ರಕ್ಷಿತ್‌ ಶೆಟ್ಟಿ10 ವರ್ಷಗಳು; ಮೈದಾನ ದೊಡ್ಡದಿದೆ, ಆಟವೂ ದೊಡ್ಡದಾಗಿದೆ!

By Kannadaprabha NewsFirst Published Jul 24, 2020, 9:11 AM IST
Highlights

ಶಾರ್ಟ್‌ ಫಿಲ್ಮ್‌ ಮಾಡುತ್ತಾ, ಕನಸು ಕಾಣುತ್ತಾ ಶ್ರದ್ಧೆ ಮಾತ್ರದಿಂದಲೇ ಸ್ಟಾರ್‌ ನಟ, ನಿರ್ದೇಶಕ ಎರಡೂ ಆದ ಸಿನಿಮಾ ವ್ಯಾಮೋಹಿ ರಕ್ಷಿತ್‌ ಶೆಟ್ಟಿಚಿತ್ರರಂಗಕ್ಕೆ ಬಂದು ಹತ್ತು ವರ್ಷ. ಎಲ್ಲರಂತೆ ಇದ್ದು, ಮೀರಿ ಬೆಳೆದು ಅನೇಕರಿಗೆ ಸ್ಫೂರ್ತಿಯಾದ ಉಡುಪಿಯ ಹುಡುಗನ ಮಾತುಕತೆ.

- ರಾಜೇಶ್‌ ಶೆಟ್ಟಿ

ಆಟ ದೊಡ್ಡದಾಗಿದೆ

ಹತ್ತು ವರ್ಷದ ಹಿಂದೆ ಇದೇ ಟೈಮಲ್ಲಿ ಮುಂದೆ ಯಾವ ಶಾರ್ಟ್‌ ಫಿಲ್ಮ್‌ ಮಾಡುವುದು ಅಂತ ಯೋಚಿಸುತ್ತಿದ್ದೆ. ಈಗ ಯಾವ ಸಿನಿಮಾ ಮಾಡುವುದು ಅಂತ ಯೋಚಿಸುತ್ತಿದ್ದೇನೆ. ಅಷ್ಟೇ ವ್ಯತ್ಯಾಸ. ಆಗೆಲ್ಲಾ ಸಿನಿಮಾ ಮಾಡುವುದಕ್ಕಾಗಿ ಓದುತ್ತಿದ್ದೆ, ಬರೆಯುತ್ತಿದ್ದೆ, ಸಿನಿಮಾ ನೋಡುತ್ತಾ ಕಾಲ ಕಳೆಯುತ್ತಿದ್ದೆ. ಈಗ ಕೊರೋನಾ ಬಂದು ಲಾಕ್‌ ಡೌನ್‌ನಿಂದಾಗಿ ಮತ್ತೆ ಅದೇ ಕೆಲಸ ಮಾಡುತ್ತಿದ್ದೇನೆ. ಮತ್ತೆ ಆ ದಿನಗಳಿಗೆ ರೀ ವಿಸಿಟ್‌ ಮಾಡುವ ಅವಕಾಶ ಸಿಕ್ಕಿತು. ಆ ಹುಚ್ಚು ಇನ್ನೊಮ್ಮೆ ಬಂದಿದೆ. ನೆಕ್ಸ್ಟ್‌ಸಿನಿಮಾ ಹೇಗೆ ಮಾಡಬೇಕು ಎಂಬ ಆಸೆ ಇದೆ. ಆಗ ಫ್ರೆಂಡ್ಸ್‌ ಇದ್ದರು. ಈಗ ದೊಡ್ಡ ಟೀಮ್‌ ಇದೆ. ಮೈದಾನ ದೊಡ್ಡದಿದೆ. ಆಟವೂ ದೊಡ್ಡದಾಗಿದೆ.

ಪ್ರತಿಯೊಂದು ಕೂಡ ಪಾಠ ಕಲಿಸಿದೆ

ನಾನು ಇಷ್ಟುದಿನ ಕೆಲಸ ಮಾಡಿದ ಪ್ರತೀ ಸಿನಿಮಾ ಕೂಡ ನನಗೆ ಏನಾದರೊಂದು ಕಲಿಸಿದೆ. ಅವತ್ತು ಆ ಸಿನಿಮಾಗಳು ಪಾಠ ಕಲಿಸದೇ ಇದ್ದಿದ್ದರೆ ನಾನು ಇವತ್ತು

ಹೀಗಿರುತ್ತಿರಲಿಲ್ಲ. ಇವತ್ತು ನನಗೆ ಏನು ಗೊತ್ತಾಗಿದೆ ಅದೆಲ್ಲವೂ ನನಗೆ ಕಲಿಸಿದ್ದು ಇದುವರೆಗಿನ ಜರ್ನಿ. ಸೋಲಿನಿಂದ ಕಲಿತಿದ್ದೇನೆ. ಸಕ್ಸಸ್‌ ಬಂದಾಗ ಆ ಗೆಲುವಿನಲ್ಲೇ ಮುಳುಗಿ ಮುಂದೇನು ಅಂತ ಯೋಚಿಸದೆ ಅದರಿಂದಲೂ ಪಾಠ ಕಲಿತಿದ್ದೇವೆ. ಸೋಲು, ಗೆಲುವು ಎರಡೂ ನನಗೆ ಪಾಠಗಳನ್ನು ಕಲಿಸಿದೆ.

ರಕ್ಷಿತ್ ಶೆಟ್ಟಿ 10 ವರ್ಷದ ಸಿನಿ ಪಯಣ: 'ಸಿಂಪಲ್ ಸ್ಟಾರ್' ಜರ್ನಿ ಹೇಗಿತ್ತು ನೋಡಿ!

ಒಂದೇ ಒಂದು ಸಿನಿಮಾ ಮಾಡುವ ಹುಚ್ಚು

ಹತ್ತು ವರ್ಷದ ಹಿಂದೆ ಒಂದೇ ಒಂದು ಸಿನಿಮಾ ಮಾಡಬೇಕು ಅಂತ ಆಸೆ ಇತ್ತು. ಅಷ್ಟೇ. ಅದೇ ಥರ ಈಗಲೂ ನಾನು ಒಂದು ಸಿನಿಮಾ ನಿರ್ದೇಶನ ಮಾಡಬೇಕು ಅನ್ನುವ ಹುಚ್ಚಿದೆ. ಅದಷ್ಟೇ ನನ್ನ ಮುಂದಿನ ಪ್ಲಾನ್‌. ಅದರ ಜತೆಗೆ ನಟನೆಗೆ ಒಂದಷ್ಟುಸಿನಿಮಾಗಳಿವೆ.

ಗುರಿ ದೊಡ್ಡದಿರಬೇಕು

‘ಗೋ ವಿತ್‌ ದ ಲೈಫ್‌’ ಅನ್ನುವುದು ನನ್ನ ಬದುಕಿನ ತತ್ವ. ಆದರೆ ದೊಡ್ಡದೊಂದು ಕನಸು ಇರಬೇಕು. ಹತ್ತನೇ ಕ್ಲಾಸಲ್ಲಿ ನನ್ನ ಗಣಿತ ಮೇಷ್ಟು್ರ ಪ್ರಕಾಶ್‌ ಸರ್‌ ನನಗೊಂದು ಮಾತು ಹೇಳಿದ್ದರು. ಆಗ ನನಗೆ ಹತ್ತನೇ ತರಗತಿಯಲ್ಲಿ ಗಣಿತದಲ್ಲಿ 100ಕ್ಕೆ 100 ಅಂಕ ತೆಗೆಯಬೇಕು ಅನ್ನುವ ಹಠ. ಆಗ ಅವರು ನಿನಗೆ ನೂರಕ್ಕೆ ನೂರು ಅಂಕ ಗಳಿಸಬೇಕಿದ್ದರೆ ನಿನ್ನ ಗುರಿ 110 ಇರಬೇಕು ಅಂತ, ಅದನ್ನು ನಾನು ಎಲ್ಲಕ್ಕೂ ಅಪ್ಲೈ ಮಾಡುತ್ತೇನೆ. ಬದುಕಲ್ಲಿ ಅತಿ ದೊಡ್ಡ ಕನಸು ಕಾಣಬೇಕು. ಆ ಗುರಿ ತಲುಪುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಕಡೆಗೆ ಒಂದು ಹೆಜ್ಜೆಯಾದರೂ ಇಡುತ್ತಿರಬೇಕು.

ಈ ಕ್ಷಣದಲ್ಲಿ ಬದುಕುವವ ನಾನು

‘ತುಘಲಕ್‌’ ಫೇಲಾದಾಗ ಬೇಜಾರಾಗಿತ್ತು. ‘ಉಳಿದವರು ಕಂಡಂತೆ’ ಬಾಕ್ಸ್‌ ಆಫೀಸಿನಲ್ಲಿ ಸಕ್ಸಸ್‌ ನೋಡದೇ ಇದ್ದಾಗ ಕಾಡಿತು. ‘ಕಿರಿಕ್‌ ಪಾರ್ಟಿ’ ಹಿಟ್‌ ಆಗಿ ನಾಲ್ಕು ತಿಂಗಳು ಸೆಲೆಬ್ರೇಷನ್‌ ಮಾಡಿದಾಗ, ಅಯ್ಯೋ ನಾವು ಬೇರೆ ಏನೂ ಪ್ಲಾನ್‌ ಮಾಡಿಲ್ಲ ಅಲ್ವಾ ಅಂತ ನೆನೆದಾಗಲೂ ಕಾಡಿದೆ. ಪ್ರತೀ ಹಂತದಲ್ಲಿ ಒಂದೊಂದು ವಿಚಾರಗಳು ಕಾಡಿವೆ. ಅದು ಬಿಟ್ಟರೆ ದೊಡ್ಡದಾಗಿ ಕಾಡುವ ಸಂಗತಿ ಏನೂ ಇಲ್ಲ. ನಾನು ಈ ಕ್ಷಣದಲ್ಲಿ ಬದುಕುವವ. ಆಯಾ ಕ್ಷಣದಲ್ಲಿ ಎದುರಾಗುವ ಸಿಚುವೇಷನ್‌ಗಳನ್ನು ಹೇಗೆ ದಾಟಿ ಮುಂದೆ ಹೋಗುವುದು ಅಂತ ಮಾತ್ರ ಯೋಚಿಸುತ್ತೇನೆ.

ರಕ್ಷಿತ್‌ ಶೆಟ್ಟಿಯ '777 ಚಾರ್ಲಿ' ವಿಡಿಯೋಗೆ ಸೂಪರ್‌ ರೆಸ್ಪಾನ್ಸ್‌! 

ಬ್ಯಾಗೇಜ್‌ ಅಲ್ಲಲ್ಲೇ ಬಿಟ್ಟು ಹೋಗುತ್ತೇನೆ

ನನಗೊಂದು ಅಲ್ಟಿಮೇಟ್‌ ಗೋಲ್‌ ಇದೆ. ಅಲ್ಲಿಗೆ ಹೋಗಬೇಕಾದರೆ ಬ್ಯಾಗೇಜ್‌ಗಳನ್ನು ಹೊತ್ತುಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಹೆಗಲಲ್ಲಿ ಭಾರವಿದ್ದರೆ ಫಾಸ್ಟಾಗಿ ಹೋಗೋಕಾಗಲ್ಲ. ಹಾಗಾಗಿ ಏನೇ ಕೆಟ್ಟಪರಿಸ್ಥಿತಿ ಎದುರಾದರೂ ಎರಡು ದಿನದ ನಂತರ ನಾನದನ್ನು ಅಲ್ಲಿಯೇ ಬಿಟ್ಟು ಮುಂದೆ ಹೋಗುತ್ತೇನೆ. ಯಾಕೆಂದರೆ ನನಗೊಂದು ಗುರಿ ಇದೆ. ಅದನ್ನು ನಾನು ತಲುಪುತ್ತೇನೆ. ಅದಕ್ಕಾಗಿ ಓದುತ್ತೇನೆ. ಮೆಡಿಟೇಷನ್‌ ಮಾಡುತ್ತೇನೆ. ನಾನು ಸ್ವಲ್ಪ ಬೇಸರ ಅನ್ನಿಸಿದರೂ ಪುಸ್ತಕ ಓದುತ್ತೇನೆ. ಮತ್ತೆ ಮೆಡಿಟೇಷನ್‌ ಮಾಡುತ್ತೇನೆ. ಅದರಿಂದ ನಾನು ಮತ್ತೆ ಲಯ ಕಂಡುಕೊಳ್ಳುತ್ತೇನೆ ಎಂಬ ನಂಬಿಕೆ ನನಗಿದೆ.

ಹತ್ತು ವರ್ಷ ಕಲಿಸಿದ ಐದು ಒಳ್ಳೆ ವಿಚಾರ

1. ಒಬ್ಬನಿಂದ ಎಷ್ಟುಸಾಧ್ಯವೋ ಅದಕ್ಕಿಂತ ಒಂದು ತಂಡವಾಗಿ ಕೆಲಸ ಮಾಡಿದರೆ ಹೆಚ್ಚು ಸಾಧನೆ ಮಾಡಲು ಸಾಧ್ಯ. ಫಾಸ್ಟಾಗಿ ಹೋಗಬಹುದು. ಒಳ್ಳೆಯ ಕೆಲಸ ಮಾಡಬಹುದು.

2. ಯಾರಿಗೂ ಡಿಪೆಂಡ್‌ ಆಗಬೇಡಿ. ನಿಮ್ಮ ಬದುಕನ್ನು ನಿಮಗೆ ಬೇಕಾದಂತೆ ನೀವೇ ಡಿಸೈನ್‌ ಮಾಡಬೇಕು. ನಿಮ್ಮ ಅವಕಾಶ ನೀವೇ ಸೃಷ್ಟಿಸಿಕೊಳ್ಳಬೇಕು.

3. ಸೋಲು, ಗೆಲುವು ಅನ್ನುವುದೆಲ್ಲಾ ಇಲ್ಲ. ಆ ಕ್ಷಣದಲ್ಲಿ ಸೋಲು, ಗೆಲುವು ಅನ್ನಿಸಬಹುದಷ್ಟೇ. ಆಮೇಲೆ ತಿರುಗಿ ನೋಡಿದರೆ ಪ್ರತೀ ಗೆಲುವು ನಿಮ್ಮಲ್ಲಿ ಉತ್ಸಾಹ ತುಂಬಿರುತ್ತದೆ. ಪ್ರತೀ ಸೋಲು ಪಾಠ ಕಲಿಸಿರುತ್ತದೆ. ಇದು ಗೊತ್ತಿದ್ದರೆ ಸೋಲು, ಗೆಲುವಿನ ಜಂಜಾಟದಿಂದ ತಪ್ಪಿಸಿಕೊಳ್ಳಬಹುದು. ಹಾಗಾಗಿ ಬೀ ಹ್ಯಾಪಿ.

4. ಏನೇ ಮಾಡಿ ಅದನ್ನು ಅತ್ಯಂತ ಶ್ರದ್ಧೆಯಿಂದ ಮಾಡು.

5. ಕನಸು ಕಾಣುವುದಿದ್ದರೆ ದೊಡ್ಡ ಕನಸನ್ನೇ ಕಾಣು.

ನದಿಯಂತೆ ಹರಿಯುತ್ತಾ ಬಂದೆ

ನದಿಗೆ ಅಣೆಕಟ್ಟು ಬಂದಾಗ ಒಂದು ಸಪ್ರ್ರೈಸ್‌. ಯಾರೋ ನನ್ನನ್ನು ತಡೆಯುತ್ತಿದ್ದಾರೆ ಅಂತ. ತಡೆಯದೇ ಇದ್ದರೆ ಹರಿಯುತ್ತಾ ಇರುತ್ತದೆ. ಹಾಗೆ ನನ್ನ ಬದುಕಲ್ಲಿ ನನ್ನ ಹರಿವನ್ನು ತಡೆಯುವಂತಹ ಯಾವುದೇ ಸರ್ಪೈಸ್‌ ಬಂದಿಲ್ಲ. ನಾನು ಹರಿಯುತ್ತಾ ಬಂದಿದ್ದೇನೆ ಇಲ್ಲಿಯವರೆಗೆ.

ಕಲಿಕೆ ಜಾರಿಯಲ್ಲಿದೆ

ನಾನು ನನ್ನಲ್ಲಿ ಸರಿ ಮಾಡಬೇಕಾದ ಅನೇಕ ವಿಚಾರಗಳಿವೆ. ನನ್ನ ತಪ್ಪುಗಳು ನನಗೆ ಗೊತ್ತಿದೆ. ನಾನು ಆ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಹೋದಾಗ ಮಾತ್ರ ನಾನು ಬೇರೆಯವರಿಗೆ ಸ್ಫೂರ್ತಿ ಅನ್ನಿಸಬಹುದು. ನಾನು ಇನ್ನೂ ಕಲಿಯುತ್ತಿದ್ದೇನೆ.

ಜಸ್ಟ್‌ ಡೂ ಇಟ್‌

ಒಂದು ಒಳ್ಳೆಯ ಸ್ಕಿ್ರಪ್ಟ್‌ ಮಾಡಿಕೊಂಡು 5ಡಿ ಕ್ಯಾಮೆರಾದಲ್ಲಿ ಸಿನಿಮಾ ಮಾಡಬಹುದು ಈಗ. ಸಿನಿಮಾ ಚೆನ್ನಾಗಿದ್ದರೆ ಯೂಟ್ಯೂಬ್‌ಗೆ ಬಂದ ಒಂದೇ ದಿನದಲ್ಲಿ ಅವಕಾಶ

ಜಾಸ್ತಿಯಾಗುತ್ತದೆ. ಓಟಿಟಿಯವರು ಕೂಡ ಚೆನ್ನಾಗಿರುವ ಸಿನಿಮಾ ತೆಗೆದುಕೊಳ್ಳುತ್ತಾರೆ. ನಾವು 10 ವರ್ಷದ ಹಿಂದೆಯೇ 10, 20 ಸಾವಿರದಲ್ಲಿ ಒಂದೂವರೆ ಸಿನಿಮಾ ಮಾಡಿದ್ದೆವು. ಆಗ ನಮಗೆ ಸಾಫ್ಟ್‌ವೇರ್‌ ಫ್ರೀ ಸಿಗುತ್ತಿರಲಿಲ್ಲ. ನಮಗೆ ಬೇಕಾಗಿದ್ದ ಸಾಫ್ಟ್‌ ವೇರ್‌ಗೆ ಎರಡೂವರೆ ಲಕ್ಷ ಇತ್ತು. ಈಗ ಅದೆಲ್ಲಾ ಫ್ರೀ ಸಿಗುತ್ತದೆ. ಟೆಕ್ನಾಲಜಿ ಲ್ಯಾಪ್‌ ಟಾಪ್‌ನಲ್ಲಿದೆ. ಅವಕಾಶ ಜಾಸ್ತಿಯೇ ಇದೆ. ಹಾಗಾಗಿ ಸಿನಿಮಾ ಮಾಡುವ ಆಸೆ ಇರುವವರು ಯೋಚನೆ ಮಾಡಬಾರದು. ಜಸ್ಟ್‌ ಡೂ ಇಟ್‌.

click me!