
ಬೆಂಗಳೂರು (ಅ.29): ಕನ್ನಡ ಚಿತ್ರರಂಗದ ನಟ ದರ್ಶನ್ ಅವರ ಜೈಲುವಾಸ ಹಾಗೂ ಜಾಮೀನು ಪ್ರಕ್ರಿಯೆಗಳ ನಡುವೆ, ನಟ ಧನ್ವೀರ್ ಗೌಡ ಹೆಸರು ತಳುಕು ಹಾಕಿಕೊಂಡಿರುವ ₹10 ಕೋಟಿ ಹಣಕಾಸಿನ ವ್ಯವಹಾರ ಮತ್ತು ವೈರಲ್ ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಧನ್ವೀರ್ ಪರ ವಕೀಲ ಪ್ರಜ್ವಲ್ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ.
ಧನ್ವೀರ್ ವಿರುದ್ಧ ಕೇಳಿಬರುತ್ತಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ವಕೀಲರು, 'ವೈರಲ್ ಆಗಿರುವ ಆಡಿಯೋ ಸಂಪೂರ್ಣವಾಗಿ ಸೃಷ್ಟಿಸಲ್ಪಟ್ಟಿದ್ದು (Fabricated), ನಾವು ಯಾವುದೇ ರೀತಿಯ ತನಿಖೆಗೂ ಸಿದ್ಧರಿದ್ದೇವೆ' ಎಂದು ಸವಾಲು ಹಾಕಿದ್ದಾರೆ.
ಹಣಕಾಸಿನ ವ್ಯವಹಾರದ ಆರೋಪಗಳ ಬಗ್ಗೆ ಮಾತನಾಡಿದ ವಕೀಲ ಪ್ರಜ್ವಲ್, '10 ಕೋಟಿ ವ್ಯವಹಾರದ ವಿಚಾರ ಸಂಬಂಧ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ನಮಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಸಾಮಾಜಿಕ ಮತ್ತು ವೃತ್ತಿಪರ ಜವಾಬ್ದಾರಿಗಳಿವೆ. ಹಣಕಾಸಿನ ವಿಚಾರವಾಗಿ ಯಾವುದೇ ತನಿಖೆ ಎದುರಿಸಲು ಧನ್ವೀರ್ ಸಿದ್ಧರಿದ್ದಾರೆ. ಅಗತ್ಯ ಬಿದ್ದರೆ ಜಾರಿ ನಿರ್ದೇಶನಾಲಯ (ED) ಅಥವಾ ಸಿಬಿಐ (CBI) ತನಿಖೆಗೂ ಹಾಜರಾಗಲು ನಾವು ಸಿದ್ಧ,' ಎಂದು ಸ್ಪಷ್ಟಪಡಿಸಿದರು.
ಪೊಲೀಸ್ ನೋಟಿಸ್ ಕುರಿತು ಮಾತನಾಡುತ್ತಾ, 'ಪೊಲೀಸರು ನೋಟಿಸ್ ನೀಡಿದ್ದಾರೆ, ಅದಕ್ಕೆ ನಾವು ಕಾನೂನುಬದ್ಧವಾಗಿಯೇ ಅಧಿಕೃತ ದಾಖಲೆಗಳೊಂದಿಗೆ ಸೂಕ್ತ ಉತ್ತರ ನೀಡಲಿದ್ದೇವೆ. ನ್ಯಾಯಾಲಯವು ಕೇವಲ ಮಾತುಗಳು ಅಥವಾ ಅಂತೆ-ಕಂತೆಗಳನ್ನು ನಂಬುವುದಿಲ್ಲ, ಅಧಿಕೃತ ದಾಖಲೆಗಳನ್ನು ಮಾತ್ರ ಒಪ್ಪುತ್ತದೆ,' ಎಂದರು.
ದರ್ಶನ್ ಹಾಗೂ ಧನ್ವೀರ್ ನಡುವಿನ ಸ್ನೇಹ ಮತ್ತು ಬೆಂಬಲದ ಬಗ್ಗೆ ಮಾತನಾಡಿದ ಅವರು, ದರ್ಶನ್ ಅವರು ಕಷ್ಟದಲ್ಲಿದ್ದ ಮೊದಲ ದಿನದಿಂದಲೂ ಧನ್ವೀರ್ ಅವರ ಜೊತೆಯಲ್ಲೇ ನಿಂತಿದ್ದಾರೆ. ದರ್ಶನ್ ಅವರಿಗೆ ನ್ಯಾಯಾಲಯದಲ್ಲಿ ಶ್ಯೂರಿಟಿ (Surety) ನೀಡಿದ್ದೇ ಧನ್ವೀರ್. ದರ್ಶನ್ ಅವರು ಕಾನೂನುಬದ್ಧವಾಗಿ ಆದಷ್ಟು ಬೇಗ ಜೈಲಿನಿಂದ ಹೊರಗೆ ಬರಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ. ಆ ಕಾನೂನು ಹೋರಾಟದಲ್ಲಿ ನಾವು ಪ್ರಾಮಾಣಿಕವಾಗಿ ಭಾಗಿಯಾಗಿದ್ದೇವೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಜೊತೆಗಿನ ಧನ್ವೀರ್ ಅವರ ಸಂಬಂಧ ಈಗಲೂ ಮೊದಲಿನಂತೆಯೇ ಚೆನ್ನಾಗಿದೆ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿಸಿದರು.
'ಜೈಲಿನಿಂದ ದರ್ಶನ್ ಹೀಗೆ ಹೇಳಿದ್ದಾರೆ, ಹಾಗೆ ಹೇಳಿದ್ದಾರೆ ಎಂಬ ಗಾಳಿ ಮಾತುಗಳು ಹಾಗೂ ಊಹಾಪೋಹಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಇದು ನೋಡಲು ಒಂದು ಥ್ರಿಲ್ಲರ್ ಮೂವಿಯಂತೆ ಕಾಣುತ್ತಿದೆ. ಈ ಹೋರಾಟದಲ್ಲಿ ಆರಂಭದಲ್ಲಿ ಯಾರಿದ್ದರು, ಈಗ ಕೊನೆಯವರೆಗೂ ಯಾರು ನಿಂತಿದ್ದಾರೆ ಎಂಬ ಅಸಲಿ ಸತ್ಯವೆಲ್ಲವೂ ಮುಂದಿನ ದಿನಗಳಲ್ಲಿ ತಾನಾಗಿಯೇ ಹೊರಬರಲಿದೆ. ನಾವು ಕೊನೆವರೆಗೂ ದರ್ಶನ್ ಅವರ ಪರವಾಗಿಯೇ ನಿಲ್ಲುತ್ತೇವೆ' ಎಂದು ವಕೀಲ ಪ್ರಜ್ವಲ್ ಪುನರುಚ್ಚರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.