
ಉಡುಪಿ (ಜ.27): ಕಾಂತಾರ ಸಿನಿಮಾ ಆರಂಭಕ್ಕೆ ಪೂಜೆ ಸಲ್ಲಿಸಿದ್ದ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಕನ್ನಡ ನಾಡಿನ ಪ್ಯಾನ್ ಇಂಡಿಯಾ ನಟ, ನಿರ್ದೇಶಕ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಇಂದು ಬೆಳಿಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಆಗಮಿಸಿದ ನಟ, ಗಣಪತಿಯ ಸನ್ನಿಧಿಯಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದ ಸಂಪ್ರದಾಯದಂತೆ ರಿಷಬ್ ಶೆಟ್ಟಿ ದಂಪತಿಯು ಶ್ರೀ ವಿನಾಯಕ ದೇವರಿಗೆ ಅತ್ಯಂತ ಪ್ರಿಯವಾದ ‘ಮೂಡು ಗಣಪತಿ’ ಸೇವೆಯನ್ನು ನೆರವೇರಿಸಿದರು. ಬೆಳಗಿನ ಜಾವವೇ ದೇವಾಲಯಕ್ಕೆ ಆಗಮಿಸಿದ ಅವರು, ಯಾವುದೇ ಆಡಂಬರವಿಲ್ಲದೆ ಸರಳವಾಗಿ ಸಾಮಾನ್ಯ ಭಕ್ತರಂತೆ ದೇವರ ದರ್ಶನ ಪಡೆದರು. ಪೂಜಾ ವಿಧಿವಿಧಾನಗಳ ನಂತರ ದೇವಾಲಯದ ಅರ್ಚಕರು ನಟನಿಗೆ ಪ್ರಸಾದ ನೀಡಿ ಶುಭ ಹಾರೈಸಿದರು.
ರಿಷಬ್ ಶೆಟ್ಟಿ ಅವರಿಗೆ ಆನೆಗುಡ್ಡೆ ದೇವಾಲಯದೊಂದಿಗೆ ವಿಶೇಷವಾದ ನಂಟಿದೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಅವರ ಸೂಪರ್ ಹಿಟ್ ಚಿತ್ರ 'ಕಾಂತಾರ'ದ ಮುಹೂರ್ತ ಕೂಡ ಇದೇ ದೇವಾಲಯದಲ್ಲಿ ನೆರವೇರಿತ್ತು. ನಂತರ ಈ ಸಿನಿಮಾ ನಿರೀಕ್ಷೆಗೂ ಮೀರಿ ಜಾಗತಿಕ ಮಟ್ಟದಲ್ಲಿ ದೊಡ್ಡ ಹಿಟ್ ಆಗಿತ್ತು. ಇದರ ನಂತರ ಇತ್ತೀಚೆಗೆ ತೆರಕಂಡು ಭರ್ಜರಿ ಗಳಿಕೆ ಮಾಡಿದ ‘ಕಾಂತಾರ: ಚಾಪ್ಟರ್ 1’ ಚಿತ್ರವೂ ನಿರೀಕ್ಷೆಯಂತೆ ಯಶಸ್ವಿಯಾಗಿದೆ. ಇದೀಗ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಹಾಗೂ ಮತ್ತೊಂದು ಹೊಸ ಪ್ರಾಜೆಕ್ಟ್‌ಗಾಗಿ ವಿನಾಯಕನ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಲಾಗಿದೆ.
ದರ್ಶನದ ಬಳಿಕ ದೇವಾಲಯದ ಪರಿಸರದಲ್ಲಿ ಕೆಲಕಾಲ ಕಳೆದ ದಂಪತಿ, ಅಲ್ಲಿನ ಶಾಂತಿಯುತ ವಾತಾವರಣವನ್ನು ಆಸ್ವಾದಿಸಿ ನಂತರ ತೆರಳಿದರು. ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರೂ, ರಿಷಬ್ ಶೆಟ್ಟಿ ಅವರು ತಮ್ಮ ಮೂಲ ಬೇರು ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.