
ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಅವರ ‘ಕೆಡಿ’ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲಕ್ಕೆ ಮೂರು ತಿಂಗಳು ಕಾಯಬೇಕು. ಇದು ಸ್ವತಃ ಜೋಗಿ ಪ್ರೇಮ್ ಅವರೇ ಹೇಳಿದ ಡೆಡ್‌ಲೈನ್. ನಿರ್ದೇಶಕರು ಹೇಳುವ ಲೆಕ್ಕದ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ‘ಕೆಡಿ’ ತೆರೆಗೆ ಬರಲಿದೆ. ಅಂದಹಾಗೆ ಅಕ್ಟೋಬರ್ 6ಕ್ಕೆ ಧ್ರುವ ಸರ್ಜಾ ಅವರ ಹುಟ್ಟುಹಬ್ಬ ಇದೆ. ಈಗ ಚಿತ್ರಕ್ಕೆ ಸಿಜಿ ವರ್ಕ್ ನಡೆಯುತ್ತಿದೆ. ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ ‘ಕೆಡಿ’ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಅಪಾರ ಜನಮನ್ನಣೆ ಗಳಿಸಿದೆ. ಎಲ್ಲಾ ರಾಜ್ಯಗಳಿಗೂ ಬಾಲಿವುಡ್‌ನ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಅವರು ಚಿತ್ರತಂಡದ ಜತೆಗೆ ಸಂಚಾರ ಮಾಡಿದ್ದು, ಬೆಂಗಳೂರಿಗೆ ಟೀಸರ್ ಬಿಡುಗಡೆ ಸಲುವಾಗಿ ಬಂದಿದ್ದರು.
ಧ್ರುವ ಸರ್ಜಾ, ಪ್ರೇಮ್, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ನಿರ್ಮಾಪಕ ಕೆ ವೆಂಕಟ್ ನಾರಾಯಣ್, ನಾಯಕಿ ರೀಶ್ಮಾ ನಾಣಯ್ಯ, ಆನಂದ್ ಆಡಿಯೋ ಆನಂದ್ ಹಾಜರಿದ್ದರು. ಜೋಗಿ ಪ್ರೇಮ್, ‘ಚಿತ್ರೀಕರಣ ಬ್ಯಾಲೆನ್ಸ್ ಇಲ್ಲ. ಕೆಡಿ ಚಿತ್ರದಲ್ಲಿ ನಟ ಸುದೀಪ್ ಇರುತ್ತಾರೆ ಎಂಬುದು ಸುಳ್ಳು. ಇದ್ದರೆ ನಾನೇ ಹೇಳುತ್ತೇನೆ. ಸಿಜಿ ವರ್ಕ್‌ಗಾಗಿ ಮೂರು ತಿಂಗಳು ಸಮಯ ಬೇಕು. ಬೇರೆ ಭಾಷೆಗಳಲ್ಲಿ ತುಂಬಾ ಅದ್ದೂರಿಯಾಗಿ ಟೀಸರ್ ಮೆಚ್ಚಿಕೊಂಡಿದ್ದಾರೆ. ಆದರೆ, ನಮ್ಮ ಭಾಷೆಯಲ್ಲಿ ನಮ್ಮವರೇ ಕೆಲವರು ಕಾಳೆಲೆಯುತ್ತಾರೆ. ಅಂಥ ವಿರೋಧಿಗಳು ಇದ್ದರೆ ನಾವು ಬೆಳೆಯಕ್ಕೆ ಸಾಧ್ಯ. ಎಲ್ಲರು ಸೇರಿ ಪ್ರೀತಿಯಿಂದ ಮಾಡಿರುವ ಸಿನಿಮಾ ಇದು’ ಎಂದರು.
ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ಅವರು ವೇದಿಕೆಗೆ ಬಂದು ‘ಬಂಗಾರದಿಂದ ಬಣ್ಣಾನ ತಂದ’ ಹಾಡಿಗೆ ಹೆಜ್ಜೆ ಹಾಕಿದರು. ಶಿಲ್ಪಾ ಶೆಟ್ಟಿ ತುಳು ಭಾಷೆಯಲ್ಲಿ ಮಾತನಾಡಿ ಚಪ್ಪಾಳೆ, ಶಿಳ್ಳೆಗಳಿಗೆ ಕಾರಣವಾದರೆ, ರವಿಚಂದ್ರನ್ ಅವರು ತಮ್ಮ ಪಾತ್ರಕ್ಕೆ ಪಾರ್ಟ್ 2ನಲ್ಲಿ ತುಂಬಾ ಮಹತ್ವ ಇದೆ ಎನ್ನುವ ಮೂಲಕ ‘ಕೆಡಿ’ ಚಿತ್ರದ ಮುಂದುವರಿದ ಭಾಗ ಬರಲಿದೆ ಎನ್ನುವ ಗುಟ್ಟು ಬಿಟ್ಟುಕೊಟ್ಟರು. ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಇಬ್ಬರು ತುಂಬಾ ಸಾಫ್ಟ್ ಕ್ಯಾರೆಕ್ಟರ್. ಈ ಸಾಫ್ಟ್ ಪಾತ್ರಗಳು ವೈಲೆಂಟ್ ಆಗೋದಕ್ಕೆ ಇಲ್ಲಿರುವ ಇಬ್ಬರು ಕಾರಣ ಎಂದು ಶಿಲ್ಪಾ ಶೆಟ್ಟಿ ಹಾಗೂ ರೀಶ್ಮಾ ನಾಣಯ್ಯ ಕಡೆಗೆ ತೋರಿಸಿ ಕತೆಯ ಮತ್ತೊಂದು ರಹಸ್ಯ ಬಯಲು ಮಾಡಿದ್ದೂ ಕೂಡ ರವಿಚಂದ್ರನ್ ಅವರೇ. ಶಿಲ್ಪಾ ಶೆಟ್ಟಿ ಇಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಗುಮಾನಿ ಹುಟ್ಟಿಕೊಂಡಿದೆ.
ಧ್ರುವ ಸರ್ಜಾ, ‘ಇಷ್ಟು ಜನರ ಜತೆಗೆ ಕೆಲಸ ಮಾಡುವ ಅವಕಾಶ ‘ಕೆಡಿ’ ಚಿತ್ರದ ಮೂಲಕ ಸಿಕ್ಕಿದ್ದು ನನ್ನ ಅದೃಷ್ಟ. ಶಿಲ್ಪಾ ಶೆಟ್ಟಿ ಅವರಿಂದ ತುಂಬಾ ಕಲಿತೆ. ಪ್ರೇಮ್ ಅವರು ಅತೃಪ್ತ ಆತ್ಮ’ ಎಂದರು. ಸಂಜಯ್ ದತ್, ‘ಈ ಚಿತ್ರದಲ್ಲಿ ನನ್ನದು ಧಕ್ ದೇವಾ ಎಂಬ ಡೆಂಜರಸ್ ಕ್ಯಾರೆಕ್ಟರ್. ಧ್ರುವ ಸರ್ಜಾ ಬರೀ ಕನ್ನಡದ ನಟ ಅಲ್ಲ, ಇಂಡಿಯನ್ ಆ್ಯಕ್ಟರ್’ ಎಂದರು. ವೆಂಕಟ್ ನಾರಾಯಣ್, ‘ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್ ಮೂಲಕ ಎಲ್ಲ ಪಾತ್ರಗಳನ್ನು ತೋರಿಸಿದ್ದೇವೆ. ಈ ಪಾತ್ರಗಳನ್ನು ಡಿಸೈನ್ ಮಾಡಲು ಪ್ರೇಮ್ 3 ವರ್ಷಗಳಿಂದ ತುಂಬಾ ಕಷ್ಟಪಟ್ಟಿದ್ದಾರೆ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.