
ದೂದ್ ಪೇಡಾ ದಿಗಂತ್ ಹಾಗೂ ರಂಜನಿ ರಾಘವನ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ಹಾಡನ್ನು ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಈ ಹಾಡು ನೆಟ್ಟಿಗರ ಗಮನ ಸೆಳೆದಿದೆ. ಈ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.
‘ಹನಿಯೊಂದು ಜಾರಿ ನದಿಯಾಗಿ ಬಂತು ಮಲೆನಾಡ ಮಗಳಾಗಲು..’ ಎಂಬ ಸಾಹಿತ್ಯದ ಈ ಹಾಡು ಮಲೆನಾಡಿನ ಸೊಗಸಿನ ಜೊತೆಗೆ ಅಲ್ಲಿನ ಜನ ಜೀವನವನ್ನು ತೆರೆದಿಡುತ್ತದೆ. ವಿಶ್ವಜಿತ್‌ರಾವ್ ಅವರ ಸಾಹಿತ್ಯವನ್ನು ಹರಿಚರಣ್ ಹಾಡಿದ್ದಾರೆ. ಸಂಗೀತ ಪ್ರಜ್ವಲ್ ಪೈ ಅವರದು.
ಹಾಡು ಬಿಡುಗಡೆ ಮಾಡಿ ಮಾತನಾಡಿದ ಗಣೇಶ್, ‘ಒಂದೂವರೆ ವರ್ಷದಿಂದ ಚಿತ್ರೋದ್ಯಮದವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದೀಗ ಸುಂದರ ಹಾಡಿನ ಹಿನ್ನೆಲೆಯಲ್ಲಿ ಎಲ್ಲರ ಭೇಟಿ ಖುಷಿ ತಂದಿದೆ. ಚಿತ್ರಮಂದಿರಗಳು ಬೇಗ ಆರಂಭವಾಗಲಿ. ಚಿತ್ರೋದ್ಯಮದ ಎಲ್ಲ ಚಟುವಟಿಕೆಗಳೂ ಹಿಂದಿನಂತಾಗಿ ಎಲ್ಲರ ಖಾತೆಗೆ ಹಣ ಬರಲಿ,’ ಎಂದು ಚಿತ್ರ ತಂಡಕ್ಕೆ ಶುಭ ಕೋರಿದರು.
ನಾಯಕಿ ರಂಜನಿ ರಾಘವನ್, ನಿರ್ದೇಶಕ ವಿನಾಯಕ ಕೋಡ್ಸರ, ನಿರ್ಮಾಪಕ ಸಿಲ್‌ಕ್ ಮಂಜು, ಲಹರಿ ವೇಲು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಟ ದಿಗಂತ್ ಹುಟ್ಟೂರಿನ ಕತೆ ಹಾಗೂ ಅಡಿಕೆ ತೋಟದ ಮಾಲೀಕರ ಜೀವನ ಹೇಗಿರಲಿದೆ ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.