ಇನ್ನು ಹೌಸ್‌ಫುಲ್‌ ಗ್ಯಾರಂಟಿ, ಶುರುವಾಯಿತು ಸ್ಟಾರ್‌ ಸಿನಿಮಾಗಳ ಭರಾಟೆ!

By Kannadaprabha NewsFirst Published Feb 5, 2021, 9:00 AM IST
Highlights

ಹೆಚ್ಚೂಕಮ್ಮಿ ಒಂದು ವರ್ಷ ಮೌನವಾಗಿದ್ದ ಚಿತ್ರರಂಗ, ಇದೀಗ ಹೊಸ ಹುಮ್ಮಸ್ಸಿನೊಂದಿಗೆ ರಂಜಿಸಲು ಸಿದ್ಧವಾಗಿದೆ. ಈ ವಾರದಿಂದಲೇ ಪ್ರೇಕ್ಷಕರಿಗೆ ಹೊಸ ಹೊಸ ಸಿನಿಮಾಗಳ ಹಬ್ಬ. ದೊಡ್ಡ ಸಿನಿಮಾಗಳ ಸರಮಾಲೆ.

ಒಂದು ವರ್ಷ ಥೇಟರಿಗೆ ಕಾಲಿಡದೇ ಇದ್ದುದ್ದರಿಂದ ಪ್ರೇಕ್ಷಕ ಸಿನಿಮಾ ನೋಡುವುದನ್ನು ಬಿಡುತ್ತಾನೆ. ಓಟಿಟಿ ಪ್ಲಾಟ್‌ಫಾರ್ಮಿಗೇ ಅಂಟಿಕೊಳ್ಳುತ್ತಾನೆ. ಸಿನಿಮಾ ನೋಡುವ ರೀತಿಯೇ ಬದಲಾಗುತ್ತದೆ. ಇನ್ನು ಚಿತ್ರಮಂದಿರಗಳು ತೆರೆದರೂ ಪ್ರೇಕ್ಷಕ ಬರುವುದಿಲ್ಲ. ಕೌಟುಂಬಿಕ ಪ್ರೇಕ್ಷಕರಂತೂ ಬರುವುದೇ ಇಲ್ಲ ಎಂಬೆಲ್ಲ ಮಾತುಗಳೂ ಸುಳ್ಳಾಗಿವೆ. ಕಳೆದ ವಾರ ಅರ್ಧ ಥೇಟರ್‌ ಮಾತ್ರ ಜನ ಬರಬಹುದು ಎಂಬ ನಿಯಮವಿದ್ದಾಗಲೇ ಮಾಸ್ಟರ್‌ ಚಿತ್ರ ಕರ್ನಾಟಕದಲ್ಲಿ ಸುಮಾರು ಹತ್ತು ಕೋಟಿ ಬಾಚಿಕೊಂಡಿದೆ.

ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಅನುಮತಿ: ಇದಕ್ಕೆ ಬಿಡುಗಡೆಯಾಗಿದೆ ಮಾರ್ಗಸೂಚಿ 

ಅಲ್ಲಿಗೆ ಮನರಂಜನೆಗೆ ಕೊನೆಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೊನೆಯ ಹಂತದಲ್ಲಿ ಅರ್ಧ ಥೇಟರ್‌ ಮಾತ್ರ ತುಂಬಿ ಎನ್ನುವ ರಾಜ್ಯಸರ್ಕಾರದ ನೀತಿಯ ವಿರುದ್ಧವೂ ಚಿತ್ರರಂಗ ಒಗ್ಗಟ್ಟಿನಿಂದ ಹೋರಾಡಿ, ಹೌಸ್‌ಫುಲ್‌ ಪ್ರದರ್ಶನಕ್ಕೆ ಅವಕಾಶ ಪಡೆದುಕೊಂಡಿದೆ.

"

ಈಗ ಮಾಡೇಕಾದ್ದೇನು? ಮರಳಿ ಚಿತ್ರಮಂದಿರಕ್ಕೆ ಬರುತ್ತಿರುವ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂಥ ಸಿನಿಮಾ ನೀಡುವುದು. ವಾರಕ್ಕೆ ಹತ್ತೋ ಹನ್ನೆರಡೋ ಸಿನಿಮಾಗಳನ್ನು ಬಿಡುಗಡೆ ಮಾಡಿ, ಎಲ್ಲವೂ ನೆಲಕಚ್ಚುವ ಹಾಗೆ ಮಾಡದೇ ವಿವೇಚನೆಯಿಂದ ಚಿತ್ರ ಬಿಡುಗಡೆ ಮಾಡುವುದು. ಎಲ್ಲರೂ ಒಗ್ಗಟ್ಟಾಗಿ ಚಿತ್ರ ಬಿಡುಗಡೆಯ ದಿನಾಂಕವನ್ನು ಯಾರಿಗೂ ತೊಂದರೆಯಾಗದಂತೆ ನಿಗದಿಪಡಿಸುವುದು. ಬಿಡುಗಡೆಯಾಗುವ ಚಿತ್ರಕ್ಕೆ ಸರಿಯಾದ ಪ್ರಚಾರ ಸಿಗುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಚಿತ್ರಮಂದಿರಕ್ಕಿದ್ದ ನಿರ್ಬಂಧ ಕ್ಯಾನ್ಸಲ್: ಹೊಸ ಗೈಡ್‌ಲೈನ್ಸ್ ಹೀಗಿವೆ 

ಪ್ರೇಕ್ಷಕರಿಗೆ, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಿಗೆ ನಂಬಿಕೆ ಬರುವಂತೆ, ಚಿತ್ರಮಂದಿರವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಕೂಡ ಅತ್ಯಗತ್ಯ. ಚಿತ್ರಮಂದಿರಕ್ಕೆ ಧೈರ್ಯವಾಗಿ ಹೋಗಿ ಬರಬಹುದು ಎಂಬ ನಂಬಿಕೆ ಹುಟ್ಟುವಂತೆ ಪ್ರದರ್ಶನ ವಲಯ ಮೊದಲಿಗಿಂತ ಹೆಚ್ಚು ಸ್ವಚ್ಛತೆ ಕಾಪಾಡಬೇಕಿದೆ. ಅಷ್ಟೇ ಅಲ್ಲ, ಕೋವಿಡ್‌ ನಿಯಮಾವಳಿಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಮಾಲ್‌ ಮತ್ತು ಪ್ರವಾಸೀ ತಾಣಗಳು, ಹೋಟೆಲ್‌ಗಳು ಮರಳಿ ಗ್ರಾಹಕರನ್ನು ಸೆಳೆದದ್ದಕ್ಕೆ ಇಂಥ ಕಟ್ಟುನಿಟ್ಟಿನ ಕ್ರಮವೇ ಕಾರಣ.

ಕೋಟ್ಯಂತರ ಬಂಡವಾಳ ಹೂಡಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿ ಬಿಡುಗಡೆಗೆ ಕಾದಿರುವ ನಿರ್ಮಾಪಕರಿದ್ದಾರೆ, ಸಣ್ಣ ಬಜೆಟ್ಟಿನ ಸಿನಿಮಾಗಳನ್ನು ಮಾಡಿ ಕಾಯುತ್ತಾ ಕೂತವರಿದ್ದಾರೆ. ಒಂದು ವರ್ಷದಿಂದ ಯಾವ ಗಳಿಕೆಯೂ ಇಲ್ಲದೇ ಇರುವ ಪ್ರದರ್ಶಕರ ವಲಯವಿದೆ. ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ- ಈ ಮೂರೂ ವಲಯಗಳಿಗೂ ಲಾಭವಾಗುವಂಥ ಆರ್ಥಿಕ ಒಡಂಬಡಿಕೆಯೊಂದನ್ನು ಅನುಸರಿಸುವ ಮೂಲಕ ಚಿತ್ರರಂಗ ಈಗ ಮುನ್ನಡೆಯಬೇಕಾಗಿದೆ.

click me!