ಹ್ಯಾಪಿ ಬರ್ತಡೇ ಯಶ್‌; ನಿರ್ದೇಶಕರ ಶುಭಾಶಯಗಳು!

By Suvarna NewsFirst Published Jan 8, 2021, 4:47 PM IST
Highlights

ತಮ್ಮ ತಮ್ಮ ಕೋಟೆಯೊಳಗೆ ಭದ್ರವಾಗಿ ಕುಳಿತಿರುವ ಪಟ್ಟಭದ್ರರು, ನುಗ್ಗುವುದು ಬಿಡಿ ಅಂಥ ಯೋಚನೆಯನ್ನೂ ಮಾಡಲಿಕ್ಕೆ ಅಸಾಧ್ಯವೆನ್ನಿಸುವ ಭದ್ರಕೋಟೆ, ನಮ್ಮ ಮಾರುಕಟ್ಟೆದಿನೇ ದಿನೇ ಕುಗ್ಗುತ್ತಿದೆ ಅಂತ ಭಾಷಣ ಬಿಗಿಯುತ್ತಿದ್ದ ಹಸಿವಿಲ್ಲದವರು, ಹೀರೋ ಒಂದು ಪ್ರಾಡಕ್ಟುಅಂತ ಅಂದುಕೊಂಡಿದ್ದವರು, ಯಾರು ಹೀರೋ ಮೆಟೀರಿಯಲ್‌ ಅಂತ ತಾವೇ ನಿರ್ಧಾರ ಮಾಡುತ್ತಿದ್ದವರು; ಇಂಥವರ ನಡುವೆ ಎದ್ದು ನಿಂತ ಹುಡುಗನ ಹೆಸರು ಯಶ್‌.

ಮಾಡಿದ ಸಿನಿಮಾಗಳ ಸಂಖ್ಯೆ ಇಪ್ಪತ್ತು ದಾಟಿಲ್ಲ. ಅಷ್ಟರಲ್ಲೇ ಛಪ್ಪನ್ನೈವತ್ತಾರು ದೇಶಗಳಲ್ಲೂ ಹೆಸರುವಾಸಿ. ಪ್ರತಿ ಚಿತ್ರದಲ್ಲೂ ಸೀಮೋಲ್ಲಂಘನೆಗೆ ತುಡಿಯುತ್ತಿದ್ದ ಯಶ್‌, ಯಾರ ಹಂಗಿಗೂ ಬೀಳಲಿಲ್ಲ. ಯಾರ ಮರ್ಜಿಗೂ ಬಾಗಲಿಲ್ಲ. ಸೆಲ್‌್ಫ ಮೇಡ್‌ ಅಂತ ಕರೆಸಿಕೊಂಡರು. ಆ ಮಾತನ್ನು ಉಳಿಸಿಕೊಂಡರು.

ಕನ್ನಡ ಚಿತ್ರರಂಗದ ಗಡಿಗಳನ್ನು ವಿಸ್ತರಿಸಿದ ನಿರ್ದೇಶಕರಿದ್ದಾರೆ. ಗಿರೀಶ್‌ ಕಾರ್ನಾಡ್‌, ಗಿರೀಶ್‌ ಕಾಸರವಳ್ಳಿ, ಪುಟ್ಟಣ್ಣ ಕಣಗಾಲ್‌, ರಾಜೇಂದ್ರ ಸಿಂಗ್‌ ಬಾಬು, ಕೆವಿ ರಾಜು, ನಾಗಾಭರಣ, ಶಂಕರ್‌ನಾಗ್‌ ಮುಂತಾದ ನಿರ್ದೇಶಕರು ಕನ್ನಡ ಸಿನಿಮಾಗಳ ಖ್ಯಾತಿ ದೇಶಾದ್ಯಂತ ಹಬ್ಬುವಂತೆ ಮಾಡಿದರು. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕನ್ನಡ ಚಿತ್ರಗಳನ್ನು ಕೊಂಡೊಯ್ದರು. ಆದರೆ ಯಶ್‌ ಕನ್ನಡ ಸಿನಿಮಾದ ಬಾಕ್ಸಾಫೀಸನ್ನು ದೇಶಾದ್ಯಂತ, ವಿಶ್ವಾದ್ಯಂತ ತೆರೆದ ಏಕೈಕ ಸ್ಟಾರ್‌ ನಟ. ತಮ್ಮದೇ ಭಾಷೆಯ ಸಿನಿಮಾ ಎಂಬಂತೆ ಕೆಜಿಎಫ್‌ ಎಲ್ಲರ ಸ್ವೀಕಾರಕ್ಕೆ ಪಾತ್ರವಾಗಿದ್ದರೆ ಅದಕ್ಕೆ ಯಶ್‌ ಕೊಟ್ಟಬೆಂಬಲ ಕಾರಣ.

ಯಶ್‌ ಪರ್ಫೆಕ್ಟ್‌ ಆಗಲು ಕಾರಣ ಗೊತ್ತಾ? ರಾಧಿಕಾ ಹೇಳ್ತಿದ್ದಾರೆ ಕೇಳಿ 

ಮದುವೆಯೇ ಇರಲಿ, ನಾಮಕರಣವೇ ಇರಲಿ, ಹುಟ್ಟುಹಬ್ಬವೇ ಇರಲಿ, ಖಾಸಗಿಯೋ ಸಾರ್ವಜನಿಕವೋ ಏನೇ ಆಗಿರಲಿ, ಅದಕ್ಕೊಂದು ಸ್ಟಾಂಡರ್ಡ್‌ ಸೆಟ್‌ ಮಾಡುತ್ತೇನೆಂದು ಹೊರಟ ಯಶ್‌ ಅದನ್ನು ಸಾಧಿಸಿದ್ದಾರೆ. ಕೆಜಿಎಫ್‌ ಕತೆ ಅವರ ಆತ್ಮಚರಿತ್ರೆಯ ತುಣುಕು ಕೂಡ.

ಯಶ್‌ ಎಂಬ ಗಡಿದಾಟಿದ ಕಲಾವಿದನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, ಅವರ ಕುರಿತು ಅವರ ಆತ್ಮೀಯರು ಆಡಿದ ನಾಲ್ಕಾರು ಮಾತುಗಳನ್ನಿಲ್ಲಿ ಕೊಡುತ್ತಿದ್ದೇವೆ.

ಯಶ್‌, ಕೆಜಿಎಫ್‌ಗೆ ನನ್ನ ಬದುಕಿನಲ್ಲಿ ವಿಶೇಷ ಸ್ಥಾನ

- ಶ್ರೀನಿಧಿ ಶೆಟ್ಟಿ

2016ರಲ್ಲಿ ಕೆಜಿಎಫ್‌ ತಂಡ ಸೇರಿಕೊಂಡವಳು ನಾನು. ಈಗ 2021. ಸುಮಾರು ನಾಲ್ಕೂವರೆ ವರ್ಷ ಈ ತಂಡದ ಜೊತೆ ಕಳೆದಿದ್ದೇನೆ. ಈ ಎಲ್ಲಾ ದಿನಗಳಲ್ಲಿ ಯಶ್‌ ಅವರ ಶ್ರದ್ಧೆಗೆ ನಾನು ಬೆರಗಾಗಿದ್ದೇನೆ. ಕೆಲಸ ಮೇಲೆ ಅವರು ತೋರಿಸುವ ಶ್ರದ್ಧೆ ಬೇರೆಲ್ಲೋ ನೋಡಿದ್ದು ಅಪರೂಪ. ಕೆಜಿಎಫ್‌ 2 ಚಿತ್ರೀಕರಣದಲ್ಲಿ ಬೇರೆ ಬೇರೆ ರೀತಿಯ ಜಾಗಗಳಲ್ಲಿ ಅವರು ಕೆಲಸ ಮಾಡುವುದನ್ನು ನೋಡಿದ್ದೇನೆ. ಮಣ್ಣಿನ ಜಾಗವೇ ಇರಲಿ, ಕಪ್ಪು ಹೊಗೆ ತುಂಬಿರುವ ತಾಣವೇ ಇರಲಿ ಎಲ್ಲೇ ಇದ್ದರು ಅವರು ಅವರ ಕೆಲಸಕ್ಕೆ ಕೊಡುವ ಗೌರವ ಅಪಾರ. ಕೆಲಸ ಬಿಟ್ಟರೆ ಬೇರೆ ಇಲ್ಲ ಎನ್ನುವಂತೆ ಬದುಕುತ್ತಾರೆ. ಅವರ ಆ ಶ್ರದ್ಧೆಯೇ ನನಗೆ ಸ್ಫೂರ್ತಿ. ಕೆಜಿಎಫ್‌ ನನ್ನ ಮೊದಲ ಸಿನಿಮಾ. ಯಶ್‌ ನನ್ನ ಮೊದಲ ಕೋಸ್ಟಾರ್‌. ನಾನು ಆರಂಭದಲ್ಲೆಲ್ಲಾ ನಾಲ್ಕೈದು ಟೇಕ್‌ ತೆಗೆದುಕೊಳ್ಳುತ್ತಿದ್ದೆ. ಆಗೆಲ್ಲಾ ಅವರು ಬೆಂಬಲವಾಗಿ ನಿಂತು ತಾಳ್ಮೆಯಿಂದ ಪ್ರೋತ್ಸಾಹಿಸುತ್ತಿದ್ದರು. ಅದನ್ನು ನಾನು ಮರೆಯಲಾರೆ. ಈ ಸಿನಿಮಾ, ಯಶ್‌ ಅವರಿಗೂ ನನ್ನ ಜೀವನದಲ್ಲಿ ವಿಶೇಷ ಸ್ಥಾನವಿದೆ. ಅವರು ಮುಂದಿನ ದಿನಗಳಲ್ಲಿ ಮತ್ತಷ್ಟುಎತ್ತರಕ್ಕೆ ಹೋಗುತ್ತಾರೆ ಅನ್ನುವುದು ನಿಶ್ಚಿತ. ಅವರ ಮುಂದಿನ ಹಾದಿಯಲ್ಲಿ ಹೂವುಗಳೇ ಚೆಲ್ಲಿರಲಿ ಎಂದು ನಾನು ಆಶಿಸುತ್ತೇನೆ.

ನಾನು ನಿರ್ದೇಶಕನಾಗಲು ಕಾರಣವೇ ಯಶ್‌

- ಸಂತೋಷ್‌ ಆನಂದ ರಾಮ…

ನಾನು ನಿರ್ದೇಶಕನಾಗಿದ್ದೇನೆ ಎಂದರೆ ಅದಕ್ಕೆ ಮೊದಲ ಕಾರಣ ಯಶ್‌. ಅವರ ಜೊತೆಗೆ ಕೆಲಸ ಮಾಡುವುದು ಅದ್ಭುತ ಅನುಭವ. ಪ್ಯಾಷನ್‌ ಇಟ್ಟುಕೊಂಡ, ಬೇರೆಯವರ ಪ್ರತಿಭೆ ಗುರುತಿಸುವ, ತಾನೂ ಬೆಳೆದು, ಚಿತ್ರರಂಗವನ್ನೂ ಬೆಳೆಸುವ ಕನಸು ಕಾಣುವ ಹೀರೋ. ಅವರು ಮಾಡಿದ್ದು ಎರಡೇ ರಿಮೇಕ್‌. ಇಲ್ಲಿಯ ಬರಹಗಾರರ ಮೇಲೆ ಅಷ್ಟೊಂದು ನಂಬಿಕೆ. ನೇಟಿವಿಟಿ ಅರ್ಥಮಾಡಿಕೊಂಡ ಪ್ರಬುದ್ಧ. ತಂಡ ಕಟ್ಟುವ ಸಿನಿಮಾ ಮಾಡಿಸುವ ಶಕ್ತಿವಂತ. ನಾನಿರೋ ತನಕ ಮರೆಯಲಾರದ ವ್ಯಕ್ತಿ. ನಮ್ಮಿಬ್ಬರಿಗೂ ಯಶಸ್ಸು ಬಂದಿದೆ. ಆದರೆ ಸ್ನೇಹ ಉಳಿದಿದೆ. ಯುವರತ್ನ ಚಿತ್ರದ ಕತೆ, ಹಾಡು ಕೇಳಿ ಮೆಚ್ಚಿದ್ದರು. ನಾವಿಬ್ಬರೂ ಜತೆಯಾಗಿ ಆದಷ್ಟುಬೇಗ ಮತ್ತೊಂದು ಸಿನಿಮಾ ಮಾಡ್ತೀವಿ.

ಯಾವುದನ್ನೂ ಅಸಾಧ್ಯ ಎಂದು ಯಾರು ಹೇಳುತ್ತಾರೋ ಅವರು ಯಶ್‌

-ಯೋಗರಾಜ್‌ ಭಟ್‌

ನನ್ನಿಂದ ಈ ಕೆಲಸ ಆಗಲ್ಲ. ಸಾಧ್ಯವಿಲ್ಲ ಎಂದು ಯಾರು ಹೇಳಲ್ಲವೋ ಅವರು ಯಶ್‌ ಆಗ್ತಾರೆ. ಮೊದಲಿನಿಂದಲೂ ಯಶ್‌ ಹಠವಾದಿ. ಯಶ್‌ಗೆ ನೀವು ಏನೇ ಹೇಳಿ ‘ಆಗಲ್ಲ’ ಎನ್ನುವ ಮಾತು ಅವರಿಂದ ಬಂದಿಲ್ಲ. ನಾನು ‘ಡ್ರಾಮಾ’ಗೂಮೊದಲಿನಿಂದಲೂ ನೋಡಿಕೊಂಡು ಬಂದ ಹುಡುಗ. ಆಗಿನಿಂದಲೂ ಏನಾದರೂ ಮಾಡಬೇಕು ಎನ್ನುವ ಗುರಿ, ಕನಸನ್ನು ದೊಡ್ಡ ಮಟ್ಟದಲ್ಲಿ ಕಟ್ಟಿಕೊಂಡಿದ್ದ ನಟ. ಒಬ್ಬ ಗೆಳೆಯನಾಗಿ ಹೇಳುವುದೇನೆಂದರೆ ಅವನ ಈ ಹಠ, ಚಲ, ಖ್ಯಾತಿ ಹಾಗೂ ಯೌವ್ವನ ನೂರು ಪಟ್ಟು ಹೆಚ್ಚಾಗಲಿ.

ಸ್ವಂತ ಶ್ರಮ ನಂಬಿಕೊಂಡು ಬಂದ ವ್ಯಕ್ತಿ

-ಜಯಣ್ಣ, ನಿರ್ಮಾಪಕ

ಸ್ವಂತ ಶ್ರಮವನ್ನು ನಂಬಿಕೊಂಡು ಚಿತ್ರರಂಗಕ್ಕೆ ಬಂದ ವ್ಯಕ್ತಿ ಯಶ್‌. ಅವರ ಶ್ರಮವೇ ಯಶಸ್ಸಿಗೆ ದೊಡ್ಡ ಪಿಲ್ಲರ್‌ ಎನ್ನಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಂಬಿ ಬಂದವರನ್ನು ಯಾವತ್ತಿಗೂ ಕೈ ಬಿಡದ ನಟ. ನಾನು ಯಶ್‌ ಜತೆ ಐದು ಚಿತ್ರಗಳನ್ನು ನಿರ್ಮಿಸಿದ್ದೇನೆ. ಯಶ್‌ ಅವರಿಂದ ನಿರ್ಮಾಪಕರಿಗೆ ಹೆಸರು, ಹಣ ಬಂದಿದೆ. ತಂತ್ರಜ್ಞರಿಗೂ ಹೆಸರು ಬಂದಿದೆ. ಚಿತ್ರರಂಗದ ಅಭಿವೃದ್ಧಿ ಎಂದರೆ ಹೀರೋ ಜತೆಗೆ ಎಲ್ಲರೂ ಬೆಳೆಯುವುದು. ಇದನ್ನು ನಾನು ಯಶ್‌ ಅವರಲ್ಲಿ ನೋಡುತ್ತಿದ್ದೇನೆ. ಸಿನಿಮಾ ಬಿಟ್ಟು ಬೇರೆ ಯಾವುದೇ ರೀತಿಯ ಶೋಕಿಗಳನ್ನು ಮೈಗೂಡಿಸಿಕೊಂಡಿಲ್ಲ. ಇಪ್ಪತ್ತು ನಾಲ್ಕು ಗಂಟೆಯೂ ಸಿನಿಮಾಗಾಗಿಯೇ ದುಡಿದ, ನಟನೆಯನ್ನೇ ಧ್ಯಾನಿಸುತ್ತಿರುವ ವ್ಯಕ್ತಿ. ನಾನು ಮುಂದೆಯೂ ಯಶ್‌ ಜತೆ ಸಿನಿಮಾ ಮಾಡುತ್ತೇನೆ.

click me!