'ಪ್ರೇಮದ ಊರಲಿ' ಯಶಸ್ಸಿನ ಹಿಂದಿನ 10 ಮುಖ್ಯ ಅಂಶಗಳು: ಮಿಸ್ ಮಾಡದೇ ಈ ವಿಚಾರ ತಿಳ್ಕೊಳ್ಳಿ!

Published : Oct 09, 2026, 09:00 AM IST
Premada Oorali Success

ಸಾರಾಂಶ

‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಯಶಸ್ಸಿನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಮನೋಜ್ ಕುಮಾರ್ ಚಿತ್ರದ ಗೆಲುವಿನ ಹಿಂದಿನ 10 ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. ಕಥೆಯ ಹುಟ್ಟು, ನಿರ್ಮಾಪಕರ..

1. ಚಿತ್ರದ ಆರಂಭ

ಅಕ್ಷಿ ಸಿನಿಮಾ ಮಾಡಿದ ನಂತರ ನನಗೆ ಅದೇ ರೀತಿಯ ಕತೆಗಳನ್ನು ಮಾಡುವಂತೆ ಅವಕಾಶಗಳು ಬರುತ್ತಿದ್ದವು. ನಾನೂ ಕೂಡ ಬೇರೆ ರೀತಿಯ ಸಿನಿಮಾಗಳನ್ನು ಮಾಡುವುದರಲ್ಲಿ ಫೈಲ್ಯೂರ್‌ ಆಗುತ್ತಿದ್ದೇನಾ ಅನಿಸಿತು. ಜನರಿಗೆ ತಲುಪುವಂತಹ ಸಿನಿಮಾ ಮಾಡೋಣ ಅಂದುಕೊಳ್ಳುತ್ತಿದ್ದಾಗ ಒಂದು ಊರು, ಅಲ್ಲಿ ಯಜಮಾನ ರೀತಿಯ ಮನೆ. ತಾಯಿ ಇಲ್ಲ. ಅಪ್ಪ-ಮಗ. ಮಗನಿಗೆ ಮದುವೆ ಆಗಿಲ್ಲ. ಶ್ರೀಮಂತನಾಗಿದ್ದರು ಆತನಿಗೆ ಹೆಣ್ಣು ಸಿಗುತ್ತಿಲ್ಲ ಅನ್ನೋದು ಕತೆಯಾಗಿತ್ತು. ಹಳ್ಳಿ ಕತೆಗಳೆಂದಾಗ ಬರೀ ಕಾಮಿಡಿ ಸಿನಿಮಾಗಳೇ ಬರುತ್ತಿವೆ. ನಿಜವಾದ ಹಳ್ಳಿ ಬೇಕು ಎಂದುಕೊಂಡಾಗ ಹುಟ್ಟಿಕೊಂಡ ಕತೆ ಇದು.

2. ನಿರ್ಮಾಪಕರ ಹುಡುಕಾಟ

ಒಂದು ವರ್ಷ ಸಮಯ ತೆಗೆದುಕೊಂಡು ಕತೆ ಮಾಡಿಕೊಂಡೆ. ಆದರೆ, ನಿರ್ಮಾಪಕರು ಅಂತ ಬಂದಾಗ ಅದೇ ಒಂದು ಅಲೆದಾಟವೇ ಆಗಿತ್ತು. ಒಂದು ಹಂತದಲ್ಲಿ ನಾನು ಡಿಪ್ರೆಶನ್‌ಗೆ ಹೋಗಿಬಿಟ್ಟೆ. ನನ್ನ ಈ ಸಂಕಷ್ಟಗಳನ್ನು ನೋಡಕ್ಕೆ ಆಗದೆ ‘ಅಕ್ಷಿ’ ಚಿತ್ರದ ಸಹ ನಿರ್ಮಾಪಕ ದೇವೇಂದ್ರ ಅವರು ನನ್ನ ಕಷ್ಟ ನೋಡಲಿಕ್ಕಾದೆ ‘ಆಯ್ತು ನಿನಗೊಂದು ಸಿನಿಮಾ ಮಾಡುತ್ತೇನೆ’ ಅಂತ ಬಂದರು.

3. ಕಥೆಯ ಒಪ್ಪಿಗೆ

ಈ ಕತೆಯನ್ನು ನಿರ್ಮಾಪಕರು ಕೇಳಿದ ಕೂಡಲೇ ಒಪ್ಪಿಕೊಂಡರು. ಇದು ರೂಟೆಡ್ ಸ್ಟೋರಿ. ಇದರಲ್ಲಿ ಭಾವನೆಗಳು ತುಂಬಾ ಚೆನ್ನಾಗಿವೆ. ಪ್ರತಿಯೊಬ್ಬರು ಯಾವುದೋ ಒಂದು ಹಂತದಲ್ಲಿ ಫೇಸ್‌ ಮಾಡುತ್ತಿರುವ ಪಾತ್ರಗಳು, ಭಾವನೆಗಳೇ ಚಿತ್ರದಲ್ಲಿವೆ ಎಂದರು.

4. ಕಲಾವಿದರ ಸಮ್ಮತಿ

ನನಗೆ ನಾಯಕ, ನಾಯಕಿಯರನ್ನು ಒಪ್ಪಿಸೋದು ಕಷ್ಟ ಅನಿಸಲಿಲ್ಲ. ಹೊಸಬರೇ ಹಾಕಿಕೊಳ್ಳಬೇಕು, ಲಿಮಿಟೆಡ್‌ ಬಜೆಟ್‌ನಲ್ಲಿ ಸಿನಿಮಾ ಮಾಡಬೇಕು ಅಂದುಕೊಂಡಿದ್ದು. ಲಿಮಿಟೆಡ್‌ ಅಂದರೆ ತುಂಬಾ ಕಡಿಮೆ ಅಲ್ಲ. ಆದರೆ, ರಂಗಾಯಣ ರಘು ಅವರನ್ನು ಒಪ್ಪಿಸೋದು ಹೇಗೆ ಎನ್ನುವ ಸವಾಲು, ಭಯ ಎದುರಾಯಿತು. ಯಾಕೆಂದರೆ ಕತೆ ಮತ್ತು 25 ದಿನ ಒಂದೇ ಹಂತದಲ್ಲಿ ಕಾಲ್‌ ಶೀಟ್‌ಬೇಕಿತ್ತು. ಇದು ಸಾಧ್ಯವಾ ಎಂದು ಯೋಚನೆಯಲ್ಲೇ ರಂಗಾಯಣ ರಘು ಅವರಿಗೆ ಕತೆ ಹೇಳಿದಾಗ ಸಾಧ್ಯವಾಯಿತು.

5. ಶೂಟಿಂಗ್ ಸಮಯ

ನಾವು ಹೊಸ ಪ್ರೊಡಕ್ಷನ್‌. ನಾನೂ ಕೂಡ ಹೊಸ ನಿರ್ದೇಶಕ. ಇಡೀ ನಮ್ಮ ತಂಡವೇ ಹೊಸದು. ಹೀಗಾಗಿ ಕೆಲವು ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ, ಎಲ್ಲಕ್ಕಿಂತ ಮೀರಿದ ಸಮಸ್ಯೆ ಎಂದರೆ ಮಳೆ. ಪ್ರತಿ ದಿನ ಮಳೆ ಆಗುತ್ತಿತ್ತು. ಸೀನ್‌ ಶೂಟಿಂಗ್‌ ಅಂತ ಹೋಗುವಾಗಲೇ ಮಳೆ. ಬೆಳಗ್ಗೆ ಲೊಕೇಶನ್‌ ನೋಡಿಕೊಂಡು ಬಂದರೆ ರಾತ್ರಿ ಪೂರ್ತಿ ಮಳೆ. ಕಲಾವಿದರ ಡೇಟ್ಸ್‌ ಹೊಂದಿಸೋದೇ ದೊಡ್ಡ ಕೆಲಸ ಆಗಿತ್ತು.

6. ನಿರೀಕ್ಷೆಯಂತೆ ಸಿನಿಮಾ ಬರುತ್ತೋ, ಇಲ್ಲವೋ ಎನ್ನುವ ಭಯ, ಸಂಕಟ, ತಲ್ಲಣ

ಅದು ಇರಲಿಲ್ಲ. ನಾನು ನಮ್ಮ ಗುರುಗಳು ಓಂ ಪ್ರಕಾಶ್‌ ರಾವ್‌ ಜೊತೆಗೆ ಕೆಲಸ ಮಾಡಿದ್ದರಿಂದ ನನಗೆ ಸಿನಿಮಾ, ಕೆಲಸದ ಮೇಲೆ ನಂಬಿಕೆ ಇತ್ತು. ನಾನು ಮೊದಲೇ ಸಾಂಗ್ಸ್‌ ರೆಕಾರ್ಡ್‌ ಮಾಡಿಕೊಂಡಿದ್ದೆ. ಸಂಗೀತ ರೆಡಿ ಇತ್ತು. ಹಾಡುಗಳನ್ನು ಕೇಳುತ್ತಿದ್ದಾಗಲೇ ನಂಬಿಕೆ ಬಲವಾಗುತ್ತಿತ್ತು. ಜೊತೆಗೆ ಸಿನಿಮಾ ಹೀಗೆ ಬರುತ್ತದೆ, ಮ್ಯೂಸಿಕಲ್ಲಾಗಿ ಬರಬೇಕು ಅನ್ನೋ ಕ್ಲಾರಿಟಿ ಇತ್ತು. ಆದರೆ, ಸಿನಿಮಾನ ಜತೆ ಹೇಗೆ ತೆಗೆದುಕೊಳ್ಳುತ್ತಾರೆ, ಹೇಗೆ ರೀಚ್‌ ಮಾಡಿಸಬೇಕು ಅನ್ನೋ ಭಯ ಇತ್ತು.

7. ಬಿಡುಗಡೆಯ ಸಂದಿಗ್ಧಗಳು

ಸಂದಿಗ್ಧಗಳು ಅನ್ನೋದಕ್ಕಿಂತ ದೊಡ್ಡ ಸಮಸ್ಯೆಗಳೇ ಎದುರಾಗುತ್ತವೆ. ಯಾಕೆಂದರೆ ನಾವು ಹೊಸಬರು. ಹೀಗಾಗಿ ಕೇಳಿದಷ್ಟು ಥಿಯೇಟರ್‌ಗಳು ಸಿಗಬೇಕು ಅಂತ ನಿರೀಕ್ಷೆ ಮಾಡಕ್ಕಾಗಲ್ಲ. ಅವತ್ತೇ ಕನ್ನಡದ ಆರೇಳು ಸಿನಿಮಾಗಳಿದ್ದವು. ತೆಲುಗಿನ ದೊಡ್ಡ ಸಿನಿಮಾ ‘ಪ್ಯಾರಡೈಸ್‌’ ಇತ್ತು. ಹೀಗಾಗಿ ನಾವು ಕೇಳಿದಷ್ಟು ಚಿತ್ರಮಂದಿರಗಳು ಸಿಗಲಿಲ್ಲ. ಅದೇ ನಮಗೆ ಒಳ್ಳೆಯದಾಗಿತ್ತು. ಕಡಿಮೆ ಶೋಗಳಿದ್ದರಿಂದ ಒಂದೇ ಕಡೆ ಜನ ಬಂದರು. 10 ಜನ ಹತ್ತು ಕಡೆ ಕೂಗಕ್ಕೂ 100 ಜನ ಒಂದೇ ಕಡೆ ಕೂಗಕ್ಕೂ ಒಂದು ವೈಬ್ರೇಷನ್‌ ಇರುತ್ತಲ್ಲ, ಅದೇ ಇಡೀ ಕರ್ನಾಟಕಕ್ಕೆ ತಲುಪಿತು. ಆ ಹತ್ತು ಜನರ ಮಾತು ಇವತ್ತು 700 ಶೋಗಳನ್ನು ಪೂರೈಸುವಂತಾಗಿದೆ.

8. ಕೊನೆಗೂ ಬಿಡುಗಡೆಯಾದ ದಿನದ ಅನುಭವ

ನಾನು ಬೆಳಗ್ಗೆ ಎದ್ದು ಪ್ರಸನ್ನ ಚಿತ್ರಮಂದಿರಕ್ಕೆ ಹೋದೆ. ನಮ್ಮ ತಂಡವರನ್ನೂ ಕರೆದಿದ್ದೆ. ಥಿಯೇಟರ್‌ ಬಳಿ ಹೋದಾಗ ಒಬ್ಬರೇ ಒಬ್ಬರು ಕಾಣಲಿಲ್ಲ. ಪ್ರೊಜೆಕ್ಟರ್‌ಗೆ ಪೂಜೆ ಮಾಡಿಕೊಂಡು ಕೆಳಗೆ ಇಳಿಯುತ್ತಿದ್ದಾಗ 10, 20, 30, 50 ಅಂತ ಜನ ಬರುತ್ತಿದ್ದರು. ಟಿಕೆಟ್‌ ಕೊಡುವವರು ಏನ್‌ ಸಾರ್‌ ಇವರು ನಿಮ್‌ ಕಡೆಯವರಾ ಅಂದ್ರು ಇಲ್ಲಾ ಅಂದೆ. ನಾನೇ ಅಚ್ಚರಿಯಿಂದ ನೋಡುತ್ತಾ ನಿಂತು ಬಿಟ್ಟೆ. ನೋಡ ನೋಡುತ್ತಿದ್ದಂತೆಯೇ ಟಿಕೆಟ್‌ ಕೌಂಟರ್‌ ಮುಂದೆ ಜನರ ಸಾಲು ಕಾಣಿಸಿಕೊಂಡಿತು. ಹೇಗೆ ಬಂದರು ಇವರೆಲ್ಲ ಅಂತ ನನಗೆ ಪ್ರಶ್ನೆ. ಅವರನ್ನು ಕೇಳಿದಾ, ಚಿತ್ರದ ಹಾಡು ಕೇಳಿ ಬಂದ್ವಿ ಅಂದರು. ಪ್ರೀಮಿಯರ್‌ ಶೋಗಳ ರಿವ್ಯೂ ನೋಡಿ ಬಂದ್ವಿ ಅಂದ್ರು. ‘ನನ್ನ ಇಷ್ಟು ವರ್ಷಗಳಲ್ಲಿ ಹೊಸಬರ ಸಿನಿಮಾಗೆ ಮೊದಲ ದಿನ ಮೊದಲ ಶೋಗೆ ಇಷ್ಟು ಜನ ಬಂದಿದ್ದು ನೋಡಿದ್ದು ಇದೇ ಮೊದಲು’ ಅಂದರು ಥಿಯೇಟರ್‌ನವರು. ನಾನು ನಿಟ್ಟುಸಿರುಬಿಟ್ಟೆ.

9. ಗೆಲುವಿನ ಆರಂಭ

ಬಿಡುಗಡೆಯ ದಿನವೇ ಜನ ಬರುತ್ತಿದ್ದರು. ಶನಿವಾರದ ಹೊತ್ತಿಗೆ ಕೆಲವು ಕಡೆ ಹೌಸ್‌ಫುಲ್‌ ಆಗುತ್ತಿತ್ತು. ಭಾನುವಾರ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದರೂ ನಾನು ಸೋಮವಾರ ಏನಾಗುತ್ತದೆ ಎನ್ನುವ ಯೋಚನೆಯಲ್ಲಿದ್ದೆ. ಯಾವಾಗ ಸೋಮವಾರವೂ ಹೌಸ್‌ಫುಲ್‌ ಅಂತ ಗೊತ್ತಾಯಿತೋ ಆಗ ನನಗೆ ಗೆಲುವಿನ ಖಾತರಿ ಸಿಕ್ಕಿತು. ಅಂದರೆ ಸಿನಿಮಾ ಬಿಡುಗಡೆ ಆಗಿ ನಾಲ್ಕನೇ ದಿನಕ್ಕೆ ನನಗೆ ಗೆಲುವಿನ ಸಂಭ್ರಮ ಆರಂಭವಾಯಿತು.

10. ಮುಂದಿನ ಗುರಿ

ಪ್ರೇಮದ ಊರಲಿ ಚಿತ್ರದ ಸಕ್ಸಸ್‌ನಲ್ಲಿ ಇದ್ದಕ್ಕಿದಂತೆ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವುದು ತಪ್ಪಾಗುತ್ತದೆ. ಹೀಗಾಗಿ ನನ್ನ ಮುಂದಿನ ಯೋಜನೆಗಳೇನು ಎಂಬುದನ್ನು ನೋಡಿ ನಿರ್ಧರಿಸುತ್ತೇನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರೈತನ ಪಾತ್ರಕ್ಕಾಗಿ ಹಳ್ಳಿಗೆ ಹೋಗಿ ಒಂದು ತಿಂಗಳು ರೈತನಾಗಿದ್ದೆ: ‘ಪ್ರೇಮದ ಊರಲಿ’ ಶ್ರೀ ರಾಮ್ ಸಂದರ್ಶನ
ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಡಿಂಪಲ್​ ಕ್ವೀನ್​ ರಚಿತಾ ರಾಮ್: ಏನಿದೆ ಅದರಲ್ಲಿ? ಫ್ಯಾನ್ಸ್​ ಫುಲ್​ ಖುಷ್​​