ಶೀರ್ಷಿಕೆ ರಿವೀಲ್ ಆಗುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ ಅದಿತಿ ಪ್ರಭುದೇವಾ ಸಿನಿಮಾ. ಸೂಪರ್ ಹೀರೋ ಚಿತ್ರದ ಹಿಂದೆ ಯಾರೆಲ್ಲಾ ಇದ್ದಾರೆ?
ಸ್ಯಾಂಡಲ್‌ವುಡ್ ಬಾರ್ಬಿ , ಬುಸ್ ಬುಸ್ ನಾಗಿಣಿ ಅದಿತಿ ಪ್ರಭುದೇವಾ ಮುಂದಿನ ನಿರೀಕ್ಷಿತ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಯೂಕೆ ಪೋಡಕ್ಷನ್ ಲಾಂಛನದಲ್ಲಿ ಶ್ರೀಮತಿ ಪೂಜಾ ವಸಂತ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸೂಪರ್ ಹೀರೋ ಚಿತ್ರಕ್ಕೆ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ 'ಆನ' ಎಂಬ ಶೀರ್ಷಿಕೆಗೆ ಪೂಜೆ ಸಲ್ಲಿಸಲಾಗಿದೆ.
ಭಾರತದ ಮೊದಲ ಸೂಪರ್ ಹೀರೋ ಚಿತ್ರದಲ್ಲಿ ಮಹಿಳಾ ಪ್ರಧಾನ ಪಾತ್ರದಲ್ಲಿ ಅದಿತಿ ಅಭಿನಯಿಸುತ್ತಿರುವ ಮೆಚ್ಚುಗೆಯ ವಿಚಾರವಾಗಿದೆ. ಕಿರುಚಿತ್ರಗಳು ಹಾಗೂ ಟೆಲಿ ಫಿಲಂಗಳನ್ನು ನಿರ್ದೇಶನ ಮಾಡುತ್ತಿದ್ದ ಮನೋಜ್ ಆವರ ಮೊದಲ ಚಿತ್ರ ಇದಾಗಿರುವ ಕಾರಣ ಸಿನಿ ಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
‘ಲಾಕ್‌ಡೌನ್ ಸಮಯದಲ್ಲಿ ಹೊಳೆದ ಕಥೆ ಇದು. ಸದ್ಯ ಇಡೀ ಭಾರತದಲ್ಲಿ ಲೇಡಿ ಸೂಪರ್ ಹೀರೋ ಪರಿಕಲ್ಪನೆಯಲ್ಲಿ ಯಾವುದೇ ಸಿನಿಮಾ ಬಂದಿಲ್ಲ. ಅದನ್ನೇ ಗಮನದಲ್ಲಿಟ್ಟುಕೊಂಡು ಕಥೆ ಸಿದ್ಧಪಡಿಸಿಕೊಂಡು, ಆರಂಭಿಸಿದ್ದೆ. ಇನ್ನೆರಡು ದಿನದ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಇದೆ. ಚಿತ್ರದ ಕೊನೆಯ 20 ನಿಮಿಷಗಳು ನಿಮ್ಮನ್ನು ಬೇರೋಂದು ಲೋಕಕ್ಕೆ ಕರೆದೊಯ್ಯುವುದು ಪಕ್ಕಾ. ಹಾರರ್ ಶೈಲಿಯ ಅಂಶಗಳೂ ಈ ಸಿನಿಮಾದಲ್ಲಿವೆ. ತಾಂತ್ರಿಕವಾಗಿ ಇಡೀ ಸಿನಿಮಾ ಶ್ರೀಮಂತವಾಗಿ ಮೂಡಿಬಂದಿದೆ. ಇನ್ನೊಂದು ವಿಶೇಷ ಏನೆಂದರೆ, ಈ ಸಿನಿಮಾ ಮುಂದಿನ ದಿನಗಳಲ್ಲಿ ಚಾಪ್ಟರ್‌ಗಳಾಗಿಯೂ ಸಿದ್ಧವಾಗಲಿದೆ’ಎಂದು ನಿರ್ದೇಶಕ ಮನೋಜ್ ಮಾತನಾಡಿದ್ದಾರೆ.
ಹಾರರ್ ಚಿತ್ರದಲ್ಲಿ ಸೂಪರ್ ಹೀರೋ ಆದ ಅದಿತಿ ಪ್ರಭುದೇವ
‘ತುಂಬ ಇಷ್ಟಪಟ್ಟು ಮತ್ತು ತುಂಬ ಕಷ್ಟಪಟ್ಟು ಮಾಡಿದ ಸಿನಿಮಾ ಇದು. ಇಂಥ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಕಥೆ ಕೇಳಿ ಒಂದೇ ಸಲಕ್ಕೆ ನಟಿಸಲು ಒಪ್ಪಿಕೊಂಡಿದ್ದೇನೆ. ಚಿತ್ರದ ಬಹುಪಾಲು ಶೂಟಿಂಗ್ ರಾತ್ರಿ ಹೊತ್ತಿನಲ್ಲಿಯೇ ನಡೆದಿದೆ. ಇನ್ನು ಕೆಲ ಭಾಗದ ಚಿತ್ರೀಕರಣ ಬಾಕಿ ಇದೆ. ನನ್ನ ಸಿನಿಮಾ ಕರಿಯರ್‌ನಲ್ಲಿ ಇಲ್ಲಿಯವರೆಗೂ ನಾನು ಮಾಡದ ವಿಶೇಷ ಪಾತ್ರವಿದು. ಇಂತಹ ಅವಕಾಶ ನೀಡಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದ’ ಎಂದು ಅದಿತಿ ಪ್ರಭುದೇವಾ ಮಾತನಾಡಿದ್ದಾರೆ.
ಸಮರ್ಥ, ವಿಕಾಸ್ ಉತ್ತಯ್ಯ, ವರುಣ್ ಅಮರಾವತಿ ಹಾಗೂ ಕಾರ್ತಿ ನಾಲ್ಕುರನ್ನು ಪ್ರಮುಖ ಪಾತ್ರದಲ್ಲಿ ಕಾಣಬಹುದು. ಅಲ್ಲದೆ ಚೂರಿಕಟ್ಟೆಯಲ್ಲಿ ಅಭಿನಯಿಸಿದ ಪ್ರೇರಣಾ ಕೂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.