Happy Birthday Kichcha Sudeep: ಎಷ್ಟೇ ದೊಡ್ಡ ನಟನಾದರೂ ಸಿನಿಮಾ ಮಾಡುತ್ತಿರಲೇಬೇಕು!

By Kannadaprabha News  |  First Published Sep 2, 2024, 9:15 AM IST

‘ಬಿಲ್ಲಾ ರಂಗಾ ಭಾಷಾ’ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಆ ನಿಟ್ಟಿನಲ್ಲಿ ಆರೇಳು ವರ್ಷಗಳಿಂದ ಕೆಲಸಗಳು ನಡೆಯುತ್ತಿವೆ. ‘ವಿಕ್ರಾಂತ್‍ ರೋಣ’ ಮೊದಲೇ ಆ ಚಿತ್ರ ಮಾಡಬೇಕಿತ್ತು. ‘ವಿಕ್ರಾಂತ್‍ ರೋಣ’ ಮಾಡಿದ್ದೇ ‘ಬಿಲ್ಲಾ ರಂಗಾ ಭಾಷಾ’ ಮಾಡುವುದಕ್ಕೆ ಸಾಧ್ಯವೋ, ಇಲ್ಲವೋ ಎಂಬುದನ್ನು ತಿಳಿಯಕ್ಕೆ. 


ಆರ್. ಕೇಶವಮೂರ್ತಿ

ನನ್ನ ಕ್ರಿಕೆಟರ್ ಅಂದುಕೊಂಡಿದ್ದಾರೆ: ಹೊಸ ಸಿನಿಮಾ ಘೋಷಣೆ ಮಾಡುವುದಕ್ಕೆ ಭಯ ಆಗುತ್ತದೆ. ಯಾಕೆಂದರೆ ಒಂದು ಸಿನಿಮಾದ ಹುಟ್ಟಿಗೆ ಎಲ್ಲರೂ ಬೇಕು. ಆದರೆ, ಸಿನಿಮಾ ತಡ ಆದಾಗ ಎಲ್ಲರೂ ಹೀರೋ ಕಡೆ ನೋಡುತ್ತಾರೆ. ಇತ್ತೀಚೆಗಂತೂ ನನ್ನನ್ನು ನಟ ಎನ್ನುವುದಕ್ಕಿಂತ ಕ್ರಿಕೆಟರ್ ರೀತಿ ನೋಡುತ್ತಿದ್ದಾರೆ.

Tap to resize

Latest Videos

ವರ್ಷಕ್ಕೆ 2-3 ಸಿನಿಮಾ: ನಾನು ವರ್ಷಕ್ಕೆ ಒಂದೇ ಸಿನಿಮಾ ಮಾಡಬೇಕು, ಒಂದು ಸಿನಿಮಾ ಮುಗಿಯುವ ತನಕ ಬೇರೆ ಚಿತ್ರ ಆರಂಭಿಸಬಾರದು ಎಂಬ ನಿಯಮ ಹಾಕಿಕೊಂಡಿದ್ದೆ. ಇನ್ನು ಮುಂದೆ ಒಟ್ಟಿಗೆ ಎರಡ್ಮೂರು ಚಿತ್ರಗಳಲ್ಲಿ ನಟಿಸುತ್ತೇನೆ. ಅದರಿಂದ ಸತತವಾಗಿ ಸಿನಿಮಾಗಳು ಮಾಡಿದಂತೆಯೂ ಆಗುತ್ತೆ ಮತ್ತು ಮನೆಯಲ್ಲಿ ಕುಳಿತುಕೊಂಡು ಕಾಲ ಕಳೆಯುವುದೂ ತಪ್ಪುತ್ತದೆ.

ದರ್ಶನ್ ನೆನೆದು ಬೇಸರ ಹೊರ ಹಾಕಿದ ಅಭಿನಯ ಚಕ್ರವರ್ತಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​!

ಜನ ನಮ್ಮನ್ನು ಮರೆಯುವಷ್ಟು ಸುಮ್ಮನೆ ಇರಬಾರದು: ಎಷ್ಟೇ ದೊಡ್ಡ ನಟ ಆಗಿದ್ದರೂ ಆತ ಸತತವಾಗಿ ಸಿನಿಮಾ ಮಾಡುತ್ತಿರಬೇಕು. ಇಲ್ಲದೆ ಹೋದರೆ ಜನ ನಮ್ಮನ್ನು ಮರೆತುಬಿಡುತ್ತಾರೆ. ಜನ ಮರೆಯುವಷ್ಟರ ಮಟ್ಟಿಗೆ ಸುಮ್ಮನೆ ಇರಬಾರದು. ಮೊದಲು ನನ್ನ ನೋಡಿದಾಗ ಜನ ಬಂದು ಸೆಲ್ಫೀ ತೆಗೆದುಕೊಳ್ಳುತ್ತಿದ್ದರು. ಈಗ ಅದೇ ಜನ ‘ಚೆನ್ನಾಗಿದ್ದೀರಾ’ ಎಂದಷ್ಟೇ ಕೇಳುತ್ತಾರೆ.

‘ಮ್ಯಾಕ್ಸ್’ ಶೀಘ್ರ ಬಿಡುಗಡೆ: ‘ಮ್ಯಾಕ್ಸ್’ ಚಿತ್ರದ ಬಹುತೇಕ ಎಲ್ಲಾ ಕೆಲಸಗಳು ಮುಗಿದಿವೆ. ಶೀಘ್ರ ಬಿಡುಗಡೆ ಆಗಲಿದೆ. ಒಳ್ಳೆ ಸಿನಿಮಾ ಮಾಡಿದ್ರೆ ಜನ ಬರ್ತಾರೆ. ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಓಟಿಟಿ, ಟೀವಿಗಳು ಇದ್ದಾವೆ, ಹೀಗಾಗಿ ಥಿಯೇಟರ್‌ಗಳಿಗೆ ಜನ ಬರಲ್ಲ ಅನ್ನೋದು ತಪ್ಪು. ಯಾಕೆಂದರೆ ಮನೆಯಲ್ಲಿ ದೇವರ ಕೋಣೆ ಇದೆ ಎಂದ ಮಾತ್ರಕ್ಕೆ ನಾವು ದೇವಸ್ಥಾನಕ್ಕೆ ಹೋಗೋದನ್ನು ಬಿಟ್ಟಿಲ್ವಲ್ಲಾ. ಸಿನಿಮಾನೂ ಅಷ್ಟೇ. ಅವರು ನಿರೀಕ್ಷೆ ಮಾಡುವಂತಹ ಸಿನಿಮಾಗಳನ್ನು ಮಾಡಬೇಕಿದೆ.

ಬಿಗ್‌ ಬಾಸ್‌ ಶೋ ಕಷ್ಟ ಸುಖ: ಬಿಗ್‌ ಬಾಸ್‌ನ 10 ಸೀಸನ್‌ ನಾನು ಮಾಡಿದ್ದೇನೆ ಅಂತ ಎಲ್ಲರಿಗೂ ಗೊತ್ತು. ಆದರೆ, ನಾನು ಪಟ್ಟಿರೋ ಕಷ್ಟ ಯಾರಿಗೂ ಗೊತ್ತಿಲ್ಲ. ನನ್ನ ಜೀವನದ ಬಹುಪಾಲನ್ನು ನಾನು ಬಿಗ್‌ ಬಾಸ್ ಶೋಗೆ ಕೊಟ್ಟಿದ್ದೇನೆ. ಸಾಕಷ್ಟು ಶ್ರಮ ಹಾಕಿದ್ದೇನೆ. ‘ಮ್ಯಾಕ್ಸ್’ ಚಿತ್ರದ ಸಮಯದಲ್ಲಂತೂ ಬೆಳಗ್ಗೆ 3.30ಕ್ಕೆ ಚಿತ್ರೀಕರಣ ಮುಗಿಸಿ ತಮಿಳುನಾಡಿನ ಮಹಾಬಲಿಪುರಂನಿಂದ ಬೆಂಗಳೂರಿಗೆ ಬರುತ್ತಿದ್ದೆ. ನನ್ನಿಂದ ತಡವಾಗಬಾರದು ಎಂದು ಚಾರ್ಟರ್ಡ್ ಫ್ಲೈಟ್‍ ಬಾಡಿಗೆ ತಗೆದುಕೊಂಡಿದ್ದೆ. ಮಹಾಬಲಿಪುರಂನಿಂದ ಚೆನ್ನೈಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಮನೆಗೆ ಬಂದು ಯಾರ ಮುಖವೂ ನೋಡದೆ ವಾರದ ಎಪಿಸೋಡ್ ಚಿತ್ರೀಕರಣ ಮುಗಿಸಿ ಮತ್ತೆ ರಾತ್ರೋರಾತ್ರಿ ಚೆನ್ನೈಗೆ ಹೋಗಿ, ಅಲ್ಲಿಂದ ಮಹಾಬಲಿಪುರಂನಲ್ಲಿ ‘ಮ್ಯಾಕ್ಸ್’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಈ ಕಷ್ಟ ಯಾರಿಗೆ ಗೊತ್ತು. ಆದರೂ ಅದು ಕಷ್ಟದ ಕೆಲಸ ಅಲ್ಲ. ಪ್ರೀತಿಯ ಕೆಲಸ.

ಬಿಗ್‌ ಬಾಸ್‌ನಲ್ಲಿ ಸುದೀಪ್ ಇರಲ್ವಾ: ಬಿಗ್‌ ಬಾಸ್‍ ಶೋಗೆ ಸಂಬಂಧಿಸಿದವರ ಜತೆಗೆ ಮಾತುಕತೆ ನಡೆಯುತ್ತಿದೆ. ಇಷ್ಟು ವರ್ಷ ಬಹಳ ಆಸಕ್ತಿಯಿಂದ ಕೆಲಸ ಮಾಡಿದ್ದೇನೆ. ಆದರೂ ಕೆಲವೊಮ್ಮೆ ನಾವು ಜೀವನದಲ್ಲಿ ಯಾವುದಕ್ಕೂ ಮತ್ತು ಯಾರನ್ನೂ ಕಾಯದೆ ಮುಂದುವರೆಯಬೇಕು. ನನಗೆ ಮಾಡುವುದಕ್ಕೆ ಆಸಕ್ತಿ ಇಲ್ಲ ಅಥವಾ ಅವರಿಗೆ ನಾನು ಬೇಡವೇ ಎಂಬುದು ಇಲ್ಲಿ ವಿಷಯ ಅಲ್ಲ. ಅವರು ಯಾರನ್ನಾದರೂ ಹುಡುಕಿಕೊಂಡರೆ ಒಳ್ಳೆಯದು. ಒಂದು ವೇಳೆ ಬೇರೆ ಯಾರಾದರೂ ಬಿಗ್ ಬಾಸ್ ಶೋ ನಡೆಸಿಕೊಟ್ಟರೆ ನಾನು ಆ ಶೋ ನೋಡುವುದಕ್ಕೆ ಕಾಯುತ್ತಿದ್ದೇನೆ.

ಬಿಲ್ಲಾ ರಂಗಾ ಭಾಷಾ ಶುರು: ‘ಬಿಲ್ಲಾ ರಂಗಾ ಭಾಷಾ’ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಆ ನಿಟ್ಟಿನಲ್ಲಿ ಆರೇಳು ವರ್ಷಗಳಿಂದ ಕೆಲಸಗಳು ನಡೆಯುತ್ತಿವೆ. ‘ವಿಕ್ರಾಂತ್‍ ರೋಣ’ ಮೊದಲೇ ಆ ಚಿತ್ರ ಮಾಡಬೇಕಿತ್ತು. ‘ವಿಕ್ರಾಂತ್‍ ರೋಣ’ ಮಾಡಿದ್ದೇ ‘ಬಿಲ್ಲಾ ರಂಗಾ ಭಾಷಾ’ ಮಾಡುವುದಕ್ಕೆ ಸಾಧ್ಯವೋ, ಇಲ್ಲವೋ ಎಂಬುದನ್ನು ತಿಳಿಯಕ್ಕೆ. ಯಾಕೆಂದರೆ ನಮ್ಮ ಹತ್ತಿರ ದುಡ್ಡಿರಬಹುದು. ಆದರೆ, ಸಾಮರ್ಥ್ಯ ಇರುತ್ತೋ ಇಲ್ಲವೋ ಗೊತ್ತಿರಲ್ಲ. ನಾವು ಏನೋ ಹೇಳಕ್ಕೋಗಿ ಅದು ತೆರೆಯ ಮೇಲೆ ಜೋಕ್‍ ಆಗಿ ಕಾಣಿಸಬಹುದು.

ದುನಿಯಾ ವಿಜಯ್ ಕೇಳಿದರೆ ಅವರ ಜತೆ ಸಿನ್ಮಾ ಮಾಡ್ತೀನಿ: ದುನಿಯಾ ವಿಜಯ್ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಅವರ ‘ಭೀಮ’ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ಖುಷಿ ವಿಚಾರ. ಒಂದು ವೇಳೆ ದುನಿಯಾ ವಿಜಯ್ ನಿರ್ದೇಶಕರಾಗಿ ನನ್ನ ಬಳಿ ಬಂದರೆ ಅವರ ಚಿತ್ರದಲ್ಲಿ ನಾನು ಖಂಡಿತಾ ನಟಿಸುತ್ತೇನೆ. ಯಾಕೆಂದರೆ ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನಿಗಾಗಿ ಕತೆ ಮಾಡಿಕೊಂಡು ಬಂದರೆ ನಾನು ಯಾಕೆ ಬೇಡ ಅನ್ನಲಿ? ಅವರು ಹೇಗೆ ಕತೆ ಮಾಡಿಕೊಂಡಿದ್ದರೂ ಅದರಲ್ಲಿ ನಟಿಸುತ್ತೇನೆ.

ರಕ್ಷಿತ್ ಶೆಟ್ಟಿ ಮಗು ರೀತಿ: ರಕ್ಷಿತ್ ಶೆಟ್ಟಿ ಜತೆಗೆ ನಾನು ಯಾವಾಗ ಸಿನಿಮಾ ಮಾಡುತ್ತೇನೆ ಎಂಬುದಕ್ಕೆ ರಕ್ಷಿತ್ ಶೆಟ್ಟಿ ಅವರೇ ಉತ್ತರಿಸಬೇಕು. ಅವರದ್ದೇ ಆದ ದಾರಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಮಗು ರೀತಿ. ಆ ಮಗು ತನ್ನ ಪಾಡಿಗೆ ತಾನು ಸಿನಿಮಾ ಮಾಡಿಕೊಂಡಿದೆ. ನಾನು ಹೋಗಿ ಬೇಲಿ ಹಾಕಬಾರದು. ಹೀಗಾಗಿ ರಕ್ಷಿತ್ ಶೆಟ್ಟಿ ಯಾವಾಗ ಬಂದರೂ ನಾನು ಸಿನಿಮಾ ಮಾಡುತ್ತೇನೆ. ಯಾವಾಗ ಅಂತ ಮಾತ್ರ ರಕ್ಷಿತ್ ಶೆಟ್ಟಿ ಅವರೇ ಹೇಳಬೇಕು.

ಧ್ರುವ ಸರ್ಜಾ ಆಲ್ ಇಂಡಿಯಾ ಸ್ಟಾರ್: ‘ಮಾರ್ಟಿನ್’ ಸಿನಿಮಾ ಬರುತ್ತಿದೆ. ನನ್ನ ‘ಬಚ್ಚನ್’ ಚಿತ್ರದ ನಿರ್ಮಾಪಕರು ಉದಯ್ ಮೆಹ್ತಾ. ನನಗೆ ಅತೀ ಹೆಚ್ಚು ಸಂಭಾವನೆ ಕೊಟ್ಟ ಮೊದಲ ನಿರ್ಮಾಪಕರು ಅವರು. ಅವರ ನಿರ್ಮಾಣದ ‘ಮಾರ್ಟಿನ್‌’ ಗೆಲ್ಲಬೇಕು. ಧ್ರುವ ಸರ್ಜಾ ಆಲ್ ಇಂಡಿಯಾ ಸ್ಟಾರ್. ನಿಜ ಹೇಳಬೇಕು ಅಂದರೆ ಧ್ರುವ ಸರ್ಜಾ ಅವರ ಮೊದಲ ಸಿನಿಮಾ ನೋಡಿ, ನನಗೂ ನಿನ್ನ ರೀತಿ ಡ್ಯಾನ್ಸ್ ಮಾಡೋದು ಹೇಳಿಕೊಡಪ್ಪ ಅಂದಿದ್ದೆ.

ನಾನು, ದರ್ಶನ್ ದೂರವಾಗಿದ್ದೇವೆ: ಮೊದಲಿನಂತೆ ಇದ್ದಿದ್ದರೆ ಜೈಲಿಗೆ ಹೋಗಿ ಮಾತಾಡಿಸುತ್ತಿದ್ದೆ: ಸುದೀಪ್

ವೀರಮದಕರಿ ಮತ್ತು ಜಾತಿ: ನಾನು ಚಿತ್ರದುರ್ಗದ ವೀರಮದಕರಿ ಕುರಿತ ಚಿತ್ರ ಮಾಡಬೇಕಿತ್ತು. ಆದರೆ, ಅದೇ ಕತೆಯನ್ನು ನಾವು ಮಾಡುತ್ತೇವೆ ಎಂದು ರಾಕ್‌ಲೈನ್‌ ವೆಂಕಟೇಶ್‌ ಕೇಳಿದಾಗ ನಾನು ಅದನ್ನು ಬಿಟ್ಟು ಬಿಟ್ಟೆ. ನನಗೆ ಆ ಚಿತ್ರ ಮಾಡುವ ಆಸೆ ಇತ್ತು. ಅದಕ್ಕೆ ಕೆಲಸಗಳು ನಡೆಯುತ್ತಿತ್ತು ಕೂಡ. ಹಾಗಂತ ನಾನು ವೀರಮದಕರಿ ಮಾಡಬೇಕಿತ್ತು ಎಂದಾಗ ನೀವು ನನ್ನ ಯಾವುದೋ ಒಂದು ಜಾತಿಗೆ ಸೇರಿಸಬೇಡಿ.

ಎಂಇಎಸ್ ಮೈದಾನದಲ್ಲಿ ಹುಟ್ಟುಹಬ್ಬ ಆಚರಣೆ: ಕಿಚ್ಚ ಸುದೀಪ್ ಇಂದು ಬೆಂಗಳೂರಿನ ಜಯನಗರ ಎಂಇಎಸ್‌ ಮೈದಾನದಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಅಲ್ಲಿಯೇ ಇರುತ್ತಾರೆ. ನಟ ಸುದೀಪ್‌, ‘ಹುಟ್ಟುಹಬ್ಬಕ್ಕಾಗಿ ನಾನು ಈ ಬಾರಿ ಯಾವುದೇ ಹೊಸ ನಿರ್ಧಾರಗಳನ್ನು ಪ್ರಕಟಿಸುತ್ತಿಲ್ಲ. ಅಭಿಮಾನಿಗಳ ಜತೆಗೆ ಸಂಭ್ರಮಿಸುತ್ತೇನೆ. ಕೇಕು, ಹಾರ ಬೇಡ’ ಎಂದರು.

click me!