ನಗು, ಅಳು ಎರಡನ್ನೂ ದಯಪಾಲಿಸಿದ ದಿನಗಳಿವು; ಧನ್ಯಾ ರಾಮ್‌ಕುಮಾರ್‌ ಲಾಕ್‌ಡೌನ್‌ ಬದುಕು!

By Kannadaprabha NewsFirst Published May 22, 2020, 10:08 AM IST
Highlights

‘ನಿನ್ನ ಸನಿಹಕೆ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ರಾಜ್‌ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್‌. ಈ ಹುಡುಗಿಗೆ ನಾಯಿಗಳಂದ್ರೆ ಪ್ರಾಣ, ಫ್ರೆಂಡ್ಸೇ ಜಗತ್ತು ಅಂತಿದ್ದ ಹುಡುಗಿ, ಲಾಕ್‌ಡೌನ್‌ ಟೈಮ್‌ನಲ್ಲಿ ತಮ್ಮ ನಗು, ಅಳುವನ್ನು ತಾವೇ ಕಂಡ ಬಗೆಯನ್ನು ಇಲ್ಲಿ ವಿವರಿಸಿದ್ದಾರೆ.

- ಪ್ರಿಯಾ ಕೆರ್ವಾಶೆ

- ಲಾಕ್‌ಡೌನ್‌ ಟೈಮ್‌ನಲ್ಲಿ ನನ್ನ ಬೇಸರಗಳು, ಖುಷಿ, ವಿಷಾದಗಳ ಸಾಕ್ಷಾತ್‌ ದರ್ಶನ ಆಯ್ತು. ಮೊದಲಾದರೆ ಬೇಜಾರಾದರೆ ಹೊರಗೆ ಹೋಗ್ತಿದ್ದೆ. ಸರಿ ಹೋಗ್ತಿತ್ತು, ಆದರೆ ಈಗ ಆ ಅವಕಾಶ ಇಲ್ಲವಲ್ಲ. ಬೇಸರ ತೀವ್ರಮಟ್ಟಕ್ಕೆ ಹೋಗೋದನ್ನ ಕಂಡಿದ್ದೇನೆ. ನನ್ನೊಳಗಿನ ಖುಷಿಗೆ ನಾನೇ ಸಾಕ್ಷಿಯಾಗಿದ್ದೇನೆ. ನನಗೆ ಅಪರಿಚಿತವಾಗಿದ್ದ ನನ್ನ ಎಷ್ಟೋ ಗುಣಗಳು ಈ ಸಮಯದಲ್ಲಿ ನನ್ನ ಅರಿವಿಗೆ ಬಂದವು.

- ನಮ್ಮ ಮನೆಯಲ್ಲಿ ಎರಡು ನಾಯಿಗಳಿವೆ. ಲೋಕಿ ಮತ್ತು ಮೈಕೋ ಅಂತ. ನನಗೆ ಬಹಳ ಇಷ್ಟ. ದೊಡ್ಡದು ಹೊರಗಿರುತ್ತೆ. ಚಿಕ್ಕವನು ನನ್ನ ಬೆನ್ನ ಮೇಲೆ ಹತ್ತಿಕೊಂಡು, ಬೆಡ್‌ ಮೇಲೆ ಓಡಾಡ್ತಾ ನನ್ನ ಜೊತೆಗೇ ಇರುತ್ತಾನೆ. ಭಾರೀ ಚಾಲೂ ಅವ್ನು. ಹೆಚ್ಚು ಕಮ್ಮಿ ನನ್ನದೇ ಸ್ವಭಾವ. ಖುಷೀಲಿದ್ರೆ ಮೈಮೇಲೆ ಹತ್ತಿ ಕುಣಿದಾಡೋದು. ನಾನು ಅಳ್ತಾ ಇದ್ರೆ ಏನೂ ಮಾಡದೇ ಪಕ್ಕ ನಿಂತು ಬಿಡುತ್ತಾನೆ. ಸಿಟ್ಟು ಮಾಡ್ಕೊಂಡಿದ್ರೆ ದೂರ ಹೆದರ್ಕೊಂಡು ಇರೋದು. ಈ ಇಬ್ಬರ ಜೊತೆಗಿದ್ದರೆ ನನಗೆ ಬೋರ್‌ ಆಗೋದೇ ಇಲ್ಲ.

ನಲವತ್ತು ಸಲ ಓಂ ಸಿನಿಮಾ ನೋಡಿರಬಹುದು

ಓಂ ಸಿನಿಮಾ ನಲವತ್ತಕ್ಕೂ ಹೆಚ್ಚು ಸಲ ನೋಡಿದ್ದೀನಿ. ಇತ್ತೀಚೆಗೆ ಮತ್ತೊಮ್ಮೆ ನೋಡಿದೆ. ಬೋರ್‌ ಆದಾಗೆಲ್ಲ ಓಂ ಸಿನಿಮಾ ನೋಡೋದು ರೂಢಿಯಾಗಿಬಿಟ್ಟಿದೆ. ಕೆಲವೊಮ್ಮೆ ಅದರ ಕೆಲವು ಸೀನ್‌ಗಳನ್ನು ಮಾತ್ರ ನೋಡೋದೂ ಇದೆ. ಯಾರಾದರೂ ಓಂ ಬಗ್ಗೆ ಮಾತಾಡಿದರೆ ಮನೆಗೆ ಹೋಗಿ ಅದರ ಸೀನ್‌ಗಳನ್ನು ನೋಡೋದು ಹವ್ಯಾಸವೇ ಆಗಿಬಿಟ್ಟಿದೆ. ಇದಲ್ಲದೇ ಕೊರಿಯನ್‌ ಸಿನಿಮಾಗಳಾದ ಪ್ಯಾರಸೈಟ್‌, ಒನ್‌ ಡೇ, ಜೊತೆಗೆ ತಾತನ, ಅಪ್ಪನ ಸಿನಿಮಾಗಳನ್ನು ನೋಡಿದ್ದೀನಿ.

- ಲಾಕ್‌ಡೌನ್‌ ಟೈಮ್‌ನಲ್ಲಿ ನಾನು ಅನೇಕ ಫಿಟ್‌ನೆಸ್‌ ಟೆಕ್ನಿಕ್‌ಗಳನ್ನು ಕಲಿತೆ. ಮೊದಲಾದ್ರೆ ಜಿಮ್‌ಗೆ ಹೋಗಿ ವೇಯ್‌್ಟಟ್ರೈನಿಂಗ್‌ ತಗೊಳ್ತಿದ್ದೆ. ಈ ಅವಧಿಯಲ್ಲಿ ಝುಂಬಾ, ಯೋಗ, ಡ್ಯಾನ್ಸ್‌, ಟಬಾಟ, ಮನೆಯಲ್ಲಿ ಮಾಡೋ ವರ್ಕೌಟ್‌ಗಳನ್ನು ಟ್ರೈ ಮಾಡಿದೆ. ಲಾಕ್‌ಡೌನ್‌ ಇಲ್ಲದಿದ್ದರೆ ಇವನ್ನೆಲ್ಲ ಕಲಿಯಲಿಕ್ಕೆ ಆಗ್ತಾ ಇರಲಿಲ್ಲ ಅನಿಸುತ್ತೆ.

- ಈ ಟೈಮ್‌ನಲ್ಲಿ ನಡೆದ ಒಂದು ಮರೆಯಲಾರದ ಘಟನೆ ಇದೆ. ಲಾಕ್‌ಡೌನ್‌ ಶುರುವಾದ ಮೇಲೆ ನಾವ್ಯಾರೂ ಮನೆಯಿಂದಾಚೆ ಹೋಗಿಲ್ಲ. ಮನೆಗೆ ಬೇಕಾದ ದಿನಸಿಗಳನ್ನೂ ಆನ್‌ಲೈನ್‌ನಲ್ಲೇ ತರಿಸುತ್ತಿದ್ವಿ. ಏಪ್ರಿಲ್‌ 15ಕ್ಕೆ ಅಷ್ಟೂದಿನಗಳ ಬಳಿಕ ನಾವು ಮನೆಯಿಂದ ಆಚೆ ಹೋಗಿದ್ದು. ತಾತನ ಪೂಜೆ ಇತ್ತು. ಮನೆಯವರು ಮಾತ್ರ ಇದ್ದಿದ್ದು. ಆದರೆ ಎಲ್ಲರೂ ಮಾಸ್ಕ್‌ ಹಾಕಿಕೊಂಡು ಒಬ್ರನ್ನು ನೋಡಿ ಒಬ್ರು ನಗುತ್ತಾ, ಬಹಳ ಖುಷಿಯಿಂದಿದ್ದ ಕ್ಷಣಗಳವು. ಅಷ್ಟುದಿನಗಳ ಐಸೊಲೇಶನ್‌ ಬಳಿಕ ಹೀಗೊಂದು ಫ್ಯಾಮಿಲಿ ಮೀಟ್‌ ಎಂದಿಗಿಂತ ಬಹಳ ಆಪ್ತ ಅನಿಸಿತು.

- ಮೊದಲಿನ ಹ್ಯಾಂಗೌಟ್‌ ಜಾಗಗಳನ್ನು ಬಹಳ ಮಿಸ್‌ ಮಾಡ್ಕೊಳ್ತೀನಿ. ತಿನ್ನೋದು ನಂಗೆ ಬಹಳ ಇಷ್ಟ. ಬೋಟಾಯ್‌ ಅನ್ನೋ ಹ್ಯಾಂಗೌಟ್‌ ಪ್ಲೇಸ್‌ ಇದೆ. ಅದನ್ನು ತುಂಬ ಮಿಸ್‌ ಮಾಡ್ಕೊಳ್ತಿದ್ದೀನಿ. ಸಿನಿಮಾಗಳು, ಬೇರೆ ಬೇರೆ ಜಾಗಗಳು, ಅಲ್ಲಿನ ಡಿಶ್‌ಗಳೆಲ್ಲ ಬಹಳ ನೆನಪಾಗುತ್ತವೆ. ಮನೆಯಲ್ಲಿ ಬೇಕಿಂಗ್‌ ಟ್ರೈ ಮಾಡಿದ್ದೀನಿ, ಸ್ಪಾಂಜ್‌ ಕೇಕ್‌. ಮೊದಲ ಸಲ ಅಷ್ಟುಚೆನ್ನಾಗಿ ಬರಲಿಲ್ಲ. ಎರಡನೇ ಸಲ ಚೆನ್ನಾಗಿ ಬಂದಿತ್ತು. ಉಳಿದಂತೆ ಯಾವ ರೆಸಿಪಿಯನ್ನೂ ಟ್ರೈ ಮಾಡಿಲ್ಲ.

- ಇನ್‌ಸ್ಟಾದಲ್ಲಿ ಮೀಮ್ಸ್‌ಗಳನ್ನು ನೋಡ್ತೀನಿ. ಇತ್ತೀಚೆಗೆ ಒಂದು ಮೀಮ್ಸ್‌ ನೋಡಿ ನಾನು ಕಲಾವಿದೆ ಆಗುತ್ತಿರೋದೂ ಸಾರ್ಥಕ ಅನಿಸಿತು. ಅದರಲ್ಲಿ ಇದ್ದಿದ್ದಿಷ್ಟು- ಲಾಕ್‌ಡೌನ್‌ ನಂಥಾ ಸಂದರ್ಭದಲ್ಲಿ ನಮ್ಮನ್ನು ಖುಷಿಯಾಗಿಟ್ಟಿರೋದು ಕಲಾವಿದರು. ಸಿನಿಮಾ, ಹಾಡುಗಳು ನಮ್ಮ ದಿನಗಳನ್ನು ಜೀವಂತವಾಗಿಟ್ಟಿವೆ, ಇದಕ್ಕಾಗಿ ನಾವು ಕಲಾವಿದರಿಗೆ ಕೃತಜ್ಞರಾಗಿರಬೇಕು ಅಂತಿತ್ತು, ನನ್ನನ್ನಿದು ಬಹಳ ಟಚ್‌ ಮಾಡಿತು.

click me!