ಕೊರೋನಾ ನಿಯಂತ್ರಣಕ್ಕೆ ಜಾರಿ ಮಾಡಿರುವ ನಿಯಮಗಳ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ಸಿಟಿ ಪೊಲೀಸ್ ಸೆಲೆಬ್ರಿಟಿಗಳ ಮೂಲಕ ಸಾರ್ವಜನಿಕರಿಗೆ ಕೊರೋನಾ ಕಿವಿ ಮಾತುಗಳನ್ನು ಹೇಳಿಸುತ್ತಿದ್ದಾರೆ. ‘ಅರೆಸ್ಟ್ ಕೊರೋನಾ’ ಹೆಸರಿನಲ್ಲಿ ಪೊಲೀಸ್ ಇಲಾಖೆ ನಡೆಸುತ್ತಿರುವ ಅಭಿಯಾನದಲ್ಲಿ ಸೆಲೆಬ್ರಿಟಿಗಳು ಹೇಳಿರುವ ಮಾತುಗಳಿವು.
ಪುನೀತ್‌ರಾಜ್‌ಕುಮಾರ್, ನಟ
undefined
ಕೋವಿಡ್ ಎರಡನೇ ಅಲೆ ಜೋರಾಗಿದೆ. ಇದಕ್ಕೆ ಯಾರೋ ಒಬ್ಬರು ಪರಿಹಾರ ಮಾಡಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಾವೆಲ್ಲ ಸೇರಿ ಕೆಲಸ ಮಾಡಬೇಕಿದೆ. ಮೊದಲು ವ್ಯಾಕ್ಸಿನೇಷನ್ ತೆಗೆದುಕೊಳ್ಳಿ. ನಾನು ಕೂಡ ಫಸ್ಟ್ ಡೋಸ್ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದೇನೆ. ದಯವಿಟ್ಟು ಎಲ್ಲರೂ ಮಾಸ್ಕ್‌ಗಳನ್ನು ಬಳಸಿ. ಗುಂಪು ಗುಂಪಾಗಿ ಓಡಾಡುವಾಗ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸುವುದನ್ನು ಪಾಲಿಸಿ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದಿರುವ ನೀತಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸೋಣ. ಒಂದು ವೇಳೆ ಕೊರೋನಾ ಪಾಸಿಟಿವ್ ಅಂತ ಗೊತ್ತಾದರೆ ಹೆದರಬೇಡಿ. ಧೈರ್ಯವಾಗಿ ಎದುರಿಸಿ. ನಾಚಿಕೆ, ಭಯಪಡಬೇಡಿ. ಚಿಕಿತ್ಸೆ ಪಡೆಯಿರಿ. ಹಾಗೆ ಕೋವಿಡ್ ವಾರಿಯರ್‌ಗಳ ಬಗ್ಗೆಯೂ ಯೋಚಿಸಿ. ನಾವೆಲ್ಲ ಒಟ್ಟಾಗಿ ಕೊರೋನಾ ಸಂಕಷ್ಟವನ್ನು ಹಿಮ್ಮೆಟ್ಟಿಸೋಣ.
ಕುಟುಂಬದವರನ್ನ ಕಳ್ಕೊಂಡ 'ಗಟ್ಟಿಮೇಳ' ನಟ ಪವನ್; ಸರ್ಕಾರದಿಂದ ಸಾಮೂಹಿಕ ಕೊಲೆ?
ಪ್ರಜ್ವಲ್ ದೇವರಾಜ್, ನಟ
ಯಾವಾಗಲೂ ನಿಮ್ಮ ಜತೆ ಮಾತನಾಡುವಾಗ ಮುಖದಲ್ಲಿ ನಗು, ಮನಸ್ಸಿನಲ್ಲಿ ಖುಷಿ ಇರುತ್ತಿತ್ತು. ಮೊದಲ ಬಾರಿಗೆ ದುಃಖ ಮತ್ತು ಬೇಜಾರು ಹಾಗೆ ಕೋಪ ಇದೆ. ದುಃಖ ಯಾಕೆಂದರೆ ಕೊರೋನಾದಿಂದ ಸಾಕಷ್ಟುಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಬೇಜಾರು ಮತ್ತು ಕೋಪ ಯಾಕೆಂದರೆ ಒಂದು ಸಿಂಪಲ್ ರೂಲ್ಸ್ ನಮಗಾಗಿ ಮಾಡಿದ್ದಾರೆ. ಆದರೆ ಯಾರೂ ಸರಿಯಾಗಿ ಅನುಸರಿಸುತ್ತಿಲ್ಲ. ಮೂಗಿನಿಂದ ಕೆಳಗೆ ಮಾಸ್ಕ್‌ಗಳನ್ನು ಹಾಕುತ್ತಿದ್ದಾರೆ. ಮಾಸ್ಕ್ ನಮ್ಮ ಜೀವ ಉಳಿಸುತ್ತಿರುವ ವಸ್ತು. ಅದನ್ನು ಸರಿಯಾಗಿ ಬಳಸಿ. ನಾನೂ ಕೊರೋನಾಗೆ ತುತ್ತಾಗಿ ಅದರಿಂದ ಹೋರಾಡಿ ಬಂದಿದ್ದೇನೆ. ಕೋವಿಡ್ ಬಂದರೆ ಮನೆಯಲ್ಲಿರುವವರ ಸ್ಥಿತಿ, ಒತ್ತಡ ಹೇಗಿರುತ್ತದೆ ಅಂತ ಗೊತ್ತು. ವೈದ್ಯರು, ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಎಲ್ಲರೂ ಸರ್ಕಾರದ ರೂಲ್ಸ್ ಪಾಲಿಸೋಣ. ಮಾಸ್ಕ್‌ಗಳನ್ನು ಸರಿಯಾಗಿ ಬಳಸೋಣ. ನೀವು ಇದ್ದರೆ ನಾವು, ನೀವು ಖುಷಿಯಾಗಿ ಇರಬೇಕು. ನಿಮ್ಮ ಮನೆಯವರು ಆರೋಗ್ಯವಾಗಿರಬೇಕು.
ವಸಿಷ್ಠ ಸಿಂಹ, ನಟ
ಕೊರೋನಾ ಎರಡನೇ ಅಲೆ ಸಾಕಷ್ಟುವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ನಾವೇ ಕಾರಣ. ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲನೆ ಮಾಡಿದ್ದರೆ ನಮಗೆ ಈ ಒಂದು ಪರಿಸ್ಥಿತಿ ಬರುತ್ತಿರಲಿಲ್ಲ. ನಿತ್ಯ ಸಂಭವಿಸುತ್ತಿರುವ ಸಾವು- ನೋವುಗಳನ್ನು ನೋಡುತ್ತಿದ್ದೇವೆ. ಕೊರೋನಾ ಇನ್ನೂ ಹೆಚ್ಚು ಹರಡಬಾರದು. ಅದರ ಚೈನ್ ಬ್ರೇಕ್ ಆಗಬೇಕು ಎಂದರೆ ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿ ಇದೆ ಎಂದು ಭಾವಿಸಿ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸೋಣ. ಮಾಸ್ಕ್ ಹಾಕಿಕೊಳ್ಳಿ, ಸ್ಯಾನಿಟೈಸರ್ ಬಳಕೆ ಮಾಡಿ, ಕೈಗಳನ್ನು ಪದೇ ಪದೇ ತೊಳೆಯಿರಿ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಕೊರೋನಾ ನಿಯಂತ್ರಣ ಆಗುತ್ತದೆ. ಸರ್ಕಾರ ಹೊರಡಿಸಿರುವ ನಿಯಮಗಳನ್ನು ಪಾಲಿಸೋಣ. ವೈದ್ಯರು ಮತ್ತು ಪೊಲೀಸರ ಜತೆ ಕೈಜೋಡಿಸಿ ಕೊರೋನಾ ಯುದ್ಧ ಗೆಲ್ಲೋಣ. ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಿ, ಇಲ್ಲದಿದ್ದರೆ ಮನೆಯಲ್ಲೇ ಇರಿ.
ಕೊರೋನಾ ವಾರಿಯರ್ಸ್ ಬಳಕೆಗೆ ದುಬಾರಿ ವ್ಯಾನಿಟಿ ವ್ಯಾನ್ ನೀಡಿದ ನಟರು!
ಅನಿರುದ್ಧ್, ನಟ
ನನ್ನ ಪರಿಚಿತರೊಬ್ಬರು ಕೊರೋನಾದಿಂದ ತೀರಿಕೊಂಡರು. ಅವರು ತೀರಿಕೊಳ್ಳುವ ಮೊದಲು ಚಿಕಿತ್ಸೆ ಕೊಡಿಸಲಿಕ್ಕೆ ಸಾಕಷ್ಟುಪ್ರಯತ್ನಗಳನ್ನು ಮಾಡಿದ್ವಿ. ಆಸ್ಪತ್ರೆಗಳು ಪೇಷೆಂಟ್‌ಗಳನ್ನು ಸೇರಿಸಿಕೊಳ್ಳುತ್ತಿಲ್ಲ. ಸೇರಿಸಿಕೊಂಡರೆ ಬೆಡ್‌ಗಳು ಇಲ್ಲ, ಬೆಡ್ ಇದ್ದರೆ ಐಸಿಯೂ ಇಲ್ಲ. ಎಲ್ಲವೂ ಇದ್ದರೆ ರೆಮ್‌ಡೆಸಿವಿರ್ ಇಂಜೆಕ್ಷನ್ ಸಿಗುತ್ತಿಲ್ಲ. ಅದು ಬ್ಲ್ಯಾಕ್‌ನಲ್ಲಿ ಸಿಗುತ್ತಿದೆ. ಇದು ಈಗಿರುವ ಪರಿಸ್ಥಿತಿ. ಏನೇ ಪ್ರಯತ್ನ ಮಾಡಿದರೂ ಅವರನ್ನು ನಾವು ಉಳಿಸಿಕೊಳ್ಳಲಿಕ್ಕೆ ಆಗಲಿಲ್ಲ. ಇನ್ನು ಅಂತ್ಯಸಂಸ್ಕಾರದಲ್ಲಿ ಹಲವು ಮೃತ ದೇಹಗಳ ಜೊತೆಗೆ ಕ್ಯೂ. ಕೊರೋನಾ ಭೀಕರತೆ ಅರ್ಥ ಮಾಡಿಸಲು ಇದನ್ನು ಹೇಳುತ್ತಿದ್ದೇನೆ. ನನ್ನ ಕಳಕಳಿಯ ಮನವಿ, ಯಾರೂ ಆಚೆ ಹೋಗಬೇಡಿ. ಮಾಸ್ಕ್‌ಗಳನ್ನು ಸರಿಯಾಗಿ ಬಳಸಿ. ಕೈಗಳನ್ನು ಆಗಾಗ ಸ್ವಚ್ಛ ಮಾಡಿಕೊಳ್ಳಿ. 45 ವರ್ಷ ಮೇಲ್ಪಟ್ಟವರು ಕೊರೋನಾ ಲಸಿಕೆ ತೆಗೆದುಕೊಳ್ಳಿ. ನಾವು ಒಬ್ಬರೇ ಅಲ್ಲ. ನಮಗೊಂದು ಕುಟುಂಬ ಇದೆ. ನಮಗೇನಾದರೂ ಆದರೂ ಕುಟುಂಬಕ್ಕೆ ತೊಂದರೆ ಆಗುತ್ತದೆ. ನಿಮ್ಮನ್ನು ನೀವು ರಕ್ಷಿಸಿ, ನಾಡನ್ನೂ ರಕ್ಷಿಸಿ.
ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ...