
ನವರಸ ನಾಯಕ ಜಗ್ಗೇಶ್ (Jaggesh) ನಟಿಸಿ, ವಿಜಯ್ ಪ್ರಸಾದ್ (Vijay Prasad) ನಿರ್ದೇಶನ ಮಾಡಿರುವ ‘ತೋತಾಪುರಿ-1’ (Totapuri) ಚಿತ್ರದ ಮೊದಲ ಹಾಡು ಜ.31ಕ್ಕೆ ಬಿಡುಗಡೆ ಆಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೂ ಮುನ್ನವೇ ಲಿರಿಕಲ್ ಆಡಿಯೋ ಬಿಡುಗಡೆ ಮಾಡುತ್ತಾರೆ. ಆದರೆ, ಈಗಾಗಲೇ ಬಿಡುಗಡೆಗೊಂಡ ಆಡಿಯೋ ಟೀಸರ್‌ಗೆ ಬಂದ ಮೆಚ್ಚುಗೆ ಮಾತುಗಳು, ಯಶಸ್ಸು ಕಂಡ ಚಿತ್ರ ತೆರೆ ಮೇಲೆ ಮೂಡುವ ಮುನ್ನವೇ ವಿಡಿಯೋ ಹಾಡು ಬಿಡುಗಡೆ ಮಾಡುತ್ತಿದೆ. ‘ನಾಲ್ಕೈದು ದಿನಗಳ ಹಿಂದೆ ಚಿತ್ರದ ಆಡಿಯೋ ಟೀಸರ್ ಬಿಡುಗಡೆ ಮಾಡಿದ್ವಿ. ಇದನ್ನು 600ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ಪುಟದಲ್ಲೂ ಲಕ್ಷಗಳ ಲೆಕ್ಕದಲ್ಲಿ ವೀಕ್ಷಣೆ ಮಾಡುವ ಮೂಲಕ ಆಡಿಯೋ ಟೀಸರ್ ದಾಖಲೆ ನಿರ್ಮಿಸಿದೆ. ಆಡಿಯೋ ಟೀಸರ್‌ಗೆ ಬಂದ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಈಗ ವಿಡಿಯೋ ಹಾಡನ್ನೇ ನೇರವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಜ.31ಕ್ಕೆ ಹಾಡು ಪ್ರೇಕ್ಷಕರ ಮುಂದೆ ಬರುತ್ತಿದೆ. ಸಿನಿಮಾ ಬಿಡುಗಡೆಗೂ ಮೊದಲೇ ಒಂದು ಹಾಡಿನ ಬಗ್ಗೆ ಈ ಮಟ್ಟಕ್ಕೆ ಕ್ರೇಜ್ ಮೂಡಿರುವುದು ಚಿತ್ರದ ಮೇಲಿನ ಭರವಸೆ ಹೆಚ್ಚಿಸಿದೆ. ಈ ಹಿಂದೆ 'ಗೋವಿಂದಾಯ ನಮಃ' ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ ಹಾಡು ಕೂಡ ಇದೇ ರೀತಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.
ಈಗ ತೋತಾಪುರಿ-1 ಚಿತ್ರದ ಮೊದಲ ಹಾಡು ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆಂಬ ನಂಬಿಕೆ ಇದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಕೆ ಎ ಸುರೇಶ್. ವಿಜಯಪ್ರಸಾದ್ ಸಾಹಿತ್ಯವಿರುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಅದಿತಿ ಪ್ರಭುದೇವ, ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.
ತೋತಾಪುರಿ ಸಿನಿಮಾ ಪ್ಯಾನ್ ಇಂಡಿಯಾವೋ, ಅಲ್ಲವೋ? ನೆಟ್ಟಿಗರು ಕೇಳ್ತಿದ್ದಾರೆ
'ನೀರ್‌ದೋಸೆ' (Neer Dose) ಚಿತ್ರದ ಮೂಲಕ ಯಶಸ್ಸು ಕಂಡ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಅಭಿನಯದ 'ತೋತಾಪುರಿ' ಚಿತ್ರದಲ್ಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೈಟಲ್ (Title) ಮೂಲಕವೇ ಕುತೂಹಲ ಹುಟ್ಟಿಸಿರುವ ಈ ಚಿತ್ರ, ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಾಮಾನ್ಯವಾಗಿ ಮೊದಲ ಭಾಗ ಹಿಟ್ ಆದ ನಂತರ ಮತ್ತೊಂದು ಭಾಗ ಸೆಟ್ಟೇರುತ್ತದೆ. ಅಲ್ಲದೇ ಎರಡು ಭಾಗಗಳನ್ನೂ ಪ್ರತ್ಯೇಕವಾಗಿಯೇ ಚಿತ್ರೀಕರಣ ಮಾಡುತ್ತಾರೆ.
ಆದರೆ ತೋತಾಪುರಿ ಚಿತ್ರದ ಎರಡೂ ಭಾಗಗಳ ಕತೆಯನ್ನು ಬಿಡುಗಡೆಗೂ ಮೊದಲೇ ಚಿತ್ರೀಕರಿಸುತ್ತಿದ್ದೇವೆ. ಒಂದು ಭಾಗ ತೆರೆ ಮೇಲೆ ಮೂಡುವ ಮುನ್ನವೇ ಇನ್ನೊಂದು ಭಾಗದ ಚಿತ್ರೀಕರಣವನ್ನೂ ಮುಗಿಸುತ್ತಿರುವುದು, ಕನ್ನಡದಿಂದಲೇ ಮೊದಲು. ಯಾಕೆಂದರೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಸೇರಿದಂತೆ ಭಾರತದ ಯಾವ ಭಾಷೆಯಲ್ಲೂ ಈ ಪ್ರಯೋಗ ಆಗಿಲ್ಲ. ಆ ಬಗ್ಗೆ ಎಲ್ಲ ರೀತಿಯ ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ನಮ್ಮ ಚಿತ್ರವೇ ಹೊಸ ದಾಖಲೆ ಮಾಡುತ್ತಿದೆ, ಎಂಬುದನ್ನು ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದೇವೆ,’ ಎಂದು ನಿರ್ಮಾಪಕ ಸುರೇಶ್ ಹೇಳುತ್ತಾರೆ.
ಪ್ರಸವಕ್ಕೆ ಕಾಯುತ್ತಿದೆ, ಗಂಡು ಮಗು 'ತೋತಾಪುರಿ' ಹುಟ್ಟುತ್ತಾನೆ: Jaggesh
'ಸುರೇಶ್ ಆರ್ಟ್ಸ್' ಬ್ಯಾನರ್‌ನ ಕೆ.ಎ. ಸುರೇಶ್ (K.A.Sueresh) ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಗ್ಗೇಶ್ ನಟನೆಯ 'ಎದ್ದೇಳು ಮಂಜುನಾಥ' (Eddelu Manjunatha), 'ನೀರ್ ದೋಸೆ' ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್ ಸೀಳಿನ್ (Anoop Seelin) 'ತೋತಾಪುರಿ'ಗೂ ಸಂಗೀತ ನಿರ್ದೇಶನ ಮಾಡಿದ್ದು, ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ನಿರಂಜನ್ ಬಾಬು ಕ್ಯಾಮರಾ ಕೈ ಚಳಕ, ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದ್ದು, ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಕೇರಳ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.