ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್‌ ಆಗುತ್ತವೆ; ಭರವಸೆ ಇಟ್ಟುಕೊಂಡಿರುವ ಚಿತ್ರೋದ್ಯಮ!

By Suvarna News  |  First Published Jun 13, 2020, 9:39 AM IST

ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆದರೆ ಜನ ಸಿನಿಮಾ ನೋಡಲು ಬರುತ್ತಾರೆ. ಅಂಥದ್ದೊಂದು ನಂಬಿಕೆಯ ಮತ್ತು ಭರವಸೆ ಮಾತುಗಳನ್ನು ಹೇಳಿರುವುದು ನಟ, ನಟಿ ಹಾಗೂ ಸಿನಿಮಾ ನಿರ್ದೇಶಕರು.


ಸಿನಿಮಾ ಬದುಕಿನ ಒಂದು ಭಾಗ

Tap to resize

Latest Videos

ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ ಸ್ವಲ್ಪ ಕಡಿಮೆ ಜನ ಬಂದರೂ ಆಮೇಲೆ ಪಿಕ್‌ಅಪ್‌ ಆಗಿಯೇ ಆಗುತ್ತದೆ. ಎಲ್ಲರಿಗೂ ಮನೆಯಲ್ಲಿಯೇ ಇದ್ದೂ ಇದ್ದೂ ಬೋರ್‌ ಆಗಿದೆ. ಅವರಿಗೆ ಮನರಂಜನೆ ಬೇಕಿದೆ. ಸಿನಿಮಾ ಎನ್ನುವುದು ನಮ್ಮ ಬದುಕಿನ ಒಂದು ಭಾಗವೇ ಆಗಿರುವುದರಿಂದ ಥಿಯೇಟರ್‌ಗಳಿಗೆ ಜನ ಬಂದು ಸಿನಿಮಾ ನೋಡುತ್ತಾರೆ. ಈಗ ಲಾಕ್‌ಡೌನ್‌ ಸ್ವಲ್ಪ ಸಡಿಲಗೊಂಡ ಬಳಿಕ ಜನ ಮಾರ್ಕೆಟ್‌ಗೆ ಹೋಗುತ್ತಿದ್ದಾರೆ. ರೆಸ್ಟೋರೆಂಟ್‌ಗಳಿಗೆ ಹೋಗುತ್ತಿದ್ದಾರೆ. ಹಾಗೆಯೇ ಥಿಯೇಟರ್‌ಗಳಿಗೂ ಬರುತ್ತಾರೆ ಎನ್ನುವ ಭರವಸೆ ಖಂಡಿತ ಇದೆ. ನನಗೆ ಅನ್ನಿಸುವ ಹಾಗೆ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿಗಳಿಗೆ ಬಂದು ಸಿನಿಮಾ ನೋಡುತ್ತಾರೆ. - ತರುಣ್‌ ಸುಧೀರ್‌, ನಿರ್ದೇಶಕ

ಒಳ್ಳೆಯ ಚಿತ್ರ ಬಂದರೆ ಜನ ಬರುತ್ತಾರೆ

ಲಾಕ್‌ಡೌನ್‌ ಹೊತ್ತಿನಲ್ಲೂ ಜನ ಮನೋರಂಜನೆಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಮನೆಯಲ್ಲಿ ಟಿವಿ ಕಾರ್ಯಕ್ರಮಗಳು, ಸಿನಿಮಾಗಳನ್ನು ನೋಡಿದ್ದಾರೆ. ಓಟಿಟಿ ವೇದಿಕೆಯ ನೋಡುಗರ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ. ಅದೇ ರೀತಿ ಒಳ್ಳೆಯ ಸಿನಿಮಾಗಳು ಬಂದರೆ ಖಂಡಿತ ಥಿಯೇಟರ್‌ಗೆ ಬಂದು ಸಿನಿಮಾ ನೋಡಿಯೇ ನೋಡುತ್ತಾರೆ. ಅದೇ ವೇಳೆ ಥಿಯೇಟರ್‌ನವರೂ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ದೊಡ್ಡ ಸಿನಿಮಾಗಳು ಎಂದಾಗ, ದೊಡ್ಡ ಸ್ಟಾರ್‌ ನಟರ ಸಿನಿಮಾಗಳು ಎಂದಾಗ ಜನ ನೋಡಿಯೇ ನೋಡುತ್ತಾರೆ. ಒಂದು ವಾರ ಅಥವಾ ಎರಡು ವಾರ ಸ್ವಲ್ಪ ಕಡಿಮೆ ಜನ ಬರಬಹುದು. ಆದರೆ ಅದು ನಿಧಾನಕ್ಕೆ ಹೆಚ್ಚಾಗಿಯೇ ಆಗುತ್ತದೆ.- ಸಿಂಪಲ್‌ ಸುನಿ, ನಿರ್ದೇಶಕ

ಸುರಕ್ಷಾ ಕ್ರಮ ತೆಗೆದುಕೊಂಡು ಬರುತ್ತಾರೆ

ಎಲ್ಲರಿಗೂ ಆರೋಗ್ಯದ ಮೇಲೆ ಕಾಳಜಿ ಇದ್ದೇ ಇರುತ್ತದೆ. ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅದೇ ರೀತಿ ಥಿಯೇಟರ್‌ಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ, ಕೊರೋನಾ ಸೋಂಕು ಹರಡುವ ಯಾವುದೇ ಸಾಧ್ಯತೆಯನ್ನು ಇಲ್ಲದಂತೆ ಮಾಡಿದರೆ ಖಂಡಿತ ಜನ ಚಿತ್ರಮಂದಿರಗಳ ಕಡೆ ಮುಖ ಮಾಡುತ್ತಾರೆ. ಸಿನಿಮಾ ಎನ್ನುವುದು ಎಲ್ಲರಿಗೂ ಇಷ್ಟವಾಗುವ ಮಾಧ್ಯಮ. ಹಾಗಾಗಿ ಜನ ಬಂದು ನೋಡುತ್ತಾರೆ. ಇನ್ನು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡುವ ಅವಕಾಶ ಇದ್ದರೂ ಚಿತ್ರಮಂದಿರದಲ್ಲಿ ನೋಡಿದ ಅನುಭವ ಆಗುವುದಿಲ್ಲ. ಆ ಅನುಭವವನ್ನು ಜನರು ಬಯಸಿ ಬರುತ್ತಾರೆ.- ನೀನಾಸಂ ಸತೀಶ್‌, ನಟ

ಸುರಕ್ಷತೆ ಬಗ್ಗೆ ಖಾತರಿ ಕೊಡಬೇಕು

ಕೊರೋನಾ ಜೊತೆ ಜೊತೆಗೆ ಬದುಕು ನಡೆಸಬೇಕಿದೆ. ಅದಕ್ಕಾಗಿಯೇ ಹಂತ ಹಂತವಾಗಿ ಲಾಕೌಡೌನ್‌ ಸಡಿಲ ಮಾಡಲಾಗಿದೆ. ಈಗ ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ. ಹೀಗಿರುವಾಗ ಜನರಿಗೆ ಮನರಂಜನೆ ಎನ್ನುವುದು ಬೇಕು. ಹೀಗಾಗಿ ಥಿಯೇಟರ್‌ಗಳ ಕಡೆ ಮುಖ ಮಾಡುತ್ತಾರೆ. ನನಗೂ ಒಂದಷ್ಟುಗೊಂದಲ ಇರುವುದು ನಿಜ. ಸಿನಿಮಾಗಳು ತೆರೆಗೆ ಬಂದರೆ ಏನಾಗುತ್ತದೆ ಎಂದು ಖಚಿತವಾಗಿ ಹೇಳುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ಆದರೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡು ಪ್ರೇಕ್ಷಕರಲ್ಲಿ ವಿಶ್ವಾಸ ಮೂಡಿಸಿದರೆ, ಸಿನಿಮಾಗಳು ಚೆನ್ನಾಗಿ ಇದ್ದರೆ ಖಂಡಿತ ಥಿಯೇಟರ್‌ಗಳಿಗೆ ಜನ ಬರುತ್ತಾರೆ. -ಅದಿತಿ ಪ್ರಭುದೇವ್‌, ನಟಿ

ನಾವು ಪ್ರಯೋಗಕ್ಕೆ ಮುಂದಾಗಿದ್ದೇವೆ

ಥೇಟರ್‌ ಓಪನ್‌ ಆದರೂದೊಡ್ಡ ಸಿನಿಮಾ ತಕ್ಷಣ ಬರಲ್ಲ?

ಸರಕಾರದಿಂದ ಅನುಮತಿ ಸಿಕ್ಕಿ, ಚಿತ್ರಮಂದಿರಗಳು ಆರಂಭಗೊಂಡರೆ ನಮ್ಮ ‘ಜಂಟಲ್‌ಮನ್‌’ ಚಿತ್ರವನ್ನು ಮರು ಬಿಡುಗಡೆ ಮಾಡುವ ಯೋಜನೆ ಇದೆ. ಇನ್ನು ಬೇರೆ ಸಿನಿಮಾಗಳು ಎಂದರೆ ಅಲ್ಲಿ ಯಾವ ಸ್ಟಾರ್‌ ಇದ್ದಾರೆ ಎನ್ನುವುದು ಮುಖ್ಯ. ದೊಡ್ಡ ದೊಡ್ಡ ಸಿನಿಮಾಗಳು ಎಂದರೆ ಖಂಡಿತ ಜನ ಬಂದು ಸಿನಿಮಾ ನೋಡುತ್ತಾರೆ. - ಜಡೇಶ್‌ ಕುಮಾರ್‌ ಹಂಪಿ, ನಿರ್ದೇಶಕ

ನಾವೂ ತೆರೆಗೆ ಬರಲು ಸಿದ್ಧವಾಗಿದ್ದೇವೆ

ನಮ್ಮ ವೈದ್ಯರು, ಸಂಘ, ಸಂಸ್ಥೆಗಳು ಕೊರೋನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿವೆ. ಜನರಲ್ಲಿಯೂ ಸಾಕಷ್ಟುಅರಿವು ಮೂಡಿದೆ. ನಿಧಾನವಾಗಿ ಎಲ್ಲವೂ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಹೀಗಿರುವಾಗ ಸಿನಿಮಾಗಳು ಬಂದರೆ ಖಂಡಿತ ಪ್ರೇಕ್ಷಕರು ನೋಡುತ್ತಾರೆ. ಲಾಕ್‌ಡೌನ್‌ ಇದ್ದಾಗಲೂ ಎಲ್ಲರ ಮನೆಯಲ್ಲಿಯೂ ಸಿನಿಮಾ ನೋಡುವ ಪ್ರವೃತ್ತಿ ಬೆಳೆದಿತ್ತು. ಇದು ಮುಂದುವರೆಯುತ್ತದೆ. ಇದೇ ಆಶಯದಿಂದ ನಮ್ಮ ‘ಸಲಗ’ ಚಿತ್ರವೂ ಬಿಡುಗಡೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಸಿನಿಮಾ ಮೂಲಕ ಎಲ್ಲರಿಗೂ ಸಂತೋಷ, ಮನರಂಜನೆ ಹಂಚುತ್ತೇವೆ, ಪ್ರೇಕ್ಷಕರ ಹಿತದೃಷ್ಟಿಯಿಂದ ಏನೇನು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಎಲ್ಲರೂ ಸೇರಿ ಮಾಡಬೇಕು.- ದುನಿಯಾ ವಿಜಯ್‌, ನಟ

ಚರ್ಚೆ ಮಾಡಿ ಮುನ್ನಡೆಯಬೇಕು

ಸಿನಿಮಾ ನೋಡಲು ಜನ ಬರುತ್ತಾರೆ. ಬರಬೇಕು ಎನ್ನುವುದು ನನ್ನ ಆಶಯವೂ ಹೌದು. ಸ್ಟಾರ್‌ಗಳ ಸಿನಿಮಾ ಮೊದಲು ಬಂದಾಗ ಅವುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ. ಹಾಗೆ ಸಿಕ್ಕ ಪ್ರತಿಕ್ರಿಯೆ ಮುಂದುವರೆಯಬೇಕು. ಮೊದಲು ಯೂತ್‌್ಸ ಬಂದು, ಆಮೇಲೆ ಫ್ಯಾಮಿಲಿ ಆಡಿಯನ್ಸ್‌ ಬರಬೇಕು. ಒಂದು ವಾರ ಸಿನಿಮಾಗಳು ಚೆನ್ನಾಗಿ ತೆರೆ ಕಂಡು ಮುಂದೆ ಪ್ರೇಕ್ಷಕರ ಕೊರತೆ ಎದುರಿಸಿದರೆ ಏನು ಮಾಡುವುದು? ಮುಂದೆ ಯಾವ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗುತ್ತವೆ? ಎನ್ನುವುದನ್ನು ಸೂಕ್ತವಾಗಿ ಕಂಡುಕೊಳ್ಳಬೇಕು. ಇಲ್ಲದೇ ಇದ್ದರೆ ಒಂದೆರಡು ವಾರ ಥಿಯೇಟರ್‌ ಓಪನ್‌ ಆಗಿ ಆಮೇಲೆ ಮುಚ್ಚಬೇಕಾದ ಪರಿಸ್ಥಿತಿ ಬರಬಹುದು. ಈ ನಿಟ್ಟಿನಲ್ಲಿ ದೊಡ್ಡವರು, ವಾಣಿಜ್ಯ ಮಂಡಳಿ ಸೂಕ್ತ ಚರ್ಚೆ ನಡೆಸಬೇಕು. ಈಗ ಬಿಡುಗಡೆಗೆ ಸಿದ್ಧವಿರುವ ಚಿತ್ರಗಳು ಯಾವುವು? ಯಾವೆಲ್ಲಾ ಚಿತ್ರಮಂದಿರಗಳು ಪ್ರದರ್ಶನಕ್ಕೆ ತಯಾರಾಗಿವೆ ಎನ್ನುವುದನ್ನೆಲ್ಲಾ ಪಟ್ಟಿಮಾಡಿಕೊಂಡು, ಪ್ರೇಕ್ಷಕರ ಸುರಕ್ಷತೆಗೂ ಒತ್ತು ನೀಡಿ, ಸೂಕ್ತವಾದ ಆಂತರಿಕ ಮಾರ್ಗಸೂಚಿ ರಚನೆ ಮಾಡಿಕೊಂಡರೆ ಜನರೂ ಥಿಯೇಟರ್‌ ಕಡೆಗೆ ಬರುತ್ತಾರೆ, ಸಿನಿಮಾಗಳೂ ಉಳಿಯುತ್ತವೆ. - ಜಯತೀರ್ಥ, ನಿರ್ದೇಶಕ

ಹಂಡ್ರೆಡ್‌ ಪರ್ಸೆಂಟ್‌ ಜನ ಬರ್ತಾರೆ

ನೂರಕ್ಕೆ ನೂರು ಭಾಗ ಜನ ಥಿಯೇಟರ್‌ಗಳಿಗೆ ಬಂದೇ ಬರುತ್ತಾರೆ. ಇದರಲ್ಲಿ ಅನುಮಾನವಿಲ್ಲ. ಕರ್ನಾಟಕದಲ್ಲಿ ಇವತ್ತಿನವರೆಗೂ ಕನ್ನಡ ಕಲಾಭಿಮಾನಿಗಳು ಸಿನಿಮಾ, ನಾಟಕ, ಕಲಾವಿದರನ್ನು ರಾಜರ ರೀತಿ ಪೋಷಣೆ ಮಾಡಿದ್ದಾರೆ. ಬೇರೆ ಭಾಷೆಯ ಹಾವಳಿಯ ನಡುವೆಯೂ ನಾವು ಎದುರಿಸಿ ನಿಲ್ಲುತ್ತಿದ್ದೇವೆ ಎಂದರೆ ಇದಕ್ಕೆ ಪ್ರೇಕ್ಷಕರೇ ಕಾರಣ. ಹೀಗಾಗಿ ಧೈರ್ಯ ಇದ್ದೇ ಇದೆ. ಆದರೆ ಥಿಯೇಟರ್‌ನಲ್ಲಿ ಶೇ. 50ರಷ್ಟುಜನ ಇರಬೇಕು ಎಂದರೆ ನಾವು ಸಂಕಷ್ಟಕ್ಕೆ ಸಿಲುಕುತ್ತೇವೆ. ಏಕೆಂದರೆ ಮೊದಲ ವಾರಗಳಲ್ಲಿಯೇ ಹೆಚ್ಚು ಕಲೆಕ್ಷನ್‌ ಆಗುವುದು. ಶೇ.50ರಷ್ಟುಎಂದರೆ ಹತ್ತು ಸಾವಿರ ಮಂದಿ ಸಿನಿಮಾ ನೋಡುವ ಕಡೆ ಕೇವಲ ಐದು ಸಾವಿರ ಮಂದಿ ಸಿನಿಮಾ ನೋಡುತ್ತಾರೆ. ಒಂದು ವಾರದಲ್ಲಿ ಆಗುತ್ತಿದ್ದ ಕಲೆಕ್ಷನ್‌ಗೆ ಎರಡು ವಾರ ಕಾಯಬೇಕು, ಮತ್ತೆ ಬೇರೆ ಸಿನಿಮಾಗಳೂ ತೆರೆಗೆ ಬರಲು ಸಿದ್ಧವಾಗುತ್ತವೆ. ಇದು ಕೊಂಚ ಸಂಕಷ್ಟಕ್ಕೆ ಸಿಲುಕಿಸುತ್ತದೆ. ಉಳಿದಂತೆ ಪ್ರೇಕ್ಷಕರು ಬಂದೇ ಬರುತ್ತಾರೆ ಎನ್ನುವ ನಂಬಿಕೆ ನಮಗೆಲ್ಲಾ ಇದೆ. - ನಂದಕಿಶೋರ್‌, ನಿರ್ದೇಶಕ

click me!