ಗುರುಕಿರಣ್ ತಾಯಿ ರತ್ನಕಾಂತಿ ಶೆಟ್ಟಿ ನಿಧನ: ಭಾವುಕ ಪೋಸ್ಟ್ ಮೂಲಕ ನೆನಪಿಸಿಕೊಂಡ ಸಂಗೀತ ನಿರ್ದೇಶಕ

Published : Aug 09, 2026, 05:51 PM IST
GuruKiran Mother

ಸಾರಾಂಶ

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ದುಃಖಿತರಾಗಿರುವ ಗುರುಕಿರಣ್..

ಬೆಂಗಳೂರು (ಆ.09): ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ದುಃಖಿತರಾಗಿರುವ ಗುರುಕಿರಣ್, ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡು ತಾಯಿಯೊಂದಿಗಿನ ತಮ್ಮ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.

“ತುಂಬಿದ ಹೃದಯದಿಂದ ನಮ್ಮ ಪ್ರೀತಿಯ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರ ನಿಧನದ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಅವರು ನಮ್ಮ ಕುಟುಂಬದ ಹೃದಯವಾಗಿದ್ದರು. ನಮ್ಮ ಶಕ್ತಿ, ಪ್ರೀತಿ ಮತ್ತು ಬೆಚ್ಚಗಿನ ಆಸರೆಯಾಗಿದ್ದರು. ಅವರ ಬೇಷರತ್ ಪ್ರೀತಿ, ಶಾಂತ ಉಪಸ್ಥಿತಿ ಮತ್ತು ಅಗಾಧ ತ್ಯಾಗಗಳು ಇಂದು ನಾವು ಏನಾಗಿದ್ದೇವೋ ಅದನ್ನು ರೂಪಿಸಿವೆ” ಎಂದು ಗುರುಕಿರಣ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಆಪ್ತರು, ಸ್ನೇಹಿತರು ಹಾಗೂ ಅಭಿಮಾನಿಗಳು ಗುರುಕಿರಣ್ ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ.

ಮಂಗಳೂರಿನಿಂದ ಆರಂಭವಾದ ಸಂಗೀತ ಪಯಣ

ಗುರುಕಿರಣ್ ಮೂಲತಃ ಮಂಗಳೂರಿನವರು. ಬಾಲ್ಯದಿಂದಲೇ ಸಂಗೀತದತ್ತ ಅಪಾರ ಆಸಕ್ತಿ ಹೊಂದಿದ್ದ ಅವರು, ಮಂಗಳೂರಿನ ವಿವಿಧ ಆರ್ಕೆಸ್ಟ್ರಾ ಹಾಗೂ ಕಲಾತಂಡಗಳಲ್ಲಿ ಗಾಯಕ ಮತ್ತು ಕೀಬೋರ್ಡ್ ವಾದಕರಾಗಿ ತಮ್ಮ ಸಂಗೀತ ಪಯಣ ಆರಂಭಿಸಿದ್ದರು. ನಂತರ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಚಿತ್ರರಂಗದ ಸಂಗೀತ ಕ್ಷೇತ್ರದ ಒಳನೋಟ ಪಡೆದುಕೊಂಡರು.

ನಟನಾಗಬೇಕು ಎಂದುಕೊಂಡಿದ್ದ ಗುರುಕಿರಣ್

ಸಂಗೀತ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡುವ ಮುನ್ನ ಗುರುಕಿರಣ್ ಅವರಿಗೆ ನಟನೆಯಲ್ಲೂ ಆಸಕ್ತಿ ಇತ್ತು. ನಟನಾಗುವ ಕನಸು ಕಂಡಿದ್ದ ಅವರು ‘ರಂಗೋಲಿ’, ‘ಗಂಡುಗಲಿ’ ಹಾಗೂ ತುಳು ಚಿತ್ರ ‘ಬದ್ಕೊಂಜಿ ಕಬಿತೆ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಬಳಿಕ ಅವರ ಕಲಾ ಪಯಣ ಸಂಗೀತದತ್ತ ತಿರುಗಿತು. ‘ಎ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಗುರುಕಿರಣ್, ನಂತರ ಹಲವು ಯಶಸ್ವಿ ಸಿನಿಮಾಗಳಿಗೆ ಸಂಗೀತ ನೀಡಿದರು.

ಹಲವು ಹಿಟ್ ಸಿನಿಮಾಗಳಿಗೆ ಸಂಗೀತ

‘ಉಪೇಂದ್ರ’, ‘ಚಿತ್ರ’, ‘ಅಪ್ಪು’, ‘ಆಪ್ತಮಿತ್ರ’, ‘ಜೋಗಿ’, ‘ಅರಮನೆ’, ‘ರಾಮ್’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಿಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ತಮ್ಮದೇ ಆದ ಸಂಗೀತ ಶೈಲಿಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರತ್ಯೇಕ ಸ್ಥಾನ ಸಂಪಾದಿಸಿಕೊಂಡಿದ್ದಾರೆ.

ಪ್ರಶಸ್ತಿಗಳಿಗೂ ಭಾಜನ

ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಗುರುಕಿರಣ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಫಿಲ್ಮ್‌ಫೇರ್ ಪ್ರಶಸ್ತಿಗಳೂ ಅವರ ಮುಡಿಗೇರಿವೆ. ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗುರುಕಿರಣ್ ಅವರಿಗೆ ಇದೀಗ ತಾಯಿಯ ಅಗಲಿಕೆಯ ನೋವು ಎದುರಾಗಿದೆ. “ನಮ್ಮ ಕುಟುಂಬದ ಹೃದಯವಾಗಿದ್ದರು” ಎಂದು ತಾಯಿಯನ್ನು ನೆನಪಿಸಿಕೊಂಡಿರುವ ಅವರ ಭಾವುಕ ಮಾತುಗಳು ಅಭಿಮಾನಿಗಳ ಮನಕಲಕಿವೆ. ಇನ್ನು ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಸಿಗಲಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Toxic Movie: ಬೋಲ್ಡ್​ ದೃಶ್ಯ ಮಾಡಿದ ನಟಿ ಕಿಯಾರಾಗೆ ವೇದಿಕೆ ಮೇಲೆಯೇ ಹೀಗೆ ಸಮಾಧಾನಪಡಿಸಿದ ಯಶ್
ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ 'ಮೆಜೆಸ್ಟಿಕ್' ಏರಿಯಾದ ಸೀಕ್ರೆಟ್ ಬಿಚ್ಚಿಟ್ಟ ಯಶ್.. 'ಸ್ಟೇಡಿಯಂ' ಅಂದಿದ್ಯಾಕೆ?