸಂದರ್ಭದಲ್ಲಿ ಪತ್ನಿ ತೋರುವ ರಿಯಾಕ್ಷನ್ಗೆ ಇನ್ನೊಂದು ಹಾಡು... ಹೀಗೆ ಭಟ್ಟರ ಹಲವಾರು ಹಾಡುಗಳಿಗೆ ಪತ್ನಿ ರೇಣುಕಾ ಅವರೇ ಸ್ಫೂರ್ತಿಯಾಗಿದ್ದಾರಂತೆ.
ಮಹಾನಟಿಯಲ್ಲಿ ಹಿರಿಯಜ್ಜಿ: ಮಗನಿಗೆ ಇಳಿವಯಸ್ಸಲ್ಲೂ ಕಿಡ್ನಿ ನೀಡಿ ಕಾಪಾಡಿದಳು... ಆದರೆ.. ಕ್ರೂರ ವಿಧಿಯಾಟ...
ಇದೇ ವೇಳೆ ಭಟ್ಟರ ನೆಗೆಟಿವ್ ಪಾಯಿಂಟ್ ಬಗ್ಗೆ ಹೇಳಿ ಅಂದಾಗ ಸ್ಮೋಕ್ ಮಾಡುವುದು, ಕ್ಲೀನ್ ಇಟ್ಟುಕೊಳ್ಳದೇ ಇರುವುದು, ಮನೆ ಕೆಲಸಗಳನ್ನು ಬೇರೆ ಮರೆಯುವುದು... ಹೀಗೆ ಕೆಲವೊಂದು ಲಿಸ್ಟ್ಗಳನ್ನು ಹೇಳಿದರು. ಇದೇ ವೇಳೆ ಪತ್ನಿಯ ಬಗ್ಗೆ ಯೋಗರಾಜ್ ಭಟ್ಟರು ಹಲವಾರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ನಂತರ ಒಳ್ಳೆಯ ಗಂಡ ಹೇಗಿರಬೇಕು ಎಂದು ಯೋಗರಾಜ ಭಟ್ಟರು ಹೇಳಿದ್ದಾರೆ. ಪತ್ನಿಗೆ ಪದೇ ಪದೇ ರೀಸನ್ಸ್ ಕೊಡಬಾರದು ಎಂದಿದ್ದಾರೆ. ನಂತರ ಒಳ್ಳೆಯ ಗಂಡ ಹೇಗಿರಬೇಕು ಎಂದು ರೇಣುಕಾ ಅವರಿಗೆ ಕೇಳಿದಾಗ, ಅವರು ಯೋಗರಾಜ ಭಟ್ಟರನ್ನು ತೋರಿಸಿ ಹೀಗೆ ಎಂದಿದ್ದಾರೆ.