ಹಿರಿಯ ನಟಿ ಗಿರಿಜಾ ಲೋಕೇಶ್ ಜೀವನ ಕಥನ/ ಜನವರಿ 10 ಇಡೀ ದಿನ ಕಾರ್ಯಕ್ರಮ/ ಬೆಳಗ್ಗೆ ಗಿರಿಜಾ ಲೋಕೇಶ್ 70-/ ಸಂಜೆ 'ಗಿರಿಜಾ ಪರಸಂಗ' ಪುಸ್ತಕ ಬಿಡುಗಡೆ
ಬೆಂಗಳೂರು(ಜ. 08) ಸುಬ್ಬಯ್ಯ ನಾಯ್ಡು ಕುಟುಂಬದ ಸೊಸೆ, ಗಿರಿಜಾ ಲೋಕೇಶ್ ಅವರ ಜೀವನ ಕಥನ ಬರೆಯುತ್ತಾ ಬರೆಯುತ್ತಾ ನಾನು ಚಿಕ್ಕವನಿದ್ದಾಗ ನಮ್ಮೂರಿಗೆ ಬರುತ್ತಿದ್ದ ವೃತ್ತಿರಂಗಭೂಮಿ ನಾಟಕ ತಂಡಗಳ ಕಲಾವಿದರು ನೆನಪಾದರು.
ಎಷ್ಟೊಂದು ವೈವಿಧ್ಯ ಅನುಭವಗಳು, ಎಷ್ಟೊಂದು ನಲಿವು-ನೋವುಗಳು! ಅವನ್ನೆಲ್ಲ ಸ್ಥಿತಪ್ರಜ್ಞರಂತೆ ಸ್ನೀಕರಿಸಿ, ಯಾವ ಕಷ್ಟವೂ ಕಷ್ಟವೇ ಅಲ್ಲ ಎಂಬಂತೆ ಅವನ್ನೆಲ್ಲ ಹಾದುಬಂದಿರುವ ಗಿರಿಜಾ ಲೋಕೇಶ್ ಜೀವನ ಚರಿತ್ರೆ ಈ ಭಾನುವಾರ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಬಿಡುಗಡೆ ಆಗುತ್ತಿದೆ. ಒಂದು ಸೊಗಸಾದ ಕಾರ್ಯಕ್ರಮದಲ್ಲಿ ಹಲವರು ಅವರೊಂದಿಗೆ ಮಾತಾಡಲಿದ್ದಾರೆ. ಈ ಭಾನುವಾರ ನೀವೂ ನಮ್ಮ ಜತೆಯಾಗಿ. ಗಿರಿಜಮ್ಮನ ಕೈಗೊಂದು ಹೂ ಕೊಟ್ಟು ಶುಭಹಾರೈಸಿ.
ಪತ್ರಕರ್ತ, ಲೇಖಕ ಜೋಗಿ ಹೀಗೆ ಬರೆದುಕೊಂಡು ಒಂದೊಳ್ಳೆ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದಾರೆ. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು ತಮ್ಮದೇ ಛಾಪು ಮೂಡಿಸಿದ ಕಲಾವಿದೆ ಗಿರಿಜಾ ಲೋಕೇಶ್..
ಗಿರಿಜಾಗೆ ಎಪ್ಪತ್ತು..ಬಾಳ ಪ್ರಯಾಣ ಹೀಗಿತ್ತು
ಗಿರಿಜಾ ಲೋಕೇಶ್ ಅವರ ಜೀವನ ಕಥನ 'ಗಿರಿಜಾ ಪರಸಂಗ' ವನ್ನು ಅಂಕಿತ ಪುಸ್ತಕ ಪ್ರಕಾಶನ ಹೊರತಂದಿದೆ. ಗಿರಿಜಾ ಲೋಕೇಶ್ 70- ಆಪ್ತ ಸಂವಾದ, ಸಂಕಿರಣ, ಮಾತುಕತೆ, ಮನ್ನಣೆ ಕಾರ್ಯಕ್ರಮದಲ್ಲಿ ದಿಗ್ಗಜರ ಸಮಾಗಮವಾಗಲಿದೆ.
ಜನವರಿ 10 ರಂದು ಬೆಳಗ್ಗೆ 'ಗಿರಿಜಾ ಲೋಕೇಶ್ 70' ಕಾರ್ಯಕ್ರಮ ನಡೆಯಲಿದ್ದು ನಿರ್ದೇಶಕ ನಾಗಾಭರಣ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ನಿರ್ದೇಶಕ ಟಿಎನ್ ಸೀತಾರಾಮ್, ಹಿರಿಯ ನಟ ದೊಡ್ಡಣ್ಣ, ಶೈಲಶ್ರೀ, ಕಲಾವಿದೆ ಆಶಾಲತಾ, ನಿರ್ದೇಶಕ ಫಣಿರಾಮಚಂದ್ರ, ವಿಜಯಶ್ರೀ ಪಾಲ್ಗೊಳ್ಳಲಿದ್ದಾರೆ. ನಿರ್ವಹಣೆ ಜವಾಬ್ದಾರಿ ಕಪ್ಪಣ್ಣ ಅವರದ್ದು.
ಅದೇ ದಿನ ಸಂಜೆ ಜೋಗಿ ವಿರಚಿತ 'ಗಿರಿಜಾ ಪರಸಂಗ' ಪುಸ್ತಕ ಬಿಡುಗಡೆಯಾಗಲಿದ್ದು ಬರಹಗಾರ್ತಿ ವಿಜಯಮ್ಮ ಅನಾವರಣ ಮಾಡಲಿದ್ದಾರೆ. ಅತಿಥಿಗಳಾಗಿ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಿರ್ಮಾಪಕ ಸಂದೇಶ್ ನಾಗರಾಜ್, ಕವಿ ಎಚ್‌ಎಸ್ ವೆಂಕಟೇಶಮೂರ್ತಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಲೇಖಕ ಜೋಗಿ ಭಾಗವಹಿಸಲಿದ್ದಾರೆ. ನಿರ್ವಹಣೆ ಜವಾಬ್ದಾರಿ ಅಪರ್ಣ ಅವರದ್ದು. ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಒಂದು ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾಗೋಣ ....