ಶಿವಣ್ಣನಿಗೆ ರಾಖಿ ಕಟ್ಟಿದ ನಟ ಜಗ್ಗೇಶ್: ಗೀತಾ ದಂಪತಿ ಕೊಟ್ಟ ಗಿಫ್ಟ್‌ ನೋಡಿ ಭಾವುಕರಾದ ನವರಸನಾಯಕ!

Published : Sep 14, 2026, 05:36 PM IST
Jaggesh Shivarajkumar

ಸಾರಾಂಶ

ನಟ ಜಗ್ಗೇಶ್ ಅವರು ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿ ರಾಖಿ ಕಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿ ಜಗ್ಗೇಶ್ ಅವರಿಗೆ ದುಬಾರಿ ವರ್ಸಾಚೆ ವಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಹಾಗೂ ಜಗ್ಗೇಶ್ ಅವರ ಸ್ನೇಹಕ್ಕೆ ದಶಕಗಳ ಇತಿಹಾಸವಿದೆ. ಇದೀಗ ಈ ಆತ್ಮೀಯ ಬಾಂಧವ್ಯಕ್ಕೆ ಮತ್ತೊಂದು ಸುಂದರ ಕ್ಷಣ ಸಾಕ್ಷಿಯಾಗಿದೆ. ನಟ ಜಗ್ಗೇಶ್ ಅವರು ಶಿವಣ್ಣನ ಮನೆಗೆ ತೆರಳಿ ರಾಖಿ ಕಟ್ಟಿದ್ದು, ಅದಕ್ಕೆ ಪ್ರತಿಯಾಗಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಜಗ್ಗೇಶ್ ಅವರಿಗೆ ದುಬಾರಿ ವಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಶೇಷ ಕ್ಷಣವನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶಿವಣ್ಣನ ಕುಟುಂಬದ ಆತ್ಮೀಯತೆಯನ್ನು ಮನಸಾರೆ ಹೊಗಳಿದ್ದಾರೆ.

ಶಿವಣ್ಣನಿಗೆ ರಾಖಿ ಕಟ್ಟಿದ ಜಗ್ಗೇಶ್

ಇತ್ತೀಚೆಗಷ್ಟೇ ರಕ್ಷಾ ಬಂಧನ ಹಬ್ಬ ಮುಗಿದಿದೆ. ಶಿವರಾಜ್ ಕುಮಾರ್ ಅವರನ್ನು ಚಿತ್ರರಂಗದ ಹಲವರು ತಮ್ಮ ಸಹೋದರನಂತೆ ಕಾಣುತ್ತಾರೆ. ಪ್ರತಿವರ್ಷವೂ ಹಲವು ಕಲಾವಿದರು ಶಿವಣ್ಣನಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಭಾವನೆ ಹಂಚಿಕೊಳ್ಳುತ್ತಾರೆ. ಅದೇ ರೀತಿ ಈ ಬಾರಿ ನಟ ಜಗ್ಗೇಶ್ ಕೂಡ ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿ ರಾಖಿ ಕಟ್ಟಿದ್ದಾರೆ. ಹಲವು ವರ್ಷಗಳಿಂದ ಇರುವ ತಮ್ಮ ಆತ್ಮೀಯ ಸಂಬಂಧವನ್ನು ಮತ್ತೊಮ್ಮೆ ನೆನಪಿಸುವಂತೆ ಈ ಭೇಟಿ ನಡೆದಿದ್ದು, ಶಿವಣ್ಣನ ಕುಟುಂಬವೂ ಜಗ್ಗೇಶ್ ಅವರನ್ನು ವಿಶೇಷವಾಗಿ ಸತ್ಕರಿಸಿದೆ.

ಜಗ್ಗೇಶ್‌ಗೆ 2.60 ಲಕ್ಷ ರೂ. ಬೆಲೆಯ ವಾಚ್‌ ಗಿಫ್ಟ್‌!

ಜಗ್ಗೇಶ್ ಅವರು ರಾಖಿ ಕಟ್ಟಿದ ಬಳಿಕ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಬರೋಬ್ಬರಿ 2.60 ಲಕ್ಷ ರೂಪಾಯಿ ಮೌಲ್ಯದ ವರ್ಸಾಚೆ ಗ್ರೆಸಾ ರಿಯಾಕ್ಷನ್ ವಾಚ್‌ ಅನ್ನು ಜಗ್ಗೇಶ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಈ ದುಬಾರಿ ವಾಚ್‌ ಅನ್ನು ಕೈಗೆ ತೊಡಿಸಿದ ಕ್ಷಣವನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ವಾಚ್‌ನ ಬೆಲೆಗಿಂತಲೂ, ಶಿವಣ್ಣ ಮತ್ತು ಗೀತಾ ಅವರು ತೋರಿದ ಆತ್ಮೀಯತೆಯೇ ತಮ್ಮನ್ನು ಹೆಚ್ಚು ಭಾವುಕರನ್ನಾಗಿಸಿದೆ ಎಂಬುದನ್ನು ಜಗ್ಗೇಶ್ ತಮ್ಮ ಬರಹದಲ್ಲಿ ವ್ಯಕ್ತಪಡಿಸಿದ್ದಾರೆ.

‘40 ವರ್ಷಗಳ ಆತ್ಮೀಯ ಭಾವ ಕರಗದೆ ಕಲ್ಪವೃಕ್ಷವಾಗಿದೆ’

ಶಿವರಾಜ್ ಕುಮಾರ್ ಅವರ ಮನೆಗೆ ಆತ್ಮೀಯ ಸ್ನೇಹಿತ ಶ್ರೀನಿಧಿ ಅವರೊಂದಿಗೆ ತೆರಳಿದ್ದ ಜಗ್ಗೇಶ್, ಸುಮಾರು ಅರ್ಧ ಗಂಟೆ ಕಾಲ ಅವರೊಂದಿಗೆ ಸಮಯ ಕಳೆದಿದ್ದಾರೆ. ಈ ಸಂದರ್ಭದಲ್ಲಿ ನಾಲ್ಕು ದಶಕಗಳ ತಮ್ಮ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ. ಜಗ್ಗೇಶ್ ಅವರ ಬರಹದಲ್ಲಿ, ‘ನನ್ನ ನಲ್ಮೆಯ ಸಹೋದರ ಶಿವರಾಜ್ ಕುಮಾರ್ ಅವರ ಮನೆಗೆ ನನ್ನ ಆತ್ಮೀಯ ಮಿತ್ರ ಶ್ರೀನಿಧಿ ಅವರೊಂದಿಗೆ ತೆರಳಿ ಅರ್ಧ ಗಂಟೆ ಕಾಲ ಕಳೆದು ಬಂದೆ. 40 ವರ್ಷದ ಆ ಆತ್ಮೀಯ ಭಾವ ಕರಗದೆ ಕಲ್ಪವೃಕ್ಷವಾಗಿ ಉಳಿದಿದೆ’ ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಗೀತಾ ಅವರ ಆತಿಥ್ಯಕ್ಕೆ ಜಗ್ಗೇಶ್ ಭಾವುಕ

ಮನೆಗೆ ಬಂದ ಅತಿಥಿಯನ್ನು ಅಣ್ಣನಂತೆ ಕಾಣಿಸಿ ಗೀತಾ ಅವರು ತೋರಿದ ಮಮತೆ ಜಗ್ಗೇಶ್ ಅವರ ಮನಸ್ಸನ್ನು ಮುಟ್ಟಿದೆ. ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ ಸಂದರ್ಭವನ್ನು ನೆನಪಿಸಿಕೊಂಡು, ತಾವು ಭಾವುಕರಾದ ಕ್ಷಣವನ್ನೂ ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ ಶಿವಣ್ಣನ ತಂದೆ, ವರನಟ ಡಾ. ರಾಜ್‌ಕುಮಾರ್ ಅವರೊಂದಿಗಿನ ತಮ್ಮ ಹಳೆಯ ನೆನಪುಗಳನ್ನೂ ಜಗ್ಗೇಶ್ ಮೆಲುಕು ಹಾಕಿದ್ದಾರೆ. ರಾಜ್‌ಕುಮಾರ್ ಅವರೊಂದಿಗೆ ಕಳೆದ ದಿನಗಳು ಮತ್ತೆ ಮತ್ತೆ ನೆನಪಾಗುತ್ತಿವೆ ಎಂದು ಹೇಳಿರುವ ಅವರು, ಶಿವಣ್ಣನಲ್ಲಿ ತಮ್ಮ ತಂದೆಯ ಹಲವು ಗುಣಗಳನ್ನು ಕಾಣುತ್ತಿರುವ ಭಾವವನ್ನೂ ವ್ಯಕ್ತಪಡಿಸಿದ್ದಾರೆ.

ಶಿವಣ್ಣ-ಜಗ್ಗೇಶ್ ಸ್ನೇಹಕ್ಕೆ ದಶಕಗಳ ನಂಟು

ಜಗ್ಗೇಶ್ ಮತ್ತು ಶಿವರಾಜ್ ಕುಮಾರ್ ಅವರ ಸ್ನೇಹ ಇಂದಿನದ್ದಲ್ಲ. ಹಲವು ವರ್ಷಗಳಿಂದ ಇಬ್ಬರ ನಡುವೆ ಆತ್ಮೀಯ ಬಾಂಧವ್ಯವಿದೆ. ವಿವಿಧ ವೇದಿಕೆಗಳಲ್ಲಿ ಜಗ್ಗೇಶ್ ಅವರು ಶಿವಣ್ಣನ ವ್ಯಕ್ತಿತ್ವವನ್ನು ಮನಸಾರೆ ಕೊಂಡಾಡಿದ್ದಾರೆ. ಅದರ ಜೊತೆಗೆ ಡಾ. ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಜಗ್ಗೇಶ್, ರಾಜ್‌ಕುಮಾರ್ ಅವರೊಂದಿಗೆ ತಾವು ಕಳೆದ ಅಪರೂಪದ ಕ್ಷಣಗಳನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಾರೆ. ಇದೀಗ ಶಿವಣ್ಣನ ಕುಟುಂಬದ ಆತ್ಮೀಯತೆ ಮತ್ತು ಉದಾರತೆಯನ್ನು ಕೂಡ ಜಗ್ಗೇಶ್ ಮನಸಾರೆ ಹೊಗಳಿದ್ದಾರೆ. ಇನ್ನು ರಾಖಿಯ ಮೂಲಕ ಸಹೋದರತ್ವವನ್ನು ಸಂಭ್ರಮಿಸಿದ ಜಗ್ಗೇಶ್, ಪ್ರತಿಯಾಗಿ ಸಿಕ್ಕ ದುಬಾರಿ ವಾಚ್‌ಗಿಂತಲೂ ಶಿವಣ್ಣ-ಗೀತಾ ದಂಪತಿ ತೋರಿದ ಪ್ರೀತಿ ಮತ್ತು ಆತ್ಮೀಯತೆಯನ್ನು ಹೆಚ್ಚು ಮೌಲ್ಯಯುತವಾಗಿ ಕಂಡಿರುವುದು ಈ ಭೇಟಿಯ ವಿಶೇಷ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಣೇಶ ಹಬ್ಬಕ್ಕೆ ಸಿನಿಪ್ರಿಯರಿಗೆ ಸರ್ಪ್ರೈಸ್: ಮಾಲಾಶ್ರೀ-ರುಕ್ಮಿಣಿಯ ಅಸಾಮಾನ್ಯ ಪಯಣ 'ಮಂಗಳಗೌರಿ'
ಅಕ್ಷಯ್ ಕುಮಾರ್ ಕನ್ನಡದಲ್ಲಿ ವಿಷ್ಣುವರ್ಧನ್ ಜೊತೆ ನಟಿಸಿದ ಏಕೈಕ ಸಿನಿಮಾವಿದು: ಕ್ಲೈಮ್ಯಾಕ್ಸ್ ಅದ್ಭುತ!