
ರಾಜೇಶ್ ಶೆಟ್ಟಿ
ನಾಲ್ವರು ಗೆಳೆಯರು ಟ್ರಿಪ್ಪಿಗೆಂದು ಯಾವುದೋ ಊರಿಗೆ ಹೋದಾಗ ದಾರಿಯಲ್ಲಿ ಶಾರ್ದೂಲ ಎಂಬ ಹೆಸರಿರುವ ಮೈಲುಗಲ್ಲು ಸಿಗುತ್ತದೆ. ಅಲ್ಲಿ ತನ್ನಿಂತಾನೇ ಕಾರು ಆಫ್ ಆಯಿತು ಅನ್ನುವುದರಿಂದ ಕತೆ ಶುರು. ಅಲ್ಲೊಂದು ಕಡೆ ಬಿದ್ದಿರುವ ಸ್ವಯಂಚಾಲಿತ ಗರಗಸ ಇವರಿಗೆ ಸಿಗುತ್ತದೆ ಎನ್ನುವುದರಿಂದ ಸಿನಿಮಾದಲ್ಲಿ ತಿರುವು.
ಅಲ್ಲಿಂದ ಮುಂದೆ ಆ ಗರಗಸದ್ದೇ ಹವಾ. ಏನೇ ಆಗಲಿ ಏನೇ ಹೋಗಲಿ ಗರ್‌ರ್‌ರ್‌ರ್‌ರ್‌ರ್ ಅಂತ ಗರಗಸದ ಸೌಂಡು ಕೇಳಿಸುತ್ತದೆ. ಮುಂದೆ ಹೋದರೂ ಗರಗಸ, ಹಿಂದೆ ಬಂದರೂ ಗರಗಸ. ನಿಜವಾಗಿ ಈ ಗರಗಸ ಹಿಡಿದವರು ಯಾರು ಅನ್ನುವ ಪ್ರಶ್ನೆಗೆ ಉತ್ತರ ದೊರಕುವುದಕ್ಕೆ ಕೊನೆಯವರೆಗೂ ಕಾಯಬೇಕು. ಅಷ್ಟರ ಮಟ್ಟಿಗೆ ಕುತೂಹಲ ಉಳಿಸಿಕೊಳ್ಳುವುದರಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಅಲ್ಲಿಯವರೆಗೆ ಗರಗಸ ಕಾಡುತ್ತದೆ. ಬೀಳಿಸುತ್ತದೆ, ಏಳಿಸುತ್ತದೆ. ಕೈ ಹಿಡಿದು ನಡೆಸುತ್ತದೆ. ಗರಗಸ ಆಫ್ ಆಗುವ ಹೊತ್ತಿಗೆ ತಲೆಯಲ್ಲಿ ಗರ್‌ರ್‌ರ್‌ರ್ ಅನ್ನುವ ಸದ್ದು ಮಾತ್ರ ಉಳಿದುಹೋಗಿರುತ್ತದೆ.
ನಿರ್ದೇಶನ: ಅರವಿಂದ ಕೌಶಿಕ್
ತಾರಾಗಣ: ಚೇತನ್‌ಚಂದ್ರ, ಕೃತ್ತಿಕಾ ರವೀಂದ್ರ, ಐಶ್ವರ್ಯಾ ಪ್ರಸಾದ್, ರವಿತೇಜ, ಮಹೇಶ್ ಸಿಧು
ರೇಟಿಂಗ್: 2
ಇಲ್ಲಿ ಕತೆ ಇದೆ. ಚಿತ್ರಕತೆ ತುಂಬಾ ಗರಗಸ ತುಂಬಿಕೊಂಡಿದೆ. ಮನಸ್ಸೇ ಎಲ್ಲದರ ಮೂಲವಯ್ಯಾ ಎಂಬ ತತ್ವವಿದೆ. ತತ್ವವು ಗೊತ್ತೇ ಆಗದೆ ಗಾಳಿಯಲ್ಲಿ ಹಾರಿಹೋಗುತ್ತದೆ. ಒಂದೊಳ್ಳೆಯ ಸಂದೇಶ ಇದೆ. ಈ ಸಂದೇಶ ಗೊತ್ತಾಗುವಾಗ ಹೊತ್ತಾಗಿರುತ್ತದೆ. ವಿನಾಕಾರಣ ಹೆದರಿಸುವ ಪ್ರಯತ್ನದ ಸದ್ದುಗಳು, ಪಾತ್ರಗಳಿಗೆ ಪ್ರಾಪ್ತವಾಗದ ಘನತೆ, ಸಮರ್ಥನೆ ಬೇಡುವ ದೃಶ್ಯಗಳು, ಬಿಗುವಿಲ್ಲದ ಬರವಣಿಗೆ, ಮುಂದೆಯೇ ಹೋಗದ ದೋಣಿ ಎಲ್ಲವೂ ಸೇರಿ ಶಾರ್ದೂಲವನ್ನು ಕಷ್ಟಕ್ಕೆ ದೂಡದಂತೆ ಮಾಡಿ ದೂಡಿಹಾಕಿದೆ. ಹೆದರಿಸಲೇಬೇಕು ಅನ್ನುವ ಕಾರಣಕ್ಕೆ ಬೊಬ್ಬೆ ಹೊಡೆದು ಹೆದರಿಸಲು ಹೋಗಬಾರದು. ಕತೆಯನ್ನು ಗೌರವಿಸದಿದ್ದರೆ ಗರಗಸ ಮಾತ್ರ ಕೊನೆಯಲ್ಲಿ ಉಳಿಯುವುದು. ಗರಗಸಕ್ಕೆ ವ್ಯಕ್ತಿ, ಕಾಲ, ದೇಶ ಯಾವುದೂ ಪರಿಗಣನೆಗೆ ಬರುವುದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.