ಡ್ರಗ್‌ ಮಾಫಿಯಾ ಆರೋಪಕ್ಕೆ ಫಿಲಂ ಚೇಂಬರ್‌ ಬೇಸರ; ಪ್ರಶಾಂತ್‌ ಸಂಬರಗಿ ವಿರುದ್ಧವೂ ಕಿಡಿ

Kannadaprabha News   | Asianet News
Published : Sep 03, 2020, 09:24 AM ISTUpdated : Sep 03, 2020, 10:39 AM IST
ಡ್ರಗ್‌ ಮಾಫಿಯಾ ಆರೋಪಕ್ಕೆ ಫಿಲಂ ಚೇಂಬರ್‌ ಬೇಸರ; ಪ್ರಶಾಂತ್‌ ಸಂಬರಗಿ ವಿರುದ್ಧವೂ ಕಿಡಿ

ಸಾರಾಂಶ

‘ಚಿತ್ರರಂಗದಲ್ಲಿ ಡ್ರಗ್‌ ಮಾಫಿಯಾ ಇಲ್ಲ. ನಟನೆಯನ್ನೇ ನಂಬಿಕೊಂಡು ಬಂದಿರುವ ಕಲಾವಿದರು ಅಂಥ ದಾರಿ ತುಳಿದಿಲ್ಲ. ಆದರೆ, ತೆವಲಿಗಾಗಿ ಹೊಸದಾಗಿ ಬಂದವರಿಂದ ಇಡೀ ಚಿತ್ರರಂಗಕ್ಕೆ ಕೆಟ್ಟಹೆಸರು ಬರುತ್ತಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾರೋ ಕೆಲವರ ಕಾರಣಕ್ಕೆ ಇಡೀ ಚಿತ್ರರಂಗದ ಕಡೆ ಬೆರಳು ಮಾಡಬೇಡಿ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್‌ ಮಾಫಿಯಾ ಎಂಬುದು ಕೇವಲ ಆರೋಪ ಮಾತ್ರ. ಆರೋಪ ಸಾಬೀತಾಗಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ತನಿಖೆಗೆ ವಾಣಿಜ್ಯ ಮಂಡಳಿ ಸೇರಿದಂತೆ ಇಡೀ ಚಿತ್ರರಂಗ ಸಹಕಾರ ಮತ್ತು ಬೆಂಬಲ ನೀಡಲಿದೆ. ಕನ್ನಡ ಚಿತ್ರರಂಗದ ಯಾರಾದರು ತಪ್ಪಿತಸ್ಥರು ಅಂತ ಗೊತ್ತಾದ ಮೇಲೆ ಅವರ ಮೇಲೆ ವಾಣಿಜ್ಯ ಮಂಡಳಿ ಕೂಡ ತೀವ್ರವಾದ ಕ್ರಮ ಕೈಗೊಳ್ಳಲಿದೆ’ ಎಂದರು.

"

ರಾಗಿಣಿ ದ್ವಿವೇದಿ ಹೆಸರು ರಿವೀಲ್ ಮಾಡಿದ ರವಿಶಂಕರ್‌; ಲೋಕೇಷನ್‌ ಟ್ರ್ಯಾಕ್‌ ಮಾಡಿದ ಸಿಸಿಬಿ 

ಮಂಡಳಿಗೆ ದೂರು ಕೊಡಬೇಕಿತ್ತು:

ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರ ನಡೆ ಬಗ್ಗೆ ಪ್ರತಿಕ್ರಿಯಿಸಿದ ಗೋವಿಂದು, ‘ಇಂದ್ರಜಿತ್‌ ಹೇಳುವಂತೆ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್‌ ಮಾಫಿಯಾ ಇದೆ ಎನ್ನುವುದಾಗಿದ್ದರೆ ಮೊದಲು ಅವರು ವಾಣಿಜ್ಯ ಮಂಡಳಿಗೆ ದೂರು ಕೊಡಬೇಕಿತ್ತು. ಆದರೆ, ಅವರು ಕಾನೂನು ಮೊರೆ ಹೋಗಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಆರೋಪಗಳು ಸಾಬೀತಾಗುವ ತನಕ ನಾವು ಯಾರನ್ನೂ ಕರೆಸಿ ಮಾತನಾಡಲು ಆಗಲ್ಲ. ಡಾ ರಾಜ್‌ಕುಮಾರ್‌ ಅವರಂತಹ ಮೇರು ಕಲಾವಿದರು ಇದ್ದ ಚಿತ್ರರಂಗ ಇದು. 75 ವರ್ಷಗಳ ಸಂಭ್ರಮಗಳಲ್ಲಿರುವಾಗ ಇಂತಹ ಆರೋಪಗಳು ಸಾಕಷ್ಟುನೋವುಂಟು ಮಾಡಿದೆ’ ಎಂದರು.

ಒಂದಿಬ್ಬರೇ ಚಿತ್ರರಂಗ ಅಲ್ಲ:

‘ಚಿತ್ರರಂಗದಲ್ಲಿ ಡ್ರಗ್‌ ಮಾಫಿಯಾ ಇಲ್ಲ ಅಂತ ಹೇಳುತ್ತಿಲ್ಲ. ಹಾಗಂತ ಇರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮ ಕಾಲದ ಯಾರೊಬ್ಬರು ಡ್ರಗ್‌ ಸೇವನೆ ಅಥವಾ ಡ್ರಗ್‌ ಮಾರಾಟ ಮಾಡಿಲ್ಲ. ಇತ್ತೀಚೆಗೆ ಚಿತ್ರರಂಗ ಬಂದವರು, ತೆವಲಿಗಾಗಿ 1-2 ಸಿನಿಮಾ ಮಾಡಿದವರು ಇಂಥ ಜಾಲದಲ್ಲಿ ಇರಬಹುದು. ಆದರೆ, ಆ ಒಂದಿಬ್ಬರೇ ಚಿತ್ರರಂಗ ಅಲ್ಲ’ ಎಂದು ಕಿಡಿ ಕಾರಿದರು.

ಸಂಬರಗಿ ಚಿತ್ರೋದ್ಯಮಿ ಅಲ್ಲ:

ಡ್ರಗ್‌ ಜಾಲದ ಪ್ರಕರಣದಲ್ಲಿ ಸಾಕಷ್ಟುಸಂಚಲನಾತ್ಮಕ ಹೇಳಿಕೆಗಳನ್ನು ಕೊಡುತ್ತಿರುವ ಪ್ರಶಾಂತ್‌ ಸಂಬರಗಿ ಯಾರೆಂದು ಖಾರವಾಗಿ ಪ್ರಶ್ನಿಸಿದ ಗೋವಿಂದು, ‘ಸಂಬರಗಿ ಚಿತ್ರೋದ್ಯಮಿ ಅಲ್ಲ. ಅವರು ಸಿನಿಮಾ ನಿರ್ದೇಶನ ಮಾಡಿಲ್ಲ, ನಿರ್ಮಾಣ ಮಾಡಿಲ್ಲ, ವಿತರಣೆಯನ್ನೂ ಮಾಡಿಲ್ಲ. ಹೀಗಿದ್ದ ಮೇಲೆ ಅವರು ಚಿತ್ರೋದ್ಯಮಿ ಹೇಗಾಗುತ್ತಾರೆ? ಅವರು ಸಾಮಾಜಿಕ ಕಾರ್ಯಕರ್ತ ಅಷ್ಟೆ. ಅವರನ್ನು ಚಿತ್ರೋದ್ಯಮಿ ಅಂತ ಕರೆಯಬೇಡಿ’ ಎಂದರು.

'ಗಾಂಜಾ ಔಷಧ ಗುಣ ಸಾಬೀತು ಆಗಿಲ್ಲ, ಕಾನೂನುಬದ್ಧ ಬೇಡ' 

ವಾಣಿಜ್ಯ ಮಂಡಳಿ ವ್ಯಾಪ್ತಿಯಲ್ಲಿ ಇಲ್ಲ:

ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಮಾತನಾಡಿ, ‘ಸದ್ಯ ಈ ಡ್ರಗ್‌ ಪ್ರಕರಣ ತನಿಖೆಯ ಹಂತದಲ್ಲಿದೆ. ಅದು ಕಾನೂನಿನ ಕಟಕಟೆಯಲ್ಲಿದೆ. ಹೀಗಾಗಿ ಸದರಿ ಪ್ರಕರಣ ಚಿತ್ರರಂಗಕ್ಕೆ ತಳುಕು ಹಾಕಿಕೊಂಡಿದ್ದರೂ ನಾವು ಯಾರನ್ನೂ ಕರೆಸಿ ಚರ್ಚಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗದು. ಮಂಡಳಿ ವ್ಯಾಪ್ತಿಯಲ್ಲಿ ಈ ಪ್ರಕರಣ ಇಲ್ಲ. ಆರೋಪ ಮಾಡಿದ ಇಂದ್ರಜಿತ್‌ ಸರಿಯಾದ ಸಾಕ್ಷಿಗಳನ್ನು ಕೊಟ್ಟು ತನಿಖೆಗೆ ಸಹಕಾರ ನೀಡಲಿ’ ಎಂದು ಹೇಳಿದರು.

ಸತ್ತವರ ಬಗ್ಗೆ ಮಾತನಾಡಬಾರದಿತ್ತು: - ದೊಡ್ಡಣ್ಣ:

ಕಲಾವಿದರ ಸಂಘದ ಪರವಾಗಿ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ‘ಉದ್ಯಮದಲ್ಲಿ ಡ್ರಗ್‌ ಜಾಲ ಇಲ್ಲ. ಈ ಪ್ರಕರಣದಲ್ಲಿ ಇತ್ತೀಚೆಗೆ ನಿಧನರಾದ ಚಿರಂಜೀವಿ ಸರ್ಜಾ ಹೆಸರು ತೆಗೆಯಬಾರದಿತ್ತು. ಪಾಪ... ಮೇಘನಾ ರಾಜ್‌ ಅವರಿಗೆ ಅದೆಷ್ಟುನೋವಾಗಿರಬಹುದು’ ಎಂದರು. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌, ವಾಣಿಜ್ಯ ಮಂಡಳಿ ಪ್ರಮುಖರಾದ ಉಮೇಶ್‌ ಬಣಕಾರ್‌, ಎನ್‌ ಎಂ ಸುರೇಶ್‌, ಎ ಗಣೇಶ, ಕರಿಸುಬ್ಬು ಮೊದಲಾದವರಿದ್ದರು.

ಗೋವಿಂದು ಹೇಳಿಕೆಗೆ ಪ್ರಶಾಂತ್‌ ಸಂಬರಗಿ ತಿರುಗೇಟು

ತಮ್ಮನ್ನು ಚಿತ್ರೋದ್ಯಮಿ ಅಲ್ಲ. ಅವರಿಗೂ ಚಿತ್ರರಂಗಕ್ಕೂ ಸಂಬಂಧ ಇಲ್ಲ ಎನ್ನುವಂತೆ ಹೇಳಿಕೆ ನೀಡಿರುವ ಗೋವಿಂದು ಅವರ ಮಾತಿಗೆ ಪ್ರಶಾಂತ್‌ ಸಂಬರಗಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಶಾಂತ್‌ ಸಂಬರಗಿ, ಚಿತ್ರರಂಗಕ್ಕೆ ನನ್ನ ಕೊಡುಗೆ ಏನೆಂದು ಹೇಳುತ್ತೇನೆ. ನಾನು ಪತ್ರಿಕಾಗೋಷ್ಟಿಕರೆಯುತ್ತಿದ್ದೇನೆ. ವಾಣಿಜ್ಯ ಮಂಡಳಿಯ ಅಕ್ರಮಗಳನ್ನು ಬಯಲಿಗೆ ಎಳೆಯುತ್ತೇನೆ ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

1000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಡೆವಿಲ್ ರಿಲೀಸ್: ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್‌
ಶಿರಡಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!