
ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕರು ಬಹಳ ವರ್ಷಗಳವರೆಗೆ ನಾಯಕರಾಗಿ ಮುಂದುವರೆಯುತ್ತಾರೆ. ಆದರೆ ಸಾಮಾನ್ಯವಾಗಿ ನಾಯಕಿಯರು 30-35 ವರ್ಷ ಆಗುತ್ತಿದ್ದಂತೆಯೇ ನಾಯಕಿಯ ರೋಲ್ನಿಂದ ಹಿಂದೆ ಸರಿಯಬೇಕಾಗುತ್ತದೆ. 40 ದಾಟುತ್ತಿದ್ದಂತೆಯೇ ಅವರು ತಾಯಿಯ ಅಥವಾ ತಂಗಿಯ ರೋಲ್ ಮಾಡಿರುವ ನಿದರ್ಶನಗಳು ಇವೆ. ಆದರೆ ಇದಕ್ಕೆ ಸೆಡ್ಡು ಹೊಡೆದು ಬಾಲಿವುಡ್ ಸೇರಿದಂತೆ ಕೆಲವು ನಾಯಕಿಯರು 40-45 ದಾಟಿದ ಮೇಲೂ, ಅಮ್ಮಂದಿರಾದ ಬಳಿಕವೂ ಅದೇ ಗ್ಲಾಮಸರ್ ಲುಕ್ ಹೊಂದಿದವರು ಇದ್ದಾರೆ. ಈಗಲೂ ನಾಯಕಿಯಾಗಿ ಮಿಂಚುತ್ತಿದ್ದಾರೆ ಎನ್ನಿ. ಅದರೆ ಇದು ತೀರಾ ಅಪರೂಪ. ಅದರಲ್ಲಿಯೂ ಅಮ್ಮನಾದ ಬಳಿಕ ನಟನೆಯಿಂದ ನಟಿಯರು ದೂರವಾಗಿ ಮತ್ತೆ ಕಮ್ಬ್ಯಾಕ್ ಮಾಡಿದಾಗ ನಾಯಕಿಯ ರೋಲ್ ಸಿಗುವುದು ತುಂಬಾ ವಿರಳ.
ಆದರೆ ಇಲ್ಲಿ ಹೇಳುತ್ತಿರುವುದು ರಿಯಲ್ ಲೈಫ್ ಅಮ್ಮ ಮತ್ತು ಮಗಳ ಜೊತೆ ತೆರೆಯ ಮೇಲೆ ರೊಮಾನ್ಸ್ ಮಾಡಿದ ಸಿನಿಮಾ ನಾಯಕರ ಕುರಿತು. ಇವರಲ್ಲಿ ಒಬ್ಬರು ಸ್ಯಾಂಡಲ್‌ವುಡ್ ನಟನೂ ಹೌದು. ಇಷ್ಟು ಹೇಳುತ್ತಿದ್ದಂತೆಯೇ ಆ ತಾಕತ್ತು, ಆ ಗತ್ತು, ನಾಯಕನಾಗಿ ಎಲ್ಲರ ಮನಸ್ಸನ್ನು ಗೆದ್ದು ಬೀಗಿದವರು ಯಾರು ಎನ್ನುವುದು ತಿಳಿದೇ ಇದೆ. ಅವರೇ One and Only One ಡಾ.ರಾಜ್‌ಕುಮಾರ್.
ಹೌದು. ಸ್ಯಾಂಡಲ್‌ವುಡ್ ವಿಷಯಕ್ಕೆ ಬರುವುದಾದರೆ, ಕೆಲವು ನಟರು ತಮಗಿಂತ ಅತಿ ಚಿಕ್ಕ ವಯಸ್ಸಿನ ನಟಿಯರ ಜೊತೆ ತೆರೆಯ ಮೇಲೆ ರೊಮಾನ್ಸ್ ಮಾಡುತ್ತಿರುವುದು ಇದೆ. ಆದರೆ ತಾಯಿ ಮತ್ತು ಮಗಳ ಜೊತೆ ತೆರೆ ಹಂಚಿಕೊಂಡ ಏಕೈಕ ಸ್ಯಾಂಡಲ್‌ವುಡ್ ನಟ ಎಂದರೆ ಅವರು ಡಾ.ರಾಜ್. ಇವರು ಹಿರಿಯ ನಟಿ ಅದ್ವಾನಿ ಲಕ್ಷ್ಮೀದೇವಿ ಮತ್ತು ಅವರ ಪುತ್ರಿ ರೂಪಾದೇವಿ ಅವರಿಗೆ ನಾಯಕನಾಗಿ ನಟಿಸಿದ್ದಾರೆ. 1963ರಲ್ಲಿ ತೆರೆಕಂಡ 'ಶ್ರೀ ರಾಮಾಂಜನೇಯ ಯುದ್ಧ' ಚಿತ್ರದಲ್ಲಿ ಅದ್ವಾನಿ ಲಕ್ಷ್ಮೀದೇವಿ ಅವರಿಗೆ ನಾಯಕನಾಗಿ ಡಾ. ರಾಜ್‌ಕುಮಾರ್ ನಟಿಸಿದ್ದರು. (ನಂತರದ ದಿನಗಳಲ್ಲಿ 'ಗಂಧದ ಗುಡಿ' ಮತ್ತು 'ಶ್ರೀ ಶ್ರೀನಿವಾಸ ಕಲ್ಯಾಣ' ಚಿತ್ರಗಳಲ್ಲಿ ಇವರು ಡಾ. ರಾಜ್‌ಕುಮಾರ್ ಅವರ ತಾಯಿಯ ಪಾತ್ರದಲ್ಲೂ ನಟಿಸಿದ್ದಾರೆ. 1980ರ ದಶಕದಲ್ಲಿ ಅದ್ವಾನಿ ಲಕ್ಷ್ಮೀದೇವಿ ಅವರ ಪುತ್ರಿ ರೂಪಾದೇವಿ ಅವರಿಗೆ ನಾಯಕನಾಗಿ 'ಹಾಲು ಜೇನು' (1982), 'ಸಮಯದ ಗೊಂಬೆ' (1984) ಮತ್ತು 'ಯಾರಿವನು' (1984) ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ಅಭಿನಯಿಸಿದ್ದಾರೆ.
ಮಲಯಾಳಿ ನಟರಾದ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಕೂಡ ಈ ಸಾಲಿಗೆ ಸೇರುತ್ತಾರೆ. ಮುಮ್ಮಟ್ಟಿ ಅವರು, ನಟಿ ಲಕ್ಷ್ಮಿ ಅವರೊಂದಿಗೆ ನಾಧಿ ಮುತಲ್ ನಾಧಿ ವಾರೆ (1983) ಮತ್ತು ಅಮೆರಿಕ ಅಮೆರಿಕ (1983) ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ನಂತರ ಅವರ ಮಗಳು ಐಶ್ವರ್ಯಾ ಅವರೊಂದಿಗೆ ನಟಿಸಿದ್ದಾರೆ. ಅವರು ರಾಧಿಕಾ ಶರತ್‌ಕುಮಾರ್ ಅವರೊಂದಿಗೆ ಮಕನ್ ಎಂಟೆ ಮಕನ್ (1985) ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಂತರ ಅವರ ಮಲಮಗಳು ವರಲಕ್ಷ್ಮಿ ಶರತ್‌ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಇನ್ನು ನಟ ಮೋಹನ್ ಲಾಲ್ ಕುರಿತು ಹೇಳುವುದಾದರೆ, ಇವರು 1980 ರ ದಶಕದಲ್ಲಿ ಪೂರ್ಣಿಮಾ ಭಾಗ್ಯರಾಜ್ ಅವರೊಂದಿಗೆ ನಟಿಸಿದರು ಮತ್ತು ನಂತರ ಅವರ ಮಗಳು ಶರಣ್ಯಾ ಭಾಗ್ಯರಾಜ್ ಅವರೊಂದಿಗೆ ಫೋಟೋಗ್ರಾಫರ್ (2006) ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.