ರೂಪ ರಾವ್ ನಿರ್ದೇಶನದ ‘ಗಂಟುಮೂಟೆ’ ಚಿತ್ರ ಇಂದೇ(ಅ.18) ತೆರೆ ಕಾಣುತ್ತಿದೆ. ಬಿಡುಗಡೆಗೂ ಮುನ್ನವೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳ ಮೂಲಕ ಸುದ್ದಿಯಲ್ಲಿರುವ ಚಿತ್ರವಿದು.
ನ್ಯೂಯಾರ್ಕ್ ಇಂಡಿಯನ್ ಚಿತ್ರೋತ್ಸವದಲ್ಲಿ ‘ಬೆಸ್ಟ್ ಸ್ಕ್ರೀನ್ ಪ್ಲೇ ’ಅವಾರ್ಡ್ ಪಡೆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಹಾಗೆಯೇ ಕೆನಡಾ, ಆಸ್ಟ್ರೇಲಿಯಾ, ಯುಎಸ್‌ಎ, ಇಟಲಿ ಮೊದಲಾದ ದೇಶಗಳಲ್ಲಿ ನಡೆದ ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
ವಿಭಿನ್ನವಾದ ಕತೆ, ಹೊಸ ಬಗೆಯ ನಿರೂಪಣೆ ಸೇರಿದಂತೆ ಹಲವು ಕಾರಣಗಳಿಗೆ ಅಲ್ಲಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಕನ್ನಡದ ಮನಸ್ಸುಗಳಿಗೆ ಲಗ್ಗೆ ಹಾಕಲು ಅಧಿಕೃತವಾಗಿ ತೆರೆ ಕಾಣುತ್ತಿದೆ.
'ಗಂಟುಮೂಟೆ' ಟ್ರೈಲರ್‌ಗೆ ಜನಮೆಚ್ಚುಗೆ; ಆ.18 ರಿಲೀಸ್!
ಗಟ್ಟಿ ಕತೆಗಳ ಸಿನಿಮಾಗಳನ್ನು ಜನ ಎಂದಿಗೂ ಕೈ ಬಿಟ್ಟಿಲ್ಲ. ನೋಡುವ ಪರಿಸ್ಥಿತಿ ಬದಲಾಗಿದ್ದರೂ, ಜನರಿಗೆ ಒಳ್ಳೆಯ ಕತೆಯ ಸಿನಿಮಾಗಳು ಬೇಕು. ಇದನ್ನು ಇತ್ತೀಚೆಗೆ ಬಂದ ಸಾಕಷ್ಟು ಸಿನಿಮಾಗಳು ಸಾಕ್ಷಿಕರಿಸಿವೆ. - ರೂಪರಾವ್
ಸಿನಿಮಾದಂತೆಯೇ ಜೀವನವೂ ಕೂಡ ಎಂದು ನಂಬಿದ ಹರೆಯದ ಹುಡುಗಿ ‘ಮೀರಾ’ ಳ ನಿಜ ಪ್ರಪಂಚದ ಕತೆಯೇ ಗಂಟುಮೂಟೆ. ಹಾಗಂತ ನಿರ್ದೇಶಕರು ಕತೆಯ ಎಳೆಯನ್ನು ಬಿಚ್ಚಿಡುವ ಪರಿಯದು. ‘ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೂ ಅಷ್ಟೇ ತೀವ್ರತೆಯಿಂದ ಕೂಡಿದ ಭಾವನಾ ತುಡಿತಗಳ ಸಮ್ಮಿಲೃನವೇ ‘ಗಂಟುಮೂಟೆ ’ಎನ್ನುವ ಅವರ ಮಾತುಗಳ ಹಿಂದೆ ಈ ಚಿತ್ರ ಹೊಸ ಬಗೆಯ ಚಿತ್ರವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವೂ ಇದೆ.
ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ ಚಿತ್ರವಿದು. ರೂಪ ರಾವ್ ನಿರ್ದೇಶಕರು. ನಿಶ್ಚಿತ್ ಕೊರೋಡಿ ನಾಯಕನಾಗಿ ಮತ್ತು ತೇಜು ಬೆಳವಾಡಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಭಾರ್ಗವ್ ರಾಜು, ಸೂರ್ಯ ವಸಿಷ್ಠ, ಶರತ್ ಗೌಡ, ಶ್ರೀರಂಗ, ರಾಮ್ ಮಂಜುನಾಥ್, ಅರ್ಚನಾ ಶ್ಯಾಮ್, ಅನುಶ್ರೀ, ಕಶ್ಯಪ್, ಚಂದನಾ, ನಮಿತ್ ಮೊದಲಾದವರು ಚಿತ್ರದ ಇತರ
ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಅಮೇಯುಕ್ತಿ ಸ್ಟುಡಿಯೋಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಗಂಟುಮೂಟೆ’ಗೆ ಸಹದೇವ್ ಕೇಳ್ವಾಡಿ ಛಾಯಾಗ್ರಹಣ, ಪ್ರದೀಪ್ ನಾಯಕ್ ಸಂಕಲನ, ಅಪರಾಜಿತ್ ಸಂಗೀತ ಸಂಯೋಜನೆಯಿದೆ.
'ಗಂಟುಮೂಟೆ' ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟ ಪ್ರಕಾಶ್ ಬೆಳವಾಡಿ ಪುತ್ರಿ ತೇಜು!
ಈಗಾಗಲೇ ಹಲವು ಪ್ರಶಸ್ತಿ ಪುರಸ್ಕಾರಗಳ ಖುಷಿಯಲ್ಲಿರುವ ಚಿತ್ರತಂಡಕ್ಕೆ ಚಿತ್ರದ ಬಿಡುಗಡೆ ಎನ್ನುವುದು ಮಿಶ್ರ ಭಾವ ಹುಟ್ಟು ಹಾಕಿದೆ. ಜನ ಸ್ವೀಕರಿಸುತ್ತಾರೆನ್ನುವ ವಿಶ್ವಾಸದ ನಡುವೆಯೇ, ಜನರ ಪ್ರತಿಕ್ರಿಯೆ ಹೇಗಿರುತ್ತದೆಯೋ ಎನ್ನುವ ಆತಂಕವೂ ಇದೆ. ‘ಗಟ್ಟಿ ಕತೆಗಳ ಸಿನಿಮಾಗಳನ್ನು ಜನ ಎಂದಿಗೂ ಕೈ ಬಿಟ್ಟಿಲ್ಲ. ನೋಡುವ ಅಭಿರುಚಿ ಬದಲಾಗಿದ್ದರೂ, ಜನರಿಗೆ ಒಳ್ಳೆಯ
ಕತೆಯ ಸಿನಿಮಾಗಳು ಬೇಕೆನ್ನುವುದನ್ನು ಸಾಕಷ್ಟು ಸಿನಿಮಾಗಳು ಸಾಕ್ಷಿಕರಿಸಿವೆ. ಅದೇ ನಂಬಿಕೆ ನಮಗೂ ಇದೆ. ಪ್ರತಿಯೊಬ್ಬರಿಗೂ ಈ ಕತೆ ಕನೆಕ್ಟ್ ಆಗುತ್ತದೆ. ಅದೇ ನಂಬಿಕೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕಿ ರೂಪ ರಾವ್. ನಿರ್ಮಾಪಕ ಯೋಗಿ ದ್ವಾರಕೀಶ್ ‘ಗಂಟುಮೂಟೆ’ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ಇದು ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದ್ದು ಕೂಡ ಅವರಿಗಿರುವ ನಂಬಿಕೆ. ಹಾಗೆಯೇ ಈ ಚಿತ್ರ ತಮಿಳು, ತೆಲುಗು ಹಾಗೂ ಹಿಂದಿಗೂ ರಿಮೇಕ್ ಆಗುತ್ತಿದೆ.