ಬೆಂಗಳೂರಿನ 3 ಥಿಯೇಟರ್‌ಗಳಲ್ಲಿ 100 ದಿನ ಓಡಿದ ಮೊದಲ ಸಿನಿಮಾ, ಇಬ್ಬರು ದಿಗ್ಗಜರನ್ನು ಕೊಟ್ಟ ಆ ಚಿತ್ರದ ರೋಚಕ ಕಥೆ

Published : Nov 19, 2026, 07:18 AM IST
Vishnuvardhan and Ambareesh

ಸಾರಾಂಶ

1972ರಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಮ್ಯಾಜಿಕ್ ನಡೆದಿತ್ತು. ಒಂದು ಸಿನಿಮಾ ಮಾತ್ರ ಬೆಂಗಳೂರಿನ ಮೂರು ಪ್ರಮುಖ ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಶತದಿನೋತ್ಸವ ಆಚರಿಸಿತ್ತು. ಜೊತೆಗೆ ಇಬ್ಬರು ಸೂಪರ್‌ ಸ್ಟಾರ್‌ಗಳನ್ನ ಕೊಟ್ಟ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.

ಬೆಂಗಳೂರು: 1972ರಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಮ್ಯಾಜಿಕ್ ನಡೆದಿತ್ತು. ಆ ಕಾಲದಲ್ಲಿ ಒಂದು ಸಿನಿಮಾ ಒಂದೇ ಥಿಯೇಟರ್‌ನಲ್ಲಿ 100 ದಿನ ಓಡಿದ್ರೆ ಅದು ದೊಡ್ಡ ಪವಾಡ. ಆದರೆ, ಒಂದು ಸಿನಿಮಾ ಮಾತ್ರ ಬೆಂಗಳೂರಿನ ಮೂರು ಪ್ರಮುಖ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಶತದಿನೋತ್ಸವ ಆಚರಿಸಿ ಇಡೀ ಸ್ಯಾಂಡಲ್‌ವುಡ್ ಅನ್ನೇ ತಿರುಗಿ ನೋಡುವಂತೆ ಮಾಡಿತ್ತು!

ಅಷ್ಟೇ ಅಲ್ಲ.. ಕನ್ನಡ ಚಿತ್ರರಂಗಕ್ಕೆ ಇಬ್ಬರು ಮಹಾನ್ ಸೂಪರ್‌ಸ್ಟಾರ್‌ಗಳನ್ನು ಪರಿಚಯಿಸಿದ ಹೆಗ್ಗಳಿಕೆಯೂ ಇದೇ ಚಿತ್ರದ್ದು. ಬರೋಬ್ಬರಿ 8 ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡು ದಾಖಲೆ ಬರೆದರೂ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಮಾತ್ರ ಸಿಗಲೇ ಇಲ್ಲ! ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಇಂದಿಗೂ ಕನ್ನಡಿಗರ ಮನದಲ್ಲಿ ಎವರ್‌ಗ್ರೀನ್ ಆಗಿರುವ ಆ ಸಿನಿಮಾ ಯಾವುದು ಗೊತ್ತಾ? ಅದುವೇ 'ನಾಗರಹಾವು'! 1972ರಲ್ಲಿ ತೆರೆಕಂಡ ಈ ಸಿನಿಮಾ ಕೇವಲ ಒಂದು ಚಿತ್ರವಾಗಿರಲಿಲ್ಲ, ಅದು ಕನ್ನಡ ಸಿನಿಮಾ ರಂಗದ ದಿಕ್ಕನ್ನೇ ಬದಲಿಸಿದ ಒಂದು ಅದ್ಭುತ.

ಇದಕ್ಕೂ ಮುನ್ನ ತಮಿಳಿನ 'ಕಾದಲಿಕ್ಕ ನೇರಮಿಲ್ಲೈ' ಸಿನಿಮಾ ಬೆಂಗಳೂರಿನ 3 ಚಿತ್ರಮಂದಿರಗಳಲ್ಲಿ 100 ದಿನ ಪೂರೈಸಿತ್ತು. ಆ ದಾಖಲೆಯನ್ನು ಕನ್ನಡದಲ್ಲಿ ಮೊದಲ ಬಾರಿಗೆ ಸರಿಗಟ್ಟಿದ್ದು ನಮ್ಮ 'ನಾಗರಹಾವು'!

ಮೂರು ಸಿನಿಮಾ ಮಂದಿರಗಳು ಯಾವುದು?

ಬೆಂಗಳೂರಿನ ಪ್ರಮುಖ ಕೇಂದ್ರಗಳಾಗಿದ್ದ ಈ ಮೂರು ಥಿಯೇಟರ್‌ಗಳಲ್ಲಿ (ಕೆಲವು ಕಡೆ ಶಾಂತಿ ಅಥವಾ ನವರಂಗ್ ಚಿತ್ರಮಂದಿರಗಳ ಹೆಸರೂ ಉಲ್ಲೇಖವಾಗುತ್ತದೆ) 'ನಾಗರಹಾವು' ಸತತ 100 ದಿನ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು.

  • ಸಾಗರ್ ಚಿತ್ರಮಂದಿರ: ಕೆಂಪೇಗೌಡ ರಸ್ತೆಯಲ್ಲಿದ್ದ (KG Road) ಕನ್ನಡ ಸಿನಿಮಾಗಳ ಪ್ರಮುಖ ಕೇಂದ್ರ
  • ಸಂಗಮ್ ಚಿತ್ರಮಂದಿರ: ಮೆಜೆಸ್ಟಿಕ್‌ನ ಟ್ಯಾಂಕ್ ಬಂಡ್ ರಸ್ತೆಯಲ್ಲಿದ್ದ ಪ್ರಸಿದ್ಧ ಥಿಯೇಟರ್
  • ನಟರಾಜ್ ಚಿತ್ರಮಂದಿರ: ಶೇಷಾದ್ರಿಪುರಂನಲ್ಲಿದ್ದ ಈ ಚಿತ್ರಮಂದಿರ ಮೂರನೇ ಪ್ರಮುಖ ಕೇಂದ್ರವಾಗಿ ಶತದಿನೋತ್ಸವ ಆಚರಿಸಿತು.

ವಿಷ್ಣುವರ್ಧನ್‌, ಅಂಬರಿಷ್‌ ಪರಿಚಯಿಸಿದ ಚಿತ್ರ

'ನಾಗರಹಾವು' ವಿಶೇಷವಾಗಲು ಇನ್ನೊಂದು ದೊಡ್ಡ ಕಾರಣವಿದೆ. ಕನ್ನಡ ಚಿತ್ರರಂಗದ ಇಬ್ಬರು ಮಹಾನ್ ನಟರಿಗೆ ಬದುಕು ಕೊಟ್ಟಿರೋದು ಇದೇ ಚಿತ್ರ. 'ಸಾಹಸಸಿಂಹ' ಡಾ. ವಿಷ್ಣುವರ್ಧನ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ಇದೇ! 'ರಾಮಾಚಾರಿ' ಪಾತ್ರದ ಮೂಲಕ ವಿಷ್ಣು ಯುವಕರ ಹೃದಯ ಗೆದ್ದರು. 'ರೆಬೆಲ್ ಸ್ಟಾರ್' ಅಂಬರೀಶ್ ಸಿನಿಮಾ ಪಯಣ ಶುರುವಾಗಿದ್ದೂ ಇದೇ ಚಿತ್ರದ 'ಜಲೀಲ' ಎಂಬ ಖಡಕ್ ಪಾತ್ರದ ಮೂಲಕ! ಸಿನಿಮಾ ಇಷ್ಟೊಂದು ಅದ್ಭುತವಾಗಿ ಮೂಡಿಬರಲು ಕಾರಣ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಚಮತ್ಕಾರ. ಖ್ಯಾತ ಸಾಹಿತಿ ತ.ರಾ.ಸು ಅವರ ಕಾದಂಬರಿಗಳನ್ನು ಆಧರಿಸಿ ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ನಿರ್ದೇಶಿಸಿದ್ದರು.

'ನಾಗರಹಾವು' ಕೇವಲ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಗೆಲ್ಲಲಿಲ್ಲ. ವಿಮರ್ಶಕರ ಮನಸ್ಸನ್ನೂ ಗೆದ್ದಿತು. ಬರೋಬ್ಬರಿ 8 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬಾಚಿಕೊಂಡು ದಾಖಲೆ ಬರೆಯಿತು. ಜೊತೆಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿತು. ಇಷ್ಟೆಲ್ಲಾ ದಾಖಲೆ ಬರೆದು ಪ್ರೇಕ್ಷಕರ ಪ್ರೀತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗೆದ್ದರೂ 'ನಾಗರಹಾವು' ಚಿತ್ರಕ್ಕೆ ಯಾವುದೇ ರಾಷ್ಟ್ರ ಪ್ರಶಸ್ತಿ ಸಿಗಲಿಲ್ಲ! 1972ರ ಸಾಲಿನ ರಾಷ್ಟ್ರ ಪ್ರಶಸ್ತಿಯು ಕನ್ನಡದ ಮತ್ತೊಂದು ಕ್ಲಾಸಿಕ್ ಚಿತ್ರ 'ಶರಪಂಜರ' ಪಾಲಾಗಿತ್ತು ರಾಷ್ಟ್ರ ಪ್ರಶಸ್ತಿ ಸಿಗದಿದ್ದರೇನಂತೆ, ಕನ್ನಡಿಗರ ಮನಸ್ಸಿನಲ್ಲಿ 'ನಾಗರಹಾವು' ಇಂದಿಗೂ ನಂಬರ್ 1 ಸ್ಥಾನದಲ್ಲೇ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೇಮದ ಊರಲಿ ಚಿತ್ರದಂತೆ ಸಣ್ಣ ಬಜೆಟ್‌ನಲ್ಲಿ ಬಂದು ಇಡೀ ಸ್ಯಾಂಡಲ್‌ವುಡ್ ಅನ್ನೇ ಬೆರಗುಗೊಳಿಸಿದ 5 ಹಳೆಯ ಚಿತ್ರಗಳಿವು!
ದಿಗ್ಗಜ ನಟರನ್ನೇ ಮೀರಿಸಿದ ಅಂಬರೀಷ್ ಈ ಸಿನಿಮಾ 550 ದಿನ ಪ್ರದರ್ಶನ ಜೊತೆ ಹಿಂದಿ, ತೆಲುಗಿಗೂ ರಿಮೇಕ್