
'ಸಾಹಸ ಸಿಂಹ' ಡಾ. ವಿಷ್ಣುವರ್ಧನ್ ಕನ್ನಡಿಗರ ಮನದಲ್ಲಿ ಉಳಿದಿರುವ ಹೆಸರು ಮಾತ್ರವಲ್ಲ.. ಅದೆಷ್ಟೋ ಕಲಾವಿದರ ಬದುಕಿನಲ್ಲಿ ಮರೆಯಲಾಗದ ಅಧ್ಯಾಯ. ಅವರೊಂದಿಗೆ ಒಡನಾಟ ಹೊಂದಿದ್ದವರು ಇಂದಿಗೂ ಆ ನೆನಪುಗಳನ್ನು ಮೆಲುಕು ಹಾಕುತ್ತಲೇ ಇರುತ್ತಾರೆ. ಅಂತಹವರಲ್ಲಿ ನಟ ರಮೇಶ್ ಅರವಿಂದ್ ಕೂಡ ಒಬ್ಬರು.
ಇಂದು (ಸೆಪ್ಟೆಂಬರ್ 27) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಭಾಗವಹಿಸಿ, ವಿಷ್ಣುವರ್ಧನ್ ಅವರೊಂದಿಗಿನ ತಮ್ಮ ಆತ್ಮೀಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಅವರು ಹೇಳಿದ ಮಾತುಗಳಲ್ಲಿ ಅಭಿಮಾನ, ಗೌರವ ಮತ್ತು ಭಾವನೆಗಳು ಎದ್ದು ಕಾಣುತ್ತಿದ್ದವು.
'ಅವರು ಇಂದು ಇರಬೇಕಿತ್ತು.. ಈ ಸಂಭ್ರಮ ನೋಡಬೇಕಿತ್ತು!'
ವಿಷ್ಣುವರ್ಧನ್ ಅವರು ಇಂದು ನಮ್ಮ ನಡುವೆ ಇರಬೇಕಿತ್ತು. ಈ ಅದ್ಧೂರಿ ಸಂಭ್ರಮವನ್ನು ಅವರು ಕಣ್ಣಾರೆ ನೋಡಬೇಕಿತ್ತು. ಅದರಲ್ಲೂ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ದೊರೆತ ಸಂದರ್ಭದಲ್ಲಾದರೂ ಅವರು ನಮ್ಮೊಂದಿಗೆ ಇರಬೇಕಿತ್ತು ಎಂಬುದು ಎಲ್ಲರ ಮನದಾಳದ ಮಾತು ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
'ನೂರೊಂದು ನೆನಪು ಎದೆಯಾಳದಿಂದ..' ಎನ್ನುವಂತೆ ವಿಷ್ಣುವರ್ಧನ್ ಅವರ ಬಗ್ಗೆ ಪ್ರತಿಯೊಬ್ಬರಿಗೂ ಒಂದೊಂದು ನೆನಪಿದೆ. ಎಲ್ಲೇ ಇದ್ದರೂ, ಯಾವ ಸಂದರ್ಭದಲ್ಲಿದ್ದರೂ ವಿಷ್ಣು ದಾದಾ ನೆನಪಾಗುತ್ತಾರೆ ಎಂದು ರಮೇಶ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಶೂಟಿಂಗ್ ವೇಳೆ ತಮ್ಮ ಬೆರಳಿಗೆ ಏಟಾಗಿ ಆಸ್ಪತ್ರೆಗೆ ತೆರಳಿದ್ದ ಸಂದರ್ಭವನ್ನೂ ಅವರು ನೆನಪಿಸಿಕೊಂಡಿದ್ದಾರೆ. ಎಕ್ಸ್‌ರೇ ನೋಡುತ್ತಿದ್ದಂತೆಯೇ ವಿಷ್ಣುವರ್ಧನ್ ಅವರ ನೆನಪಾಯಿತು ಎಂದು ಹೇಳಿದ್ದಾರೆ.
ಕಾಲು ಮುರಿದಿದ್ದರೂ ಶೂಟಿಂಗ್‌ಗೆ ಬಂದ ರಮೇಶ್.. ವಿಷ್ಣು ದಾದಾ ಮಾಡಿದ್ದೇನು?
ವಿಷ್ಣುವರ್ಧನ್ ಅವರ ವ್ಯಕ್ತಿತ್ವವನ್ನು ತೋರಿಸುವ ಮತ್ತೊಂದು ಘಟನೆ ಹೇಳಿದ ರಮೇಶ್ ಅರವಿಂದ್, ತಮ್ಮ ವೃತ್ತಿಜೀವನದ ಒಂದು ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ. ಒಂದು ಸಿನಿಮಾದ ಶೂಟಿಂಗ್ ವೇಳೆ ರಮೇಶ್ ಅವರ ಕಾಲು ಮುರಿದಿತ್ತಂತೆ. ಆದರೆ ವಿಷ್ಣುವರ್ಧನ್ ಅವರ ಡೇಟ್ಸ್ ಮಿಸ್ ಆಗಬಾರದು ಎಂಬ ಕಾರಣಕ್ಕೆ ನೋವಿನ ನಡುವೆಯೂ ಅವರು ಚಿತ್ರೀಕರಣಕ್ಕೆ ಹಾಜರಾಗಿದ್ದರು.
ಅಲ್ಲಿಗೆ ಬಂದಿದ್ದ ರಮೇಶ್ ಅವರನ್ನು ನೋಡಿದ ವಿಷ್ಣುವರ್ಧನ್, 'ಯಾಕೆ ಕುಂಟುತ್ತಿದ್ದೀಯ?' ಎಂದು ಕೇಳಿದ್ದರಂತೆ. ಕಾಲು ಮುರಿದಿದೆ, ಆದರೆ ನಿಮ್ಮ ಡೇಟ್ಸ್ ಇರುವ ಕಾರಣ ಶೂಟಿಂಗ್‌ಗೆ ಬಂದಿದ್ದೇನೆ ಎಂದು ರಮೇಶ್ ಹೇಳಿದಾಗ ವಿಷ್ಣುವರ್ಧನ್ ತಕ್ಷಣ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಕರೆಸಿಕೊಂಡರಂತೆ.
'ನಾನು ಮತ್ತೆ ಡೇಟ್ ಕೊಡುತ್ತೇನೆ. ಮೊದಲು ಆ ಹುಡುಗನನ್ನು ಮನೆಗೆ ಕಳುಹಿಸಿ' ಎಂದು ಹೇಳಿ, ಗಾಯವಾಗಿದ್ದರೂ ಶೂಟಿಂಗ್‌ಗೆ ಬಂದಿದ್ದಕ್ಕಾಗಿ ಚಿತ್ರತಂಡಕ್ಕೆ ತರಾಟೆ ತೆಗೆದುಕೊಂಡಿದ್ದನ್ನು ರಮೇಶ್ ನೆನಪಿಸಿಕೊಂಡಿದ್ದಾರೆ. ಈ ಘಟನೆ ವಿಷ್ಣುವರ್ಧನ್ ಅವರ ಸಹನಟರ ಮೇಲಿದ್ದ ಕಾಳಜಿ ಮತ್ತು ಮಾನವೀಯತೆಯನ್ನು ಮತ್ತೊಮ್ಮೆ ನೆನಪಿಸುವಂತಿದೆ.
'ಎಲ್ಲೇ ಹೋದರೂ ಕನ್ನಡದಲ್ಲೇ ಮಾತನಾಡಬೇಕು ಅಂತ ಹೇಳುತ್ತಿದ್ದರು!'
ವಿಷ್ಣುವರ್ಧನ್ ಅವರ ಸರಳತೆ ಹಾಗೂ ಕನ್ನಡದ ಮೇಲಿನ ಪ್ರೀತಿಯನ್ನೂ ರಮೇಶ್ ಅರವಿಂದ್ ಸ್ಮರಿಸಿಕೊಂಡಿದ್ದಾರೆ. ಇತ್ತೀಚೆಗೆ ಬಸವನಗುಡಿಯ ಫ್ಲೈಓವರ್‌ನಲ್ಲಿ ಸಾಗುತ್ತಿದ್ದಾಗ ದಿಢೀರ್ ವಿಷ್ಣುವರ್ಧನ್ ಅವರ ನೆನಪಾಯಿತು ಎಂದಿರುವ ರಮೇಶ್, ವಿಷ್ಣುವರ್ಧನ್ ಆಗಾಗ ತಮ್ಮ ಆಪ್ತರನ್ನು ಮನೆಗೆ ಊಟಕ್ಕೆ ಕರೆಯುತ್ತಿದ್ದರು ಎಂದು ಹೇಳಿದ್ದಾರೆ.
ಒಮ್ಮೆ ತಮ್ಮನ್ನೂ ಸೇರಿದಂತೆ ಹಲವರನ್ನು ಮನೆಗೆ ಆಹ್ವಾನಿಸಿದ್ದ ವಿಷ್ಣುವರ್ಧನ್, ಎಲ್ಲೇ ಹೋದರೂ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಹೇಳುತ್ತಿದ್ದರಂತೆ. ಕನ್ನಡದ ಮೇಲಿನ ಅವರ ಅಭಿಮಾನವನ್ನು ರಮೇಶ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
'ಸಾವಿರ ಜನರ ಮಧ್ಯೆಯೂ ಅವರು ವಿಷ್ಣುವರ್ಧನ್ ಅಂತ ಗೊತ್ತಾಗುತ್ತಿತ್ತು!'
ವಿಷ್ಣುವರ್ಧನ್ ಅವರಲ್ಲಿದ್ದ ವಿಶೇಷ ಗುಣಗಳನ್ನು ನಾವು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ರಮೇಶ್ ಹೇಳಿದ್ದಾರೆ. 'ಸಾವಿರ ಜನರ ಮಧ್ಯೆ ನಡೆದುಕೊಂಡು ಬಂದರೂ ಅವರು ವಿಷ್ಣುವರ್ಧನ್ ಎಂಬುದು ಗೊತ್ತಾಗುತ್ತಿತ್ತು. ಅವರ ವ್ಯಕ್ತಿತ್ವವೇ ಅಂತಹದ್ದು. ಅವರ ಧ್ವನಿ, ಉಚ್ಚಾರಣೆ ಅದ್ಭುತವಾಗಿತ್ತು. ಅವರ ಬಾಯಲ್ಲಿ ಕನ್ನಡ ಕೇಳಿದರೆ ನಮಗೆ ಮನೆಯ ನೆನಪಾಗುತ್ತಿತ್ತು' ಎಂದು ರಮೇಶ್ ಭಾವುಕರಾಗಿ ಹೇಳಿದ್ದಾರೆ.
ಅವರ ಶಿಸ್ತು ಮತ್ತು ಸಭ್ಯತೆಯನ್ನು ನಾವು ಕಲಿಯಬೇಕು. ಅದು ಕೇವಲ ಸಿನಿಮಾದ ಪರದೆ ಮೇಲಿನ ವ್ಯಕ್ತಿತ್ವವಾಗಿರಲಿಲ್ಲ. ಪರದೆ ಆಚೆಯ ಜೀವನದಲ್ಲೂ ಅದೇ ಗುಣಗಳನ್ನು ವಿಷ್ಣುವರ್ಧನ್ ಹೊಂದಿದ್ದರು ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಇಂದಿನ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿರುವುದನ್ನು ಉಲ್ಲೇಖಿಸಿದ ರಮೇಶ್, ಇಲ್ಲಿ ಸೇರಿರುವ ಬಹುತೇಕ ಜನರು ಪರಸ್ಪರ ಪರಿಚಯವೇ ಇಲ್ಲದವರಾಗಿರಬಹುದು. ಆದರೆ ಎಲ್ಲರನ್ನೂ ಒಂದೇ ವೇದಿಕೆಯಡಿ ಸೇರಿಸಿರುವ ಶಕ್ತಿ ವಿಷ್ಣುವರ್ಧನ್ ಎಂದು ಹೇಳಿದ್ದಾರೆ. ಅದೇ ಕಾರಣಕ್ಕೆ ಅವರಿಗೆ 'ಕರ್ನಾಟಕ ರತ್ನ' ಎಂಬ ಗೌರವ ಸಿಕ್ಕಿದೆ ಎಂದು ರಮೇಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೊನೆಯಲ್ಲಿ ಇಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ ವೀರಕಪುತ್ರ ಶ್ರೀನಿವಾಸ್, ಜಯಮಾಲಾ, ರಾಜೇಂದ್ರ ಸಿಂಗ್ ಬಾಬು ಮತ್ತು ರಾಕ್‌ಲೈನ್ ವೆಂಕಟೇಶ್ ಅವರಿಗೆ ರಮೇಶ್ ಅರವಿಂದ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇನ್ನು ವಿಷ್ಣುವರ್ಧನ್ ಅವರಿಲ್ಲದ ನೋವು ಒಂದೆಡೆಯಾದರೆ, ಅವರ ನೆನಪುಗಳು ಇಂದಿಗೂ ಕೋಟ್ಯಂತರ ಅಭಿಮಾನಿಗಳ ನಡುವೆ ಜೀವಂತವಾಗಿರುವುದು ಮತ್ತೊಂದೆಡೆ. ರಮೇಶ್ ಅರವಿಂದ್ ಹಂಚಿಕೊಂಡ ಈ ನೆನಪುಗಳು ಕೂಡ ಅದೇ ಪ್ರೀತಿಗೆ ಸಾಕ್ಷಿಯಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.