
ಕೊರೋನಾದಿಂದ ಚಿತ್ರರಂಗ ಬಹುತೇಕ ಬಾಗಿಲು ಮುಚ್ಚಿದೆ. ಇಡೀ ಉದ್ಯಮ ಸ್ತಬ್ದವಾಗಿದ್ದು ಕಾರ್ಮಿಕರು, ತಂತ್ರಜ್ಞರು, ಕಲಾವಿದರು ಸೇರಿದಂತೆ ಚಿತ್ರರಂಗವನ್ನೇ ನಂಬಿಕೊಂಡಿರುವ ಹಲವರಿಗೆ ಕೆಲಸ ಇಲ್ಲದಂತಾಗಿದೆ. ಹೀಗೆ ಚಿತ್ರರಂಗ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಶಿವರಾಜ್‌ಕುಮಾರ್ ಸಾರಥ್ಯದಲ್ಲಿ ಈ ಸಭೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಶಿವಣ್ಣ 58 - ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬ ಸಂಭ್ರಮ!
ಇಂಥ ಪರಿಸ್ಥಿತಿಯಲ್ಲಿ ಮತ್ತೆ ಶೂಟಿಂಗ್ ಆರಂಭವಾಗಿ ಚಿತ್ರರಂಗ ಚೇತರಿಸಿಕೊಳ್ಳುವಾಗ ಕಲಾವಿದರು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ನಿರ್ಮಾಪಕರಿಗೆ ಆರ್ಥಿಕ ಬಲ ತುಂಬಬೇಕು ಎಂದು ಲಾಕ್‌ಡೌನ್ ಆರಂಭದಲ್ಲೇ ಹೇಳಿಕೆ ಕೊಟ್ಟಿದ್ದು ಕೂಡ ಶಿವರಾಜ್‌ಕುಮಾರ್ ಅವರೇ. ಅವರ ಈ ಹೇಳಿಕೆಯನ್ನು ನಿರ್ಮಾಪಕರು ಸ್ವಾಗತಿಸಿದರೆ, ಕಲಾವಿದರು ಬೆಂಬಲಿಸಿದರು.
ಸಭೆಯಲ್ಲಿ ಚಿತ್ರರಂಗದ ಪುನಶ್ಚೇತನಕ್ಕೆ ಏನೆಲ್ಲ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ. ಜತೆಗೆ ಶಿವರಾಜ್‌ಕುಮಾರ್ ಅವರನ್ನು ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳುವಂತೆ ನಾವು ಅವರಲ್ಲಿ ಕೇಳಿಕೊಳ್ಳುವ ಉದ್ದೇಶ ಕೂಡ ಇದೆ. ಯಾಕೆಂದರೆ ಉದ್ಯಮಕ್ಕೆ ನಾಯಕತ್ವ ಅಗತ್ಯವಾಗಿ ಬೇಕಿದೆ.- ಪ್ರವೀಣ್ ಕುಮಾರ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ
ಮೊದಲಿನಿಂದಲೂ ಚಿತ್ರರಂಗದಲ್ಲಿ ಏನೇ ಸಮಸ್ಯೆಗಳು ಉಂಟಾದರೂ ಎಲ್ಲರು ನೋಡುತ್ತಿದ್ದು ಡಾ. ರಾಜ…ಕುಮಾರ್ ಅವರ ಮನೆಯ ಕಡೆ. ಈಗಲೂ ಚಿತ್ರರಂಗದಲ್ಲಿ ಏನೇ ವಿವಾದ, ಸಮಸ್ಯೆಗಳು ಎದುರಾದರೂ ಶಿವರಾಜ… ಕುಮಾರ್ ಏನಾದರೂ ಹೇಳುತ್ತಾರೆಯೇ ಎಂದು ನೋಡುವವರು ಹೆಚ್ಚು. ಹೀಗಾಗಿ ಕೊರೋನಾ ಕಾರಣದಿಂದ ಕಂಗೆಟ್ಟಿರುವ ಚಿತ್ರರಂಗಕ್ಕೆ ಪುನಶ್ಚೇತನದ ಅಗತ್ಯ ಇದ್ದು, ಆ ನಿಟ್ಟಿನಲ್ಲಿ ಚಿತ್ರರಂಗದ ಪ್ರಮುಖರು ಸಭೆ ನಡೆಸುವ ಮೂಲಕ ಚಿತ್ರರಂಗಕ್ಕೆ ನಾಯಕನ ಸ್ಥಾನ ತುಂಬುವ ನಿಟ್ಟಿನಲ್ಲಿ ಶಿವರಾಜ್‌ಕುಮಾರ್ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು.
ಅಲ್ಲದೆ ಡಾ.ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್ ಅವರಂತಹ ದಿಗ್ಗಜರ ನಂತರ ಚಿತ್ರರಂಗಕ್ಕೆ ಸಾರಥ್ಯ ವಹಿಸಿಕೊಳ್ಳುವ ಶಕ್ತಿ ಇರುವುದು ಶಿವರಾಜ್‌ಕುಮಾರ್ ಅವರಿಗೆ ಎನ್ನುವ ಮಾತುಗಳು ಮೊದಲಿನಿಂದಲೂ ಚಿತ್ರರಂಗದಲ್ಲಿ ಕೇಳಿಬರುತ್ತಿತ್ತು.
ಈ ನಿಟ್ಟಿನಲ್ಲಿ ಶುಕ್ರವಾರ ಬೆಂಗಳೂರಿನ ನಾಗವಾರದಲ್ಲಿರುವ ತಮ್ಮ ನಿವಾಸದಲ್ಲಿ ಚಿತ್ರರಂಗದ ಪ್ರಮುಖರ ಸಭೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ. ಇಲ್ಲಿ ಏನೆಲ್ಲ ಚರ್ಚೆ ನಡೆಯುತ್ತದೆ, ಯಾವ ರೀತಿಯ ನಿರ್ಧಾರಗಳು ತೆಗೆದುಕೊಳ್ಳಲಾಗುತ್ತದೆ ಎಂಬುದು ಇಂದು ಗೊತ್ತಾಗಲಿದೆ.
ಸಾ.ರಾ.ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೆಸಿಎನ್ ಚಂದ್ರಶೇಖರ್, ಕೆ.ಪಿ.ಶ್ರೀಕಾಂತ್, ಕಾರ್ತಿಕ್ ಗೌಡ, ಜಯಣ್ಣ, ಉಮಾಪತಿ ವಾಣಿಜ್ಯ ಮಂಡಳಿ ಅಧ್ಯಕ್ಷರು, ವೀರೇಶ್ ಚಿತ್ರಮಂದಿರದ ಮಾಲೀಕ ಕೆ.ವಿ.ಚಂದ್ರಶೇಖರ್, ಒಕ್ಕೂಟದ ಅಧ್ಯಕ್ಷ ಅಶೋಕ್ ಸೇರಿದಂತೆ 20 ಮಂದಿ ಸೇರಿದಂತೆ ನಟರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಕೊರೋನಾ ಕಾರಣಕ್ಕೆ ಚಿತ್ರರಂಗ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದೆ. ಈ ಕುರಿತು ನಿಮ್ಮೊಂದಿಗೆ ಮಾತನಾಡಬೇಕಿದೆ ಎಂದು ಚಿತ್ರರಂಗದಿಂದ ಹಲವರು ನನ್ನ ಬಳಿ ಕೇಳಿದರು. ನಾನು ಕೂಡ ಇದಕ್ಕೆ ಒಪ್ಪಿದ್ದೇನೆ. ಚಿತ್ರರಂಗದ ಸಮಸ್ಯೆಗಳನ್ನು ಚರ್ಚೆ ಮಾಡಲು ನಮ್ಮ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಇಲ್ಲಿ ಯಾರು ನಾಯಕತ್ವ ಎನ್ನುವುದಕ್ಕಿಂತ ಚಿತ್ರರಂಗಕ್ಕೆ ಏನು ಕೆಲಸ ಆಗಬೇಕಿದೆ ಎನ್ನುವುದಕ್ಕೆ, ಸಮಸ್ಯೆಗಳ ಪರಿಹಾರಕ್ಕೆ ನಾವು ಸಭೆ ಸೇರುತ್ತಿದ್ದೇವೆ. -ಶಿವರಾಜ… ಕುಮಾರ್, ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.