
ಬೆಂಗಳೂರು (ಜು.29): ಸಾಲು ಸಾಲು ಹಿನ್ನಡೆಗಳ ನಡುವೆ 19 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧುಗೆ ಕಿಚ್ಚ ಸುದೀಪ್ ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ. ಇತ್ತೀಚೆಗೆ ನಡೆದ ಜಪಾನ್ ಓಪನ್ ಬಿಡಬ್ಲ್ಯುಎಫ್ ಸೂಪರ್ ಸಿರೀಸ್ ಪ್ರಶಸ್ತಿ ಗೆಲ್ಲುವ ಮೂಲಕ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿದ ಭಾರತದ ಮೊದಲ ಷಟ್ಲರ್ ಎನಿಸಿಕೊಂಡ ಪಿವಿ ಸಿಂಧು ಅವರಿಗೆ ಉಡುಗೊರೆ ನೀಡಿದ ವಿಚಾರವನ್ನು ಸ್ವತಃ ಸುದೀಪ್ ಬಹಿರಂಗಪಡಿಸಿದ್ದಾರೆ. ಉಡುಗೊರೆಯೊಂದಿಗೆ ತಮ್ಮ ಹೆಸರು ಇರುವ ಲೆಟರ್‌ಹೆಡ್‌ನಲ್ಲಿ ಅಭಿನಂದನಾ ಪತ್ರವನ್ನೂ ಕೂಡ ಸುದೀಪ್ ಕಳುಹಿಸಿಕೊಟ್ಟಿದ್ದಾರೆ.
ಸುದೀಪ್ ಅವರಿಂದ ಬಂದ ಉಡುಗೊರೆ ಹಾಗೂ ವಿಶೇಷ ಪತ್ರದ ಫೋಟೋ ತೆಗೆದು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಥ್ಯಾಂಕ್ ಯು ಸೋ ಮಚ್ ಸುದೀಪ್ ಸರ್ ಎಂದು ಕಿಚ್ಚ ಸುದೀಪ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ತಮ್ಮ ಕೈಬರಹದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ ಸುದೀಪ್, ಜಪಾನ್ ಓಪನ್‌ನಲ್ಲಿ ದಾಖಲೆ ಮುರಿಯುವಂತಹ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಮಗೆ ಪ್ರೇರಣೆಯಾಗಿದ್ದೀರಿ ಎಂದು ಅವರು ಬರೆದಿದ್ದಾರೆ.
ಜುಲೈ 19 ರಂದು ನಡೆದ ಜಪಾನ್ ಓಪನ್ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು, ಅಕಾನೆ ಯಮ ಗುಚಿ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಅದರೊಂದಿಗೆ ಕಳೆದ ಏಳು ವರ್ಷಗಳಿಂದ ಭಾರತಷದ ಯಾವ ಷಟ್ಲರ್ ಕೂಡ ಬಿಡಬ್ಲ್ಯುಎಫ್ ಟೂರ್‌ನಲ್ಲಿ ಮೇಜರ್ ಟೈಟಲ್ ಗೆಲ್ಲದ ಬರವನ್ನು ನೀಗಿಸಿದ್ದರು. ಅದಕ್ಕಿಂತ ಮುಖ್ಯವಾಗಿ ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್ ಮುಂಚಿತವಾಗಿ ಬಂದಿರುವುದು ವಿಶೇಷವಾಗಿದೆ.
31 ವರ್ಷದ ಪಿವಿ ಸಿಂಧು ಫೈನಲ್ ಪಂದ್ಯದ 50 ನಿಮಿಷದ ಕಾದಾಟದಲ್ಲಿ 21-17, 21-17 ನೇರ ಗೇಮ್‌ಗಳಿಂದ ಯಮಗುಚಿ ಅವರನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಸೋಲಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.