ಬರೀ 14 ಸಿನಿಮಾ ಮಾಡಿದೆ ಅನ್ನುವ ಕೊರಗಿದೆ: ಗಿರೀಶ್‌ ಕಾಸರವಳ್ಳಿ

By Kannadaprabha NewsFirst Published Dec 4, 2019, 8:58 AM IST
Highlights

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾದ ಕಹಳೆ ಮೊಳಗಿಸಿದವರ ಪೈಕಿ ಕನ್ನಡದ ಹೆಸರಾಂತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಒಬ್ಬರು. ಅವರಿಗೀಗ 70ರ ವಸಂತ. ಡಿಸೆಂಬರ್‌ 3 ರಂದು ಅವರು 69ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡು 70ರ ಹೊಸ್ತಿಲಿಗೆ ಕಾಲಿಟ್ಟರು.

ದೇಶಾದ್ರಿ ಹೊಸ್ಮನೆ

ಸಾಹಿತ್ಯಾಭಿರುಚಿಯ ಜತೆಗೆ ತಮ್ಮದೇ ಆದರ್ಶಗಳನ್ನಿಟ್ಟುಕೊಂಡು ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಕಾಸರವಳ್ಳಿ. ಸದಾ ಸಿನಿಮಾವೇ ಎನ್ನುತ್ತಾ ಬಂದಿದ್ದ ಅವರು ಸತತ 9 ವರ್ಷಗಳ ವಿರಾಮದ ನಂತರ ‘ಇಲ್ಲಿರಲಾರೆ.. ಅಲ್ಲಿಗೆ ಹೋಗಲಾರೆ’ ಚಿತ್ರ ನಿರ್ದೇಶಿಸಿದ್ದಾರೆ. ಇದು ಜಯಂತ್‌ ಕಾಯ್ಕಿಣಿ ಅವರ ‘ಹಾಲಿನ ಮೀಸೆ’ ಕತೆ ಆಧರಿಸಿದ ಚಿತ್ರ. ಚಿತ್ರೀಕರಣ ಮುಗಿಸಿ, ಸೆನ್ಸಾರ್‌ಗೆ ರೆಡಿ ಆಗಿದೆ. ಹುಟ್ಟುಹಬ್ಬದ ನೆಪದಲ್ಲಿ ಅವರ ಸಿನಿಜರ್ನಿ, ಖಾಸಗಿ ಬದುಕಿನ ಕುರಿತು ಮಾತುಕತೆ.

ಏಳು ವರ್ಷಗಳ ನಂತರ ಸಿನಿಮಾ ನಿರ್ದೇಶನಕ್ಕಿಳಿದ ಗಿರೀಶ್‌ ಕಾಸರವಳ್ಳಿ!

70ನೇ ವಸಂತಕ್ಕೆ ಕಾಲಿಟ್ಟಿದ್ದೀರಿ, ಈ ಸಂಭ್ರಮ ಹೇಗಿದೆ?

ನಾನು ಯಾವತ್ತಿಗೂ ಹುಟ್ಟು ಹಬ್ಬ ಆಚರಿಸಿಕೊಂಡು ಬಂದವನಲ್ಲ. ಆದ್ರೆ ಮನೆಯಲ್ಲಿದ್ದಾಗ ಮಕ್ಕಳು ಸಣ್ಣಪುಟ್ಟಸಂಭ್ರಮಕ್ಕೆ ಕಾರಣವಾಗುತ್ತಿದ್ದರು. ಕೇಕ್‌ ಕತ್ತರಿಸಿಯೋ, ಇಲ್ಲವೇ ಎಲ್ಲರೂ ಸೇರಿಕೊಂಡು ಊಟ ಮಾಡುವುದರಲ್ಲೋ ಬತ್‌ರ್‍ಡೇ ಸಂಭ್ರಮ ಇದ್ದೇ ಇರುತ್ತಿತ್ತು. ಈಗ ಅದಕ್ಕೂಂದು ಹೊಸ ಸ್ವರೂಪ ಸಿಕ್ಕಿದೆ. ಹುಟ್ಟುಹಬ್ಬದ ನೆಪಕ್ಕೆ ಡಿಸೆಂಬರ್‌ 7 ಮತ್ತು 8 ರಂದು ಬೆಂಗಳೂರಿನ ಸುಚಿತ್ರಾ ಫಿಲ್ಮ ಸೊಸೈಟಿಯಲ್ಲಿ ‘ಘಟಶ್ರಾದ್ಧ’ ಮತ್ತು ‘ಕೂರ್ಮಾವತಾರ ’ ಸಿನಿಮಾ ಹಾಗೂ ‘ವಿಧಾನ ಸೌಧ’ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ಇದೆ ಎನ್ನುವುದಷ್ಟೇ ಸ್ಪೆಷಲ್‌.

ಇಷ್ಟುವರ್ಷಗಳ ನಿಮ್ಮ ಸಿನಿಮಾ ಜರ್ನಿ ಮತ್ತು ಖಾಸಗಿ ಬದುಕಿನ ಬಗ್ಗೆ ಹೇಳೋದಾದರೆ..

ವೃತ್ತಿ ಬದುಕು, ಖಾಸಗಿ ಬದುಕು ಎರಡರಲ್ಲೂ ನನಗೆ ತೃಪ್ತಿ ಇದೆ. ಸಾಹಿತ್ಯಾಭಿರುಚಿಯ ಮೂಲಕ ನನ್ನದೇ ಆದರ್ಶಗಳನ್ನಿಟ್ಟುಕೊಂಡು ಈ ಕ್ಷೇತ್ರಕ್ಕೆ ಬಂದವನು ನಾನು. ಆರಂಭದಿಂದ ಈವರೆಗೂ ಅದರಲ್ಲಿ ನಾನು ಕಾಂಪ್ರೊಮೈಸ್‌ ಆಗಿಲ್ಲ ಎನ್ನುವುದು ನನ್ನ ಭಾವನೆ. ಹಾಗೆಯೇ ಯಾವುದೇ ಕಾಂಟ್ರೊವರ್ಸಿ ಕೂಡ ಮಾಡಿಕೊಂಡಿಲ್ಲ. ವೃತ್ತಿ ಬದುಕಿನಲ್ಲಿ ಹಾಗೊಂದು ನೆಮ್ಮದಿ, ತೃಪ್ತಿ ಸಿಕ್ಕಿದೆ.

ಸಿನಿಮಾ ಜರ್ನಿಯಲ್ಲಿ ಇನ್ನೇನಾದರೂ ಮಾಡಬೇಕಿತ್ತು ಅಂತ ಅನ್ನಿಸಿದ್ದಿಲ್ವಾ?

ಸಿನಿಮಾ ನಿರ್ದೇಶನದ ಇಷ್ಟುವರ್ಷದ ಪಯಣದಲ್ಲಿ ಬರೀ 14 ಸಿನಿಮಾಗಳು ಕಮ್ಮಿ ಆಯ್ತು ಎನ್ನುವುದು ನನಗಿರುವ ಕೊರಗು. ಮನಸ್ಸು ಮಾಡಿದ್ದರೆ ಜಾಸ್ತಿ ಆಗುತ್ತಿದ್ದವೋ ಏನೋ, ಒಂಥರ ನನ್ನೊಳಗಿನ ಸೋಮಾರಿತನದಿಂದ ಕಮ್ಮಿ ಆದವು. ಒಂದು ಸಿನಿಮಾ ನಂತರ ಮತ್ತೊಂದು ಸಿನಿಮಾಕ್ಕೆ ಮೂರು , ಮೂರುವರೆ ವರ್ಷಗಳು ಫಿಕ್ಸ್‌ ಎನ್ನುವಂತಾಗಿದ್ದು ನಿಮಗೂ ಗೊತ್ತು. ಹಾಗಂತ ನನಗೆ ನಿರ್ಮಾಪಕರು ಸಿಗುತ್ತಿರಲಿಲ್ಲ ಅಂತಲ್ಲ. ಸಿಗುತ್ತಿದ್ದರು, ಒಳ್ಳೆಯ ಕತೆ ಆಧರಿಸಿ ಸಿನಿಮಾ ಮಾಡೋಣ ಅಂತಲೂ ಬರುತ್ತಿದ್ದರು. ನನಗೆ ಅಂತಹ ಅವಸರ ಇರುತ್ತಿರಲಿಲ್ಲ.

ಸಿನಿಮಾದಲ್ಲೇ ಸಕ್ರಿಯವಾಗಿರುವಂತಹ ನೀವು ಸುಮಾರು ಒಂಬತ್ತು ವರ್ಷಗಳ ನಂತರ ಸಿನಿಮಾ ನಿರ್ದೇಶಿಸಿದ್ದೀರಿ, ಇದು ದೊಡ್ಡ ಬಿಡುವು ಅಲ್ಲವೇ?

ಅದು ನಿಜವೇ ಹೌದು. ಅದಕ್ಕೆ ವೃತ್ತಿಯ ಜತೆಗೆ ವೈಯಕ್ತಿಕ ಕಾರಣವೂ ಇವೆ. ‘ಕೂರ್ಮಾವತಾರ’ ನನ್ನ ನಿರ್ದೇಶನದ ಹಿಂದಿನ ಸಿನಿಮಾ. ಆ ಸಿನಿಮಾ ಮಾಡುತ್ತಿದ್ದ ಹಾಗೆಯೇ ಅನಂತಮೂರ್ತಿ ಮತ್ತು ಅಡೂರು ಗೋಪಾಲಕೃಷ್ಣ ಅವರ ಕುರಿತು ಸಾಕ್ಷ್ಯ ಚಿತ್ರ ಮಾಡುವ ಯೋಚನೆ ಬಂತು. ಆ ನಂತರ ವಿಧಾನಸೌಧ ಕುರಿತು ಸಾಕ್ಷ್ಯ ಚಿತ್ರ ಮಾಡಲು ಶುರು ಮಾಡಿದೆ. ಆದಾದ ನಂತರ ನನ್ನ ಸಿನಿಮಾಕ್ಕೆ ಪ್ರೇಕ್ಷಕ, ಉದ್ಯಮದಿಂದ ಅಷ್ಟಾಗಿ ಬೆಂಬಲ ಇಲ್ಲ ಎನಿಸಿತು. ಪತ್ರಿಕೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಿಕ್ಕ ಪೋತ್ಸಾಹ ಚಿತ್ರೋದ್ಯಮದಲ್ಲಿ ಇರಲಿಲ್ಲ.

ನಿರ್ದೇಶನದ ಇಷ್ಟುವರ್ಷದ ಪಯಣ ಹಾಗೆಯೇ 9 ವರ್ಷಗಳ ವಿರಾಮದ ಬಳಿಕ ಆ್ಯಕ್ಷನ್‌ ಕಟ್‌ ಹೇಳಿದ ಅನುಭವ ಹೇಗಿತ್ತು?

ಸಿನಿಮಾ ಭಾಷೆ ಬದಲಾಗಿದೆ. ಸಿನಿಮಾದ ಫಿಲಾಸಫಿ, ಈಸ್ತೆಟಿಕ್ಸ್‌ ಮತ್ತು ಈಡಿಯಮ್ಸ್‌ ಎಲ್ಲವುದರಲ್ಲೂ ಚೇಂಜ್‌ ಆಗಿದೆ. ಅದು ಜಗತ್ತಿನ ಸಿನಿಮಾಗಳ ಜತೆಗೆ ಭಾರತೀಯ ಸಿನಿಮಾಗಳು ಆಗಿದೆ. ಅದಕ್ಕೆ ಪೂರಕವಾಗಿಯೇ ಇವತ್ತಿನ ಸಿನಿಮಾ ಮಾಧ್ಯಮ ತೆರೆದುಕೊಂಡಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡುವುದು ಇವತ್ತು ಸವಾಲೂ ಆಗಿದೆ. ಅದೇ ಧಾಟಿಯಲ್ಲೇ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಸಿನಿಮಾ ನಿರ್ದೇಶಿಸಿದ್ದೇನೆ. ಜಯಂತ್‌ರ ಹಾಲಿನ ಮೀಸೆ ಕತೆಯನ್ನು ಬಹಳ ವರ್ಷಗಳ ಹಿಂದೆಯೇ ಓದಿದ್ದೆ. ಅದು ತುಂಬಾ ಇಂಪ್ರೆಸ್‌ ಮಾಡಿತ್ತು.

ಸಿನಿಮಾದ ಜನಪ್ರಿಯ ಮಾದರಿಗೆ ನಿಮ್ಮಂತಹವರು ಯಾಕೆ ಬರಲು ಆಗಲಿಲ್ಲ?

ಸಿನಿಮಾ ಅನ್ನೋದು ಒಂದು ಹೋಟೆಲ್‌ನಿಂದ ಇನ್ನೊಂದು ಹೋಟೆಲ್‌ಗೆ ಹೋಗಿ ರುಚಿ ನೋಡಿದಷ್ಟುಸುಲಭವಲ್ಲ. ಇದು ಯಾವುದೋ ಮ್ಯಾಜಿಕ್‌ ಅಲ್ಲ. ಈಗಿನ ಸಿನಿಮಾ ನಿರ್ದೇಶಕರು ತಮ್ಮ ಕಮರ್ಷಿಯಲ್‌ ಸಿನಿಮಾಗಳಲ್ಲಿ ಒಂದು ಸಾಂಗ್‌ ಜೋಡಿಸುವ ತಂತ್ರಗಾರಿಕೆ ನಮಗೆ ಆಗುವುದಿಲ್ಲ. ಅಂತಹ ಸಿನಿಮಾ ಈಸ್ತೆಟಿಕ್ಸ್‌ ನನಗೆ ಇಂದಿಗೂ ಒಗ್ಗಿಕೊಂಡಿಲ್ಲ. ಹಾಗಂತ ಮಾಡಬಾರದು ಅಂತಲೂ ಇಲ್ಲ.

‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಯಾವ ಹಂತದಲ್ಲಿದೆ, ಹೇಗಿತ್ತು ಚಿತ್ರೀಕರಣ ಅನುಭವ?

ಸಿನಿಮಾದ ಚಿತ್ರೀಕರಣ ಮುಗಿದಿದೆ. ಬಹುತೇಕ ಈ ವಾರವೇ ಅದು ಸೆನ್ಸಾರ್‌ಗೆ ಹೋಗಲಿದೆ. ನನ್ನ ಸಿನಿಮಾದ ಮಾದರಿಯಲ್ಲಿದೆ. ನಾವು ವರ್ತಮಾನವನ್ನು ಹೇಗೆ ನೋಡುತ್ತಿದ್ದೇವೆ, ಜಗತ್ತು ಹೇಗೆ ವರ್ತಮಾನಕ್ಕೆ ತೆರೆದುಕೊಳ್ಳುತ್ತಿದೆ, ಈ ಬದಲಾವಣೆಗೆ ಮನುಷ್ಯ ಹೇಗೆ ಬದಲಾಗುತ್ತಿದ್ದಾನೆ ಎನ್ನುವುದಕ್ಕೆ ಈ ಸಿನಿಮಾ ಕನ್ನಡಿ ಹಿಡಿಯುತ್ತಿದೆ. ಒಂದರ್ಥದಲ್ಲಿ ಇದು ನನಗೂ ಅನ್ವಯ ಆಗುವ ಕತೆ.

click me!