ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ 'ಕೊತ್ಮೀರಿ ಸೊಪ್ಪು' ವಿಡಿಯೋ ಬಗ್ಗೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಈ ಸಮಯದಲ್ಲಿ ನಿರ್ದೇಶಕ ಕವಿರಾಜ್ ಬರೆದಿರುವ ಸಾಲುಗಳು ಎಲ್ಲರ ಗಮನ ಸೆಳೆಯುತ್ತಿದೆ....
ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಂತ ಸಾಲುಗಳೆಂದರೆ 'ಮಿಣಿಮಿಣಿ ಪೌಡರ್', 'ನಿಖಿಲ್ ಎಲ್ಲಿದ್ಯಪ್ಪ' ಹಾಗೂ 'ಕೊತ್ಮೀರಿ ಸೊಪ್ಪು'. ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಬಂಧಿತನಾಗಿರುವ ಆರೋಪಿಯೊಬ್ಬನ ಸಹೋದರಿ ಸುವರ್ಣ ನ್ಯೂಸ್‌ಗೆ ನೀಡಿದ ಹೇಳಿಕೆ 'ನನ್ನ ಅಣ್ಣ ರಾತ್ರಿ ಒಂದು ಗಂಟೆಯಲ್ಲಿ ಕೊತ್ಮೀರಿ ಸೊಪ್ಪು ತರಲು ಹೋಗಿದ್ದ,' ಎಂಬುವುದು ಎಲ್ಲಾ ಟ್ರೋಲ್ ಪೇಜ್‌ಗಳಲ್ಲಿಯೂ ವೈರಲ್ ಆಗುತ್ತಿದೆ.
ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು ನೆಪೊಟಿಸಂ ಪರ-ವಿರೋಧ ಚರ್ಚೆ!
ಸ್ಯಾಂಡಲ್‌ವುಡ್ ಹೆಸರಾಂತ ನಿರ್ದೇಶಕ, ಸಾಹಿತಿ ಕವಿರಾಜ್ ಮುಸ್ಲಿಂ ಮಹಿಳೆ ನೀಡಿದ ಸಾಲುಗಳನ್ನು ಬೇರೆಯದ್ದೇ ಆಯಾಮದಿಂದ ವಿಶ್ಲೇಷಿಸಿದ್ದಾರೆ. 'ಕನ್ನಡ ಸರಿಯಾಗಿ ಮಾತಾಡಲು ಬಾರದ, ಉರ್ದು ಮಾತೃಭಾಷೆಯ ಹೆಂಗಸು ಮಾತಾಡಿರುವ ಯಥಾವತ್ತು ಮಾತಿದು. ಇಲ್ಲಿ ಕನ್ನಡ ಬಲ್ಲ ಯಾರಿಗಾದರೂ ತಿಳಿಯುತ್ತದೆ. ರಾತ್ರಿ ಒಂದು ಗಂಟೆಯಲ್ಲಿ ಅವರ ಅಣ್ಣ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದು, ಎಲ್ಲರೂ ಟ್ರೋಲ್ ಮಾಡುತ್ತಿರುವಂತೆ ಬಿರಿಯಾನಿ ಮಾಡಲಲ್ಲ. ಬದಲಾಗಿ ಮಾರ್ಕೆಟಿನನಿಂದ ಕೊತ್ತಂಬರಿ ಸೊಪ್ಪು ತಂದು, ಅಂಗಡಿಗಳಿಗೆ ಹಾಕುವುದು ಅವರಣ್ಣ ಮಾಡುವ ಕೆಲಸ' ಎಂದು ಬರೆದು ಕೊಂಡಿದ್ದಾರೆ.
'ವ್ಯವಹಾರ ಬಗ್ಗೆ ತಿಳಿದುಕೊಳ್ಳಿ':
'ಸ್ವಲ್ಪವಾದರೂ ಬೆಂಗಳೂರಿನ ದಿನನಿತ್ಯದ ವ್ಯವಹಾರದ ಆಗುಹೋಗುಗಳ ಪರಿಚಯವಿದ್ದರೆ ಆ ಹೆಂಗಸಿನ ಭಾಷಾ ಪ್ರಯೋಗದ ಹೊರತಾಗಿ, ಆಕೆ ಕೊತ್ತಂಬರಿ ಸೊಪ್ಪಿನ ವಿಚಾರದಲ್ಲಿ ಹೇಳ ಹೊರಟಿರುವುದರಲ್ಲಿ ಏನೂ ತಪ್ಪಿಲ್ಲ ಅನ್ನುವುದು ತಿಳಿಯುತ್ತದೆ. ನಮ್ಮ ನಿಮ್ಮಂತೆ ಕೆಲವು ಶ್ರಮಜೀವಿ ವರ್ಗಕ್ಕೆ ಹಗಲು ಕೆಲಸ, ರಾತ್ರಿ ನಿದ್ದೆ ಎನ್ನುವ ಸೌಭಾಗ್ಯದ ಬದುಕಿಲ್ಲ. ಸೊಪ್ಪು ತರಕಾರಿ ಇನ್ನಿತರ ಸರಕು ಹೊತ್ತು ಲಾರಿಗಳು ಬೆಂಗಳೂರು ಪ್ರವೇಶಿಸುವುದೇ ನಡುರಾತ್ರಿ ಮೀರಿದ ಮೇಲೆ. ನಾವೆಲ್ಲಾ ಗಡದ್ದಾಗಿ ತಿಂದು ಮಲಗಿದ್ದಾಗ ಮಾರುಕಟ್ಟೆಗಳಿಂದ ಸಾಮಗ್ರಿಗಳನ್ನು ಅಂಗಡಿಗಳಿಗೆ ಸಪ್ಲೈ ಮಾಡುವವರು, ಮಾರುಕಟ್ಟೆಗೆ ಹೋಗಿ ಸಾಮಗ್ರಿಗಳನ್ನು ಗಾಡಿಗಳಲ್ಲಿ ಹೇರಿಕೊಂಡು ತಂದು ಬೆಳಗಾಗುವುದರೊಳಗೆ ನಮ್ಮ ಅಕ್ಕಪಕ್ಕದ ಅಂಗಡಿಗಳಿಗೆ ತಲುಪಿಸಿದಾಗಲೇ ಬೆಳಗ್ಗೆ ವಾಕಿಂಗ್ ಹೋದ ತಾಯಂದಿರು ಫ್ರೆಶ್ ಆಗಿರೋ ಕೊತ್ತಂಬರಿ ಸೊಪ್ಪು ತಂದು ಸಾರು, ಸಾಂಬಾರು, ಚಟ್ನಿ, ಪಲ್ಯಗಳನ್ನು ರುಚಿಯಾಗಿ ಮಾಡಿ ನಮ್ಮ ಹೊಟ್ಟೆ ತುಂಬಿಸಲು ಸಾಧ್ಯವಾಗುವುದು,' ಎಂದು ಹೇಳಿದ್ದಾರೆ.
ಬೆಂಗಳೂರು ಗಲಭೆಗೆ ಟೆರರ್ ಲಿಂಕ್: ಸಮಿಯುದ್ದೀನ್ ಬಂಧನ!
ಧರ್ಮದಲ್ಲಿ ಅಕ್ಕ-ತಾಯಿ-ತಂಗಿ ಒಂದೇ:
ಹಿಂದೂ, ಮುಸ್ಲಿಂ, ಕ್ರೈಸ್ತ ಅಥವಾ ಇನ್ನಾವುದೇ ಧರ್ಮದ ಅಕ್ಕ ತಂಗಿ ತಾಯಂದಿರೆಲ್ಲ ಒಂದೇ. ಕೊನೆಕ್ಷಣದವರೆಗೂ ತಮ್ಮ ಅಣ್ಣ, ತಮ್ಮ,ಮಗ ತಪ್ಪಿತಸ್ಥ ಎಂದು ಅವರ ಮನಸ್ಸು ಒಪ್ಪುವುದಿಲ್ಲ. ಅದರಲ್ಲೂ ತಮ್ಮವರು ಸಂಕಷ್ಟಕ್ಕೆ ಸಿಲುಕಿದಾಗ ಆ ಮನಸ್ಸು ವಿಲವಿಲ ಒದ್ದಾಡುತ್ತೆ. ಇಡೀ ಜಗತ್ತೇ ಮಗನ/ಮಗಳ/ ಅಣ್ಣ-ತಮ್ಮಂದಿರ ವಿರುದ್ಧ ನಿಂತರೂ ತಾಯಿ/ ಅಕ್ಕ-ತಂಗಿಯರು ಆದಷ್ಟು ತಮ್ಮವರ ಪರ ನಿಲ್ಲಲು ಹೆಣಗುತ್ತಾರೆ. ಇದೀಗ ಕೊತ್ತಂಬರಿ ಸೊಪ್ಪಿನ ವಿಚಾರದಲ್ಲಿಯೂ ಮಾತನಾಡಿದ ಹೆಂಗಸಿನ ಸ್ಥಿತಿಯೂ ಅಷ್ಟೇ. ಹಾಗಂತ ಖಂಡಿತಾ ಅವರ ಅಣ್ಣ ಅಮಾಯಕ ಎನ್ನುವ ಮಾತು ಒಪ್ಪಲಾಗದು. ಪೊಲೀಸ್ ಸ್ಟೇಷನ್ನಿಗೆ ಬೆಂಕಿ ಹಚ್ಚಿದವರ ಮೇಲೆ ಕಿಂಚಿತ್ತೂ ಕರುಣೆ ತೋರದೇ ಕಠಿಣಾತೀಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಈ ಹಿಂದೆ ಪೋಸ್ಟ್ ಹಾಕಿದ್ದೇನೆ.' ಎಂದು ಸ್ಪಷ್ಟನೆ ನೀಡಿದ್ದಾರೆ.