
ಧನ್ವೀರ್ ಗೌಡ ಖಡಕ್ ಮಾತು, ಆ ಬೆನ್ನಲ್ಲೇ ವಿಜಯಲಕ್ಷ್ಮಿ ಪೋಸ್ಟ್ ವೈರಲ್! ಏನಿದು ಚಮತ್ಕಾರ!
ನಾಡಿನಾದ್ಯಂತ ಆಯುಧಪೂಜೆ ಮತ್ತು ವಿಜಯದಶಮಿಯ ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಒಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂದೇಶ ಗಮನ ಸೆಳೆದಿದ್ದರೆ, ಮತ್ತೊಂದೆಡೆ ಚಾಮರಾಜನಗರದ ದಸರಾ ಕಾರ್ಯಕ್ರಮದಲ್ಲಿ ನಟ ಧನ್ವೀರ್ ಗೌಡ ನೀಡಿದ ಹೇಳಿಕೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಪತಿ ದರ್ಶನ್ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ, ಫೋಟೋ ಜೊತೆಗೆ ಬರೆದಿರುವ ಅವರ ಮಾತುಗಳು ಇದೀಗ ವಿಶೇಷ ಚರ್ಚೆಗೆ ಕಾರಣವಾಗಿವೆ.
“ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು” ಎಂದು ಅವರು ಬರೆದುಕೊಂಡಿದ್ದಾರೆ.
ದರ್ಶನ್ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ಹಂಚಿಕೊಂಡಿರುವ ಈ ಸಂದೇಶದ ಬಗ್ಗೆ ಅಭಿಮಾನಿಗಳು ಗಮನ ಹರಿಸಿದ್ದಾರೆ. ಫೋಟೋದಲ್ಲಿ ವಿಜಯಲಕ್ಷ್ಮಿ ಕೆಂಪು ಬಣ್ಣದ ಸಲ್ವಾರ್ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಬೂದು ಬಣ್ಣದ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದು, ಪತ್ನಿಯ ಹೆಗಲ ಮೇಲೆ ಕೈ ಹಾಕಿರುವ ಚಿತ್ರವೂ ಗಮನ ಸೆಳೆಯುತ್ತಿದೆ.
ಇನ್ನು ಚಾಮರಾಜನಗರದ ದಸರಾ ಸಂಭ್ರಮದಲ್ಲೂ ಡಿ ಬಾಸ್ ಅಭಿಮಾನಿಗಳ ಉತ್ಸಾಹ ಜೋರಾಗಿತ್ತು. ಕಾರ್ಯಕ್ರಮದ ವೇಳೆ ದರ್ಶನ್ ಪರವಾಗಿ ಘೋಷಣೆಗಳನ್ನು ಕೂಗಿದ ಅಭಿಮಾನಿಗಳಿಗೆ ನಟ ಧನ್ವೀರ್ ಗೌಡ ಪ್ರತಿಕ್ರಿಯಿಸಿದ್ದಾರೆ.
“ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲಿರಲಿ” ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ, “ನಂಗೆ ಮಾದಪ್ಪನ ಬೆಟ್ಟ ಅಂದ್ರೆ ತುಂಬಾ ಇಷ್ಟ” ಎಂದು ಚಾಮರಾಜನಗರದ ಬಗ್ಗೆಯೂ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ದರ್ಶನ್ ವಿರೋಧಿಗಳಿಗೆ ಧನ್ವೀರ್ ತಿರುಗೇಟು
ದರ್ಶನ್ ಬಗ್ಗೆ ಮಾತನಾಡಿದ ಧನ್ವೀರ್ ಗೌಡ, ಅವರ ವಿರೋಧಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ. “ಎಷ್ಟೇ ಕೂಗ್ರಿ, ಏನೇ ಮಾಡ್ರಿ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಅವರನ್ನು ಏನು ಮಾಡಲಿಕ್ಕೆ ಆಗಲ್ಲ” ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇಷ್ಟೇ ಅಲ್ಲದೆ, “ನಟ ದರ್ಶನ್ ಆದಷ್ಟು ಬೇಗ ಹೊರಗಡೆ ಬಂದೇ ಬರ್ತಾರೆ. ನಿಮ್ಮ ಪ್ರೀತಿ, ಆಶೀರ್ವಾದ, ಬೆಂಬಲ ಅವರ ಮೇಲೆ ಸದಾ ಹೀಗೆ ಇರಲಿ” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ಮಾತುಗಳ ಬೆನ್ನಲ್ಲೇ ಅಭಿಮಾನಿಗಳು ‘ಡಿ ಬಾಸ್, ಡಿ ಬಾಸ್’ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ.
ಒಟ್ಟಿನಲ್ಲಿ, ವಿಜಯಲಕ್ಷ್ಮಿ ದರ್ಶನ್ ಅವರ ಸಂದೇಶ ಮತ್ತು ಧನ್ವೀರ್ ಗೌಡ ಅವರ ಹೇಳಿಕೆ ಹಬ್ಬದ ಸಂಭ್ರಮದ ನಡುವೆಯೂ ದರ್ಶನ್ ಅಭಿಮಾನಿಗಳ ಗಮನ ಸೆಳೆದಿವೆ. ಈ ಇಬ್ಬರ ಮಾತುಗಳು ಇದೀಗ ಸ್ಯಾಂಡಲ್‌ವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.