‌Dr Vishnuvardhan ಸಮಾಧಿಯಿದ್ದ ಜಾಗವನ್ನು 144 ಕೋಟಿಗೆ ಮಾರಾಟಕ್ಕೆ ಸರ್ಕಾರ ಬ್ರೇಕ್!‌ ವೀರಕಪುತ್ರ ಶ್ರೀನಿವಾಸ್‌ ಏನಂದ್ರು?

Published : Aug 29, 2025, 12:18 PM IST
veerakaputra srinivas on actor dr vishnuvardhan memorial demolition at abhiman studio

ಸಾರಾಂಶ

Abhiman Stuido: ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿ ಡಾ ವಿಷ್ಣುವರ್ಧನ್ ಸಮಾಧಿ ಜಾಗವನ್ನು ಮಾರಾಟ ಮಾಡಲು ಸಂಚು ನಡೆದಿತ್ತು. ಇದಕ್ಕೆ ಸರ್ಕಾರವೇ ಬ್ರೇಕ್‌ ಹಾಕಿದೆ. ಹೀಗಾಗಿ ಬಾಲಣ್ಣನ ಮೊಮ್ಮಗನ ಯೋಜನೆಗೆ ಮಣ್ಣು ಬಿದ್ದಿದೆ. 

1970ರಲ್ಲಿ ಸರ್ಕಾರವು ‌ನಟ ಬಾಲಕೃಷ್ಣ ಅವರಿಗೆ ಬೆಂಗಳೂರಿನ ಹೊರವಲಯದಲ್ಲಿ 20 ಎಕರೆ ಜಮೀನು ನೀಡಿದ್ದು, ಅದನ್ನು ಅಭಿಮಾನ್‌ ಸ್ಟುಡಿಯೋ ಕೆಲಸಗಳಿಗೆ ಬಳಸಿಕೊಳ್ಳಬೇಕು, ಅದನ್ನು ಬಿಟ್ಟು ಬೇರೆ ಎಲ್ಲಿಯೂ ಬಳಸಿಕೊಳ್ಳದಂತೆ ಆದೇಶ ಹೊರಡಿಸಿತ್ತು. 2009ರಲ್ಲಿ ಅಲ್ಲಿಯೇ ಡಾ ವಿಷ್ಣುವರ್ಧನ್ ಅಂತ್ಯಕ್ರಿಯೆ ಮಾಡಲಾಗಿತ್ತು. ಇತ್ತೀಚೆಗೆ ಅಂತ್ಯಕ್ರಿಯೆ ಮಾಡಿದ್ದ ಜಾಗದಲ್ಲಿದ್ದ ಸ್ಮಾರಕವನ್ನು ನಾಶ ಮಾಡಲಾಗಿತ್ತು, ಅಲ್ಲಿ ವಿಷ್ಣು ಸಮಾಧಿ ಇತ್ತು ಎನ್ನಲು ಯಾವುದೇ ಕುರುಹುಗಳು ಇರಲಿಲ್ಲ. ಈಗ ಆ ಜಾಗವನ್ನು ಸರ್ಕಾರವು ವಶಕ್ಕೆ ಪಡೆದಿದೆ.

ಬಾಲಣ್ಣನವರ ಮೊಮ್ಮಗ ಕಾರ್ತಿಕ್‌ ಈ ಜಾಗವನ್ನು ಮಾಲ್‌ ಕಟ್ಟಬೇಕು ಎಂದು ಯೋಚನೆ ಹಾಕುತಿದ್ದಾನೆ. ಹೀಗಾಗಿ ರಾತ್ರೋ ರಾತ್ರಿ ಈ ಕೆಲಸ ಆಗಿದೆ. ಹೈಕೋರ್ಟ್‌ ಕೂಡ ಅದು ಬಾಲಣ್ಣನವರ ಕುಟುಂಬದ ಆಸ್ತಿ, ವಿಷ್ಣು ಸಮಾಧಿ ಬಗ್ಗೆ ಕೇಳಲು ನೀವು ಯಾರು ಎಂದು ಅಭಿಮಾನಿಗಳ ಬಳಿ ಪ್ರಶ್ನೆ ಮಾಡಿತ್ತು. ಈಗ ನಾವು ಅಸಹಾಯಕ ಸ್ಥಿತಿಯಲ್ಲಿದ್ದೇವೆ ಎಂದು ಡಾ ವಿಷ್ಣುವರ್ಧನ್‌ ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಅವರು ಹೇಳಿದ್ದರು. ಸರ್ಕಾರದ ಜಾಗ ಈಗ ಸ್ಟುಡಿಯೋ ಕೆಲಸ ಬಿಟ್ಟು, ಬೇರೆ ಕೆಲಸಕ್ಕೆ ಬಳಕೆಯಾಗ್ತಿದೆ, ಮಾರಾಟ ಆಗ್ತಿದೆ ಎಂದು ಈಗ ಅದನ್ನು ಮುಟ್ಟಗೋಲು ಹಾಕಿದ್ದಲ್ಲದೆ ಅದೀಗ ಅರಣ್ಯ ಭೂಮಿ ಎಂದು ಘೋಷಿಸಿದೆ. ಈ ಬಗ್ಗೆ ವೀರಕಪುತ್ರ ಶ್ರೀನಿವಾಸ್‌ ಅವರು ಹೇಳಿದ್ದಾರೆ.

ವೀರಕಪುತ್ರ ಶ್ರೀನಿವಾಸ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದೇನು?

ಬಾಲಕೃಷ್ಣ ಅವರ ಮೊಮ್ಮಗ ಕಾರ್ತೀಕ್ ಅಭಿಮಾನ್ ಸ್ಟುಡಿಯೋದ ಒಂದು ಎಕರೆಯನ್ನು 14 ಕೋಟಿ 37 ಲಕ್ಷಕ್ಕೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿಕೊಂಡಿದ್ದ....ಅಂದ್ರೆ ಹತ್ತು ಎಕರೆಗೆ 144 ಕೋಟಿ!

ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸಿದ್ದ ಅಭಿಮಾನ್ ಸ್ಟುಡಿಯೋದ ಮಾಲೀಕರಿಗೆ ಸರ್ಕಾರವು ಕಾನೂನಿನ ಮಹತ್ವವನ್ನು ತಿಳಿಸಿದೆ. ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಂಡು ಆ ಜಾಗವನ್ನು ಪುನಃ ಸರ್ಕಾರದ ವಶಕ್ಕೆ ಪಡೆಯುವ ನಿರ್ಧಾರವನ್ನು ಮಾಡಿದೆ. ಅದಕ್ಕಾಗಿ ಅದು ಪಟ್ಟಿಮಾಡಿರುವ ಕಾರಣಗಳನ್ನು ಎಲ್ಲಾ ಕನ್ನಡಿಗರು ಓದಿಕೊಳ್ಳಲು ವಿನಂತಿಸುವೆ. ಮೊದಲಿನಿಂದಲೂ ನಾನು ಆ ಜಾಗದ ವಿರುದ್ಧ, ಅಲ್ಲಿನ ಹಣಕಾಸಿನ ಅವ್ಯವಹಾರದ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತುತ್ತಲೇ ಇದ್ದೆ. ಆದರೆ ಕೆಲವರು ಅಷ್ಟು ದೊಡ್ಡ ಹಗರಣವನ್ನು ಬಿಟ್ಟು, ಅಭಿಮಾನಿಗಳ ಪುಣ್ಯಭೂಮಿಯಂತಹ ಒಂದು ಸಣ್ಣ ಆಸೆಯ ವಿರುದ್ಧ ನಿಂತುಬಿಟ್ಟರು, ಪರವಾಗಿಲ್ಲ.

ಈಗಲಾದರೂ ನಮ್ಮ ಕೂಗಿಗೆ ನ್ಯಾಯ ಸಿಕ್ಕಿದೆ. ಇದು ನಿಜಕ್ಕೂ ಅಭಿನಂದನೀಯ ಕೆಲಸ. ಅಸಂಖ್ಯಾತ ಅಭಿಮಾನಿಗಳ ಹದಿನೈದು ವರ್ಷಗಳ ನೋವು, ಕಣ್ಣೀರು ಮತ್ತು ಅಸಹಾಯಕತೆಗೆ ನ್ಯಾಯ ಸಿಕ್ಕಿದೆ. ಆದರೆ ಈ ಆದೇಶದಲ್ಲಿ ಅಭಿಮಾನ್ ಸ್ಟುಡಿಯೋದ ಜಾಗವನ್ನು ಅರಣ್ಯಭೂಮಿ ಎಂದು ಘೋಷಣೆ ಮಾಡಿರುವುದು ಚೂರು ಗೊಂದಲವನ್ನು ಸೃಷ್ಟಿಸಿದೆ. ಅರಣ್ಯಭೂಮಿಯ ನೆಪ ಹೇಳಿ ಅಲ್ಲಿ ಯಜಮಾನ್ರ ಪುಣ್ಯಭೂಮಿ, ಬಾಲಣ್ಣನ ಸಮಾಧಿ ಆಗದಂತೆ ತಡೆದುಬಿಟ್ಟರೆ? ಅದು ಆಗದಿರಲೆಂದು ಒತ್ತಾಯಿಸೋಣ. ಅರಣ್ಯ ಭೂಮಿಯ ಆಶಯಕ್ಕೆ ಅಡ್ಡಿಯಾಗದಂತಹ ಮರ ಗಿಡಗಳಿಂದಲೇ ಕೂಡಿರುವ ಸರಳ ಪುಣ್ಯಭೂಮಿ ನಿರ್ಮಾಣಕ್ಕೆ ಸರ್ಕಾರ ಮನಸು ಮಾಡಬೇಕು. ಇಲ್ಲವಾದರೆ 'ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿದ ಕಾರ್ತೀಕನ ಕನಸುಗಳೂ ನೆಲಸಮ' ಆದವೆಂದು ಸಮಾಧಾನಪಡುವುದಕ್ಕಷ್ಟೇ ಈ ತೀರ್ಮಾನ ಉಪಯೋಗಕ್ಕೆ ಬರುತ್ತದೆ. ಹಾಗಾದರೆ ನಮಗೆ ಅಂತಿಮವಾಗಿ ದಕ್ಕಿದ್ದೇನು? ನಾವು ಬಯಸಿದ್ದು ಪುಣ್ಯಭೂಮಿಯೇ ಹೊರತು ಅಭಿಮಾನ್ ಸ್ಟುಡಿಯೋ ಅಲ್ಲ.

ಅಭಿಮಾನ್ ಸ್ಟುಡಿಯೋದ ಮಾಲೀಕರು ಸರ್ಕಾರ, ಕೋರ್ಟು, ಕಚೇರಿ, ಅಭಿಮಾನಿಗಳು, ಕುಟುಂಬ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸ್ತಾ ಹೋಗುವುದನ್ನು ಕಂಡಾಗ ಅದರ ಹಿಂದಿನ ಮರ್ಮ ನಾಡಿನ ಜನತೆಗೆ ತಿಳಿಯಬೇಕು. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ನಾವು ಒತ್ತಾಯಿಸಿದ್ದೆವು. ಈ ಸಂಬಂಧ ಅಧಿವೇಶನ ಶುರುವಾದ ಮಾರನೇ ದಿನ ನನಗೆ ಸಿಎಂ ಕಚೇರಿಯಿಂದ ಅವರ ಕಾರ್ಯದರ್ಶಿಗಳಾದ ಪ್ರಭಾಕರ್ ಅವರಿಂದ ಕರೆ ಬಂದಿತ್ತು. ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ಕರೆದಿರುವುದಾಗಿ ತಿಳಿಸಿದ್ದರು. ಮತ್ತು ಒಂದಷ್ಟು ಮಾಹಿತಿಯನ್ನೂ ಕೇಳಿದ್ದರು. ನಾನು ಅವರಿಗೆ ಬೇಕಿದ್ದ ಒಂದಷ್ಟು ಮಾಹಿತಿ ಮತ್ತು ಅಭಿಮಾನಿಗಳ ವಾದವನ್ನು ತಿಳಿಸಿದ್ದೆ.

"ಆ ಜಾಗದ ಸತ್ಯಾಸತ್ಯತೆ ನಮಗೆ ತಿಳಿಯಬೇಕು ಅದಕ್ಕಾಗಿ ನ್ಯಾಯಾಂಗ ತನಿಖೆ ಮಾಡಿ ಮತ್ತು ಆಗಿರುವ ತಪ್ಪುಗಳನ್ನು ಸರಿಪಡಿಸಿ ಪುಣ‌್ಯಭೂಮಿಯನ್ನು ಉಳಿಸಿಕೊಡಿ" ಎಂದು ಆ ಸಂದರ್ಭದಲ್ಲಿ ವಿನಂತಿ ಮಾಡಿದ್ದೆ. ಆ ನಿಟ್ಟಿನಲ್ಲಿ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಇದು ತಾರ್ಕಿಕ ಅಂತ್ಯಕಾಣುವವರೆಗೂ ಈ ಹೋರಾಟವನ್ನು ಮುಂದುವರಿಸಬೇಕಿದೆ. ಶತಾಯ ಗತಾಯ ಈ ಜಾಗ ಮತ್ತೆ ಸರ್ಕಾರದ ಅಧೀನಕ್ಕೇ ಬರುವಂತೆ ನೋಡಿಕೊಳ್ಳಬೇಕಿದೆ ಮತ್ತು ಡಾ.ವಿಷ್ಣುವರ್ಧನ್ ಮತ್ತು ಹಿರಿಯ ನಟ ಬಾಲಕೃಷ್ಣ ಅವರ ಸಮಾಧಿಗಳನ್ನು ಮತ್ತೆ ಮರು ನಿರ್ಮಾಣಗೊಳಿಸಬೇಕಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ