
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಬೃಂದಾವಿಹಾರಿ’ ಚಿತ್ರದ ‘ಒಂದೇ ಒಂದು’ ಎಂದು ಸಾಗುವ ಐದನೇ ಹಾಡು ಬಿಡುಗಡೆ ಆಗಿದೆ. ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಕೆ.ಎಸ್. ಚಿತ್ರ ಹಾಗೂ ಜಸ್ಕರಣ್ ಸಿಂಗ್ ಹಾಡಿದ್ದು, ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಹಾಡನ್ನು ಕೇಳಬಹುದು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆಯಾಗಿದೆ. ಈ ಚಿತ್ರವು ಅ.16ಕ್ಕೆ ತೆರೆಗೆ ಬರಲಿದೆ. ಶ್ರೀನಿವಾಸರಾಜು ನಿರ್ದೇಶನ, ಸಮೃದ್ಧಿ ಮಂಜುನಾಥ್ ನಿರ್ಮಾಣದ ಚಿತ್ರವಿದು.
ಗಣೇಶ್, ‘ನೋಡಿದವರೆಲ್ಲಾ ಈ ಹಾಡಿನಲ್ಲಿ ನಾನು ತುಂಬಾ ಚೆನ್ನಾಗಿ ಕಾಣುತ್ತೇನೆಂದು ಹೇಳುತ್ತಿದ್ದಾರೆ. ನಾನು ಎಲ್ಲವನ್ನು ಪ್ರೀತಿಯಿಂದ ಮಾಡುತ್ತೇನೆ. ಆದರೆ ಅದು ತೆರೆಯ ಮೇಲೆ ಚೆನ್ನಾಗಿ ಕಾಣಲು ನೀವೆಲ್ಲಾ ನನ್ನ ಮೇಲಿಟ್ಟಿರುವ ಪ್ರೀತಿಯೇ ಕಾರಣ’ ಎಂದರು.
ಸಮೃದ್ಧಿ ಮಂಜುನಾಥ್, ‘ನನ್ನ ಮತ್ತು ಗಣೇಶ್ ಅವರ ಸ್ನೇಹ ಕ್ರಿಕೆಟ್‌ನಿಂದ ಶುರುವಾಯಿತು. ಅವರಿಂದಲೇ ಚಿತ್ರರಂಗಕ್ಕೆ ಪರಿಚಯವಾಗಿ ನಿರ್ಮಾಪಕನಾದೆ. ನನ್ನ ನಿರ್ಮಾಣದ ಚಿತ್ರಕ್ಕೆ ಅವರು ಹೀರೋ ಆಗಿರುವುದು ಖುಷಿ ಕೊಟ್ಟಿದೆ’ ಎಂದರು.
ಗೀತೆರಚನೆಕಾರರಾದ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಈ ಚಿತ್ರದಲ್ಲಿ ಏಳು ಹಾಡುಗಳಿವೆ. ವಿಶೇಷ ಎಂದರೆ ಎಲ್ಲ ಹಾಡುಗಳನ್ನು ದ್ವಿರುಕ್ತಿ ಬಳಸಿ ಬರೆದಿದ್ದೇನೆ. ರಾಮ ರಾಮ, ರಾಧೆ ರಾಧೆ ಹೀಗೆ... ಪ್ರಸ್ತುತ "ಒಂದೇ ಒಂದು" ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ತೆರೆಯ ಮೇಲೆ ನೋಡಿದ ಮೇಲೆ ಮನಸ್ಸು ತುಂಬಿ ಬಂದಿದೆ ಎಂದರು.
ಶ್ರೀನಿವಾಸರಾಜು, ‘16 ರಿಂದ 60 ವಯಸ್ಸಿನವರೆಗೂ ಎಲ್ಲಾ ಹೆಂಗಸರು ತಾವು ಪ್ರೀತಿಸುವವರನ್ನು ಕೇಳುವ ಪ್ರಶ್ನೆ, ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಾ? ಎಂದು. ಅವರೆಲ್ಲರ ಪ್ರಶ್ನೆಗೆ ಉತ್ತರವಾಗಿ ಈ ಹಾಡು ಮೂಡಿಬಂದಿದೆ’ ಎಂದರು. ಈ ಚಿತ್ರದ ಎಲ್ಲಾ ಹಾಡುಗಳನ್ನು ಡಾ ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚಿತ್ರದ ನಾಯಕಿ ದೇವಿಕಾ ಭಟ್, ಜಸ್ಕರಣ್ ಸಿಂಗ್ ಹಾಜರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.