
ಅಪರ್ಣಾ ಪತಿ ನಾಗರಾಜ್ ವಸ್ತಾರೆ ಪೋಸ್ಟ್!
ಒಡನಿದ್ದ ಅಪರ್ಣೆ ಒಳಗಾಗಿ, ಇನ್ನೊಮ್ಮೆ ಹೇಳುತ್ತೇನೆ- ನನ್ನೊಡನಿದ್ದ ಅಪರ್ಣೆ ನನ್ನೊಳಗಾಗಿ ಮತ್ತು ನಿಮ್ಮೊಡನಿದ್ದ ಅವಳು ನಿಮ್ಮೊಳಗಾಗಿ, ಇನ್ನೇನು ಉದಯಿಸಲಿಕ್ಕಿರುವ ನಾಳೆಗೆ ಅಂದರೆ ಜುಲೈ ಹನ್ನೊಂದಕ್ಕೆ ಸರಿಯಾಗಿ ಒಂದು ವರ್ಷ. ತಿಥಿಗಳ ಲೆಕ್ಕದಲ್ಲಿ ಆಷಾಢ ಶುದ್ಧ ಷಷ್ಠಿ- ಜೂನ್ ಮಾಹೆಯ ಮೂವತ್ತನೇ ತಾರೀಖು ಜರುಗಿದ್ದು. ಜರುಗಿ ಮುಗಿದಿದ್ದು. ನನ್ನ ಮಟ್ಟಿಗೆ ಮಾತ್ರ ಯಾವೊತ್ತಿಗೂ ಮುಗಿಯದ್ದು.
ನಿಜ ಹೇಳುತ್ತೇನೆ. ಕಳೆದೊಂದು ವರ್ಷವನ್ನು ನಾನು ಧ್ಯಾನವೆನ್ನುವ ಹಾಗೆ ಕಳೆದಿದ್ದೇನೆ. ಅಪರ್ಣೆಯ ಸ್ಮರಣೆಯನ್ನು ಯಜ್ಞವೆನ್ನುವ ಹಾಗೆ ಕೈಕೊಂಡಿದ್ದೇನೆ. ಅವಳ ಹೆಸರನ್ನು ಉಸುರಿನೊಟ್ಟಿಗೆ ಬೆಸೆದು ‘ಅಜಪಾಜಪ’ವೆಂದೊಂದಾಗಿ ಸದಾ ಚಾಲೂವಿಟ್ಟಿದ್ದೇನೆ. (ಅಜಪಾಜಪವೆಂದರೆ ಮಣಿ ಬಿಟ್ಟು ಮಣಿ ಹಿಡಿದು ನಡೆಸುವ ಜಪಮಾಲೆಯಲ್ಲಿ ಜರುಗುವ ಜಪವಲ್ಲ. ಜಪವೇ ಅಲ್ಲದ ಜಪವೆಂತಲೇ ಅದರ ಅರ್ಥ.) ಒಳಮನೆಯೊಳಗೆ ಅವಳು ಇರುತ್ತಿದ್ದ ಅಷ್ಟಿಷ್ಟು ಎಡೆಯಲ್ಲೆಲ್ಲ ಮಣಿದೀಪಗಳನ್ನಿಟ್ಟು ಅಖಂಡವಾಗಿ ಉರಿಸಿದ್ದೇನೆ. ಅವಳಿಲ್ಲದ ಮತ್ತು ಅವಳನ್ನು ಕುರಿತಲ್ಲದ ಏನನ್ನೂ ಧೇನಿಸದೆ ಮತ್ತು ಬರೆಯದೆ- ಎರಡು ಆಷಾಢಗಳ ನಡುವೆ, ನಿಜಕ್ಕೂ ವಿಯೋಗಮುಖಿಯಾಗಿ ಸರಿದ ದುಃಖತಪ್ತ ಸಂವತ್ಸರವನ್ನು ಸವೆಸಿದ್ದೇನೆ. ಅಸಲಿನಲ್ಲಿ, ಇವೆಲ್ಲದರ ಮೂಲಕ ನನ್ನನ್ನು ನಾನು ದಾಟುತ್ತಿದ್ದೇನೆ. ಅವಳನ್ನೂ ದಾಟುವ ಹವಣು ನಡೆಸಿದ್ದೇನೆ. ಅಂತಿಂತಿದ್ದಿರದ ಈ ಹೆಣ್ಣನ್ನು ಸುಲಭವಾಗಿ ದಾಟಲಾಗದೆಂದು ಈ ಒಂದು ವರ್ಷದಲ್ಲಿ ಇನ್ನಿರದೆ ಕಂಡರಿತಿದ್ದೇನೆ. ಅವಳೂ ನನ್ನನ್ನು ಸುಲಭಕ್ಕೆ ದಾಟಳೆನ್ನುವ, ಹಾಗೇ ನನಗೂ ದಾಟಗೊಡಳೆನ್ನುವ ನನ್ನದೇ ಭ್ರಮೆಯನ್ನು ಅರಿವೊಂದಾಗಿ ಕಟೆದು ಕಣ್ಮನಸಿನಲ್ಲಿ ಕಟ್ಟಿಕೊಂಡಿದ್ದೇನೆ.
ನೆನಪಾಗುತ್ತಿದೆ, ಕಳೆದ ವರ್ಷ ಜುಲೈ ಮೊದಲಾಯಿತಷ್ಟೆ-
ಅಪರ್ಣೆ, ‘ನನ್ನನ್ನು ಪಾರು ಮಾಡಿ, ವಸ್ತಾರೆ...’ ಎಂದು ದೀನಳಾಗಿ ಕೆಲವಾರು ಸರ್ತಿ ಯಾಚಿಸುವಳು. ಸುತ್ತಲಿನ ಮರ್ತ್ಯವನ್ನು ದಾಟಲಿಕ್ಕಾಗದೆ ಹತ್ತಾ ಹಾಸಿಗೆಗಂಟಿಕೊಂಡು ವರ್ಷಗಟ್ಟಲೆ ತಳ್ಳಿದರೆಂತೆನ್ನುವ ಸಹಜ ಸ್ವಾಭಾವಿಕ ಅಳುಕು ಅವಳದು. ನಿಜಕ್ಕಾದರೆ, ಸಾವೆಂಬುದನ್ನು ಹತ್ತಿರದಿಂದ ಕಂಡಿದ್ದ ಹತ್ತಾರು ಘಟನೆಗಳು ಅದೇ ಜುಲೈಯಿಯ ತುಸು ಮುನ್ನಿನಲ್ಲಿ ನಮ್ಮೆದುರು ಜರುಗಿದ್ದವು. ನಾನೂ ಅವನ್ನು ಸಾಕ್ಷಾತ್ ಕಂಡುಕೊಂಡಿದ್ದೆ. ಪ್ರತಿಸಾರಿಯೂ, ‘ಹಾಗೇನಿಲ್ಲ, ಕಂದ... ಎಷ್ಟೆಲ್ಲ ಸಂಕಷ್ಟ ದಾಟಿದ್ದೇವಲ್ಲ. ಇದನ್ನೂ ದಾಟುವೆವು ಬಿಡು...’ ಎಂದು ಬೆನ್ನು ತಡವಿ ಹೇಳುತ್ತಿದ್ದೆ. ಚೆನ್ನಾಗಿ ನೆನಪಿದೆ, ಅಂದೊಂದು ಸಾರಿ, ‘ಅಪರ್ಣೇ, ಇನ್ನೆಷ್ಟು ನೋವು ನಿನ್ನ ಪಾಲಿನದಾಗಿ ಈ ಧರೆಯಲ್ಲಿ ಮಿಕ್ಕಿದೆಯೋ... ಎಲ್ಲವನ್ನೂ ಅನುಭವಿಸಿಬಿಡು, ಕಂದ... ಅದೇನೋ ಕರ್ಮವೆಂದಾರಲ್ಲ ಆ ಸಲುವಾಗಿ. ಎಷ್ಟೇ ಕಷ್ಟವಾದರೂ ನೋಡಿಕೊಳುತೀನಿ. ಮುಂದಿನ ಜನುಮವಿದೆಯೋ ಇಲ್ಲವೋ- ಅರಿಯೆ, ಹಾಗೊಂದಿದ್ದಲ್ಲಿ, ಆವಾಗಲಾದರೂ ಚೆನ್ನಾಗಿರು...’ ಅಂತಲೂ ಕಣ್ತುಂಬಿಕೊಂಡು ಹೇಳಿದ್ದೆ.
ಕಳೆದ ಜುಲೈಯಿಯ ಒಂಬತ್ತನೇ ತಾರೀಖೂ ಅಷ್ಟೆ, ಬೆಳಬೆಳಿಗ್ಗೆಯೇ, ಅಪರ್ಣೆ, ‘ನಾನೊಂದು ಹೇಳುತೀನಿ. ನಡೆಸಿಕೊಡುತೀರಾ?’ ಎಂದೊಂದು ಅರಿಕೆಯಿಟ್ಟಿದ್ದಳು. ವಿಷಯವೇನೆಂದು ಗೊತ್ತಿತ್ತಾದರಿಂದ, ‘ಈವಾಗ ಬೇಡ, ಕಂದ... ಆಮೇಲೆ ಮಾತಾಡೋಣ’ ಎಂದು ಮಾತು ಹಾರಿಸಿದ್ದೆ. ಆದರೆ ಪಟ್ಟುಬಿಡದೆ ಮಾತು ಮುಂದುವರಿಸಿದ್ದಳು. ‘ಏನು ಗೊತ್ತಾ, ನಾನೇನಾದರೂ ಹಾಸಿಗೆ ಹಿಡಿದುಬಿಟ್ಟರೆ ಯಾರಿಗೂ ಹೇಳದೆ ಮುಗಿಸಿಬಿಡಿ, ವಸ್ತಾರೆ... ಏನೂ ತಪ್ಪಿಲ್ಲ. ನಿಮ್ಮ ಮೇಲೆ ನಾನಿನ್ನು ಹೊರೆಯಾಗಿರಲಾರೆ’ ಎಂದು ಅಂಗಲಾಚಿದ್ದಳು. ಅವೊತ್ತೇ ಸಂಜೆ, ಆಸ್ಪತ್ರೆಯತ್ತ ಸಾಗುವ ಕಾರುದಾರಿಯಲ್ಲಿ ನನ್ನ ಎಡಗೈಯನ್ನು ತನ್ನೆರಡೂ ಕೈಗಳಲ್ಲಿ ಹಿಡಿದು, ‘ನಿಮ್ಮನ್ನು ಬಿಟ್ಟು ಹೋಗೋಕೆ ನನಗಿಷ್ಟ ಇಲ್ಲ...’ ಅಂತಂದಳು. ‘ಎಷ್ಟು ಸಲ ಹೀಗೆ ಆಗಿದೆಯಲ್ಲವಾ, ಅಪರ್ಣೇ... ಈ ಸಲವೂ ಹಾಗೇ ಆಗುತ್ತೆ. ಗೆದ್ದು ಮನೆಗೆ ಹೋಗುತೀವಿ...’ ಎಂದು ಸಮಾಧಾನ ಹೇಳಿದೆ.
ಆದರೆ, ಆ ಹೊತ್ತಿನಲ್ಲಿ ನನ್ನೊಳಗಿನ ಸಮಾಧಾನವೇ ವ್ಯವಧಾನ ತಪ್ಪಿದಂತಿತ್ತು.
ಹೀಗೆ ಆಸ್ಪತ್ರೆಯನ್ನು ಹೊಕ್ಕಿದ್ದಷ್ಟೆ, ಆ ಮುಂದಿನ ಎರಡು ತಾಸಿನಲ್ಲಿ ನಮ್ಮಿಬ್ಬರ ಪಾಲಿನ ಕಟುಸತ್ಯದ ಕೇಡು ಮೊದಲಾಗಿತ್ತು. ಆ ಬಳಿಕದ ನಲವತ್ತೆಂಟನೇ ತಾಸಿನ ಸುಮಾರಿಗೆಲ್ಲ, ಆ ಸತ್ಯವೆನ್ನುವ ಸತ್ಯವಿರಲಿ, ಕೇಡೆನ್ನುವ ಕೇಡೂ ಇನ್ನಿರದೆ ಕಟುವಾಗಿ ನಮ್ಮಿಬ್ಬರಲ್ಲೊಂದು ಅರ್ಧವನ್ನುಂಡು ತೇಗಿ ಗಹಗಹಿಸಿತ್ತು.
ನೀನಿತ್ತುದನ್ನು ನಿನಗೊಪ್ಪಿಸಲಿಕ್ಕೆ
ಯಾಕಿಷ್ಟೆಲ್ಲ ತ್ರಾಸು
ಎಷ್ಟಾದರೂ ಸರಿಯೆ ಕಡೆಗೊಂದಿಷ್ಟು
ನಸುನಗೆಯನ್ನು ಮಿಗಿಸು
ಎಂದೋ ಬರೆದ ಈ ಸಾಲನ್ನು- ಎರಡು ರಾತ್ರಿ ಎರಡು ಹಗಲುಗಳ ಕಾಲ ಮಾತಿರದೆ ಕತೆಯಿರದೆ ಐಸೀಯೂನಲ್ಲಿ ಮಲಗಿದ್ದ ಅಪರ್ಣೆಯನ್ನು ನೋಡಿದಾಗಲೆಲ್ಲ ನೆನೆದೆನಷ್ಟೆ, ಮೊರೆ ಫಲಿಸಿತೆನ್ನುವ ಹೊತ್ತುಂಟಾಗಿಬಂತು.
ಅಷ್ಟರ ಮಟ್ಟಿಗೆ ಕೇಡಿನ ಕೇಡು ತಗ್ಗಿತ್ತು. ನಿಶ್ಚೇಷ್ಟಿತವಾದ ಅಪರ್ಣೆಯ ಮೋರೆಯಲ್ಲಿ ಬುದ್ಧಸ್ಮಿತೆ ಮಿಕ್ಕಿತ್ತು.
ಆ ಹೊತ್ತಿನಿಂದ ಈ ಹೊತ್ತಿನವರೆಗೂ ನನ್ನ ಕಣ್ಣುಗಳನ್ನು ಸಂಬಳಿಸುವುದೇ ಕಷ್ಟವಾಗಿದೆ. ಕಾರಣವೇ ಅಲ್ಲದ ಕಾರಣಕ್ಕೆ ತಂತಾವೇ ತುಂಬಿಬರುತ್ತವೆ. ಸುಮ್ಮಸುಮ್ಮನೆ ಧುಮುಕಿಳಿಯಲೆಣಿಸುತ್ತವೆ. ಕಣ್ಣು ಮರುಳೋ ನೋಟ ಮರುಳೋ ಎಂದು ನನ್ನನ್ನು ನಾನೇ ಎಚ್ಚರಿಸಿಕೊಳ್ಳುವುದಾಗುತ್ತದೆ. ಕಣ್ಣು ಹನಿದಾಗಲೆಲ್ಲ ಗಂಗೆಯೊಸರಿತೆಂದು ಬಗೆದು ಅತ್ತು ಪಾವನನಾದೆನೆಂಬುದು ನನ್ನ ಪಾಲಿಗೆ ಪದ್ಯಾತ್ಮಕವಲ್ಲದ ಸತ್ಯವಾಗಿದೆ.
ಈ ನಡುವಿನ ಇನ್ನೊಂದನ್ನು ಪ್ರಾಸಂಗಿಕವಾಗಿ ಇಲ್ಲಿ ಹೇಳಲೇಬೇಕು.
ನಿನ್ನೆ ಮತ್ತು ಮೊನ್ನೆ ನಾನೂ ಆಸ್ಪತ್ರೆಯಲ್ಲಿದ್ದೆ. ಅದೇ ಆಸ್ಪತ್ರೆ. ಅದೇ ಕೋಣೆ. ಅದೇ ಮಂಚ. ಅದೇ ಆಪರೇಷನ್ ಥಿಯೇಟರು. ಅದೇ ಐಸೀಯು... ಮತ್ತು ಅದೇ ಜಾಗ.
ತಿಂಗಳುಗಳ ಹಿಂದೆ ಎಡಗಾಲಿನ ಹಿಮ್ಮಡಿಯಲ್ಲಿ ಸುಮ್ಮನೆ ತೊಗಲು ದಪ್ಪವಾಗಿ ಕಪ್ಪಗಾಗಿ ಸುರುಗೊಂಡಿದ್ದು- ಯಾಕೋ ಏನೋ, ಇದೇ ಸೋಮವಾರದ ರಾತ್ರಿ, ಪಾದಕ್ಕೆ ಪಾದವೇ ದುಪ್ಪಟ್ಟು ಗಾತ್ರಕ್ಕೆ ಬಾತು- ಮರುದಿವಸದ ಮಂಗಳವಾರ ಯಾತಕ್ಕೂ ತೋರಿಸಿಬಿಡೋಣವೆಂದು ಆಸ್ಪತ್ರೆ ಹೊಕ್ಕರೆ, ಅಲ್ಲಿನ ತಜ್ಞರು ಇದನ್ನು ಕೊಯ್ದು ಮಾತ್ರ ಸರಿಪಡಿಸಬಹುದೆಂದು ಹೇಳಿ... ಇಷ್ಟು ದೊಡ್ಡ ಕತೆಯಾಗಿ ಹೋಯಿತು. ಆಸ್ಪತ್ರೆಯಲ್ಲಿ ಹೆಜ್ಜೆ ಹೆಜ್ಜೆಗೂ ವರ್ಷದ ಹಿಂದಿನದೆಲ್ಲ ಉಗ್ಗುಗ್ಗಿಕೊಂಡು ಎದುರಾದವು. ನಾ ಮುಂದು ತಾ ಮುಂದೆಂದು ಮುತ್ತಿ ಮುಸುರಿದವು. ಇವೊತ್ತು ಡ್ರೆಸ್ಸಿಂಗಿಗೆಂದು ಹೋದಾಗಲೂ ಅಷ್ಟೆ, ಎಮರ್ಜೆನ್ಸಿ ಸೆಕ್ಷನಿನಲ್ಲಿ ಅಪರ್ಣೆಯನ್ನು ತಾತ್ಕಾಲಿಕವಾಗಿ ಮಲಗಹೇಳುತ್ತಿದ್ದ ಮಂಚದ ಮೇಲೆ ನಾನೂ ಮೈಚೆಲ್ಲಿದ್ದಾಯಿತು. ‘ಅಪರ್ಣೇ... ಅಲ್ಲಿ ಮಲಕ್ಕೊಂಡರೆ ಚೆನ್ನಾಗಿರುತ್ತಲ್ಲವಾ? ನಾನೂ ಒಂದು ಸಲ ಮಲಗಿ ನೋಡಬೇಕು...’ ಎಂದು ನಾನೊಮ್ಮೆ ತಮಾಷೆಗೆ ಹೇಳಿದ್ದೂ, ‘ಥೂ ಬಿಡ್ತೂನ್ನುರೀ... ಹೋಗಿ ಹೋಗಿ ಇಂಥದುನ್ನ ಕೇಳಿಕೋತೀರಲ್ಲ. ಇವೆಲ್ಲ ನನ್ನ ಜೊತೆಗೇ ಮುಗಿದು ಹೋಗಲಿ. ನೀವು ಚೆನ್ನಾಗಿರಬೇಕು...’ ಎಂದು ಅಳು ಮಾಡಿಕೊಂಡು ಹೇಳುತ್ತಿದ್ದ ಅಪರ್ಣೆಯೂ, ಅವಳ ಕಣ್ಣುಗಳಲ್ಲಿ ಸದಾ ಇರುತ್ತಿದ್ದ ನನ್ನ ಬಗೆಗಿನ ಹೆಮ್ಮೆ ಕಕುಲಾತಿಯೆಲ್ಲ ಒಟ್ಟೊಟ್ಟಿಗೆ ಧಾವಿಸಿ ನೆನಪಿನಲ್ಲಿ ಅವತರಿಸಿ- ಸರಕ್ಕನೆ ಮೈ ಝಿಲ್ಲೆಂದಿದ್ದನ್ನು ಅನುಭವಿಸಿದ್ದೂ ಆಯಿತು. ಹಿಂದೆಯೇ, ಒಂದೇ ಸಮ ಕಣ್ಗಂಗೆಯಿಳಿಸಿದ್ದೂ ಆಯಿತು.
‘ಏನ್ಸರ್ ನೀವು.... ಇಷ್ಟಕ್ಕೆಲ್ಲ ಹೆದರಿಕೋತೀರಿ?’ ನರ್ಸಿಂಗ್ ಸೂಪರಿಂಡೆಂಟೆಂಟ್ ಮೊನ್ನೆ ರಾತ್ರಿ ನನ್ನನ್ನು ವಾರ್ಡಿನಲ್ಲಿ ಎದುರಾಗಿ ಹೇಳಿದ್ದರು. ‘ಮೇಡಂ ಎಷ್ಟೆಲ್ಲ ಕಷ್ಟಪಟ್ಟಿರಬೇಕಲ್ಲವಾ...’ ಎಂದು ಮುಂದೇನೋ ಆಡಹೊರಟವರು, ನನ್ನ ಮೋರೆಯಲ್ಲಿ ಇದ್ದಕ್ಕಿದ್ದಂತೆ ಮೊಳೆತ ದುಗುಡವನ್ನು ಅರಿತರೆನ್ನುವ ಹಾಗೆ- ಒಮ್ಮೆಗೇ ಅವಾಕ್ಕಾಗಿ, ತುಸು ತಡೆದು ಬೆನ್ನುತಡವಿ ಬಿಕ್ಕಿಬಿಟ್ಟರು. ಅದೇ ನಿನ್ನೆ ಬೆಳಿಗ್ಗೆ, ಯಾಕೋ ಏನೋ, ಆಕೆ ಆ ಫ್ಲೋರಿನಲ್ಲಿದ್ದ ಅಷ್ಟೂ ದಾದಿಯರ ಸಮೇತ ಒಳಬಂದು ಹಾರೈಸಿದರು. ಅಷ್ಟೂ ಪರಿಚಿತ ಮುಖಗಳೇ. ಅಪರ್ಣೆಯನ್ನು ಒಂದೊಂದೂವರೆ ವರ್ಷ ಸಲಹಿ ಸಂತಯಿಸಿದ ಕೈಯಿಗಳ ಒಡತಿಯರೇ. ಕಷ್ಟವೋ ಸುಖವೋ, ಸದಾ ತುಟಿಗಳಲ್ಲಿ ನಸುನಗುವಿನ ನಗತೊಟ್ಟವರೇ. ಅವರನ್ನೆಲ್ಲ ನೋಡಿ, ಅರಿವಿಲ್ಲದೆಯೇ ಮತ್ತೊಮ್ಮೆ ಗಂಗೆ ಹರಿಸಿದ್ದಾಯಿತು.
ಹವುದು. ಅಪರ್ಣೆಯೆಂದರೆ ನನ್ನ ಮಟ್ಟಿಗೆ ಇಷ್ಟೇ. ಎಷ್ಟು ಅತ್ತರೂ ಬತ್ತಲೊಲ್ಲದ ಗಂಗೆ. ಒಳಗೇ ಇದ್ದು ಒಡನೊಯ್ಯುವ ವಾಹಿನಿ. ನನ್ನ ಮನೆಮನಸ್ಸುಗಳನ್ನು ಸದಾ ನಡೆಸಲಿಕ್ಕಿರುವ ದೇವತೆ.
ಇಷ್ಟರ ಮೇಲೆ ಹೆಚ್ಚೇನೂ ಹೇಳಲಾರೆ. ಹೇಳಬೇಕಾದ್ದನ್ನೆಲ್ಲ ಕಳೆದೊಂದು ವರ್ಷದಲ್ಲಿ ಹೇಳಿಬಿಟ್ಟಿದ್ದೇನೆ. ಸಾಕಷ್ಟು ಆಡಿಬಿಟ್ಟಿದ್ದೇನೆ. ಅಗತ್ಯಕ್ಕೂ ಹೆಚ್ಚು ಬರೆದೂ ಬಿಟ್ಟಿದ್ದೇನೆ. ಇನ್ನು, ಈ ಒಂದು ವರ್ಷದ ನನ್ನ ದುಗುಡಕಾಂಡದಲ್ಲಿ ಎಷ್ಟೆಲ್ಲ ಮಂದಿ ಒಡನಾಗಿದ್ದೀರಿ. ಈ ಶೋಕಕಾಲದುದ್ದಕ್ಕೂ ನನ್ನನ್ನು ಹಿಂಬಾಲಿಸಿ ಪೊರೆದಿದ್ದೀರಿ. ನನ್ನ ವ್ಯಾಕುಲವನ್ನು ನಿಮ್ಮದೆನ್ನುವ ಹಾಗೆ ಒಳಗಿಳಿಸಿಕೊಂಡಿದ್ದೀರಿ. ನನ್ನದೊಂದೊಂದು ಪಲುಕನ್ನೂ, ಮೆಲುಕನ್ನೂ, ಅವುಗಳೊಡನೆಯ ನೋವಿನ ಕುಲುಕನ್ನೂ ನಿಮ್ಮದೇ ಅನಿಸುವಷ್ಟು ನಿಮ್ಮದಾಗಿಸಿಕೊಂಡಿದ್ದೀರಿ. ನನಗಾಗಿ ತುಡಿದಿದ್ದೀರಿ. ಮಿಡಿದಿದ್ದೀರಿ. ಮನಸ್ಸು ದುಡಿಸಿದ್ದೀರಿ. ತಬ್ಬಿ ಮೈದಡವಿದ್ದೀರಿ. ತಡವಿ ಕಣ್ಣೊರೆಸಿದ್ದೀರಿ.
ನಿಮ್ಮೆಲ್ಲರಿಗೂ ಈ ನಾಗರಾಜ ವಸ್ತಾರೆಯು ಅವನೊಳಗಿನ ಅಪರ್ಣೆಯನ್ನೂ ಒಳಗೊಂಡು ಕೃತಜ್ಞನಾಗಿದ್ದಾನೆ.
ಕಡೆಯದಾಗಿ, ಅಪರ್ಣೆಯ ಬಗ್ಗೆ ಈ ಮುಂದೆ ಇಲ್ಲಿ ಬರೆಯುವುದಿಲ್ಲವೆಂದು ನಿರ್ಧರಿಸಿದ್ದೇನೆ. ಅವಳ ಫೇಸ್ಬುಕ್ ಖಾತೆಯನ್ನು ಆ ಸಲುವಾಗಿ ಮೀಸಲಿಡುವ ಎಣಿಕೆಯಲ್ಲಿದ್ದೇನೆ. ಕಳೆದೊಂದು ವರ್ಷದಿಂದ ನಿಷ್ಕ್ರಿಯಗೊಂಡಿರುವ ಅದನ್ನು ಅವಳ ಪರವಾಗಿ ನಿಯತವಾಗಿ ಮುನ್ನಡೆಸುವುದೆಂಬ ಉಮೇದಿನಲ್ಲಿದ್ದೇನೆ. ಅವಳ ಸೊತ್ತಿನಲ್ಲಿರುವ ಹತ್ತಾರು ಪಟಚಿತ್ರಗಳು, ನುಡಿಚಿತ್ರಿಕೆಗಳು, ಕೈಬರಹದ ಟಿಪ್ಪಣಿಗಳು, ಸ್ಮರಣಿಕೆಗಳು... ಇವೆಲ್ಲವನ್ನೂ ‘ಡಿಜಿಟೀಕರಿಸಿ’ ಮತ್ತು ಕ್ರೋಢೀಕರಿಸಿ, ಸಾರ್ವಜನಿಕ ನಿಲುಕಿಗೆಟುಕುವ ಪರಿವಿಡಿಯೊಂದಾಗಿ ಮುಡಿಪಿಡುವ ಸನ್ನಾಹದಲ್ಲಿದ್ದೇನೆ. ತನ್ನಿಮಿತ್ತವಾಗಿ ಅವಳ ಖಾತೆಯನ್ನು ‘ಸ್ಮರಣಾರ್ಥ’ಗೊಳಿಸುವಂತೆ ಫೇಸ್ಬುಕ್ಕಿನೆದುರು ಅರಿಕೆ ಕೈಕೊಂಡಿದ್ದೇನೆ. ಎಂತಲೇ ನಿಮ್ಮೆಲ್ಲರನ್ನೂ ಈ ಮುಂದೆ ಅಲ್ಲಿ ಎದುರುನೋಡುತ್ತೇನೆ.
ಇನ್ನೂ ಕಡೆಯದಾಗಿ, ಹೇ ಅಪರ್ಣೇ... ನನ್ನನ್ನೂ ಹೇಗಾದರೂ ಪಾರುಮಾಡೆಂದು (ಇದರ ನಿಜಾರ್ಥವೇನೇ ಇರಲಿ) ಅವಳನ್ನು ಒಡಮಾಡಿಕೊಂಡೊಯ್ದ ಅನಂತದೊಳಕ್ಕೂ ಕೋರುತ್ತೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.